ವಿಶೇಷ ವರದಿ : ವಿವೇಕ ಮಹಾಲೆ
ಶಿವಮೊಗ್ಗ: ಬಹಳ ವರ್ಷಗಳಿಂದ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತ ಬಂದಿರುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಬೀಗ ಜಡಿಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಹಿಂದೆಯೇ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಭಾರತೀಯ ಉಕ್ಕು ಪ್ರಾಧಿಕಾರ) ನಾಡಿನ ಹೆಮ್ಮೆಯ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಮಾರಾಟ ಮಾಡಲು ಟೆಂಡರ್ ಹೊರಡಿಸಿದೆ ಎಂಬ ಸುದ್ದಿ ಹರಿದಾಡಿತ್ತು. ಸರ್ಕಾರ ತನ್ನ ಬಂಡವಾಳ ಹಿಂತೆಗೆದು ಖಾಸಗೀಕರಣ ಮಾಡಲು ನಿರ್ಧರಿಸಿತ್ತು. ಇದರ ಸುತ್ತ ಸಾಕಷ್ಟು ಚರ್ಚೆಗಳು ನಡೆದವು. ಕಾರ್ಖಾನೆ ಇಂದಿಗೂ ಸುಸ್ಥಿತಿಯಲ್ಲಿದೆ. ಇಲ್ಲಿನ ಉದ್ಯೋಗಿಗಳು ನಿಪುಣರು. ಯಾವ ಅದಿರಿಗೂ ಕೊರತೆ ಇಲ್ಲ. ಆದರೀಗ, ರಾಜಕಾರಣಿಗಳ ಹಿತಾಸಕ್ತಿ ಕೊರತೆಯಿಂದಾಗಿ ಕೇಂದ್ರ ಸರ್ಕಾರ ಈ ಕಾರ್ಖಾನೆಯನ್ನು ಮುಚ್ಚಲು ಮುಂದಾಗಿದೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಸೈಲ್) ಆಡಳಿತ ಮಂಡಳಿಯಲ್ಲಿ ಮುಚ್ಚುವ ಪ್ರಸ್ತಾವನೆಗೆ ಅಂಗೀಕಾರ ದೊರಕಿದೆ. ಈ ಕುರಿತು ಕಾರ್ಮಿಕ ಸಂಘಕ್ಕೆ ಅಧಿಕೃತ ಮಾಹಿತಿ ನೀಡಲಾಗಿದ್ದು, 10 ವರ್ಷಗಳ ಕಾರ್ಮಿಕರ ಹೋರಾಟ ಅಂತ್ಯವಾಗಿದೆ.
1923ರಿಂದ ಕಬ್ಬಿಣ ಮತ್ತು ಉಕ್ಕು ಉತ್ಪಾದನೆ ಆರಂಭಿಸಿದ್ದ ವಿಐಎಸ್ಎಲ್ ಲಕ್ಷಾಂತರ ಜನರಿಗೆ ಪ್ರತ್ಯಕ್ಷ, ಪರೋಕ್ಷ ಉದ್ಯೋಗ ನೀಡಿತ್ತು. ವಿಐಎಸ್ಎಲ್ ದೇಶದ ಕೈಗಾರಿಕಾ ವಲಯಕ್ಕೆ ಅಪಾರವಾದ ಕೊಡುಗೆ ನೀಡಿದೆ. ಸರ್ ಎಂ. ವಿಶ್ವೇಶ್ವರಯ್ಯನವರ ಚಾಕಚಕ್ಯತೆ ಮತ್ತು ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರ ಉದಾರ ದೇಣಿಗೆಯಿಂದ ನಿರ್ಮಾಣವಾದ ಈ ಇತಿಹಾಸವುಳ್ಳ ಕಾರ್ಖಾನೆಗೆ ಬೀಗ ಜಡಿಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ | Steel production | 4-5 ವರ್ಷಗಳಲ್ಲಿ ಕರ್ನಾಟಕ ವಿಶ್ವದ ಅತಿ ದೊಡ್ಡ ಉಕ್ಕು ಉತ್ಪಾದಿಸುವ ರಾಜ್ಯವಾಗಲಿದೆ: ಸಿಎಂ
ಕಳೆದೊಂದು ದಶಕದಿಂದ ನಷ್ಟದಲ್ಲಿದ್ದ ಕಾರ್ಖಾನೆಯ ಖಾಸಗೀಕರಣಕ್ಕೆ ಕೇಂದ್ರ ಸಚಿವ ಸಂಪುಟ 2016ರಲ್ಲಿ ಒಪ್ಪಿಗೆ ನೀಡಿತ್ತು. ಆದರೆ ಬಿಡ್‌ದಾರರು ಆಸಕ್ತಿ ವಹಿಸದ ಕಾರಣ ಕೇಂದ್ರ ಸರ್ಕಾರ ಅದನ್ನು ಕೈಬಿಟ್ಟಿತ್ತು. ವಿಐಎಸ್ಎಲ್ ಮುಚ್ಚುವುದಿಲ್ಲ, ಖಾಸಗಿಗೂ ನೀಡೊಲ್ಲ ಎಂದಿದ್ದ ಕೇಂದ್ರ ಸರ್ಕಾರ, ಸೈಲ್ ಮೂಲಕ 16,000 ಕೋಟಿ ಬಂಡವಾಳ ಹೂಡಿಕೆ ಮಾಡಿ ಅಭಿವೃದ್ಧಿಗೆ ಯೋಜಿಸಿತ್ತು. ಈ ಬಗ್ಗೆ ಕಾರ್ಮಿಕರಿಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯೂ ಹುಸಿಯಾದಂತಾಗಿದೆ.
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳುತ್ತಲೇ ಬಂದಿದ್ದರು. ಅದರಂತೆಯೇ ದೆಹಲಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಸಂಬಂಧ ಕೇಂದ್ರ ಸಚಿವರನ್ನು ಅನೇಕ ಬಾರಿ ಭೇಟಿ ಮಾಡಿದ್ದರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆಯಲ್ಲೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅಂದು ಈ ಕಾರ್ಖಾನೆ ಉಳಿಸಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಧರ್ಮೇಂದ್ರ ಪ್ರಧಾನ್ ಅಂದಿನ ಸಿಎಂ ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರರಿಗೆ ಭರವಸೆ ನೀಡಿದ್ದರು. ಇದೀಗ ಎಲ್ಲ ರೀತಿಯ ಹೋರಾಟಗಳು ಅಂತ್ಯವಾದಂತಾಗಿದೆ.
ಇದನ್ನೂ ಓದಿ | Steel price | ಕಳೆದ 6 ತಿಂಗಳಲ್ಲಿ ಉಕ್ಕಿನ ದರ 40% ಇಳಿಕೆ, ಈಗ ಟನ್ನಿಗೆ 57,000 ರೂ.