Site icon Vistara News

Viral Video | ಲಂಚಾವತಾರ ಆರೋಪ, ಮೈಸೂರು ತಹಸೀಲ್ದಾರ್‌ ರತ್ನಾಂಬಿಕಾ ಕೋಪ; ಪರಿಸ್ಥಿತಿ ವಿಕೋಪ

ಮೈಸೂರು: ಇಲ್ಲಿನ ಎಚ್.ಡಿ.ಕೋಟೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್‌ ರತ್ನಾಂಬಿಕಾ ಎಂಬುವವರು ರೇಗಾಡಿರುವ ವಿಡಿಯೊ ವೈರಲ್‌ (Viral Video) ಆಗಿದೆ.

ರೈತರು, ಸಾರ್ವಜನಿಕರು ತಮ್ಮ ಸಮಸ್ಯೆಗಳಿಗಾಗಿ ಕಚೇರಿಗೆ ಬರುತ್ತಾರೆ. ಆದರೆ, ಅವರಿಗೆ ವಿನಾಕಾರಣ ತೊಂದರೆ ಮಾಡಲಾಗುತ್ತಿದೆ. ಲಂಚ ಕೇಳಲಾಗುತ್ತಿದೆ. ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲವೇ? ಅವರ ಮೇಲೆ ಯಾಕೆ ಕ್ರಮವಿಲ್ಲ. ಇಂಥ ಅಧಿಕಾರಿಗಳು ಯಾಕೆ ಇರಬೇಕು? ಪ್ರಕೃತಿ ವಿಕೋಪಗಳಿಂದ ಮನೆ ಕಳೆದುಕೊಂಡವರು ಅರ್ಜಿ ಹಿಡಿದು ಬಂದರೆ ಅವರನ್ನು ಸತಾಯಿಸಲಾಗುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ರೈತ ಮುಖಂಡರೊಬ್ಬರು ಮಾಡಿದ್ದಲ್ಲದೆ, ತಹಸೀಲ್ದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ಹಂತದಲ್ಲಿ ಎಲ್ಲವನ್ನೂ ಕೇಳಿಸಿಕೊಂಡು ಸಮಾಧಾನವಾಗಿಯೇ ಉತ್ತರಿಸುತ್ತಿದ್ದ ತಹಸೀಲ್ದಾರ್‌ ರತ್ನಾಂಬಿಕಾ, ಬಳಿಕ ತಾಳ್ಮೆ ಕಳೆದುಕೊಂಡಿದ್ದು ಕುರ್ಚಿಯಿಂದ ಎದ್ದು ನಿಂತು ರೇಗಾಡಿದ್ದಾರೆ. ಟೇಬಲ್‌ ಮೇಲಿದ್ದ ಫೈಲ್‌ಗಳನ್ನು, ಪೇಪರ್‌ಗಳನ್ನು ಎತ್ತಿ ಬಿಸಾಡಿದ್ದಲ್ಲದೆ, “ಮಹಿಳೆಯರು ಎಂದರೆ ನಿಮಗೆ ಗೌರವವೇ ಇಲ್ಲವೇ? ಯಾವಾಗಲೂ ಇಲ್ಲಿಗೆ ಬಂದು ಗಲಾಟೆ ಮಾಡುವುದೇ ಕೆಲಸವೇ” ಎಂದೆಲ್ಲ ಕೂಗಾಡಿದ್ದಾರೆ.

ರೈತ ಸಂಘದ ನಾಗರಾಜು ಹಾಗೂ ದಸಂಸ ಚಾ.ಶಿವಕುಮಾರ್‌ ಅವರು ತಹಸೀಲ್ದಾರ್‌ ಕೊಠಡಿಗೆ ಬಂದು ಆರೋಪ ಮಾಡಿದ್ದು, ಈ ವೇಳೆ ರೈತರು ಹಾಗೂ ಸಾರ್ವಜನಿಕರು ಇದ್ದರು. ಸಿಟ್ಟಿಗೆದ್ದು ಕೂಗಾಟ ನಡೆಸುತ್ತಿದ್ದ ತಹಸೀಲ್ದಾರ್ ರತ್ನಾಂಬಿಕಾ ಅವರನ್ನು ಸಮಾಧಾನಪಡಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ತಹಸೀಲ್ದಾರ್ ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣವೇ ನಿರ್ಮಾಣವಾಗಿತ್ತು. ಈ ಎಲ್ಲ ವೃತ್ತಾಂತಗಳನ್ನು ವಿಡಿಯೊ ಮಾಡಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ | ಮುನಿಸು ಮರೆತು ಒಂದಾದ ಎಚ್‌ಡಿಕೆ, ಜಿಟಿಡಿ, ಪುತ್ರ ಹರೀಶ್‌ ಗೌಡರನ್ನೂ ಹಾಡಿ ಹೊಗಳಿದ ಕುಮಾರಸ್ವಾಮಿ

Exit mobile version