Site icon Vistara News

ವಿಸ್ತಾರ ಸಂಪಾದಕೀಯ: ಬೆಂಗಳೂರು ಟ್ರಾಫಿಕ್‌ ಸಮಸ್ಯೆಯಿಂದ ಅಪಾರ ನಷ್ಟ; ಸುಧಾರಿಸಲಿ ಮೂಲ ಸೌಕರ್ಯ

Bengaluru traffic

Bengaluru drops to 6th place in 2023 from 2nd place in 2022 in global traffic congestion ranking

‘ಭಾರತದ ಸಿಲಿಕಾನ್ ಸಿಟಿ’ ಎಂದು ಗುರುತಿಸಿಕೊಂಡಿರುವ ಬೆಂಗಳೂರು ನಗರವು ತನ್ನ ಅತಿಯಾದ ಟ್ರಾಫಿಕ್‌ನಿಂದಾಗಿ ಅಷ್ಟೇ ಕುಖ್ಯಾತಿಯನ್ನೂ ಗಳಿಸಿದೆ. ನಗರದ ಟ್ರಾಫಿಕ್ ನಿಯಂತ್ರಣಕ್ಕೆ ಮೆಟ್ರೋ, ಲೋಕಲ್ ಟ್ರೈನ್, ಫ್ಲೈ ಓವರ್ಸ್ ನಿರ್ಮಾಣ ಸೇರಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಸಮಸ್ಯೆ ಸಂಪೂರ್ಣ ನಿಯಂತ್ರಣವಾಗುತ್ತಿಲ್ಲ. ಈ ಸಮಸ್ಯೆಯಿಂದಾಗಿ ವರ್ಷಕ್ಕೆ ಬೆಂಗಳೂರಿಗೆ ಸುಮಾರು 19,725 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞರಾಗಿರುವ ಎಂ ಎನ್ ಶ್ರೀಹರಿ ಹಾಗೂ ಅವರ ತಂಡವು ನೀಡಿರುವ ಅಧ್ಯಯನ ವರದಿಯಲ್ಲಿ ಈ ಅಂಶವು ವ್ಯಕ್ತವಾಗಿದೆ. ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್‌ ನಿಲುಗಡೆ, ಸಮಯ ವ್ಯರ್ಥ, ಇಂಧನ ವ್ಯರ್ಥ ಮತ್ತು ಟ್ರಾಫಿಕ್‌ಗೆ ಸೇರಿದಂತೆ ಇತರ ಎಲ್ಲ ಅಂಶಗಳಿಂದಾಗಿ ಬೆಂಗಳೂರು ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ. ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನ ಈ ಶಾಶ್ವತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂಬುದನ್ನು ಈ ಅಧ್ಯಯನ ವರದಿಯು ಒತ್ತಿ ಹೇಳುತ್ತಿದೆ(Vistara Editorial).

ಮಾಹಿತಿ ತಂತ್ರಜ್ಞಾನ(ಐಟಿ) ವಲಯದಲ್ಲಿ ಹೆಚ್ಚಿದ ಉದ್ಯೋಗದ ಬೆಳವಣಿಗೆಯು ವಸತಿ, ಶಿಕ್ಷಣದಂತಹ ಎಲ್ಲಾ ಸಂಬಂಧಿತ ಸೌಲಭ್ಯಗಳ ಬೆಳವಣಿಗೆಗೂ ಕಾರಣವಾಗಿದೆ. ಪರಿಣಾಮ, 1.45 ಕೋಟಿ ಜನಸಂಖ್ಯೆಯ ಅಗಾಧ ಬೆಳವಣಿಗೆ ಹಾಗೂ 1.5 ಕೋಟಿ ವಾಹನಗಳ ಹೆಚ್ಚಳದಿಂದಾಗಿ ಸಮಸ್ಯೆ ಮಿತಿ ಮೀರಿದೆ. ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ, ನಗರ ಜನಸಂಖ್ಯೆಯ ತೀವ್ರ ಬೆಳವಣಿಗೆ ಮತ್ತು ಅವರ ಉದ್ಯೋಗ ಸಾಮರ್ಥ್ಯದ ವೇಗವು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಬೆಳವಣಿಗೆಯೊಂದಿಗೆ ಹೊಂದಿಕೆಯಾಗುತ್ತಿಲ್ಲ. ಜನಸಂಖ್ಯೆ, ಉದ್ಯೋಗ ಸಾಮರ್ಥ್ಯ ಹಾಗೂ ಮೂಲಸೌಕರ್ಯದ ನಡುವಿನ ಕೊರತೆಯು ವಿಳಂಬ, ದಟ್ಟಣೆ, ಹೆಚ್ಚಿನ ಪ್ರಯಾಣದ ಸಮಯ ಮತ್ತು ನೇರ ಮತ್ತು ಪರೋಕ್ಷ ವೆಚ್ಚದ ದೃಷ್ಟಿಯಿಂದ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂಬುದು ವರದಿಯ ಸಾರಾಂಶ. ಅಂದರೆ, ಟ್ರಾಫಿಕ್ ಸಮಸ್ಯೆ ಎಂದರೆ ಕೇವಲ ವಾಹನಗಳ ಜನದಟ್ಟಣೆ ಮಾತ್ರವಲ್ಲ. ಈ ಸಮಸ್ಯೆಗೆ ಕಾರಣವಾಗುವ ಇತರ ಸಂಗತಿಗಳ ಬಗ್ಗೆ ಸರ್ಕಾರಗಳು ಪರಿಹಾರ ಕಂಡುಕೊಳ್ಳಬೇಕು ಎಂದಾಗುತ್ತದೆ.

