ಬೆಂಗಳೂರು: ʻʻನನ್ನನ್ನು ಚಿಕ್ಕಮಗಳೂರಿನಲ್ಲಿ ಲೂಟಿ ರವಿ ಅಂತ ಕರೀತಾರೆ ಅಂತಾರಲ್ಲ ಸಿದ್ದರಾಮಯ್ಯ, ಅವರನ್ನು ಮೈಸೂರಿನಲ್ಲಿ ಕಚ್ಚೆಹರುಕ ಅಂತ ಹೇಳ್ತಾರೆ ಅನ್ನೋದನ್ನು ನಾನೂ ಹೇಳಬಹುದಲ್ವಾ?ʼ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರಂಥ ನಾಯಕರ ಬಗ್ಗೆ ಕಚ್ಚೆಹರುಕ ಎಂಬ ಪದ ಬಳಕೆ ಮಾಡಿದ್ದು ಸರಿಯಲ್ಲ ಎನ್ನುವುದು ಶಾಸಕರಾದ ಎಚ್.ವಿಶ್ವನಾಥ್ ಮತ್ತು ಕೆ.ಎಂ. ಶಿವಲಿಂಗೇ ಗೌಡ ಅವರ ಮಾತು.
ʻʻಸಿದ್ದರಾಮಯ್ಯ ಬಗ್ಗೆ ಆ ಪದ ಬಳಕೆ ಯಾರೂ ಒಪ್ಪುವುವಂತದಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ದಮ್ಮಿದಿಯಾ, ತಾಕತ್ತು ಇದಿಯಾ ಎಂಬ ಪದ ಬಳಕೆ ಮಾಡುತ್ತಿದ್ದಾರೆ. ಕನ್ನಡ ಭಾಷೆಯನ್ನೇ ಕುಲಗೆಡಿಸುತ್ತಿದ್ದಾರೆ. ರಾಜಕಾರಣಿಗಳು ಮಾತನಾಡುವಾಗ ಬಳಸುವ ಪದಗಳನ್ನು ಹುಷಾರಾಗಿ, ಎಚ್ಚರದಿಂದ ಬಳಸಬೇಕು. ಬೇರೆಯವರನ್ನು ಸಂಸ್ಕೃತಿ ಹೀನ ಎಂದು ಹೇಳ್ತಾ ಹೇಳ್ತಾ ಇದ್ದ ಹಾಗೇ ನಮ್ಮ ಮಾತುಗಳು ಕೂಡ ಸಂಸ್ಕೃತಿ ಹೀನವಾಗಿರುವುದನ್ನು ನಾಡಿನ ಜನರು ಗಮನಿಸುತ್ತಿದ್ದಾರೆʼʼ ಎಂದು ವಿಶ್ವನಾಥ್ ಹೇಳಿದರು.
ಸಿದ್ದರಾಮಯ್ಯ ಮತ್ತು ಎಚ್.ವಿಶ್ವನಾಥ್ ರಕ್ತ ಒಂದೇ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಹಾಗಾದರೆ ನಾನು ಮತ್ತು ಸಿದ್ದರಾಮಯ್ಯ ಮಾತ್ರ ಮನುಷ್ಯರೇ? ಸಿ.ಟಿ ರವಿನೂ ಮನುಷ್ಯನೇ ಎಲ್ಲರೂ ಮನುಷ್ಯರೇ. ಎಲ್ಲರ ರಕ್ತವೂ ಒಂದೇ. ಮಾತನಾಡುವ ಭರದಲ್ಲಿ ಏನೇನೋ ಮಾತಾಡಬಾರದುʼʼ ಎಂದರು.
ಶಿವಲಿಂಗೇಗೌಡರು ಹೇಳಿದ್ದೇನು?
ʻʻಸಿ.ಟಿ ರವಿ ಅವರ ಪದ ಬಳಕೆ ಸರಿಯಿಲ್ಲ. ಸಿದ್ದರಾಮಯ್ಯ ವಯಸ್ಸಿಗೂ ಸಿ.ಟಿ ರವಿ ವಯಸ್ಸಿಗೂ ಅಂತರ ಇದೆ. ಸಿಎಂ ಆಗಿದ್ದವರ ಬಗ್ಗೆ ವೈಯಕ್ತಿಕ ವಿಚಾರ ಮಾತನಾಡಿದ್ದು ಸರಿಯಲ್ಲ. ಲೂಟಿ ಎಂಬುದು ಸಾಮಾನ್ಯ ಪದ ಆಗಿಬಿಟ್ಟಿದೆ. ಆದರೆ, ರವಿ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ, ಸಿ.ಟಿ ರವಿ ಕೂತು ಮಾತನಾಡಲಿ. ಬಾಯಿ ತಪ್ಪಿ ಬಂದಿದೆ ಅಂತ ಹೇಳಲಿʼʼ ಎಂದಿದ್ದಾರೆ ಅರಸೀಕೆರೆ ಶಾಸಕ ಶಿವಲಿಂಗೇ ಗೌಡ.
ಇದನ್ನೂ ಓದಿ | ಸಿ.ಟಿ. ಎನ್ನೋದನ್ನು ಲೂಟಿ ಅಂತ ಹೇಳಬಹುದಾದ್ರೆ ಸಿದ್ದುನ ಪೆದ್ದ ಅಂತ ಪ್ರಾಸವಾಗಿ ಹೇಳಬಹುದಾ: ರವಿ ಪ್ರಶ್ನೆ