ಬೆಂಗಳೂರನ್ನು ನಡುಗಿಸಬಹುದಾಗಿದ್ದ ಬೃಹತ್ ಭಯೋತ್ಪಾದನಾ ಸಂಚೊಂದನ್ನು ನಮ್ಮ ಪೊಲೀಸರು ವಿಫಲಗೊಳಿಸಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಐವರು ಶಂಕಿತ ಉಗ್ರರನ್ನು ಬುಧವಾರ ಬಂಧಿಸಿದ್ದು, ಅವರಿಂದ ವಶಪಡಿಸಿಕೊಂಡ ಒಂದೊಂದು ವಸ್ತುಗಳು ಕೂಡಾ ಭಯ ಹುಟ್ಟಿಸುವಂತಿವೆ. ಪೊಲೀಸರ ಮಾಹಿತಿ ಪ್ರಕಾರ ಬಂಧಿತ ಶಂಕಿತ ಉಗ್ರರು ಬೆಂಗಳೂರು ಮೂಲದವರು ಮತ್ತು ರೌಡಿಶೀಟರ್‌ಗಳು. ಜೈಲಿನಲ್ಲಿ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದ ಇವರು ವಿಧ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದು, ಟ್ರೈನಿಂಗ್ ಕೂಡ ಪಡೆದಿದ್ದರು. ಒಂದೊಮ್ಮೆ ನಮ್ಮ ಪೊಲೀಸರು ಈ ಸಂಚನ್ನು ವಿಫಲಗೊಳಿಸದೇ ಹೋಗಿದ್ದರೆ, ಬಹುಶಃ ಬೆಂಗಳೂರು ನಗರದ ಹತ್ತು ಕಡೆ ಬೃಹತ್ ಉಗ್ರ ಸ್ಫೋಟಗಳಾಗುತ್ತಿದ್ದವು. ಅಂಥದೊಂದು ಸಂಭಾವ್ಯ ಉಗ್ರ ಕೃತ್ಯಗಳನ್ನು ತಪ್ಪಿಸಿದ ನಮ್ಮ ಪೊಲೀಸರಿಗೆ ಸಲಾಂ ಹೇಳೋಣ.
ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು ವಿಶ್ವದ ನಕಾಶೆಯಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಗರವಾಗಿದೆ. ಇಲ್ಲಾಗುವ ಸಣ್ಣ ಕದಲಿಕೆಯೂ ಬೃಹತ್ ಪರಿಣಾಮ ಬೀರುತ್ತದೆ. ಹಾಗಾಗಿಯೇ, ಉಗ್ರ ಸಂಘಟನೆಗಳು ಸ್ಥಳೀಯರನ್ನೇ ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳುವ ಹುನ್ನಾರವೊಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಧರ್ಮದ ಅಮಲು ಇಲ್ಲವೇ ಇನ್ನಾವುದೇ ಆಮಿಷಗಳಿಗೆ ಸ್ಥಳೀಯರು ಬಲಿಯಾಗಿ ಇಂಥ ದೇಶದ್ರೋಹಿ ಕೆಲಸಕ್ಕೆ ಮುಂದಾಗುತ್ತಿರುವುದನ್ನು ಸಹಿಸಲಾಗುವುದಿಲ್ಲ. ಬಂಧಿತ ಶಂಕಿತ ಉಗ್ರರನ್ನು ವಿಚಾರಣೆಗೊಳಪಡಿಸಿದ ಬಳಿಕ ಇನ್ನಷ್ಟು ಭಯಾನಕ ಮಾಹಿತಿಗಳು ಹೊರ ಬೀಳಬಹುದು. ಬಂಧಿತರೆಲ್ಲರೂ ಕಾಲಾಳುಗಳಷ್ಟೇ. ಈ ಶಂಕಿತರ ಹಿಂದಿರವ ಶಕ್ತಿಗಳನ್ನು ಪತ್ತೆ ಹಚ್ಚಿ ಮಟ್ಟ ಹಾಕುವ ಕೆಲಸವಾಗಬೇಕು.
