ಅಣೆಕಟ್ಟಿನಲ್ಲಿ ನೀರೇ ಇಲ್ಲದಿದ್ದರೂ ಮತ್ತೆ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿ ಕರ್ನಾಟಕಕ್ಕೆ ಬಂದಿದೆ. ಮತ್ತೆ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದೆ. ಮಂಗಳವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಕರ್ನಾಟಕದ ಸಂಕಟ ಅರಣ್ಯ ರೋದನವಾಗಿದೆ. ಕಳೆದ ಆಗಸ್ಟ್ 29ರಂದು ಇದೇ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮುಂದಿನ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್ ನೀರು ಬಿಡಬೇಕು ಎಂದು ಆದೇಶ ನೀಡಿತ್ತು. ಮರುದಿನ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ (Cauvery Water Management Authority) ಅದನ್ನು ಎತ್ತಿಹಿಡಿದಿತ್ತು. ಕರ್ನಾಟಕ ತನ್ನಲ್ಲೇ ನೀರಿಲ್ಲದಿದ್ದರೂ, ತಾನೇ ಸಮಸ್ಯೆಯಲ್ಲಿದ್ದರೂ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಆದೇಶವನ್ನು ಪಾಲಿಸಿತ್ತು. ಮಂಗಳವಾರ ನಡೆಯುವ ಸಭೆಯಲ್ಲಾದರೂ ನೀರು ಬಿಡುಗಡೆಯನ್ನು ನಿಲ್ಲಿಸಲು ಆದೇಶ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಕೂಡಾ ಹುಸಿಯಾಗಿದೆ.
ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನದಿ ಕಾವೇರಿ ಸಾಮಾನ್ಯವಾಗಿ ಈ ಹೊತ್ತಲ್ಲಿ ಉಕ್ಕಿ ಹರಿಯಬೇಕಿತ್ತು. ಆದರೆ, ಕೆಲವು ಕಡೆ ನೀರೇ ಹರಿಯುತ್ತಿಲ್ಲ. 124 ಅಡಿಗಳ ಗರಿಷ್ಠ ಮಿತಿಯಲ್ಲಿ ತುಂಬಿ ತುಳುಕಬೇಕಾಗಿದ್ದ ಕೆ.ಆರ್.ಎಸ್ ಜಲಾಶಯದಲ್ಲಿ ಈಗ ಇರುವುದು ಕೇವಲ 97 ಅಡಿ ನೀರು ಮಾತ್ರ. ಟಿಎಂಸಿ ಲೆಕ್ಕಾಚಾರದಲ್ಲಿ ನೋಡಿದರೆ ಕೇವಲ 21 ಟಿಎಂಸಿ. ಆದರೂ ಕೂಡಾ ತಮಿಳುನಾಡು ಸರ್ಕಾರ ತನ್ನ ಪಾಲಿನ ನೀರು ಎಂದು ಹಠ ಹಿಡಿಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಜೀವ ಹಿಂಡುತ್ತಿದೆ. ಸಂಕಷ್ಟ ಕಾಲದಲ್ಲಿ ಹೇಗೆ ನೀರು ಬಿಡಬೇಕು ಎನ್ನುವ ಎಲ್ಲ ಸೂತ್ರಗಳೂ ಗಾಳಿಗೊಡ್ಡಿದ ಸೂತ್ರಪಟದಂತಾಗಿವೆ. ದುರ್ದೈವವೆಂದರೆ ಸುಪ್ರೀಂ ಕೋರ್ಟ್ ಕೂಡಾ ಕರ್ನಾಟಕದ ವಾದವನ್ನು ಕೇಳಿಸಿಕೊಳ್ಳಲೇ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾದ ವಿಚಾರಣೆ ನಡೆಯಲೇ ಇಲ್ಲ. ಪ್ರಾಧಿಕಾರದ ನಿರ್ಣಯವೇ ಅಂತಿಮವೆನಿಸಿದೆ.
