ರಾಜ್ಯದಲ್ಲಿ ಇನ್ನೇನು ಮುಂಗಾರು ಮಳೆ ಕೈ ಕೊಟ್ಟಿತು ಎನ್ನುವಷ್ಟರಲ್ಲಿ ಪರಿಸ್ಥಿತಿಯೇ ಬದಲಾಗಿದೆ. ಎರಡು ದಿನಗಳ ಹಿಂದಿನವರೆಗೂ ಬರಗಾಲ ಖಂಡಿತ ಎಂದು ಭಾವಿಸಿದ್ದ ರಾಜ್ಯದ ಜನರು, ಹಲವು ಕಡೆ ಭಾರೀ ಮಳೆಗೆ ತೊಂದರೆ ಅನುಭವಿಸುತ್ತಿದ್ದಾರೆ. ನದಿಗಳು ತುಂಬಿ ಹರಿಯುತ್ತಿರುವುದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಅಕ್ಷರಶಃ ಮಳೆ ನಿರಂತವಾಗಿ ಬೀಳುತ್ತಿದೆ. ಜೀವನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ತುಂಗಾ, ಭದ್ರಾ ಆರ್ಭಟಕ್ಕೆ ದೇಗುಲಗಳು, ಸೇತುವೆಗಳು ಮುಳುಗಡೆಯಾಗಿವೆ. ಇನ್ನು ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ತಲೆ ದೋರಿದೆ. ಈ ಮಧ್ಯೆ, ಕಲಬುರಗಿಯಲ್ಲಿ ತಗ್ಗು ಗುಂಡಿಗೆ ಬಿದ್ದು ಬಾಲಕಿಯರಿಬ್ಬರು ದುರ್ಮರಣ ಹೊಂದಿದ್ದಾರೆ. ರಾಜ್ಯ ಸರ್ಕಾರವು ಇನ್ನು ತಡಮಾಡದೇ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಬೇಕು.
ಕೃಷ್ಣಾ, ಮಲಪ್ರಭಾ, ತುಂಗ-ಭದ್ರಾ ಹಾಗೂ ಮಲೆನಾಡು, ಕರಾವಳಿ ಪ್ರದೇಶದ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಅನೇಕ ಕಡೆ ಸೇತುವೆಗಳು ಮುಳುಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಗೆ ಮನೆಗಳು ಕುಸಿದಿವೆ. ಭಾಗಮಂಡಲ ಸೇರಿದಂತೆ ಹಲವಡೆ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು, ಸೇತುವೆಗಳು ಕುಸಿದ ವರದಿಗಳಿವೆ. ಹಾಗಾಗಿ, ಸರ್ಕಾರ ತಕ್ಷಣವೇ ಕಾರ್ಯಾಚರಣೆಗಿಳಿಯಬೇಕು. ವಿಶೇಷವಾಗಿ ಆಯಾ ಜಿಲ್ಲಾ ಉಸ್ತುವಾರಿಗಳು ವಿಶೇಷ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಈಗ ವಿಧಾನಸಭೆ ಅಧಿವೇಶನ ಕೂಡ ಮುಗಿದಿದ್ದು, ಸಚಿವರು ಆಯಾ ಜಿಲ್ಲಾ ಕೇಂದ್ರಗಳಲ್ಲೇ ವಾಸ್ತವ್ಯ ಹೂಡಿ, ತ್ವರಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳ ಮಾರ್ಗದರ್ಶನ ಮಾಡಬೇಕು. ಅಗತ್ಯ ಬಿದ್ದರೆ, ಪರಿಹಾರ ಕೇಂದ್ರಗಳನ್ನು ತೆರೆಯಬೇಕು. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಬೇಕು. ಯಾವುದೇ ಅವಘಡ ಸಂಭವಿಸುವ ಮುನ್ನವೇ ಪರಿಹಾರ ಕಾರ್ಯ ಚುರುಕುಗೊಳಿಸಬೇಕಿದೆ. ಈ ವಿಷಯದಲ್ಲಿ ಎಳ್ಳಷ್ಟೂ ವಿಳಂಬ ಸಲ್ಲದು.
