Site icon Vistara News

ಡಿಸೆಂಬರ್ ಒಳಗೆ ವಿಷ್ಣುವರ್ಧನ್‌ ಸ್ಮಾರಕ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

cm on vishnuvardhan house ವಿಷ್ಣುವರ್ಧನ್‌ ಸ್ಮಾರಕ

ಬೆಂಗಳೂರು: ಮೈಸೂರಿನಲ್ಲಿ ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣವಾಗುತ್ತಿದ್ದು, ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಇದನ್ನು ಡಿಸೆಂಬರ್ ಒಳಗೆ ಉದ್ಘಾಟನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಹಿಂದೆ ನಟ ವಿಷ್ಣುವರ್ಧನ್ ಅವರು ವಾಸವಿದ್ದ ಜಯನಗರದ ಮನೆಯ ಸ್ಥಳದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತಿಯವರು ಖುದ್ದಾಗಿ ಬಂದು ಗೃಹಪ್ರವೇಶಕ್ಕೆ ಆಹ್ವಾನ ನೀಡಿದ್ದರು. ವಿಷ್ಣುವರ್ಧನ್ ಅವರಿದ್ದ ಮನೆಯನ್ನು ಇನ್ನಷ್ಟು ಚಂದ ಮಾಡಿದ್ದಾರೆ. ನವೀಕರಣಗೊಂಡಿರುವ ಈ ಮನೆಯ ಸೌಂದರ್ಯದ ಹಿಂದೆ ಭಾರತಿ ವಿಷ್ಣುವರ್ಧನ್ ಅವರ ಪ್ರಯತ್ನ ಹಾಗೂ ಶ್ರಮ ಎದ್ದುಕಾಣುತ್ತಿದೆ. ಅವರಿಗೆ ಶುಭ ಕೋರಲು ಬಂದಿದ್ದೇನೆ ಎಂದರು.

ಮೈಸೂರಿನಲ್ಲಿ ನಿರ್ಮಾಣ ಆಗುತ್ತಿರುವ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ. ಡಿಸೆಂಬರ್ ಒಳಗೆ ಸ್ಮಾರಕದ ಉದ್ಘಾಟನೆಯನ್ನು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ವಿವರಗಳನ್ನು ಅವರ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು. ವಿಷ್ಣುವರ್ಧನ್ ಅವರದ್ದು ಮೇರು ವ್ಯಕ್ತಿತ್ವವಾಗಿದೆ. ಅವರ ಘನತೆಗೆ ತಕ್ಕ ಹಾಗೆ ಕಾರ್ಯಕ್ರಮವನ್ನು ವೈಭವಯುತವಾಗಿ ಆಯೋಜಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಚುಕ್ಕಿ ರೋಗ ತಡೆಗೆ ಕ್ರಮ
ಚಿಕ್ಕಮಗಳೂರಿನಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ಬಂದಿದ್ದು, ವಿಜ್ಞಾನಿಗಳ ಸಂಶೋಧನೆ ಒಂದು ಹಂತಕ್ಕೆ ಬಂದಿದೆ. ಅದಕ್ಕೆ ಪರಿಹಾರ ನೀಡುವ ಹಾಗೂ ರೋಗ ಹರಡದಂತೆ ಅನುದಾನ ಬಿಡುಗಡೆಯಾಗಿದೆ. ಮಲೆನಾಡ ಭಾಗದಲ್ಲಿ ಆನೆ ಹಾವಳಿ ಹೆಚ್ಚಿದ್ದು, ನಾಲ್ಕು ಜಿಲ್ಲೆಗಳಲ್ಲಿ ಅರಣ್ಯ ಪಡೆಗಳನ್ನು ರಚಿಸಿ, ವಾಹನ ಸಲಕರಣೆಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಶೃಂಗೇರಿಯಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸ್ಥಳದ ಸಮಸ್ಯೆ ಇದ್ದು, ಅದನ್ನು ಬಗೆಹರಿಸಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | ಅಡಿಕೆಗೆ ಎಲೆ ಚುಕ್ಕಿ ರೋಗ | ಮುನ್ನೆಚ್ಚರಿಕಾ ಕ್ರಮಕ್ಕೆ 10 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ

Exit mobile version