ರಾಜ್ಯದಲ್ಲಿ ಉಗ್ರರ ಅಸ್ತಿತ್ವವನ್ನು ಬೇರು ಸಹಿತ ಕಿತ್ತೆಸೆಯಬೇಕಾಗಿದೆ. ಈ ಕಾರ್ಯದಲ್ಲಿ ಪೊಲೀಸರು ಜತೆಗೆ ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿಯಬೇಕಿದೆ. ಜನರೂ ಎಚ್ಚರಿಕೆಯಿಂದಿದ್ದರೆ ಮಾತ್ರವೇ ಉಗ್ರರ ಜಾಲವನ್ನು ಸುಲಭವಾಗಿ ಭೇದಿಸಲು ಸಾಧ್ಯ. ಬೆಂಗಳೂರಿನಂಥ ಬೃಹತ್ ನಗರದಲ್ಲಿ ಅಪರಿಚಿತರಿಗೆ ಮನೆ ಬಾಡಿಗೆಗೆ ಕೊಡುವಾಗ ಆಧಾರ್ ಇತ್ಯಾದಿ ದಾಖಲೆಗಳನ್ನು ಪಡೆಯಬೇಕು, ಅನುಮಾನ ಇದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂಬ ನಿಯಮ ಇದೆ. ಆದರೆ ಬಹುತೇಕ ಜನರು ಈ ನಿಯಮವನ್ನು ಪಾಲಿಸುತ್ತಿಲ್ಲ. ಹಾಗಾಗಿ, ಸಮಾಜಘಾತುಕ ಶಕ್ತಿಗಳು ಯಾವುದೇ ಅಡೆ ತಡೆ ಇಲ್ಲದೇ ಆಶ್ರಯಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಪಕ್ಷಗಳ ಒಕ್ಕೂಟ, ಪ್ರಜಾಪ್ರಭುತ್ವದ ಅಣಕ ಆಗದಿರಲಿ
ವಿಧ್ವಂಸಕ ಕೃತ್ಯ ಎಸಗುವುದು ಮಾತ್ರವಲ್ಲ, ಧರ್ಮ ಧರ್ಮಗಳ ನಡುವಿನ ಸೌಹಾರ್ದತೆಗೆ ಕಿಡಿ ಹಚ್ಚುವುದು ಉಗ್ರರ ಮುಖ್ಯ ಗುರಿ. ಹಾಗಾಗಿ, ಉಗ್ರರ ವಿಷಯದಲ್ಲಿ ನಾಗರಿಕರು ಪ್ರಚೋದನೆಗೆ ಒಳಗಾಗಬಾರದು. ಹಾಗೆಯೇ, ಉಗ್ರರ ವಿವಾರದಲ್ಲಿ ರಾಜಕೀಯ ಪೈಪೋಟಿಯೂ ಸಲ್ಲದು. ಎಲ್ಲರೂ ಒಂದಾಗಿ ಉಗ್ರಗಾಮಿಗಳ ಸಂಚನ್ನು ವಿಫಲಗೊಳಿಸಬೇಕು. ಐಟಿ ಬಿಟಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬೆಂಗಳೂರು ಜಾಗತಿಕವಾಗಿ ಗುರುತಿಸಿಕೊಂಡಿದೆ. ಸಹಜವಾಗಿಯೇ, ಬೆಂಗಳೂರಿನ ಮೇಲೆ ಉಗ್ರ ಸಂಘಟನೆಗಳು ಟಾರ್ಗೆಟ್ ಮಾಡುತ್ತವೆ. ಇದನ್ನು ಎದುರಿಸಲು ಬೆಂಗಳೂರಿನಲ್ಲೇ ಭಯೋತ್ಪಾನೆ ನಿಗ್ರಹ ದಳ ಸ್ಥಾಪಿಸಿ, ಬಲಗೊಳಿಸಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಸಂಘಟಿತ ಅಪರಾಧಗಳು, ಭಯೋತ್ಪಾದಕರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರು ಭಯೋತ್ಪಾದಕರ ಅಡಗುದಾಣವಾಗುತ್ತಿದೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲ. ರಾಜ್ಯದ ಕರಾವಳಿಯಲ್ಲಿ ಕೂಡ ಉಗ್ರರ ನೆಟ್‌ವರ್ಕ್ ದಟ್ಟವಾಗಿ ಹಬ್ಬಿದೆ. ಹೀಗಾಗಿ ಇಲ್ಲಿ ಎನ್‌ಐಎ ಶಾಖೆಯನ್ನು ಹೆಚ್ಚಿಸುವುದು, ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸುವುದು, ಹೆಚ್ಚಿನ ತಂತ್ರಜ್ಞಾನ- ಸಾಧನೋಪಕರಣಗಳ ನೆರವು ಒದಗಿಸುವುದು ಸಾಧ್ಯವಾಗಬೇಕು. ತನಿಖಾ ಸಂಸ್ಥೆಗೆ ಮತ್ತಷ್ಟು ಮೂಲಸೌಕರ್ಯ ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಆಸ್ಥೆಯನ್ನು ವಹಿಸಬೇಕು ಹಾಗೂ ರಾಜ್ಯ ಸರ್ಕಾರ ಸಹಕಾರ ನೀಡಬೇಕು.
ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.