Site icon Vistara News

Vishveshwar Hegde Kageri | ಉತ್ತರ ಕನ್ನಡದಲ್ಲಿ ಪರಿಸರ ವಿಶ್ವವಿದ್ಯಾಲಯ ಘೋಷಣೆಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ

vishveshwar-hegde-kageri Thanked cm bommai for ecology university announcement

ಕಾರವಾರ: ಜಿ20 ರಾಷ್ಟ್ರಗಳ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿರುವ ಸಂದರ್ಭದಲ್ಲೆ, ಉತ್ತರ ಕನ್ನಡದಲ್ಲಿ ಪರಿಸರ ವಿವಿಯನ್ನು ಸ್ಥಾಪನೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿರುವುದು ಅತ್ಯಂತ ಸಂತಸದ ವಿಚಾರ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ತಿಳಿಸಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿ ವತಿಯಿಂದ ಶಿರಸಿಯ ಶ್ರೀ ಮಾರಿಕಾಂಬ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ನಾವು ನಮ್ಮ ಸನಾತನ ಹಿಂದು ಧರ್ಮದ ನಂಬಿಕೆಗಳನ್ನು ಬಲವಾಗಿ ಮೂಡಿಸಿಕೊಂಡಿರುವವರು. ಸೃಷ್ಟಿಯಲ್ಲಿ ಆಗುವ ಬದಲಾವಣೆಗಳ ಸತ್ಯವೆಲ್ಲವನ್ನೂ ಕಂಡುಹಿಡಿದು ಜ್ಞಾನ ಭಂಡಾರವೇ ಆಗಿದೆ ನಮ್ಮ ಪರಂಪರೆ. ಆದರೆ ಪರಕೀಯರ ದಾಳಿಯ ಕಾರಣಕ್ಕೆ ನಮ್ಮ ತನವನ್ನೇ ಮರೆತಿರುವಾಗ, ಹಬ್ಬದ ಮಹತ್ವವನ್ನೇ ಮರೆತಿದ್ದೇವೆಯೇ ಎನ್ನಿಸುತ್ತಿದೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ತನದ ಅರಿವನ್ನು ಮಾಡಿಕೊಡುತ್ತಿದ್ದಾರೆ. ನಾವೆಲ್ಲರೂ ಜ್ಞಾನದ ಬೆಳಕನ್ನು ಹೆಚ್ಚಿಸಿಕೊಂಡು, ಮನುಕುಲದ ಒಳಿತಿನ ಸಂದೇಶವನ್ನು ಸಾರುವ ಸಂದರ್ಭ ಇದು.

ಎಲ್ಲರೂ ನನ್ನನ್ನು ಒಪ್ಪಿಸಿ ಸಮಾರಂಭ ಮಾಡಿದ್ದೀರಿ. ವ್ಯಯಕ್ತಿಕವಾಗಿ ಈ ಸಮಾರಂಭ ಮುಜುಗರದ ಸಂಗತಿಯಾದರೂ, ನನ್ನ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ. ಮನುಷ್ಯರಾಗಿ ಒಳ್ಳೆಯ ಕೆಲಸ ಮಾಡುವ ಮೂಲಕ ನಮ್ಮ ಜವಾಬ್ದಾರಿಯಲ್ಲಿ ಅಭಿನಂದನೆಗೆ ಅರ್ಹರಾಗಬೇಕು. ನಾನು ಇನ್ನಷ್ಟು ಜವಾಬ್ದಾರನಾಗಬೇಕು ಎನ್ನುವ ಕಾರಣಕ್ಕೆ ಈ ಸಮಾರಂಭ ಮಾಡುತ್ತಿದ್ದೀರ ಎನ್ನುವ ಭಾವನೆಯನ್ನು ಹೊಂದಿದ್ದೇನೆ.

ಕೃಷಿ ಕುಟುಂಬದಿಂದ ಈ ಹಂತಕ್ಕೆ ಬೆಳೆಯಲು ಕುಟುಂಬದವರ ಸಹಕಾರ ಅತ್ಯಮೂಲ್ಯವಾದದ್ದು. ನನ್ನ ಯಾವುದೇ ಕೆಲಸದಲ್ಲಿ ಹತ್ತಿರವೂ ಬರದೆ, ಸಂಪೂರ್ಣ ಸಹಕಾರ ನೀಡಿದ್ದು ನಮ್ಮ ಕುಟುಂಬ. ಕ್ಷೇತ್ರ ಹಾಗೂ ಜಿಲ್ಲೆಯ ಜನ ತೋರಿಸಿರುವ ಪ್ರೀತಿಯ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ವಿಶ್ವೇಶ್ವರ ಹೆಗಡೆ ಒಬ್ಬ ಶಾಸಕ, ಮಂತ್ರಿ, ಸಭಾಪತಿ ಎಂದು ಯಾರೂ ನೋಡಿಲ್ಲ. ನಿಮ್ಮ ಮನೆಯ ಒಬ್ಬ ಸದಸ್ಯ ಎಂದೇ ತಿಳಿದಿದ್ದೀರ.

ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ, ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತನಾಗಿ, ಆನಂತರ ಭಾಜಪಾ ಕಾರ್ಯಕರ್ತನಾಗಿ ಹೊಣೆ ಹೊತ್ತಿದ್ದೆ. ನಮ್ಮ ಸಂಘಟನೆಯ ಹಿರಿಯರು ನೀಡಿದ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದೇನೆ. ನಾವು ನಂಬಿರುವ ವಿಚಾರ, ಸಿದ್ಧಾಂತಕ್ಕೆ ಬದ್ಧರಾಗಿದ್ದುಕೊಂಡು ನಡೆಯಬೇಕು.

ಸ್ಪೀಕರ್‌ ಸ್ಥಾನದಲ್ಲಿದ್ದಾಗ ನನ್ನನ್ನು ಸದನದಲ್ಲಿ ನೋಡಿದ್ದೀರಿ. ಇಲ್ಲಿಯ ರೀತಿಯಲ್ಲೇ ಉತ್ತಮ ಪ್ರೇಕ್ಷಕರು ನಮ್ಮೆದುರು ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎನ್ನಿಸುತ್ತದೆ. ಆದರೆ ನಿಮ್ಮಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕಾಗುತ್ತದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಸಮಯ ಮಡಿಕೊಂಡು ಆಗಮಿಸಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿರುವ ಸಂದರ್ಭದಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸುತ್ತೇವೆ ಎಂದು ಅವರು ಘೋಷಣೆ ಮಾಡಿರುವುದು ಅತ್ಯಂತ ಅಭಿನಂದನಾರ್ಹ. ರಾಮಕೃಷ್ಣ ಹೆಗಡೆ ಅವರ ಕುರಿತ ಅಧ್ಯಯನ ಪೀಠವನ್ನು ಕರ್ನಾಟಕ ವಿವಿಯಲ್ಲಿ ಸ್ಥಾಪಿಸುವುದಾಗಿ ಹೇಳಿದ್ದಾರೆ, ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದಿದ್ದಾರೆ. ಇದೆಲ್ಲದಕ್ಕೂ ಅಭಿನಂದನೆ ಸಲ್ಲಿಸುತ್ತೇನೆ.

ಉತ್ತರ ಕನ್ನಡ, ಬಹಳ ವಿಶೇಷ ಜಿಲ್ಲೆ. ಕೃಷಿ, ಸಂಸ್ಕೃತಿಯಲ್ಲಿ ಬಹಳಷ್ಟು ವೈವಿದ್ಯವಾದ ಹಾಗೂ ಸಮೃದ್ಧವಾದ ಜಿಲ್ಲೆ. ಈ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ, ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಸರ್ಕಾರದ ಸಹಕಾರ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಪ್ರೋತ್ಸಾಹಿಸುತ್ತಾರೆ ಎನ್ನುವ ಆಶಯವಿದೆ.

ಮಾಜಿ ಪ್ರಧಾನಿ ದೇವೇಗೌಡರು ಅಭಿನಂದನೆ ಪತ್ರ ಕಳಿಸಿದ್ದಾರೆ. ಸ್ವರ್ಣವಲ್ಲಿ ಸ್ವಾಮೀಜಿಯವರು ಸೇರಿ ಅನೇಕ ಮಠಾಧೀಶರು ಪ್ರಸಾದ, ಆಶೀರ್ವಾದವನ್ನು ಕಳಿಸಿಕೊಟ್ಟಿದ್ದಾರೆ. ಇವರೆಲ್ಲರ ಶುಭಸಂದೇಶಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಎಲ್ಲರೂ ಒಟ್ಟಾಗಿ ಅಭಿವೃದ್ಧಿಯಲ್ಲಿ ಕೈಜೋಡಿಸೋಣ ಎಂದರು.

ಇದನ್ನೂ ಓದಿ | Vishveshwar Hegde Kageri | ಕಾಗೇರಿ ಅವರ ಅನುಭವದ ಪ್ರಭಾವ ಇಡೀ ರಾಜ್ಯಕ್ಕೆ ದೊರಕಲಿದೆ: ಸಿಎಂ ಬೊಮ್ಮಾಯಿ ವಿಶ್ವಾಸ

Exit mobile version