Site icon Vistara News

ವಿಸ್ತಾರ ಸಂಪಾದಕೀಯ: ನಮ್ಮ ಕ್ಲಿನಿಕ್‌ಗಳು ಎಲ್ಲರ ಕ್ಲಿನಿಕ್‌ಗಳಾಗಲಿ

doctor in front of Namma clinic

ರಾಜ್ಯಾದ್ಯಂತ ಇರುವ ʼನಮ್ಮ ಕ್ಲಿನಿಕ್‌ʼಗಳನ್ನು ನಂಬರ್ 1 ಕ್ಲಿನಿಕ್‌ಗಳನ್ನಾಗಿ ಸುಧಾರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮುಂದಾಗಿದೆ. ಸಚಿವ ದಿನೇಶ್ ಗುಂಡೂರಾವ್ ವಿಭಿನ್ನ ಪ್ರಯೋಗಗಳಿಗೆ ಕೈಹಾಕಿದ್ದು, ನಗರ ಪ್ರದೇಶಗಳ ಬಡವರು ಹಾಗೂ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನು ನಮ್ಮ ಕ್ಲಿನಿಕ್‌ಗಳ ಮುಖಾಂತರ ಒದಗಿಸಲು ನಮ್ಮ ಕ್ಲಿನಿಕ್‌ಗಳಿಗೆ ಹೊಸ ಕಾಯಕಲ್ಪ‌ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಪ್ರಾಯೋಗಿಕ ಹಂತವಾಗಿ ರಾಜ್ಯದಲ್ಲಿರುವ ನಮ್ಮ ಕ್ಲಿನಿಕ್‌ಗಳಲ್ಲಿ ಶೇ. 25ರಷ್ಟು ಕ್ಲಿನಿಕ್‌ಗಳ ಸಮಯ ಬದಲಾವಣೆಗೆ ನಿರ್ಧರಿಸಿರುವುದು ಅವುಗಳಲ್ಲಿ ಒಂದು. ಇತ್ತೀಚೆಗೆ ದಿಲ್ಲಿಯ ಯಶಸ್ವಿ ಪ್ರಯೋಗವೆಂದೇ ಬಿಂಬಿತವಾಗಿದ್ದ ಮೊಹಲ್ಲಾ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ್ದ ಸಚಿವರು, ಅವುಗಳಿಗಿಂತಲೂ ನಮ್ಮ ಕ್ಲಿನಿಕ್‌ಗಳು ಉತ್ತಮವಾಗಿರುವುದನ್ನು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗ ಈ ಕ್ಲಿನಿಕ್‌ಗಳನ್ನು ಇನ್ನಷ್ಟು ಉತ್ತಮಗೊಳಿಸುವ ಸಂದರ್ಭ(Vistara Editorial).

