ಭ್ರೂಣ ಲಿಂಗ ಪತ್ತೆ (Gender Detection) ಮತ್ತು ಭ್ರೂಣ ಹತ್ಯೆಯ (Foeticide) ಬೃಹತ್ ಜಾಲವನ್ನು ಬೆಂಗಳೂರು ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ವೇಳೆ, ಆರೋಪಿಗಳು ಎರಡು ವರ್ಷದಲ್ಲಿ ಬರೋಬ್ಬರಿ 900 ಭ್ರೂಣ ಹತ್ಯೆಗಳನ್ನು ಮಾಡಿದ್ದಾರೆಂಬುದು ಗೊತ್ತಾಗಿದೆ. ಅಕ್ಟೋಬರ್ 15ರಂದು ಅನುಮಾನಾಸ್ಪದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಇಬ್ಬರು ನೀಡಿದ ಮಾಹಿತಿಯಾಧಾರದ ಮೇಲೆ ಜಾಲವು ಬಯಲಿಗೆ ಬಂದಿದೆ. ಭ್ರೂಣ ಹತ್ಯೆಯ ಈ ಜಾಲದ ಕೃತ್ಯವು ಯಾವುದೇ ನಾಗರಿಕ ಸಮಾಜಕ್ಕೆ ತಕ್ಕುದಾದುದಲ್ಲ. ಈ ಜಾಲದಲ್ಲಿ ಯಾರೆಲ್ಲ ಇದ್ದಾರೋ ಅವರೆನ್ನಲ್ಲ ಕೋರ್ಟ್ ಕಟಕಟೆಗೆ ತಂದು, ಕಠಿಣ ಶಿಕ್ಷೆಯನ್ನು ನೀಡಬೇಕು. ಸರ್ಕಾರದ ಈ ಜವಾಬ್ದಾರಿಯಲ್ಲಿ ಯಾವುದೇ ಲೋಪವಾಗಬಾರದು(Vistara Editorial).
ಭಾರತದ ಮಟ್ಟಿಗೆ ಲಿಂಗ ಅಸಮಾನತೆ ಮತ್ತು ಹೆಣ್ಣು ಭ್ರೂಣ ಹತ್ಯೆಯು ಸಾಮಾಜಿಕ ಪಿಡುಗಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 90ರ ದಶಕದಲ್ಲಿ 10 ದಶಲಕ್ಷ ಹೆಣ್ಣು ಭ್ರೂಣ ಹತ್ಯೆಗಳು ನಡೆದಿದ್ದವು ಮತ್ತು ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ 5 ಲಕ್ಷ ಅಕ್ರಮ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ. ಭ್ರೂಣ ಹೆಣ್ಣು ಎಂಬ ಏಕೈಕ ಕಾರಣಕ್ಕಾಗಿ ಪ್ರತಿ ವರ್ಷ ಭಾರತದಲ್ಲಿ ಒಂದು ಲಕ್ಷ ಗರ್ಭಪಾತಗಳನ್ನು ಮಾಡಲಾಗುತ್ತದೆ ಎಂಬ ಅಂದಾಜಿದೆ. ರಾಜ್ಯಗಳ ಮಟ್ಟಿಗೆ ಹೇಳುವುದಾದರೆ, ಮಧ್ಯ ಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢಗಳಲ್ಲೇ ಹೆಚ್ಚು. ಹಾಗೆ ನೋಡಿದರೆ ಕರ್ನಾಟಕವು ಈ ಪಟ್ಟಿಯಲ್ಲಿ ಕೆಳಗೇ ಇದೆ. ಆದರೆ, ಈಗ ಹೊರ ಬಿದ್ದಿರುವ ಮಾಹಿತಿಯು ಮಾತ್ರ ಬೆಚ್ಚಿ ಬೀಳಿಸುತ್ತಿದೆ. ಈ ಬಹುಶಃ ಈ ಎಲ್ಲ ಭ್ರೂಣಗಳ ಹತ್ಯೆಗಳು ವರದಿಯಾಗಿದ್ದರೆ, ಪಟ್ಟಿಯಲ್ಲಿ ಕರ್ನಾಟಕ ಕೂಡ ಮೇಲಿನ ಸ್ಥಾನಕ್ಕೇರುತ್ತಿದ್ದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಭಾರತವು ಈಗ ಎಷ್ಟೇ ಅಭಿವೃದ್ಧಿಯನ್ನೂ ಸಾಧಿಸಿದ್ದರೂ, ಅಂತಾರಾಷ್ಟ್ರೀಯವಾಗಿ ಮನ್ನಣೆ ಗಳಿಸುತ್ತಿದ್ದರೂ ಕೆಲವು ಸಾಮಾಜಿಕ ಸಂಗತಿಗಳಲ್ಲಿ ಇನ್ನೂ ಹಿಂದುಳಿದಿದೆ ಎಂಬುದಕ್ಕೆ ಈ ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳೇ ಸಾಕ್ಷಿ. ಭಾರತದ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ಹೆಣ್ಣು ಎಂಬುದು ವೆಚ್ಚದ ಬಾಬತ್ತು. ಬಹುಶಃ ಭಾರತದಲ್ಲಿರುವ ಬಡತನ, ಸಾಮಾಜಿಕ ಸ್ಥಿತಿಗತಿಗಳು, ಆರ್ಥಿಕ ಪರಿಸ್ಥಿತಿಯು ಇದಕ್ಕೆ ಕಾರಣವಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ವರದಕ್ಷಿಣೆಯು ಬಹುದೊಡ್ಡ ಕಾರಣವಾಗಿದೆ. ವರದಕ್ಷಿಣೆ ಕಾನೂನು ಪ್ರಕಾರ ಅತ್ಯಂತ ಹೀನ ಅಪರಾಧವಾಗಿದ್ದರೂ, ಈಗಲೂ ನಾನಾ ರೂಪದಲ್ಲಿ ಚಾಲ್ತಿಯಲ್ಲಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಸಾಮಾಜಿಕ ಸ್ಥಿತಿಗತಿ, ಆರ್ಥಿಕ ಹಿನ್ನೆಲೆ, ವರದಕ್ಷಿಣೆ ಮತ್ತು ಬಾಲ್ಯವಿವಾಹಗಳು ಭ್ರೂಣ ಹತ್ಯೆಗೆ ಕಾರಣವಾಗುತ್ತಿರುವುದು ನೇರ ಕಾರಣಗಳಾದರೂ ಲಿಂಗ ಆಯ್ಕೆಯು ಮತ್ತೊಂದು ಗಂಭೀರ ಕಾರಣವಾಗಿದೆ. ಗಂಡು ಮಗು ಬೇಕೇ ಬೇಕು ಎಂಬ ಬಯಕೆ, ಮೋಕ್ಷಕ್ಕೆ ಆತನೇ ದಾರಿ ಎಂಬಂಥ ತಪ್ಪು ಕಲ್ಪನೆಗಳು ಭ್ರೂಣಹತ್ಯೆಗೆ ಪ್ರಮುಖ ಕೊಡುಗೆ ನೀಡುತ್ತಿವೆ. ಈ ಅನಿಷ್ಠವು ಯಾವುದೇ ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲ. ದೇಶದಲ್ಲಿರುವ ಎಲ್ಲ ಧರ್ಮ, ಸಮುದಾಯ, ಪಂಥಗಳು, ಅಕ್ಷರಸ್ಥರು, ಅನಕ್ಷರಸ್ಥರು, ಶ್ರೀಮಂತರು-ಬಡವರ ವರ್ಗಗಳಲ್ಲಿ ಈ ಪಿಡುಗನ್ನು ಕಾಣಬಹುದು. ಇದಕ್ಕೆ ಗ್ರಾಮೀಣ ಪ್ರದೇಶ, ನಗರ ಪ್ರದೇಶ ಎಂಬ ಭೇದ ಭಾವವೂ ಇಲ್ಲ. ಈ ವಿಷಯದಲ್ಲಿ ಭಾರತವು ಅಕ್ಷರಶಃ ಸಮಾನತೆಯನ್ನು ಸಾಧಿಸಿದೆ!