ಎರಡ್ಮೂರು ದಿನಗಳ ಹಿಂದೆ ರಾಜ್ಯದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಬಹುತೇಕ ಬರದ ಛಾಯೆ ಆವರಿಸಿಕೊಂಡಿತ್ತು. ಬಹುಶಃ ಸರ್ಕಾರ ಬರ ಘೋಷಣೆಗೆ ಸಿದ್ಧತೆ ಮಾಡಿಕೊಂಡತ್ತಿತ್ತು. ರಾಜ್ಯದಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಜೂ.1ರಿಂದ 17ರವರೆಗೆ ವಾಡಿಕೆಗಿಂತ ಶೇ.72ರಷ್ಟು ಮಳೆ ಕೊರತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿತ್ತು. ಒಟ್ಟಾರೆ ಶೇ.72ರಲ್ಲಿ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು, ಶೇ.83ರಷ್ಟು ಮಳೆ ಖೋತಾ ಆಗಿದೆ. ಕರಾವಳಿಯಲ್ಲಿ ಶೇ.77, ದಕ್ಷಿಣ ಒಳನಾಡಿನಲ್ಲಿ ಶೇ.55, ಉತ್ತರ ಒಳನಾಡಿನಲ್ಲಿ ಶೇ.69ರಷ್ಟು ಮಳೆ ಕೊರತೆಯಾಗಿದೆ. ಬಿತ್ತನೆ ಆಗಬೇಕಾದ ಸೂಕ್ತ ಕಾಲದಲ್ಲಿ ಆಗಿಲ್ಲ. ಇದರಿಂದ ಬೆಳೆ ಕೊರತೆಯೂ, ಬೆಲೆ ಏರಿಕೆಯೂ ಉಂಟಾಗಬಹುದಾಗಿದೆ. ರೈತರು ಸಂತ್ರಸ್ತರಾಗಬಹುದು. ಪ್ರಸ್ತುತ 806ಕ್ಕೂ ಹೆಚ್ಚು ವಸತಿ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಲ್ಲೆಲ್ಲ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಹಲವೆಡೆ ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ ಎಂದು ಸಚಿವರೇ ಇತ್ತೀಚೆಗೆ ಹೇಳಿದ್ದರು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಬರ ಪರಿಸ್ಥಿತಿ ಬಗ್ಗೆ ಶಾಸಕಾಂಗ ಕುರುಡಾಗದಿರಲಿ
ಈಗ ವ್ಯಾಪಕವಾಗಿ ಮಳೆಯಾಗುತ್ತಿದೆ. ಇಷ್ಟಾಗಿಯೂ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇನ್ನೂ ವಾಡಿಕೆಯಷ್ಟು ಮಳೆಯಾಗಿಲ್ಲ. ಹಾಗಾಗಿ ಸರ್ಕಾರ ಆ ಜಿಲ್ಲೆಗಳ ಬಗ್ಗೆಯೂ ಗಮನ ಹರಿಸಬೇಕು. ಅಗತ್ಯ ಬಿದ್ದರೆ ಅಂಥ ಜಿಲ್ಲೆಗಳನ್ನು ಗುರುತಿಸಿ ಬರಪೀಡಿತ ಜಿಲ್ಲೆಗಳೆಂದು ಘೋಷಿಸಬೇಕು. ಈಗ ಮಳೆಯಾಗುತ್ತಿರುವ ಜಿಲ್ಲೆಗಳಲ್ಲಿನ ಸಮಸ್ಯೆಗಳನ್ನು ಹಾಗೂ ಬರಪೀಡಿತ ಜಿಲ್ಲೆಗಳಲ್ಲಿನ ಸಮಸ್ಯೆಗಳನ್ನು ಏಕಕಾಲಕ್ಕೆ ಪರಿಹರಿಸಬೇಕಾದ ಸವಾಲು ರಾಜ್ಯ ಸರ್ಕಾರದ ಮುಂದಿದೆ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.