ಬೆಂಗಳೂರು: ನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿದೆ. ಸ್ಕೂಟರ್‌ನಲ್ಲಿ ಬಂದ ಕಳ್ಳರಿಬ್ಬರು ಮೊಬೈಲ್ ಕಸಿದು ಪರಾರಿ ಆಗಲು ಯತ್ನಿಸಿದ್ದಾರೆ. ರೆಸ್ಟೋರೆಂಟ್ ಬಳಿ ನಿಂತು ವಿಡಿಯೊ ಮಾಡುತ್ತಿದ್ದ ಇನ್ಫ್ಲುಯೆನ್ಸರ್‌ವೊಬ್ಬರ ಮೊಬೈಲ್ ಎಗರಿಸಲು ಬಂದ ಕಳ್ಳರ ಕೃತ್ಯದ ವಿಡಿಯೊ ಬೆಂಗಳೂರು 360 ಎಂಬ ಟ್ವಿಟರ್ ಪೇಜ್‌ನಲ್ಲಿ ವೈರಲ್ (viral video) ಆಗಿದೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ರುಚಿಕಾ ಎಂಬುವರು ರೆಸ್ಟೋರೆಂಟ್‌ವೊಂದರ ಕಂಟೆಂಟ್ ಕ್ರಿಯೆಟ್ ಮಾಡಲು ಮುಂದಾಗಿದ್ದರು. ಮೊದಲಿಗೆ ಇಬ್ಬರು ಹುಡುಗಿಯರು Ever tried Gufha Restaurant? ಎನ್ನುತ್ತಾ ಮತ್ತಿಬ್ಬರು ಹುಡುಗಿಯರತ್ತ ಕ್ಯಾಮೆರಾ ತಿರುಗಿಸಿದರು. ಅಷ್ಟರಲ್ಲಿ ಸ್ಕೂಟರ್‌ನಲ್ಲಿ ಬಂದ ಇಬ್ಬರು ಖದೀಮರು ಮೊಬೈಲ್ ಎಗರಿಸಲು ಮುಂದಾದರು.
ವಿಡಿಯೊ ಸಮೇತ ತಮ್ಮ ಅನುಭವ ಹಂಚಿಕೊಂಡಿರುವ ರುಚಿಕಾ, ನಾವು ಕಂಟೆಂಟ್ ಕ್ರಿಯೇಟರ್‌ಗಳಾಗಿರುವುದರಿಂದ ರೆಸ್ಟೋರೆಂಟ್‌ವೊಂದರ ಕಂಟೆಂಟ್ ಶೂಟಿಂಗ್ ಮಾಡುತ್ತಿದ್ದೆವು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ಹುಡುಗರು ನಮ್ಮ ಕೈನಲ್ಲಿದ್ದ ನನ್ನ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಅದೃಷ್ಟವಶಾತ್ ನಾನು ಆ ಸಮಯದಲ್ಲಿ ನನ್ನ ಫೋನ್ ಅನ್ನು ಕೆಳಗೆ ಮಾಡಿದ್ದರಿಂದ ಕಳ್ಳತನ ಆಗುವುದು ತಪ್ಪಿತು ಎಂದಿದ್ದಾರೆ.
ಮೊಬೈಲ್ ಕಸಿಯಲು ಬಂದ ಕಳ್ಳರು
ರಾತ್ರಿ 11.15ರ ಸುಮಾರಿಗೆ ಜಯನಗರದಲ್ಲಿರುವ ರೆಸ್ಟೋರೆಂಟ್ ಹೊರಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಈ ಘಟನೆ ನಡೆಯುವ ಮುನ್ನ ಈ ಯುವತಿಯರು ಕನಿಷ್ಠ 20 ನಿಮಿಷಗಳ ಕಾಲ ಅಲ್ಲೆ ವಿಡಿಯೊ ರೆಕಾರ್ಡ್ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಇದೆನ್ನಲ್ಲ ದೂರದಿಂದಲೇ ಗಮನಿಸಿ ಕಳ್ಳರು ಫೋನ್ ಎಗರಿಸುವ ಕೃತ್ಯಕ್ಕೆ ಮುಂದಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸದ್ಯ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಘಟನೆಯ ವಿವರ ಹಾಗೂ ದೂರುದಾರರ ಫೋನ್ ನಂಬರ್ ನೀಡುವಂತೆ ತಿಳಿಸಿದ್ದಾರೆ.
ತಮಗೂ ಹೀಗೆಲ್ಲ ಆಗಿದೆ ಎಂದು ಕಮೆಂಟ್
ಯುವತಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದೇ ರೀತಿಯ ಅನುಭವ ತಮಗೂ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅದರಲ್ಲೊಬ್ಬರು ತಾನು ರಾತ್ರಿ 8.30ರ ಸುಮಾರಿಗೆ ಕೋರಮಂಗಲ 1ನೇ ಬ್ಲಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆಟೊದಲ್ಲಿ ಹಿಂಬಾಲಿಸಿ ಕೆಲವರು ಫೋನ್ ಕಸಿದುಕೊಳ್ಳಲು ಪ್ರಯತ್ನಸಿದರು. ಆದರೆ ಫೋನ್ ಗಟ್ಟಿಯಾಗಿ ಹಿಡಿದಿದ್ದರಿಂದ ಅದು ಸಾಧ್ಯವಾಗಲಿಲ್ಲ. ನಿತ್ಯವೂ ಈ ದಾರಿಯಲ್ಲೆ ಮನೆಗೆ ಹೋಗಿ ಬರಬೇಕಾಗಿರುವುದರಿಂದ ಭೀತಿಯಲ್ಲೆ ಓಡಾಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: Karnataka Rain: ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರು ಸೇರಿ ಇಲ್ಲೆಲ್ಲ ವರ್ಷಧಾರೆ
ಬೆಂಗಳೂರು ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣಗಳು ವರದಿ ಆಗುತ್ತಿದ್ದು, ಪೊಲೀಸರ ಕಾರ್ಯವೈಖರಿ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಸರಗಳ್ಳತನದಿಂದ ಹಿಡಿದು ಮೊಬೈಲ್ ಹಾಗೂ ಅಪಾರ್ಟ್‌ಮೆಂಟ್‌ನಲ್ಲಿ ಚಪ್ಪಲಿ, ಶೂ ಕಳ್ಳತನ ಮಾತ್ರವಲ್ಲದೆ ಮನೆಯ ಮುಂದೆ ಇಟ್ಟಿರುವ ಹೂ ಕುಂಡಗಳನ್ನೂ ಕಳ್ಳತನ ಮಾಡುವ ಖರ್ತಾನಕ್ ಕಳ್ಳರ ಹಾವಳಿ ಹೆಚ್ಚಿದೆ.