Site icon Vistara News

Viral video : ಕಾರು ಡಿಕ್ಕಿಯಾದ ಬಳಿಕ ನಾಯಿ ದಿಢೀರ್‌ ಕಣ್ಮರೆ, 70 ಕಿ.ಮೀ. ಸಾಗಿದ ಬಳಿಕ ಒಮ್ಮೆಗೇ ಪ್ರತ್ಯಕ್ಷ: ಹಾಗಿದ್ರೆ ಎಲ್ಲೋಗಿತ್ತು?

Dog car

#image_title

ಮಂಗಳೂರು: ರಸ್ತೆಯಲ್ಲಿ ಕಾರು ಸಾಗುತ್ತಿತ್ತು. ಆಗ ನಾಯಿಯೊಂದು ಅಡ್ಡಬಂತು. ಏನೇ ಮಾಡಿದರೂ ಡಿಕ್ಕಿ ಹೊಡೆಯೋದನ್ನು ತಪ್ಪಿಸಲಾಗಲಿಲ್ಲ. ಡಿಕ್ಕಿ ಹೊಡೆದೇ ಬಿಟ್ಟಿತ್ತು. ಅಯ್ಯೋ ಪಾಪ.. ಏನಾಯ್ತೋ ಏನೋ ಅಂದುಕೊಂಡು ಕಾರಿನಲ್ಲಿದ್ದವರು ಹೊರಗೆ ಬಂದು ನೋಡಿದರು. ಆದರೆ, ನಾಯಿ ಅಲ್ಲಿರಲೇ ಇಲ್ಲ. ಒಂದೋ ಡಿಕ್ಕಿಯಾದ ರಭಸಕ್ಕೆ ಅದು ಎದುರು ಬಿದ್ದಿರಬೇಕಿತ್ತು! ಆದರೆ, ಅಲ್ಲಿ ಮಾತ್ರವಲ್ಲ ಸುತ್ತಮುತ್ತ ಎಲ್ಲೂ ಕಾಣಲಿಲ್ಲ. ನೋವಿನಿಂದ ಚೀರಿಕೊಂಡು ಓಡುವ ದೃಶ್ಯವೂ ಕಾಣಿಸಿರಲಿಲ್ಲ! ಎಲ್ಲಿ ಹೋಯಿತು ಈ ನಾಯಿ? ಹೇಗೆ ಕಣ್ಮರೆಯಾಯಿತು ಎಂದು ಯೋಚಿಸುತ್ತಲೇ ಮನೆಗೆ ಕಡೆಗೆ ಹೋದರು. ೭೦ ಕಿ.ಮೀ. ದಾಟಿದ ಬಳಿಕ ಸಿಗುವ ಮನೆಯದು. ಅಲ್ಲಿ ಹೋದಾಗ ನಾಯಿ ಏಕಾಏಕಿ ಪ್ರತ್ಯಕ್ಷವಾಗಿಬಿಟ್ಟಿತ್ತು. ಹಾಗಿದ್ದರೆ ನಿಜಕ್ಕೂ ಆಗಿದ್ದೇನು? (Viral video) ಈ ವರದಿ ಓದಿ..

ಇಂಥಹುದೊಂದು ವಿಚಿತ್ರವಾದ ಘಟನೆ ನಡೆದಿದ್ದು ಪುತ್ತೂರು ಮತ್ತು ಸುಬ್ರಹ್ಮಣ್ಯ ನಡುವಿನ ಬಳ್ಪ ಎಂಬಲ್ಲಿ. ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ಅವರು ತಮ್ಮ ಪತ್ನಿಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿದ್ದರು. ಅಲ್ಲಿಂದ ವಾಪಸ್‌ ಆಗುವ ದಾರಿಯಲ್ಲಿ ಬಳ್ಪ ಎಂಬಲ್ಲಿ ನಾಯಿಯೊಂದು ಕಾರಿಗೆ ಅಡ್ಡ ಬಂದಿತ್ತು.

ಕಾರನ್ನು ಎಷ್ಟೇ ನಿಯಂತ್ರಿಸಿದರೂ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲಾಗಲಿಲ್ಲ. ಕಾರು ಡಿಕ್ಕಿ ಹೊಡೆದ ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದರು. ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದರು. ಅಲ್ಲೆಲ್ಲೂ ಕಾಣಲೇ ಇಲ್ಲ. ಅವರಿಗೆ ಇದೊಂದು ವಿಸ್ಮಯವಾಗಿ ಕಂಡಿತು. ಹಾಗಾಗಿ ಸ್ವಲ್ಪ ಹೊತ್ತು ನೋಡಿ ನೇರವಾಗಿ ಕಾರು ಚಲಾಯಿಸಿಕೊಂಡು ಕಬಕದ ತನ್ನ ಮನೆಗೆ ಬಂದಿದ್ದಾರೆ.

ಮನೆಗೆ ಬಂದ ಬಳಿಕ ನಾಯಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಏನಾದ್ರೂ ಡ್ಯಾಮೇಜ್ ಆಗಿದೆಯಾ ಎಂದು ಪರಿಶೀಲಿಸಿದರು. ಈ ವೇಳೆ ಕಾರಿನ ಬಂಪರ್‌ನ ಗ್ರಿಲ್ ತುಂಡಾಗಿರುವುದು ಗಮನಕ್ಕೆ ಬಂತು. ಮಾತ್ರವಲ್ಲ, ಒಳಗಿನಿಂದ ಸಣ್ಣದಾಗಿ ಕುಂಯ್‌ ಕುಂಯ್‌ ಎನ್ನುವ ಸದ್ದು! ಓ ದೇವರೇ ನಾಯಿ ಇಲ್ಲಿ ಸಿಕ್ಕಿ ಹಾಕಿಕೊಂಡಿದೆಯೇ ಎಂದು ಅಚ್ಚರಿಪಟ್ಟ ವರು ಕೂಡಲೇ ಬಂಪರ್‌ ಓಪನ್‌ ಮಾಡಿ ನಾಯಿಯನ್ನು ಹೊರತೆಗೆಯಲು ಯತ್ನಿಸಿದರು.

ನಾಯಿಯನ್ನು ಬಂಪರ್ ಒಳಗಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್ ಗೆ ತೆರಳಿ ನಾಯಿಯನ್ನು ಹೊರ ತೆಗೆಯಲು ವಿನಂತಿಸಿದ್ದಾರೆ. ಬಳಿಕ ಗ್ಯಾರೇಜ್ ಮಂದಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಕಾರಿನಿಂದ ಹೊರ ತೆಗೆದಿದ್ದಾರೆ. ಸುಮಾರು 70 ಕಿಲೊಮೀಟರ್ ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂದಿದೆ. ಅಪರಿಚಿತ ಸ್ಥಳವಾದ ಕಾರಣ ಕೊಂಚ ಗಲಿಬಿಲಿಗೊಂಡಿದೆ. ಆದರೆ, ನಾಯಿ ಬಂಪರ್‌ನ ಒಳಗೆ ಹೋಗಿದ್ದು ಹೇಗೆ ಎನ್ನುವುದೇ ವಿಸ್ಮಯ!

ಇದನ್ನೂ ಓದಿ : Viral video: ಕೋಂಗಾ ನೃತ್ಯ ಮಾಡಿ ಗಿನ್ನಿಸ್‌ ದಾಖಲೆ ಬರೆದ ‌14 ನಾಯಿಗಳ ತಂಡ!

Exit mobile version