ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NET) ಕಡೆಗಣಿಸಿ, ರಾಜ್ಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ವಿಷಯತಜ್ಞರು, ವಿದ್ವಾಂಸರು ಸಾಕಷ್ಟು ಬುದ್ಧಿ ಹೇಳಿದ್ದಾರೆ. ಇದೀಗ ʼಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ʼ ನಡೆಸಿರುವ ಜನಾಭಿಪ್ರಾಯ ಸಂಗ್ರಹದಲ್ಲೂ ಎನ್‌ಇಪಿ ಪರ ಅಭಿಪ್ರಾಯ ವ್ಯಕ್ತವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಪೀಪಲ್ಸ್ ಫೋರಂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿರುವ ಸಹಿ ಸಂಗ್ರಹದ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 168 ತಾಲ್ಲೂಕುಗಳಲ್ಲಿ ಸಹಿ ಸಂಗ್ರಹದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. 2,630 ಶಾಲೆ, ಕಾಲೇಜುಗಳ 83,600 ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, 26,980 ಪೋಷಕರು, 8,88,173 ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಳಿಸಿಕೊಳ್ಳಬೇಕು ಎಂಬುದು ಈ ಅಭಿಪ್ರಾಯ ಸಂಗ್ರಹದ ಸಾರವಾಗಿದೆ(Vistara Editorial).
“ಎನ್‌ಇಪಿ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ವಿದ್ಯಾರ್ಥಿಗಳು ಸಾಕಷ್ಟು ಅನುಕೂಲಗಳಿಂದ ವಂಚಿತರಾಗುತ್ತಾರೆ. ಅವರ ಶೈಕ್ಷಣಿಕ ಭವಿಷ್ಯಕ್ಕೂ ಹಿನ್ನಡೆಯಾಗುತ್ತದೆ” ಎಂದು ಪೀಪಲ್ಸ್ ಫಾರಂ ವರದಿಯಲ್ಲಿ ರಾಜ್ಯಪಾಲರಿಗೆ ಸಲ್ಲಿಸುವಾಗ ಹಾಜರಿದ್ದ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಪ್ರೊ. ರವೀಂದ್ರ ರೇಷ್ಮೆ ಮುಂತಾದವರು ಹೇಳಿದ್ದಾರೆ. 2017–18ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎನ್ಇಪಿ ಕರಡು ಪ್ರತಿಗೆ ಸಹಿ ಹಾಕಿ ಅನುಮೋದಿಸಿದ್ದರು. ವಿವಿಧ ಹಂತಗಳಲ್ಲಿ ಸಾಕಷ್ಟು ಸಭೆಗಳನ್ನು ಮಾಡಿ ಚರ್ಚಿಸಿದ ನಂತರವೇ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಕೊನೆಯ ಪತ್ರಕ್ಕೂ ಉನ್ನತ ಶಿಕ್ಷಣ ಸಚಿವರು ಸಹಿ ಹಾಕಿದ್ದರು. ಅಂದು ಅನುಮೋದಿಸಿದವರೇ ಇಂದು ಎನ್ಇಪಿ ತಿರಸ್ಕರಿಸುತ್ತಿರುವುದು ವಿಚಿತ್ರ.