ಈ ಸಲ ನಮ್ಮ ಮಳೆಗಾಲದ ಪರಿಸ್ಥಿತಿ ಕಾವೇರಿ ಸಮಿತಿಗೂ ಪ್ರಾಧಿಕಾರಕ್ಕೂ ತಿಳಿಯದೇ ಇರುವುದೇನೂ ಇಲ್ಲ. ಆದರೆ ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು ಎಂಬಂತೆ ಇವು ವರ್ತಿಸುತ್ತಿವೆ. ಕಳೆದ ಬಾರಿಯೇ ಸೆಟೆದು ನಿಲ್ಲದೇ ಬಗ್ಗಿದ್ದೇ ಮುಳುವಾಗಿದೆ. ಕಳೆದ ಬಾರಿ ಪ್ರತಿ ದಿನ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿ ಎಂದಾಗಲೇ ಪ್ರತಿರೋಧ ಒಡ್ಡದೆ ಪಾಲನೆ ಮಾಡಿದ್ದು ಕರ್ನಾಟಕಕ್ಕೆ ಮುಳುವಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಡಿಎಂಕೆ ಆಡಳಿತದಲ್ಲಿರುವುದರಿಂದ ಅದರ ಹಿತಾಸಕ್ತಿಗಾಗಿ ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿ ಕೊಟ್ಟು ನೀರು ಬಿಡಲಾಗುತ್ತಿದೆ ಎಂಬ ಆರೋಪ ಕಾಂಗ್ರೆಸ್ ಸರ್ಕಾರಕ್ಕೆ ಇದರಿಂದ ಎದುರಾಗದೇ ಇರದು. ಇದೀಗ ಮಂಡ್ಯ ಜಿಲ್ಲೆಯ ರೈತರ ಸಿಡಿದೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಾರಿ ಏನಾದರೂ ಮತ್ತೆ ಆದೇಶ ಪಾಲನೆ ಹೆಸರಲ್ಲಿ ನೀರು ಬಿಟ್ಟರೆ ದೊಡ್ಡ ಪ್ರಮಾಣದ ಜನಾಕ್ರೋಶ ಹುಟ್ಟಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. ಮಂಡ್ಯದ ಜನ ನೀರು ನಿಯಂತ್ರಣ ಸಮಿತಿ ಆದೇಶವನ್ನು ಅದಕ್ಕೆ ಸರ್ಕಾರ ನೀಡುವ ಪ್ರತಿಕ್ರಿಯೆಯನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು. ಹೀಗಾಗಿ ಈ ಬಾರಿ ದೊಡ್ಡ ಮಟ್ಟದ ಹೋರಾಟ ನಡೆಯುವುದು ಖಚಿತವಾಗಿದೆ. ರಾಜ್ಯ ಸರ್ಕಾರ ಈ ಬಾರಿ ಸೆಟೆದು ನಿಲ್ಲದೆ ಹೋದರೆ ಜನ ರೊಚ್ಚಿಗೇಳುವುದು ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ತಮಿಳುನಾಡಿನ ಸರ್ಕಾರಿ ಬಸ್ಸುಗಳಿಗೆ ಕಲ್ಲಿ ತೂರಾಟ ನಡೆದಿದೆ. ಪರಿಸ್ಥಿತಿ ಕೈ ಮೀರುವ ಮುನ್ನ ಏನಾದರೂ ಮಾಡಬೇಕಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಿದ್ಯಾರ್ಥಿನಿಯರಿಗೆ ವರವಾಗಲಿ ರಾಜ್ಯ ಸರ್ಕಾರದ ‘ಶುಚಿ’ ಯೋಜನೆ
