ಬೆಂಗಳೂರು: ಸಿಲಿಕಾನ್ ವ್ಯಾಲಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಬೆಂಗಳೂರು (Bengaluru) ತನ್ನ ಸಂಚಾರದಟ್ಟಣೆಗೂ ಜಗದ್ವಿಖ್ಯಾತಿ ಪಡೆದಿದೆ(traffic). ಪ್ರತಿನಿತ್ಯವೂ ಲಕ್ಷಗಟ್ಟಲೆ ಮಂದಿ ತಮ್ಮ ವೃತ್ತಿ ನಿಮಿತ್ತವಾಗಿ ಬೆಂಗಳೂರಿನಲ್ಲಿ ನಿತ್ಯವೂ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಮಾಡುತ್ತಿದ್ದು ಈ ಟ್ರಾಫಿಕ್ ಸಮಸ್ಯೆಯಿಂದ ತಮ್ಮ ಮನೆಗಳನ್ನು ಸೇರಿಕೊಳ್ಳಲು ಹರಸಾಹಸ ಪಡುತ್ತಾರೆ. ಮೆಟ್ರೋನಂತಹ ಸಾರ್ವಜನಿಕ ಸೇವೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದರೂ, ಇಂದಿಗೂ ಬೆಂಗಳೂರು ಎಂದರೆ ಟ್ರಾಫಿಕ್ ಜಾಮ್, ಟ್ರಾಫಿಕ್ ಎಂದರೆ ಬೆಂಗಳೂರು ಎಂಬ ಅನ್ವರ್ಥನಾಮ ಮಾತ್ರ ಬದಲಾಗಿಲ್ಲ. ಬಹಳಷ್ಟು ಮಂದಿ ಸಂಚಾರದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡ ಕಚೇರಿಯ ಅಳಿದುಳಿದ ಕೆಲಸವನ್ನೋ, ನೆಟ್‌ಫ್ಲಿಕ್ಸ್, ಪ್ರೈಮ್‌ನಲ್ಲಿ ಸಿನಿಮಾ, ಸೀರೀಸ್ ನೋಡಿಕೊಂಡೋ, ಪುಸ್ತಕ ಓದುತ್ತಲೋ, ಅಥವಾ ತಮ್ಮ ಪ್ರೀತಿಪಾತ್ರರ ಜೊತೆಗೆ ಫೋನ್‌ನಲ್ಲಿ ಹರಟುತ್ತಲೋ ಸಮಯವನ್ನು ಪೋಲಾಗದಂತೆ ಬಳಸಿಕೊಳ್ಳುವ ಮಾರ್ಗಗಳನ್ನೂ ಕಂಡುಕೊಂಡಿದ್ದಾರೆ. ಇದು ತಾವೇ ವಾಹನ ಚಲಾಯಿಸದ ಮಂದಿಯ ಕಥೆಯಾಯಿತು. ಇನ್ನು ವಾಹನ ಚಾಲನೆ ಮಾಡುವವರ ಒತ್ತಡ ಹೇಗಿದ್ದೀತು ಯೋಚಿಸಿ(Viral Video).
ಬೆಂಗಳೂರು ಟ್ರಾಫಿಕ್ ಎಫೆಕ್ಟ್, ಊಟ ಮಾಡಿ ಮುಗಿಸಿದ ಡ್ರೈವರ್ ವಿಡಿಯೋ
ಮುಖ್ಯವಾಗಿ ದಿನವಿಡೀ ಬೆಂಗಳೂರಿನಲ್ಲಿ ಬಸ್ ಚಲಾಯಿಸುವ ಡ್ರೈವರ್‌ಗಳ ಪರಿಸ್ಥಿತಿ ಹೇಗಿದ್ದೀತು ಹಾಗೂ, ಬೆಂಗಳೂರಿನ ಟ್ರಾಫಿಕ್ ಕೆಲವೊಮ್ಮೆ ಹೇಗಿರುತ್ತದೆ ಎಂಬುದನ್ನು ಅರಿಯಲು ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಬೇಕು. ಸಾಯ್ ಚಾಂದ್ ಭಯ್ಯವರಪು ಎಂಬವರು ಇನ್ಸ್‌ಟಾಗ್ರಾಂ ವಿಡಿಯೋನಲ್ಲಿ ಬಸ್ ಡ್ರೈವರ್ ಒಬ್ಬರು ಟ್ರಾಫಿಕ್ ಜಾಂನಲ್ಲಿ ಸಿಲುಕಿರುವಾಗಲೇ ತನ್ನ ಸೀಟಿನಲ್ಲಿ ಕೂತು ಮಧ್ಯಾಹ್ನದ ಊಟ ಪೂರ್ತಿಯಾಗಿ ಉಂಡು ಮುಗಿಸುವ ವಿಡಿಯೋ ಇದು. ಟ್ರಾಫಿಕ್ ಜಾಂಗೆ ಹೆಸರುವಾಗಿಯಾಗಿರುವ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸೆರೆ ಹಿಡಿಯಲಾಗಿರುವ ಈ ವಿಡಿಯೋನಲ್ಲಿ ಬಸ್ ಡ್ರೈವರ್ ಒಬ್ಬರು ಟ್ರಾಫಿಕ್‌ನಲ್ಲಿ ಕಾಯುತ್ತಾ ತನ್ನ ಬುತ್ತಿ ತೆರೆದು ನಿಧಾನವಾಗಿ ಕೂತು ಉಣ್ಣುವ ದೃಶ್ಯವಿದು.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಪರಾಕಾಷ್ಠೆಯಿದು ಎಂಬ ಶೀರ್ಷಿಕೆಯಡಿ ಹಂಚಲಾಗಿರುವ ಈ ವಿಡಿಯೋಗೆ ಎರಡು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ದೊರೆತಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಹಲವರು ಡ್ರೈವರ್ ಬಗೆಗೆ ಕಾಳಜಿ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಬೆಂಗಳೂರಿನ ಇಂಥ ಟ್ರಾಫಿಕ್‌ಗೆ ಸರಿಯಾದ ಪರಿಹಾರ ಕಂಡುಹಿಡಿಯಲಾಗದೆ ಇರುವ ಅಧಿಕಾರಿಗಳು ಹಾಗೂ ಸರ್ಕಾರವನ್ನು ತೆಗಳಿದ್ದಾರೆ.
