ಬೆಳಗಾವಿ ಜಿಲ್ಲೆಯ (Belagavi District) ರಾಮದುರ್ಗ ತಾಲೂಕಿನ ಓಬಳಾಪುರ ತಾಂಡಾದಲ್ಲಿರುವ ಅಂಗನವಾಡಿ (Anganwadi Teacher) ಶಿಕ್ಷಕಿ ಮತಾಂತರಕ್ಕೆ ಪ್ರಯತ್ನ (Conversion) ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಎದುರಾಗಿದೆ. ತಾಂಡಾದ ಅಂಗನವಾಡಿ ಶಿಕ್ಷಕಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಈಗ ಉಳಿದವರನ್ನು ಸೇರಿಸಲು ಯತ್ನಿಸುತ್ತಿದ್ದಾರೆ. ಅವರು ಅಂಗನವಾಡಿಯ ಪುಟ್ಟ ಮಕ್ಕಳಲ್ಲಿ ಕ್ರೈಸ್ತ ಧರ್ಮವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಹಣದ ಆಮಿಷ, ಅನಾರೋಗ್ಯ, ಬಡತನಗಳನ್ನೇ ದಾಳವಾಗಿಸಿಕೊಂಡು ಮತಾಂತರ ಮಾಡುತ್ತಿದ್ದು ಅಂಗನವಾಡಿಯಲ್ಲಿ ಮಕ್ಕಳಿಗೆ ಪ್ರಾರ್ಥನೆ ಹೇಳುವ ಬದಲು ಕ್ರಿಸ್ತ ಗೀತೆ ಕಲಿಸುತ್ತಿದ್ದಾರೆ ಎಂದು ದೂರಲಾಗಿದೆ. ಹಲವು ತಾಂಡಾಗಳಲ್ಲಿ ಮತಾಂತರದ ಯತ್ನ ಆಗಿದೆ ಎಂಬುದೂ ಕಂಡುಬಂದಿದೆ. ಅಂಗನವಾಡಿ ಸಹಾಯಕಿ ಕೂಡ ತನ್ನನ್ನು ಸಹ ಮತಾಂತರಕ್ಕೆ ಯತ್ನಿಸಿದ್ದನ್ನು ತಿಳಿಸಿದ್ದಾರೆ. ಈ ಮೊದಲು ಆಮಿಷ ಒಡ್ಡಿ ವಯಸ್ಕರನ್ನು ಮತಾಂತರದತ್ತ ಸೆಳೆಯಲಾಗುತ್ತಿತ್ತು. ಇದೀಗ ಅಂಗನವಾಡಿ ಹಂತದಲ್ಲಿಯೂ ಮತಾಂತರದ ಜಾಲ ಬೇರೂರಲು ಯತ್ನಿಸುತ್ತಿರುವುದು ಆತಂಕಕಾರಿ(Vistara Editorial).
ಇತ್ತೀಚೆಗೆ ದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರ ಆರೋಪ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಇದನ್ನು ತಡೆಯದೇ ಇದ್ದರೆ ದೇಶದ ಭದ್ರತೆಗೆ ಅಪಾಯವಿದೆ ಎಂದಿತ್ತು. ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಇದರಿಂದ ಧಕ್ಕೆಯಾಗಬಹುದು. ಬಲವಂತದ ಮತಾಂತರ ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಹೇಳಿತ್ತು. ಬಲವಂತದ ಮತಾಂತರ ಅತ್ಯಂತ ಗಂಭೀರ ಸಮಸ್ಯೆ, ಇದು ಕೇವಲ ದೇಶದ ಭದ್ರತೆಗೆ ಸಂಚಕಾರವಲ್ಲ, ಜನರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಕೂಡ ಧಕ್ಕೆ ಉಂಟು ಮಾಡಲಿದೆ ಎಂದಿತ್ತು. ದೇಶದಲ್ಲಿ ಮತಾಂತರ ಹಲವು ಬಗೆಯಲ್ಲಿ ನಡೆಯುತ್ತಿದೆ- ಬಲವಂತದಿಂದ, ಬೆದರಿಕೆಯೊಡ್ಡಿ ಹಾಗೂ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಉತ್ತಮ ಬದುಕು, ಉದ್ಯೋಗ, ಆಹಾರ ಹಾಗೂ ವೈವಾಹಿಕ ಸಂಗಾತಿಯ ಆಮಿಷವನ್ನೂ ಒಡ್ಡಲಾಗುತ್ತಿದೆ. ಆದರೆ ಮತಾಂತರದ ಬಳಿಕ ವಾಸ್ತವಿಕ ಸತ್ಯದ ಅನಾವರಣವಾಗಿ ಭ್ರಮನಿರಸನಗೊಂಡವರಿದ್ದಾರೆ. ಕೇರಳದಲ್ಲಿ ನಡೆದ ಹಲವಾರು ಮತಾಂತರಗಳು ಅಂತಿಮವಾಗಿ ಭಯೋತ್ಪಾದನೆಯತ್ತ ಚಾಚಿಕೊಂಡದ್ದನ್ನು ಗಮನಿಸಬಹುದಾಗಿದೆ. ಇದು ದೇಶದ ಭದ್ರತೆ, ಸಾರ್ವಭೌಮತೆ, ಸಾಮಾಜಿಕ ಸೌಹಾರ್ದ ಎಲ್ಲದಕ್ಕೂ ಧಕ್ಕೆಯುಂಟು ಮಾಡುವಂಥದು.
