ಬೆಳಗಾವಿ: ರಾಜ್ಯದಲ್ಲಿ ಭಾನುವಾರ ಜಾರಿಯಾಗಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ (free bus ride) ಶಕ್ತಿ ಯೋಜನೆಗೆ ಉತ್ತಮ ಸ್ಪಂದನ ವ್ಯಕ್ತವಾಗಿದ್ದು, ಬಸ್ ಮೆಟ್ಟಿಲಿಗೆ ನಮಸ್ಕರಿಸಿ ಏರುತ್ತಿರುವ ಅಜ್ಜಿಯೊಬ್ಬರ ಫೋಟೋ ವೈರಲ್ ಆಗಿದೆ.
ಬಸ್ ಮೆಟ್ಟಿಲುಗಳಿಗೆ ಅಜ್ಜಿ ನಮಸ್ಕರಿಸಿ ಬಸ್ ಹತ್ತುವ ಫೋಟೋವನ್ನು ಹಲವಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ… pic.twitter.com/eR1f5tdE02
— Siddaramaiah (@siddaramaiah) June 11, 2023
ಮೂಲತಃ ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದ ಅಜ್ಜಿ ನಿಂಗವ್ವ ಶಿಂಗಾಡಿ ಅವರು ಚಿತ್ರದಲ್ಲಿದ್ದು, ತಮ್ಮ ಮೊಮ್ಮಗನ ಗೃಹ ಪ್ರವೇಶಕ್ಕೆ ಹೊರಟಿದ್ದರು. ಧಾರವಾಡದಲ್ಲಿ ಗೋಕಾಕಕ್ಕೆ ಹೊರಡುವ ಬಸ್ ಹತ್ತಲು ಹೋದಾಗ ಮೆಟ್ಟಿಲುಗಳಿಗೆ ಅಜ್ಜಿ ನಮಸ್ಕಾರ ಸಲ್ಲಿಸಿದ್ದಾರೆ. ಈ ಕ್ಷಣವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ದಾಖಲಿಸಿಕೊಂಡಿದ್ದು, ಅದೀಗ ವೈರಲ್ ಆಗಿದೆ.
”ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು. ನಾವು ಎಷ್ಟು ಅನುದಾನ ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣ ವಿನಿಯೋಗಿಸುತ್ತಿದ್ದೇವೆ ಎಂಬುದು ಮುಖ್ಯ. ಈ ಕ್ಷಣ ಇನ್ನೂ ನೂರು ವಿಧದಲ್ಲಿ ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ಕುಗ್ಗದಂತೆ ನನ್ನನ್ನು ಗುರಿಯೆಡೆಗೆ ಮತ್ತಷ್ಟು ದೃಢವಾಗಿಸಿದೆ. ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು.” ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ನಿನ್ನೆ ರಜಾದಿನವಾಗಿದ್ದ ಕಾರಣ ಬಸ್ಸುಗಳಲ್ಲಿ ಹೆಚ್ಚಿನ ಜನರ ಓಡಾಟ ಕಂಡುಬಂದಿರಲಿಲ್ಲ. ಆದರೆ ಇಂದು ಮುಂಜಾನೆ ಕೆಲಸಕ್ಕೆ ತೆರಳುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸು ನಿಲ್ದಾಣಗಳತ್ತ ಆಗಮಿಸಿದ್ದಾರೆ. ಮೆಟ್ರೋ ಹಾಗೂ ಆಟೋ ಮೂಲಕ ಪ್ರಯಾಣಿಸುವ ಹಲವು ಮಹಿಳೆಯರೂ ಉಚಿತ ಬಸ್ ಪ್ರಯಾಣದ ಲಾಭ ಪಡೆಯಲು ಮುಂದಾದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ಇದಕ್ಕೆ ಉತ್ಸಾಹದ ಸ್ಪಂದನ ವ್ಯಕ್ತವಾಯಿತು.
ʼʼನಾವು ದುಡಿಯುವ ಹಣದಲ್ಲಿ ಎರಡು ಸಾವಿರ ರೂಪಾಯಿ ಬಸ್ ಟಿಕೆಟ್‌ಗೇ ಹೋಗುತ್ತಿತ್ತು. ಈಗ ಅದನ್ನು ಇತರ ಖರ್ಚುಗಳಿಗೆ ಸರಿದೂಗಿಸಬಹುದು, ಖುಷಿಯಾಗ್ತಿದೆʼʼ ಎಂದು ಉದ್ಯೋಗಿ ಮಹಿಳೆಯೊಬ್ಬರು ಸಂತಸಪಟ್ಟರು. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ, ಊರಿಗೆ ಬಂದು ಬೆಂಗಳೂರಿಗೆ ವಾಪಸ್ಸು ಹೊರಟಿದ್ದ ಮಹಿಳೆಯರು ಎರಡನೇ ದಿನ ಶಕ್ತಿ ಯೋಜನೆಯ ಲಾಭ ಪಡೆದರು. ಬರುವಾಗ ಬಸ್ಸಿನಲ್ಲಿ ದುಡ್ಡು ಕೊಟ್ಟು ಬಂದಿದ್ದ ಎಲ್ಲಾ ಮಹಿಳೆಯರು ಎರಡನೇ ದಿನ ಉಚಿತ ಪ್ರಯಾಣದ ಸಂತೋಷ ಅನುಭವಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಯ ಬಗ್ಗೆ ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ: Free Bus: ಶಕ್ತಿ ಯೋಜನೆ: ಎರಡನೇ ದಿನ ತುಂಬಿ ತುಳುಕಿದ ಬಸ್ಸುಗಳು, ಉದ್ಯೋಗಿಗಳ ಮುಗುಳುನಗು