ಡ್ರೈವರ್ ಒಬ್ಬನಿಗೆ ನೆಮ್ಮದಿಯಾಗಿ ಒಂದು ಕಡೆ ಕೂತು ಉಣ್ಣುವಷ್ಟು ಸಮಯವನ್ನೂ ಕೊಡದ ಈ ಟ್ರಾಫಿಕ್ ಸಮಸ್ಯೆ ನಿಜಕ್ಕೂ ಖೇದಕರ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಬೆಂಗಳೂರು ಟ್ರಾಫಿಕ್ಕನ್ನು ನಗೆಯಾಡುತ್ತಾ, ಡ್ರೈವರ್ ಅಲ್ಲೇ ಬಹುಶಃ ರಾತ್ರಿಯೂಟವನ್ನೂ ಮುಗಿಸಬೇಕಾದ ಪರಿಸ್ಥಿತಿಯೂ ಬರಬಹುದು ಎಂದಿದ್ದಾರೆ.
ಇನ್ನೂ ಕೆಲವರು ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದು, ʻನಾವೂ ಕೂಡಾ ಕಚೇರಿಗೆ ಹೊರಡುವಾಗ ಮನೆಯಲ್ಲಿ ಬೆಳಗಿನ ಉಪಹಾರ ತಿಂದು ಹೊರಡುವ ಬದಲು, ಮೊದಲೇ ಹೊರಟು, ದಾರಿಯಲ್ಲಿ ಟ್ರಾಫಿಕ್ಕಿನಲ್ಲಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇವೆʼ ಎಂದಿದ್ದಾರೆ. ಇನ್ನೂ ಕೆಲವರು ೧೫ರಿಂದ ೨೦ ನಿಮಿಷಗಳ ಕಾಲ ಇದೇ ಸಿಲ್ಕ್ ಬೀರ್ಡ್ ಜಂಕ್ಷನ್‌ನಲ್ಲಿ ಒಂದೇ ರಸ್ತೆಯಲ್ಲಿ ಇರಬೇಕಾಗುತ್ತದೆ ಎಂದು ಪರಿಸ್ಥಿತಿಯ ವಾಸ್ತವವನ್ನು ಬಣ್ಣಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video : ಇದು ರಿಯಲ್ ಕೆಜಿಎಫ್ ಕತೆ; ಸಮುದ್ರಕ್ಕೆ ಜಿಗಿದು 20 ಕೋಟಿ ರೂ. ಮೌಲ್ಯದ ಚಿನ್ನ ತೆಗೆದ ವಿಡಿಯೊ ಇಲ್ಲಿದೆ ನೋಡಿ!
ಇತ್ತೀಚೆಗಷ್ಟೇ, ಬೆಂಗಳೂರಿನ ಟ್ರಾಫಿಕ್‌ನ ಪರಿಸ್ಥಿತಿಯನ್ನು ಹೇಳುವ ಮಹಿಳೆಯೊಬ್ಬರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಮಹಿಳೆಯೊಬ್ಬರು ಸ್ಕೂಟರಿನಲ್ಲಿ ಹಿಂದೆ ಕೂತು ಲ್ಯಾಪ್‌ಟಾಪ್‌ನಲ್ಲಿ ಟ್ರಾಫಿಕ್‌ನಲ್ಲೇ ಕೆಲಸ ಮಾಡುತ್ತಿರುವ ಫೋಟೋ ಅದಾಗಿತ್ತು. ಕೋರಮಂಗಲ ಹೊರವರ್ತುಲ ರಸ್ತೆಯ ಟ್ರಾಫಿಕ್‌ನ ಫೋಟೋ ಅದಾಗಿತ್ತು. ಈ ಚಿತ್ರಗಳು ಹಾಗೂ ವಿಡಿಯೋಗಳು ಇದೀಗ ಮತ್ತೆ ಸಂಚಾರ ದಟ್ಟಣೆಯ ಬಗ್ಗೆ ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕುತ್ತಿವೆ.
ಇನ್ನಷ್ಟು ಕುತೂಹಲಕರ ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.