ನಮ್ಮ ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇಲ್ಲಿ ಯಾರು ಬೇಕಿದ್ದರೂ ತಮ್ಮ ಧರ್ಮವನ್ನು ಆಚರಿಸಬಹುದು, ಸಾರ್ವಜನಿಕವಾಗಿ ಅದರ ಬಗ್ಗೆ ಒಲವು ವ್ಯಕ್ತಪಡಿಸಬಹುದು, ತಮ್ಮ ಧರ್ಮದ ಶ್ರೇಷ್ಠತೆಯ ಬಗ್ಗೆ ಸಾರಿಕೊಳ್ಳಬಹುದು. ಇದ್ಯಾವುದೂ ಅಪರಾಧವಲ್ಲ. ಆದರೆ ಬೆದರಿಕೆಯೊಡ್ಡಿ ಅಥವಾ ಆಮಿಷವೊಡ್ಡಿ ತಮ್ಮ ಧರ್ಮಕ್ಕೆ ಮತಾಂತರಿಸಿಕೊಳ್ಳುವುದು ಮಾತ್ರ ಅಪರಾಧ. ಕೆಲವು ರಾಜ್ಯಗಳು ಇನ್ನೂ ಈ ಬಗ್ಗೆ ಕಾನೂನು ಮಾಡಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಈ ಬಗ್ಗೆ ಕಾಯಿದೆ ರೂಪಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಸಂಪುಟದ ಮೊದಲ ಸಭೆಯಲ್ಲೇ ಮತಾಂತರ ನಿಷೇಧ ಕಾಯಿದೆಯನ್ನೂ ವಾಪಸ್ ಪಡೆಯಲು ನಿರ್ಧರಿಸಿತ್ತು. ಬಲವಂತವಾಗಿ ಮತಾಂತರ ಆಗುವುದನ್ನು ತಡೆಯಲು ಹಿಂದಿನ ಸರ್ಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿ ಮಾಡಿತ್ತು. ಈ ಕಾಯಿದೆಯಲ್ಲಿ ಬಲವಂತವಾಗಿ, ಆಮಿಷದಿಂದ, ವಂಚಿಸಿ ಮತಾಂತರ ಮಾಡಿದವರಿಗೆ ಶಿಕ್ಷೆ ಇತ್ತು. ಸ್ವ ಇಚ್ಛೆಯಿಂದ ಮತಾಂತರ ಆಗುವುದಕ್ಕೆ ವಿರೋಧ ಇರಲಿಲ್ಲ. ಈಗಾಗಲೇ ಹಲವಾರು ರಾಜ್ಯಗಳಲ್ಲಿ ಇಂಥ ಕಾಯಿದೆಗಳಿದ್ದು, ಮತಾಂತರ ತಡೆಗಟ್ಟಲು ಪರಿಣಾಮಕಾರಿ ಎನಿಸಿತ್ತು. ಆದರೆ ನೂತನ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಹಿಂದಕ್ಕಿರಿಸಿದೆ.
ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥೆ ಎಂದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ದೊಡ್ಡ ಜಾಲವ ಇದೆಯಾ ಎಂಬುದನ್ನು ತನಿಖೆ ನಡೆಸಬೇಕು. ಇದು ಇನ್ನಷ್ಟು ವ್ಯಾಪಕವಾಗದಂತೆ ಆಡಳಿತದಲ್ಲಿರುವವರು ನೋಡಿಕೊಳ್ಳಬೇಕಾದ ಹೊಣೆ ಇದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕನ್ನಡ ನಾಮಫಲಕ ಆಂದೋಲನಕ್ಕೆ ಕನ್ನಡಿಗರು ಕೈಜೋಡಿಸಬೇಕಿದೆ