ಅಸಹಾಯಕರು ಬಡವರಿಗೆ ಅನುಕೂಲ ಆಗಲಿ ಎಂದು ರಾಜ್ಯದ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗಿತ್ತು. ಆದರೆ, ಇವುಗಳ ತೆರೆಯುತ್ತಿದ್ದ ಸಮಯ, ಜನಸಾಮಾನ್ಯರಿಗೆ ಅನುಕೂಲಕರವಾಗಿಲ್ಲ. ಪ್ರಸ್ತುತ ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ಗಂಟೆಗೆ ತೆರೆದು ಮಧ್ಯಾಹ್ನ 12.30ಕ್ಕೆ ಮುಚ್ಚಲ್ಪಡುತ್ತಿದೆ. ಬಳಿಕ ಮಧ್ಯಾಹ್ನ 2 ಗಂಟೆಗೆ ತೆರೆದು 4.30ಕ್ಕೆ ಅವಧಿ ಕೊನೆಗೊಳ್ಳುತ್ತಿತ್ತು. ಇದೀಗ ನಮ್ಮ ಕ್ಲಿನಿಕ್‌ಗಳನ್ನು ಸಂಜೆ ಕ್ಲಿನಿಕ್ ಮಾದರಿಯಲ್ಲಿ ಸಮಯ ಬದಲಾಯಿಸಲು ನಿರ್ಧರಿಸಲಾಗಿದ್ದು, 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ ತಯಾರಿ ನಡೆಸಲಾಗಿದೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವ ಸಮಯ ಹಾಗೂ ನಮ್ಮ ಕ್ಲಿನಿಕ್‌ಗಳ ಸಮಯ ಎರಡೂ ಒಮ್ಮೆಗೆ ಆಗುತ್ತಿತ್ತು. ಇದರಿಂದ ಬಡವರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ರಾತ್ರಿಯ ವರೆಗೂ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುವಂತೆ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಳಗ್ಗೆ 7 ಗಂಟೆಗೆ ನಮ್ಮ ಕ್ಲಿನಿಕ್‌ಗಳು ತೆರೆಯಲಿದ್ದು, ಬೆಳಗ್ಗೆ ಹೊತ್ತಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಮಾತ್ರ ಇರುತ್ತಾರೆ. ಬಳಿಕ 12 ಗಂಟೆಯಿಂದ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಇರಲಿದ್ದು, ಜನರಿಗೆ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಲಾಗಿದೆ.‌ ರಾಜ್ಯದಲ್ಲಿ ಒಟ್ಟು 415 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಶೇ. 25.ರಷ್ಟು ಕ್ಲಿನಿಕ್‌ಗಳನ್ನು ಪ್ರಾಯೋಗಿಕ ಹಂತದಲ್ಲಿ ಸಂಜೆ ಕ್ಲಿನಿಕ್‌ಗಳಾಗಿ ಸಮಯ ಬದಲಾವಣೆ ಮಾಡಲಾಗುತ್ತಿದೆ. ಇವುಗಳು ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲ ನಮ್ಮ ಕ್ಲಿನಿಕ್‌ಗಳ ಸಮಯವನ್ನು ಬದಲಾವಣೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಸಂಜೆ ವೇಳೆ ನಮ್ಮ ಕ್ಲಿನಿಕ್‌ಗಳಲ್ಲಿ ಒಪಿಡಿ ತೆರೆಯುವುದರಿಂದ ಸಾಕಷ್ಟು ಅನುಕೂಲ ಕೂಡ ಆಗಲಿದೆ.‌ ಇದುವರೆಗೂ ಸುಮಾರು 3.96 ಲಕ್ಷ ಮಹಿಳೆಯರು ಹಾಗೂ 4.21 ಲಕ್ಷ ಪುರುಷರು ನಮ್ಮ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರತಿ ದಿನ ಸರಾಸರಿ 35ರಿಂದ 40 ಜನ ನಮ್ಮ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಾರೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭದ್ರತಾ ಪಡೆಗಳಲ್ಲಿ ಆತ್ಮಹತ್ಯೆಗಳೇಕೆ?

ಇಷ್ಟು ವ್ಯಾಪಕತೆಯುಳ್ಳ ನಮ್ಮ ಕ್ಲಿನಿಕ್‌ಗಳು ನಿಜಕ್ಕೂ ಬಡವರ ಪಾಲಿಗೆ ಆಪದ್ಬಂಧುಗಳಾಗಿವೆ. ಇವುಗಳನ್ನು ಸುಧಾರಿಸಿ ಮುಂದುವರಿಸಿಕೊಂಡು ಹೋಗಲು, ಉನ್ನತೀಕರಿಸಲು ಸಚಿವರು ಯತ್ನಿಸುತ್ತಿರುವುದು ಶ್ಲಾಘನೀಯ. ಸಾಮಾನ್ಯವಾಗಿ ಹೊಸ ಸರ್ಕಾರ ಬಂದಾಗ ಹಿಂದಿನ ಸರ್ಕಾರದ ಯೋಜನೆಗಳನ್ನು ವಿಫಲಗೊಳಿಸಲು ನೋಡುವುದನ್ನು ಕಾಣುತ್ತೇವೆ. ಆದರೆ ನೂತನ ಸಚಿವರು ಹಿಂದಿನ ಸರ್ಕಾರ ನಿರ್ಧಾರವನ್ನು ಇನ್ನಷ್ಟು ಉತ್ತಮಗೊಳಿಸಲು ಯತ್ನಿಸುತ್ತಿರುವುದು ನಿಜಕ್ಕೂ ಮಾದರಿ. ಸಮಯ ಬದಲಾವಣೆಯ ಜತೆಗೆ ಪಳಗಿದ ವೈದ್ಯರ ಲಭ್ಯತೆಯನ್ನೂ ಮುಖ್ಯವಾಗಿ ಪರಿಗಣಿಸಬೇಕಿದೆ. ಜತೆಗೆ ಕಡಿಮೆ ದರದಲ್ಲಿ ಔಷಧಗಳು ದೊರೆಯುವ ಜನೌಷಧ ಅಂಗಡಿಗಳನ್ನೂ ಇವುಗಳ ಜತೆಗೆ ಬೆಸೆದರೆ ಇನ್ನಷ್ಟು ಉತ್ತಮವೆನಿಸೀತು.

ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version