Site icon Vistara News

ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

Dasara Elephant Arjuna

ಮೈಸೂರು ದಸರಾದಲ್ಲಿ ಎಂಟು ಬಾರಿ ‘ಅಂಬಾರಿ’ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಮೃತಪಟ್ಟಿದೆ. ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ ಕೊನೆಯುಸಿರೆಳೆದಿದೆ. ಅರಣ್ಯದಲ್ಲಿ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. 12 ಕಾಡಾನೆಗನ್ನು ಸೆರೆ ಹಿಡಿಯಲು ಅರಿವಳಿಕೆ ಮದ್ದು ನೀಡುವಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ದಾಳಿ ತೀವ್ರವಾಗುತ್ತಿದ್ದಂತೆ ಮೂರು ಆನೆಗಳು ಹಿಂದೆ ಸರಿದಿವೆ. ಆದರೆ, ಹಿಮ್ಮೆಟ್ಟಿಸಲು ಯತ್ನಿಸಿದ ಅರ್ಜುನ ಮೇಲೆ ಕಾಡಾನೆ ಭೀಕರ ದಾಳಿ ನಡೆಸಿ ಹೊಟ್ಟೆ ಭಾಗಕ್ಕೆ ದಂತಗಳಿಂದ ತಿವಿದಿದ್ದರಿಂದ ಅರ್ಜುನ ಮೃತಪಟ್ಟಿದೆ. ಸಾವಿನ ವೇಳೆಯೂ, ಸಾಕಾನೆ ಕಾಡನೆ ಜತೆ ಜಗಳಕ್ಕೆ ನಿಂತು ಹಲವರ ಪ್ರಾಣಿ ಉಳಿಸಿದೆ. ಇದರೊಂದಿಗೆ ಮಾನವ ಮತ್ತು ಪ್ರಾಣಿಗಳ ನಡುವೆ ಸಾಂಸ್ಕೃತಿಕ ಕೊಂಡಿಯಂತಿದ್ದ ‘ಅರ್ಜನ’ನ ಅಧ್ಯಾಯ ಅಂತ್ಯವಾಗಿದೆ(Vistara Editorial).

‘ಅರ್ಜುನ’ ಎಂದಕೂಡಲೇ ನಮ್ಮ ಮನಸ್ಸಿನಲ್ಲಿ ಅಂಬಾರಿ ಹೊತ್ತ ಗಂಭೀರ ನಡಿಗೆ ಗಜರಾಜನ ಚಿತ್ರ ಮೂಡುತ್ತದೆ. ಅಷ್ಟರ ಮಟ್ಟಿಗೆ ಈ ಸಾಕಾನೆ ಕನ್ನಡ ನಾಡಿನ ಪರಂಪರೆಯೊಂದಿಗೆ ಬೆಸೆದುಕೊಂಡಿತ್ತು. ಅದೀಗ, ಇತಿಹಾಸವಷ್ಟೇ. ಅರ್ಜುನ ಸಾವು ಹಲವು ಪ್ರಶ್ನೆಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ ಎನ್ನುವುದು ಕಟು ವಾಸ್ತವ. ವಯಸ್ಸಾಗಿದ್ದ ಅರ್ಜುನನ್ನು ಮದವೇರಿದ ಕಾಡಾನೆ ಪಳಗಿಸಲು ಬಳಸಿದ್ದು ಸರಿಯೇ ಎಂಬ ಪ್ರಶ್ನೆಗಳು ಸಾರ್ವಜನಿಕವಾಗಿ ಎದ್ದಿವೆ. ಕಾರ್ಯಾಚರಣೆ ವೇಳೆ, ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಲಾಗಿಲ್ಲ ಎಂಬ ದೂರು ಹೆಚ್ಚಾಗಿ ಕೇಳಿ ಬರುತ್ತದೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಗಮನ ಸೆಳೆದಿದ್ದು ಸೂಕ್ತವಾಗಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಪ್ರಕಾರ 60 ವರ್ಷ ಮೇಲ್ಪಟ್ಟ ಪ್ರಾಣಿಗಳ ಮೇಲೆ ಭಾರ ಹೊರಿಸುವ ಕೆಲಸಕ್ಕೆ ಬಳಸಬಾರದು. 64 ವರ್ಷಗಳನ್ನು ಕಂಡಿರುವ ಅರ್ಜನನ್ನು ಇದೇ ಕಾರಣಕ್ಕಾಗಿ ಮೈಸೂರು ದಸರಾದಲ್ಲಿ 750 ಕೆ ಜಿ ತೂಗುವ ಅಂಬಾರಿ ಹೊರುವ ಕೆಲಸಕ್ಕೆ ಮುಕ್ತಿ ನೀಡಲಾಗಿತ್ತು. ಇದಕ್ಕೂ ಮೊದಲು ಅಂದರೆ, 2012ರಿಂದ 2019ರವರೆಗೆ ಅರ್ಜುನ ಒಟ್ಟು 8 ಬಾರಿ ದಸರಾದಲ್ಲಿ ಅಂಬಾರಿ ಹೊತ್ತಿದ್ದಾನೆ. ಜತೆಗೆ, ಕಾಡಾನೆಗಳನ್ನು ಪಳಗಿಸುವ ಅಪಾರ ಅನುಭವ ಈ ಅರ್ಜನ ಆನೆಗಿತ್ತು. ಅದೇ ಕಾರಣಕ್ಕಾಗಿ ಈ ಕಾರ್ಯಾಚರಣೆಯನ್ನು ಅರ್ಜನನ್ನು ಬಳಸಲಾಗಿತ್ತು ಎಂಬ ಸಬೂಬನ್ನು ಅಧಿಕಾರಿಗಳು ನೀಡಬಹುದು. ಆದರೆ, ವಯಸ್ಸಾದ ಆನೆಯನ್ನು, ಮದವೇರಿದ ಆನೆಗಳ ಜತೆ ಕಾದಾಟಕ್ಕೆ ಬಿಡುವುದು ಎಷ್ಟು ಸರಿ ಎಂಬುದು ಪ್ರಾಣಿಪ್ರಿಯರ ಪ್ರಶ್ನೆಯಾಗಿದೆ.

