ಬೆಂಗಳೂರು: ಪ್ರೀತಿಪಾತ್ರರು, ಗಂಡ ಅಥವಾ ಹೆಂಡತಿಯ ಹೆಸರನ್ನು, ಇಷ್ಟದ ದೇವರ ಫೋಟೊವನ್ನು ಕೈ, ಕತ್ತು, ಎದೆ, ತೋಳು ಸೇರಿ ದೇಹದ ಕೆಲ ಭಾಗಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ರೂಢಿ. ಆದರೆ, ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಗಂಡನ ಹೆಸರನ್ನು ಹಣೆಯ ಮೇಲೆಯೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ವಿಡಿಯೊ ಈಗ ವೈರಲ್ (Viral Video) ಆಗಿದ್ದು, ಜನ ತರಹೇವಾರಿ ಕಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಹೌದು, ಬೆಂಗಳೂರಿನ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೊ ಮಹಿಳೆಯ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದೆ. ಸ್ಟುಡಿಯೊಗೆ ತೆರಳಿದ ಮಹಿಳೆಯು ತಮ್ಮ ಪತಿಯ ಹೆಸರಾದ ಸತೀಶ್ ಎಂಬುದನ್ನು ಇಂಗ್ಲಿಷ್‌ನಲ್ಲಿ ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸತೀಶ್ ಎಂಬ ಅಕ್ಷರಗಳನ್ನು ಟ್ಯಾಟೂ ಕಲಾವಿದ ಮೊದಲು ಮಹಿಳೆ ತಲೆ ಮೇಲೆ ಸ್ಟಿಕ್ಕರ್ ಮೂಲಕ ಅಂಟಿಸುತ್ತಾರೆ. ಸ್ಟಿಕ್ಕರ್ ತೆಗೆದ ಬಳಿಕ Satish ಎಂದು ಟ್ಯಾಟೂ ಹಾಕಿದ್ದಾರೆ.
ಟ್ಯಾಟೂ ವಿಡಿಯೊ ನೋಡಿ
ವಿಡಿಯೊ ವೈರಲ್ ಆಗುತ್ತಲೇ ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಇನ್‌ಸ್ಟಾಗ್ರಾಂನಲ್ಲಿ ಡಿಸ್‌ಲೈಕ್ ಆಪ್ಶನ್ ಇದ್ದರೆ ಕೊಡಿ’ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಇದೇ ನಿಜವಾದ ಲವ್, ಟ್ರೂ ಲವ್” ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು, ಜನ ಕಾಮಿಡಿ ಮಾಡಿದ್ದಕ್ಕೆ ಬೇರೊಬ್ಬ ಮಹಿಳೆಯು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದಯಮಾಡಿ ಮಹಿಳೆಯನ್ನು ಜಡ್ಜ್ ಮಾಡಬೇಡಿ. ಅದು ಅವರ ಇಷ್ಟ, ಅವರ ಮರ್ಜಿ. ನೀವು ಕಮೆಂಟ್ ಮಾಡುವುದರಿಂದ ಏನೂ ಬದಲಾಗುವುದಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Rishab Shetty: ಆರ್ಸಿಬಿಗೆ ʻಜೈʼ ಎಂದ ರಿಷಬ್ ಶೆಟ್ಟಿ ಪುತ್ರಿ ರಾಧ್ಯಾ: ಮುದ್ದು ಕಂದಮ್ಮನ ವಿಡಿಯೊ ವೈರಲ್
ಟ್ಯಾಟೂ ಹಾಕಿಸಿಕೊಂಡ ಮಹಿಳೆಯು ಹೊರಗೆ ಹೇಗೆ ತಿರುಗಾಡುತ್ತಾರೆ ಎಂದು ಜನ ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಇದು ದಡ್ಡತನದ ಪರಮಾವಧಿ. ನಿಜವಾದ ಪ್ರೀತಿಯನ್ನೂ ಯಾರೂ ತೋರ್ಪಡಿಸುವುದಿಲ್ಲ ಹಾಗೂ ಪ್ರೂವ್ ಮಾಡುವ ಅಗತ್ಯವೇ ಇಲ್ಲ” ಎಂದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.