ಅಂಕೆ ಮೀರಿ ಬೆಳೆಯುತ್ತಿರುವ ಬೆಂಗಳೂರಲ್ಲಿ ಸಂಚಾರ ನಿಯಂತ್ರಣವನ್ನು ಅಂಗೈಯಲ್ಲಿಟ್ಟುಕೊಳ್ಳುವುದೂ ಸಾಧ್ಯವಿದೆ. ಸುಗಮ ಸಂಚಾರಕ್ಕಾಗಿ ಮುಂದಿನ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಮೆಟ್ರೋ, ಮೊನೊರೈಲ್ ಸೇರಿದಂತೆ ಪರ್ಯಾಯ ಸಾರಿಗೆ ಸಂಪರ್ಕಗಳನ್ನು ಅನ್ವೇಷಿಸಬೇಕು. ಹೆಚ್ಚಿನ ಸಾಮರ್ಥ್ಯದ ಬಸ್ ಸಮೂಹ ಸಾರಿಗೆ ಉತ್ತೇಜಿಸಬೇಕು. ಈ ನಿಟ್ಟಿನಲ್ಲಿ ಖಾಸಗಿ ಸಾರಿಗೆಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ವ್ಯವಸ್ಥೆಯನ್ನು ನಿರುತ್ಸಾಹಗೊಳಿಸುವ ಕೆಲಸವನ್ನು ಮಾಡಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅಗತ್ಯವಿದೆ. ವಿಎಂಎಸ್(ವೇರಿಯಬಲ್ ಮಸೇಜ್ ಸಿಸ್ಟಮ್) ಬಳಸಲು ಉತ್ತೇಜಿಸಬೇಕು. ಈ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ ಮತ್ತು ರೊಬೋಟಿಕ್ಸ್ ಬಳಕೆಯನ್ನು ಹೊಂದಿದೆ. ಹಾಗಾಗಿ, ಕರಾರುವಕ್ಕಾದ ಟ್ರಾಫಿಕ್ ವ್ಯವಸ್ಥೆಯನ್ನು ಪ್ರತಿಷ್ಠಾಪಿಸಲು ಸಾಧ್ಯವಾಗುತ್ತದೆ.

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಕರ್ನಾಟಕ ಸರ್ಕಾರವನ್ನು ಕೇಂದ್ರ ಸರಕಾರ ಕೇಳಿಕೊಂಡಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಮೊನ್ನೆಯಷ್ಟೇ ಹೇಳಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆ ಬಗ್ಗೆ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಜಾಗತಿಕ ನಗರವಾಗಿರುವ ಬೆಂಗಳೂರಿನ ಈ ಸಮಸ್ಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಜಂಟಿ ಕಾರ್ಯಾಚರಣೆಯ ಮೂಲಕ ಬಗೆಹರಿಸಬೇಕಾದ ಅಗತ್ಯ ಇದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸರ್ಕಾರಿ ಜಮೀನಿನ ಒತ್ತುವರಿ ತೆರವು ಶೀಘ್ರವೇ ಆಗಲಿ

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಕೂಡ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಬಹಳ ಕ್ರಿಯಾಶೀಲರಾಗಿದ್ದಾರೆ! ಹಾಗಿದ್ದೂ, ವ್ಯವಸ್ಥಿತ ಸಂಚಾರ ಯಾಕೆ ಸಾಧ್ಯವಿಲ್ಲ ಎಂದರೆ, ಬೆಂಗಳೂರಿಗರ ಪಾಲು ಇದರಲ್ಲಿದೆ. ನಮ್ಮ ಜನರಿಗೆ ನಾಗರಿಕ ನಡವಳಿಕೆಗಳ ಕೊರತೆ ಇದೆ. ಜವಾಬ್ದಾರಿಯುತ ನಾಗರಿಕರಾಗಿ ನಾವು ಕೂಡ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಟ್ರಾಫಿಕ್ ಸಮಸ್ಯೆ ಅರ್ಧಕರ್ಧ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಜನರ ಸಹಭಾಗಿತ್ವ ತೀರಾ ಕೊರತೆ ಇದೆ. ಇನ್ನೂ ಆತಂಕರದ ಸಂಗತಿ ಎಂದರೆ, ಸುಶಿಕ್ಷತರು, ಬುದ್ಧಿವಂತರೇ ರಸ್ತೆ ನಿಯಮಗಳನ್ನು ಮುರಿಯುತ್ತಿರುವುದು ಸಾಮಾನ್ಯವಾಗಿದೆ. ನಾಗರಿಕರ ಈ ರೀತಿಯ ನಡವಳಿಕೆಯು ಸಂಚಾರ ದಟ್ಟಣೆ ಮಾತ್ರವಲ್ಲದೇ, ಅಪಘಾತಗಳಿಗೂ ಕಾರಣವಾಗುತ್ತದೆ. ಸಾಕಷ್ಟು ಜೀವಹಾನಿಯೂ ಸಂಭವಿಸುತ್ತದೆ. ಹಾಗಾಗಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೂಲಸೌಕರ್ಯ ಒದಗಿಸುವುದು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಎಷ್ಟು ಮುಖ್ಯವೋ ನಾವು ಜವಾಬ್ದಾರಿಯುತ ನಾಗರಿಕರಾಗಿ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಷ್ಟೇ ಮುಖ್ಯವಾಗಿದೆ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version