ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡರೂ ಎಮ್ಮೆ ಮೇಲೆ ಮಳೆ ಹೊಯ್ದಂತೆ ಅನ್ನೋ ಮಾತಿಗೆ ಇಲ್ಲಿದೆ ಒಂದು ತಾಜಾ ನಿದರ್ಶನ. ಯಾವುದೇ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿದ ಉದಾಹರಣೆಗಳೇ ಇಲ್ಲ. ಇದು ಸಾರ್ವಜನಿಕವಾಗಿ ಆಗಾಗ ಟೀಕೆಗಳಿಗೂ ಗುರಿಯಾಗುತ್ತಿವೆ. ಈಗ ಸಾರ್ವಜನಿಕ ಪ್ರದೇಶದಲ್ಲಿ ಲೈಟ್ ಕಂಬವೊಂದರಲ್ಲಿ ಅಧಿಕಾರಿಗಳಿಗೆ ಅವಾಚ್ಯ ಪದಗಳಿಂದ ಬೈದು ಹಾಕಿರುವ ಪೋಸ್ಟರ್ ಎಲ್ಲೆಡೆ ವೈರಲ್ (Viral Post) ಆಗಿದೆ.
ʻಬೇ** ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋʼ ಎಂದು ಬರೆದಿರುವ ಪೇಪರ್ ಪೋಸ್ಟರ್ ಒಂದನ್ನು ಕರೆಂಟ್ ಕಂಬವೊಂದಕ್ಕೆ ಯಾರೋ ಅಂಟಿಸಿದ್ದಾರೆ. ಇದರ ಫೋಟೋವನ್ನು ಕೆಲವರು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ.
ಮಲ್ಲೇಶ್ವರಂನ ಸಂಪಿಗೆ ರಸ್ತೆಯಿಂದ ಹಿಡಿದು ಪಿಯು ಬೋರ್ಡ್ ತನಕ ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿರುವ ಬಿಬಿಎಂಪಿ, ಆ ಕೆಲಸವನ್ನು ಶೀಘ್ರವಾಗಿ ಮುಗಿಸುವ ಲಕ್ಷಣ ಕಾಣುತ್ತಿಲ್ಲ ಎಂಬ ದೃಷ್ಟಿಯಿಂದ ಸಾರ್ವಜನಿಕವಾಗಿ ಯಾರೋ ಈ ಪೋಸ್ಟರ್ ಅನ್ನು ಅಂಟಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ | ಕಾಮಗಾರಿ ಮುಗಿದರೂ ರಸ್ತೆ ಬಂದ್ ಮಾಡಿದ ಬಿಜೆಪಿ ಸದಸ್ಯರು, ಸ್ಥಳೀಯರಿಂದ ಬಂಡೆ ತೆರವು
ಈ ಕಾಮಗಾರಿಗೆ ರಸ್ತೆಗಳನ್ನು ಅಗೆಯಲಾಗಿದ್ದು, ಇದರ ಪರಿಣಾಮವಾಗಿ ನಾಗರಿಕರು ಪರ್ಯಾಯ ರಸ್ತೆಯನ್ನು ಬಳಸಬೇಕಿದೆ. ಇದು ದಿನದ 24 ಗಂಟೆಯು ಟ್ರಾಫಿಕ್ ಸಮಸ್ಯೆಯನ್ನು ಎದುರಿಸುವಂತಾಗಿದೆ. ಜತೆಗೆ ಮಳೆಗಾಲದಿಂದ ರಸ್ತೆಯಲ್ಲಿ ವಾಹನ ಸಂಚಾರದಿಂದ ಹಿಡಿದು ಓಡಾಟಕ್ಕೂ ಹರಸಾಹಸ ಪಡುವಂತಾಗಿದೆ.
ಈಗಾಗಲೇ ಕಾಮಗಾರಿ ಶುರುವಾಗಿ 3-4 ತಿಂಗಳು ಕಳೆದಿದೆ. ಈ ಸಂಬಂಧ ಸ್ಥಳೀಯರು ತ್ವರಿತ ಕಾಮಗಾರಿಗಾಗಿ ಒತ್ತಾಯಿಸಿ ಬಿಬಿಎಂಪಿಗೆ ದೂರನ್ನೂ ನೀಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ಮಧ್ಯೆ ಸಾರ್ವಜನಿಕರೊಬ್ಬರು ರಸ್ತೆ ಕಾಮಗಾರಿಗೆ ಬೇಸತ್ತು, ಬೇಗ ಮುಗಿಸುವಂತೆ ಪೋಸ್ಟರ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಪೋಸ್ಟರ್ ವೈರಲ್ ಆಗುತ್ತಿದ್ದು, ಅಧಿಕಾರಿಗಳ ನಿಧಾನಗತಿಗೆ ಎಲ್ಲ ಕಡೆಗಳಿಂದಲೂ ಟೀಕೆಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ | ವೈಟ್ ಟಾಪಿಂಗ್ ಕಾಮಗಾರಿ ಪೂರ್ಣ: ಗುರುವಾರದಿಂದ ಗೂಡ್ಸ್ ಶೆಡ್ ರೋಡ್ ಸಂಚಾರಕ್ಕೆ ಮುಕ್ತ