ಬೆಂಗಳೂರು: ವಿಶ್ವ ಹಿಂದು ಪರಿಷತ್ತಿನ (Vishwa Hindu Parishad) ಹಿರಿಯ ಮುಖಂಡ ಹಾಗೂ ಕ್ಷೇತ್ರೀಯ ಸಂಘಟನಾ ಮಂತ್ರಿ ಕೇಶವ ಹೆಗಡೆ(63) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
ಶಂಕರಪುರದಲ್ಲಿರುವ ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿದ್ದ ಕೇಶವ ಹೆಗಡೆ ಅವರಿಗೆ ಮದ್ಯಾಹ್ನ 2 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಸಮೀಪದಲ್ಲಿರುವ ರಂಗದೊರೈ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆ ವೇಳೆಗಾಗಲೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಮತಾಂತರವಾದವರಿಗೆ SCST ಮೀಸಲಾತಿ ಬೇಡ: ವಿಶ್ವ ಹಿಂದು ಪರಿಷತ್ ಆಗ್ರಹ
ಮೂಲತಃ ಶಿರಸಿಯವರಾದ ಕೇಶವ ಹೆಗಡೆಯವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು. ನಂತರ ಪೂರ್ಣಾವಧಿ ಪ್ರಚಾರಕರಾಗಿ ತಮ್ಮನ್ನು ತೊಡಗಿಸಿಕೊಂಡ ಕೇಶವ ಹೆಗಡೆ ಅವರನ್ನು ವಿಶ್ವ ಹಿಂದು ಪರಿಷತ್‌ಗೆ ನಿಯೋಜನೆ ಮಾಡಲಾಯಿತು. ರಾಮಮಂದಿರ ಹೋರಾಟ ಸೇರಿ ವಿಹಿಂಪದ ಎಲ್ಲ ಹೋರಾಟ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಲ ಸಮಯದಿಂದ ಹೃದಯ ಸಮಸ್ಯೆ ಹೊಂದಿದ್ದರು ಎಂದು ವಿಹಿಂಪ ಮೂಲಗಳು ತಿಳಿಸಿವೆ.
ಗುರುವಾರ ಅಂತ್ಯಸಂಸ್ಕಾರ: ಚಾಮರಾಜಪೇಟೆಯ ಕೇಶವ ಶಿಲ್ಪದಲ್ಲಿ ಕೇಶವ ಹೆಗಡೆ ಅವರ ಶರೀರದ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಗುರುವಾರ ಬೆಳಗ್ಗೆ 11.00 ಗಂಟೆಗೆ ಹುಟ್ಟೂರು ಶಿರಸಿಯ ನೆಮ್ಮದಿ ಕೇಂದ್ರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಜುಲೈ 10ರಂದು ಸಂಜೆ 6.00ಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮ ಬೆಂಗಳೂರಿನ ಚಾಮರಾಜಪೇಟೆಯ ಕೇಶವಶಿಲ್ಪಾ ಸಭಾಂಗಣದಲ್ಲಿ ನಡೆಯಲಿದೆ.