ಮಧ್ಯ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್, ಹರ್ಯಾಣ ಅಂದರೆ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣ ಭಾರತದ ರಾಜ್ಯಗಳು ಈ ಹೆಣ್ಣು ಭ್ರೂಣ ಹತ್ಯೆ ತಡೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿವೆ. ಕೇರಳದಲ್ಲಂತೂ ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚಿದ್ದಾರೆ! ಇದರರ್ಥ, ಹೆಣ್ಣು ಮತ್ತು ಗಂಡು ನಡುವಿನ ಅಂತರವು ಗಣನೀಯವಾಗಿ ತಗ್ಗುತ್ತಿದೆ. ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಅಪರಾಧಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸುವ ಕಾಣನೂನುಗಳ ಜಾರಿಯಲ್ಲಿದ್ದರೂ ಅಕ್ರಮವಾಗಿ ಹಣದಾಸೆಗೆ ಈಗಲೂ ಭ್ರೂಣ ಹತ್ಯೆ ಯಥೇಚ್ಚವಾಗಿ ನಡೆಯುತ್ತಿದೆ ಎಂಬುದುಕ್ಕೆ ಬೆಂಗಳೂರು ಪೊಲೀಸರು ಭೇದಿಸಿರುವ ಜಾಲವೇ ನಮ್ಮ ಕಣ್ಣ ಮುಂದಿರುವ ಸಾಕ್ಷಿಯಾಗಿದೆ.
ವರದಕ್ಷಿಣ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಾನೂನು ಜಾರಿಯ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಬೇಟಿ ಬಚಾವ್ ಬೇಟಿ ಪಢಾವ್‌ನಂಥ ಕಾರ್ಯಕ್ರಮಗಳು ಜಾರಿಯಲ್ಲಿವೆ. ಹೆಣ್ಣು ಮಕ್ಕಳ ಶಿಕ್ಷಣ ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಸಾಕಷ್ಟು ಆರ್ಥಿಕ ಪ್ರೋತ್ಸಾಹ ನೀಡಲಾಗುತ್ತಿದೆ. ಉನ್ನತ ಶಿಕ್ಷಣವರೆಗೂ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಾಗಿದ್ದೂ, ಭಾರತೀಯ ಸಮಾಜದಲ್ಲಿ ಈಗಲೂ ಗಂಡು-ಹೆಣ್ಣು ಮೇಲು ಮತ್ತು ಕೀಳಿನ ಮಾಪಕದ ರೂಪಕಗಳಾಗಿರುವುದು ಜನರ ಪ್ರಜ್ಞಾವಂತಿಕೆಯಲ್ಲಿನ ಕೊರತೆಯನ್ನು ಎತ್ತಿ ತೋರಿಸುತ್ತದೆ. ಕಾನೂನು ಜಾರಿ, ಜಾಗೃತಿ ಜತೆಗೆ ತಂದೆ-ತಾಯಿಗಳ ಮನೋಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಜತೆಗೆ, ಅಕ್ರಮವಾಗಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯಲ್ಲಿ ಭಾಗಿಯಾಗಿರುವವರೆಗ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದರೆ, ಹೆಣ್ಣು ಭ್ರೂಣ ಹತ್ಯೆಯಿಂದ ಸಾಮಾಜಿಕ ಅಸಮೋತಲನ ಸೃಷ್ಟಿಯಾಗುವುದನ್ನು ತಪ್ಪಿಸಲಾಗದು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಔಷಧಗಳ ದರ ಇಳಿಕೆಗೆ ಕೇಂದ್ರದ ಕ್ರಾಂತಿಕಾರಕ ಕ್ರಮ