ತಮಿಳುನಾಡಿನ ಆಡಳಿತಗಾರರು ತಮ್ಮ ಹಕ್ಕೊತ್ತಾಯವನ್ನು ದೊಡ್ಡ ಗಂಟಲಿನಲ್ಲಿ ಪದೇ ಪದೇ ಕೂಗಾಡಿ ಪಡೆಯುವುದಕ್ಕೆ ಖ್ಯಾತರಾಗಿದ್ದಾರೆ. ಸಮರ್ಥ ನ್ಯಾಯವಾದಿಗಳನ್ನೂ ಇಟ್ಟುಕೊಂಡಿದ್ದಾರೆ. ಕರ್ನಾಟಕವೂ ತನ್ನ ವಾದವನ್ನು ಸಮರ್ಥವಾಗಿಯೇ ಮಂಡಿಸಿದಂತಿಲ್ಲ. ರಾಜ್ಯ ಸರ್ಕಾರ ತನ್ನ ಪರಿಸ್ಥಿತಿ ಹಾಗೂ ನಿಲುವನ್ನು ಇನ್ನಷ್ಟು ಬಲವಾಗಿ ಪ್ರತಿಪಾದಿಸುವ ಅಗತ್ಯವಿತ್ತು. ಸರ್ಕಾರ ಮೆದು ಧೋರಣೆ ತಾಳಿದಂತಿದೆ. ಸಾಮಾನ್ಯವಾಗಿ, ನೀರಾವರಿ ವಿಚಾರದಲ್ಲಿ ನದಿಯ ಮೇಲ್ಭಾಗದ ರಾಜ್ಯದವರೇ ಖಳನಾಯಕರಾಗಿ ಕಾಣಿಸುತ್ತಾರೆ. ನೀರಿದ್ದೂ ಬಿಡುತ್ತಿಲ್ಲ ಎಂಬುದು ನೀರಿಗಾಗಿ ಆಗ್ರಹಿಸುವವರ ಪೂರ್ವಾಗ್ರಹವಾಗಿರುತ್ತದೆ. ಆದರೆ ಆಂತರಿಕ ಸ್ಥಿತಿ ನಮಗೆ ಮಾತ್ರ ಗೊತ್ತಿರುತ್ತದೆ. ಇದನ್ನು ಸಮಿತಿ ಸ್ಥಳಕ್ಕೆ ಭೇಟಿ ನೀಡಿಯೇ ನಿಷ್ಪಕ್ಷಪಾತವಾಗಿ ತೀರ್ಮಾನ ಮಾಡುವ ಅಗತ್ಯವಿದೆ. ಕರ್ನಾಟಕಕ್ಕೆ ಭೇಟಿ ನೀಡಿ ಅಣೆಕಟ್ಟಿನ ಹಾಗೂ ನೀರಾವರಿ ಪ್ರದೇಶದ ಸ್ಥಿತಿಗತಿ ಪರಿಶೀಲಿಸಿದರೆ ನೀರು ಎಷ್ಟು ಬಿಡಬಹುದು ಎಂಬುದು ಗೊತ್ತಾದೀತು. ಆದರೆ ಕಾವೇರಿ ಸಮಿತಿ ವರ್ಚುವಲ್ ಆಗಿ ಸಭೆ ನಡೆಸಿ ತಿಪ್ಪೆ ಸಾರಿಸಿದೆ. ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈಗಲಾದರೂ ಗಟ್ಟಿ ದನಿಯಲ್ಲಿ ʼಏನೇ ಬರಲಿ, ನೀರು ಬಿಡುವುದಿಲ್ಲʼ ಎಂದು ಹೇಳಿ ದಕ್ಕಿಸಿಕೊಳ್ಳುವುದು ಕರ್ನಾಟಕಕ್ಕೆ ಸಾಧ್ಯವಾಗಬೇಕು. ಕೇಂದ್ರ ಜಾರಿ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾವು ಪಾಲಿಸುವುದಿಲ್ಲ ಎಂದು ಹೇಳುವುದಕ್ಕಾಗುತ್ತದೆ; ಇದನ್ನು ಗಟ್ಟಿಯಾಗಿ ಹೇಳುವುದಕ್ಕೆ ಆಗುವುದಿಲ್ಲವೇ!