ನಿಮಯಗಳನ್ನು ಮೀರಿ, ಅನುಭವ ಇದೆ ಎಂಬ ಕಾರಣಕ್ಕಾಗಿ ಕಾರ್ಯಾಚರಣೆಗೆ ಬಳಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಕಾರ್ಯಾಚರಣೆಗೆ ಬಳಕೆ ಮಾಡುವಾಗ ಅವುಗಳ ಸಾಮರ್ಥ್ಯವನ್ನು ನೋಡಿಕೊಳ್ಳಬೇಕು. ಆನೆ ಸೆರೆ ಕಾರ್ಯಾಚರಣೆ ಎಂದರೆ ಸುಲಭದ ಮಾತಲ್ಲ. ಅಲ್ಲಿ ಇಂತಹ ಪ್ರತಿ ದಾಳಿಗಳು ಪುಂಡಾನೆಗಳಿಂದ ಸಾಮಾನ್ಯ. ಅದನ್ನು ತಡೆಯುವಂತಹ, ನಿಭಾಯಿಸುವಂತಹ ಶಕ್ತಿ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಆನೆಗಳಿಗೆ ಇರಬೇಕಾಗುತ್ತದೆ. ಆದರೆ, ಅರ್ಜುನನಿಗೆ ಈಗಾಗಲೇ ವಯಸ್ಸು ಆಗಿರುವುದರಿಂದ ಇದನ್ನು ತಡೆಯುವ ಶಕ್ತಿ ಇದೆಯೇ ಎಂಬುದನ್ನು ಪರಿಶೀಲನೆಯನ್ನು ಮಾಡಿಕೊಂಡು ಕಾರ್ಯಾಚರಣೆಗೆ ಬಳಸಿಕೊಳ್ಳಬೇಕಿತ್ತು. ಈ ವಿಷಯದಲ್ಲಿ ಅಧಿಕಾರಿಗಳಿಂದ ಸ್ಪಷ್ಟವಾಗಿ ಕರ್ತವ್ಯ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮುಖ್ಯವಾಗಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲಿಸಬೇಕಿತ್ತು. ಇದ್ಯಾವುದನ್ನೂ ಮಾಡದೆ ಕಾರ್ಯಾಚರಣೆಗೆ ನೇರವಾಗಿ ಇಳಿಸಿದ್ದರಿಂದ ಅನ್ಯಾಯವಾಗಿ ಅರ್ಜನನನ್ನು ನಾವು ಕಳೆದುಕೊಳ್ಳಬೇಕಾಯಿತು.

ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಅರ್ಜುನ ಬಳಕೆಗೆ ಸಂಬಂಧಿಸಿದಂತೆ ಸಾಕಷ್ಟು ಲೋಪಗಳನ್ನು ಎಸಗಿರುವ ಮತ್ತು ನಿಯಮಗಳನ್ನು ಮೀರಿರುವ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ತಪ್ಪಿತಸ್ಧರು ಎಂದು ಕಂಡುಬಂದರೆ ಖಂಡಿತವಾಗಿಯೂ ಅವರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಬೇಕು. ಯಾಕೆಂದರೆ, ಮೃತಪಟ್ಟಿರುವುದು ಯಾವುದೋ ಸಾಮಾನ್ಯ ಆನೆಯಲ್ಲ. ಅದು ಈ ನಾಡಿನ ಸಾಂಸ್ಕೃತಿಕ ಬೆಸುಗೆಯನ್ನು ಬೆಸೆದ ಮಹತ್ವ ಆನೆ. ಅರ್ಜನ ಆನೆಗೆ ಅವನದ್ದೇ ಆದ ಮಹತ್ವವಿದೆ. ಆ ಕಾರಣಕ್ಕಾಗಿ, ಈ ವಿಷಯದಲ್ಲಿ ರಾಜ್ಯ ಸರ್ಕಾರವು ಹೆಚ್ಚು ಮುತುವರ್ಜಿ ವಹಿಸಿ, ಸಮಗ್ರ ತನಿಖೆ ನಡೆಸಬೇಕು ಎಂಬುದು ಪ್ರಾಣಿ ಪ್ರಿಯರು ಮತ್ತು ಈ ನಾಡಿನ ಜನರ ಆಗ್ರಹವಾಗಿದೆ. ಜತೆಗೆ, ಈ ರೀತಿಯ ಪ್ರಕರಣಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

Exit mobile version