ರಾಷ್ಟ್ರೀಯ ಶಿಕ್ಷಣ ನೀತಿಯು ದೂರದೃಷ್ಟಿಯಿಂದ ಕೂಡಿದ ಒಂದು ತಾತ್ವಿಕ ದಾಖಲೆಯಾಗಿದೆ. ದೇಶದ ದೊಡ್ಡ ಶಿಕ್ಷಣತಜ್ಞರು ಇದನ್ನು ರೂಪಿಸಿದ್ದಾರೆ. ಇದು ರಾಜಕೀಯ ದಾಖಲೆಯಲ್ಲ, 21ನೇ ಶತಮಾನದ ತಾತ್ವಿಕ ದಾಖಲೆಯಾಗಿದೆ. ಬದಲಾದ ಕಾಲಕ್ಕೆ ತಕ್ಕ ಒಂದು ಶಿಕ್ಷಣ ನೀತಿಯ ಅಗತ್ಯವಿರುವುದನ್ನು ಕಂಡ ಕೇಂದ್ರ ಸರ್ಕಾರ, ಸಾಕಷ್ಟು ತಜ್ಞರ ಸಲಹೆ, ಸಾರ್ವಜನಿಕರಿಗೆ ಅದರ ಕರಡು ಪ್ರಕಟಣೆ, ಸಲಹೆ ಸೂಚನೆಗಳ ಸೇರ್ಪಡೆ ಇತ್ಯಾದಿಗಳೊಂದಿಗೆ 2020ರಲ್ಲಿ ಹೊಸ ನೀತಿಯನ್ನು ಅಂತಿಮಗೊಳಿಸಿದೆ. ಈ ನೀತಿಯು 2040ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಅಗತ್ಯ ಕಲಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ಹೆಚ್ಚು ಸಮಗ್ರ ಅನುಭವ, ಚರ್ಚಾ-ಆಧಾರಿತ ಮತ್ತು ವಿಶ್ಲೇಷಣೆ ಆಧಾರಿತ ಕಲಿಕೆಯನ್ನು ಹೆಚ್ಚಿಸಲು ಹಾಗೂ ಪಠ್ಯಕ್ರಮದ ವಿಷಯವನ್ನು ಕಡಿಮೆ ಮಾಡುವ ಕುರಿತು ಚರ್ಚಿಸಿದೆ. ಮಕ್ಕಳ ಅರಿವಿನ ಬೆಳವಣಿಗೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ಪಠ್ಯಕ್ರಮ ಮತ್ತು ಶಿಕ್ಷಣ ರಚನೆಯನ್ನು 10 + 2 ವ್ಯವಸ್ಥೆಯಿಂದ 5 + 3 + 3 + 4 ವ್ಯವಸ್ಥೆಯ ವಿನ್ಯಾಸಕ್ಕೆ ಪರಿಷ್ಕರಿಸುವ ಬಗ್ಗೆಯೂ ಇದು ಹೇಳುತ್ತದೆ. ಅಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತರುವ ಉದ್ದೇಶವಿದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಉನ್ನತ ಶಿಕ್ಷಣಕ್ಕೆ, ವೃತ್ತಿಪರ ತರಬೇತಿಗೆ ಹಾಗೂ ಕೌಶಲ್ಯಾಭಿವೃದ್ಧಿಗೆ ಜೋಡಿಸುವಂತೆ ರೂಪಿಸುವ ಚಿಂತನೆ ಇದರಲ್ಲಿದೆ. ಇದು ಹೊಸ ಕಾಲದ ಸವಾಲುಗಳಿಗೆ ಉತ್ತರಿಸುವಂತೆ ಈ ಕಾಲದ ವಿದ್ಯಾರ್ಥಿಯನ್ನು ರೂಪಿಸಲು ಬಯಸುತ್ತದೆ.
ಇಷ್ಟು ಯೋಚಿಸಿ ರೂಪಿಸಿರುವ ಒಂದು ನೀತಿಯನ್ನು, ರಾಜಕೀಯ ಉದ್ದೇಶಕ್ಕಾಗಿ ಕುಲಗೆಡಿಸಲು ಮುಂದಾಗಬಾರದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡಲು ಹೋಗಬಾರದು. ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಮಕ್ಕಳನ್ನು ಜಾಗತಿಕ ಸ್ಪರ್ಧಾತ್ಮಕತೆಗೆ ಪ್ರೇರೇಪಿಸುತ್ತದೆ. ನಮ್ಮ ಮಕ್ಕಳ ಭವಿಷ್ಯದೆಡೆಗೆ ಇದು ಉತ್ತಮ ಹೆಜ್ಜೆಯಾಗಿದೆ. ಎನ್‌ಇಪಿ ರದ್ದು ಮಾಡುವ ಮೊದಲು ರಾಜ್ಯದ ಆಡಳಿತಗಾರರು ಯಾವುದೇ ಶಿಕ್ಷಣ ತಜ್ಞರ ಮಾತನ್ನು ಕೇಳಿಸಿಕೊಂಡಂತಿಲ್ಲ. ಕೇಂದ್ರದ ಸಮಗ್ರ ಶಿಕ್ಷಣ ನೀತಿಗೆ ರಾಜ್ಯದ ನೀತಿ ಪೂರಕವಾಗಿದ್ದರೆ ಏನು ತಪ್ಪು? ಕೇಂದ್ರವನ್ನು ವಿರೋಧಿಸಲೇಬೇಕು ಎಂಬ ಹಠ ಯಾಕೆ? ಸ್ಥಳೀಯ ಭಾಷೆಗಳಿಗೆ, ಸ್ಥಳೀಯ ವಿಷಯಗಳಿಗೆ ಹೆಚ್ಚು ಒತ್ತು ನೀಡುವ ಕುರಿತು ಶಿಕ್ಷಣ ನೀತಿಯಲ್ಲಿ ಚಿಂತನೆ ನಡೆಸಿ ಸೂತ್ರಗಳನ್ನು ನೀಡಲಾಗಿದೆ. ಇದು ತಪ್ಪೇ? ಪುಣ್ಯವಶಾತ್ ರಾಜ್ಯ ಶಿಕ್ಷಣ ನೀತಿಯು ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗೆ ಅನ್ವಯ ಆಗುವುದಿಲ್ಲ. ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ರಾಜ್ಯಕ್ಕೆ ಅಧಿಕಾರ ಇಲ್ಲದಾಗಿದೆ. ಇದರ ಜತೆಗೆ ಕೇಂದ್ರೀಯ ವಿವಿಗಳು, ಖಾಸಗಿ ವಿವಿಗಳಿಗೂ ಈ ನೀತಿ ಅನ್ವಯ ಆಗುವುದಿಲ್ಲ. ಹೀಗಾಗಿ ನೂತನ ಶೈಕ್ಷಣಿಕ ನೀತಿಯ ಬಗ್ಗೆ ಈಗ ತಲೆ ಕೆಡಿಸಿಕೊಳ್ಳಬೇಕಿರುವುದು ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳು ಮಾತ್ರ ಎಂಬಂತಾಗಿದೆ. ಈ ಗೊಂದಲವೇ ಬೇಡ ಎಂದು ಎಲ್ಲರೂ ರಾಜ್ಯ ಶಿಕ್ಷಣ ಸಿಲೆಬಸ್ ಅನ್ನು ತೊರೆದು ಕೇಂದ್ರ ಅಥವಾ ಐಸಿಎಸ್‌ಸಿಯ ಕಡೆ ಹೊರಟುಬಿಡುವ ಸಾಧ್ಯತೆಯೇ ಇದೆಯಲ್ಲವೇ? ಇದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು.
ಮಕ್ಕಳ ಶಿಕ್ಷಣದ ಭವಿಷ್ಯದ ಜತೆ ರಾಜಕೀಯ ಪಕ್ಷಗಳು ಚೆಲ್ಲಾಟ ಆಡಬಾರದು. ಓಬೀರಾಯನ ಕಾಲದ ಶಿಕ್ಷಣ ಪದ್ಧತಿ ಬದಲಾಗಲೇಬೇಕಿತ್ತು, ಎನ್‌ಇಪಿ ಮೂಲಕ ಅದು ಆಗಿದೆ. ಹಿಂದಿನ ಸರ್ಕಾರ ಜಾರಿ ಮಾಡಿದ್ದ ಹೊಸ ಶಿಕ್ಷಣ ಪದ್ಧತಿಯನ್ನು ಈಗಿನ ಕಾಂಗ್ರೆಸ್ ಸರ್ಕಾರ ರಾಜಕೀಯ ಕಾರಣಕ್ಕಾಗಿ ಸಾರಾಸಗಟಾಗಿ ತಿರಸ್ಕರಿಸಿ ಮತ್ತೆ ಹಳೆ ಪದ್ಧತಿಗೆ ಹೊರಳುವುದು ಸರಿಯಲ್ಲ. ರಾಜಕೀಯ ಜಟಾಪಟಿಗೆ ವಿದ್ಯಾರ್ಥಿಗಳು ಬಲಿಪಶು ಆಗದಿರಲಿ. ನೀತಿ ರದ್ದು ಮಾಡುವ ಮುನ್ನ ಸರ್ಕಾರ ವಿಶದವಾಗಿ ಚಿಂತಿಸಲಿ, ವಿವೇಕದಿಂದ ವರ್ತಿಸಲಿ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಹಿಂದುಳಿದ ವರ್ಗದ ಕರ್ಪೂರಿ ಠಾಕೂರ್‌ಗೆ ʼಭಾರತ ರತ್ನʼ ಪ್ರಶಂಸನೀಯ