ಮುಖ್ಯಮಂತ್ರಿ ಸಿದ್ದರಾಮಯ್ಯ (cm Siddaramaiah) ಅವರು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ನೂತನ ಸರ್ಕಾರದ ಮೊದಲ ಹಾಗೂ ತಮ್ಮ ದಾಖಲೆಯ 14ನೇ ಬಜೆಟ್ ಮಂಡಿಸಿದ್ದಾರೆ. 2023-24ನೇ ಸಾಲಿನ ಈ ಬಜೆಟ್ ರಾಜ್ಯಕ್ಕೆ ಮಿಶ್ರಫಲದಂತಿದೆ(Karnataka Budget). ಬಜೆಟ್ ಬಗ್ಗೆ ಎಂದಿನಂತೆ ಸ್ವಪಕ್ಷೀಯರ ಶ್ಲಾಘನೆ, ವಿಪಕ್ಷೀಯರ ದೂಷಣೆ ನಡೆದಿದೆ. ಇವೆಲ್ಲದನ್ನು ಮೀರಿ, ಈ ಬಜೆಟ್ ಹೇಗಿದೆ, ಇದು ರಾಜ್ಯಕ್ಕೆ ಏನು ಮಾಡಲಿದೆ ಎಂಬುದನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕಿದೆ(Vistara Editorial).
ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದಲ್ಲಿ ಅನೇಕ ಉತ್ತಮ ಅಂಶಗಳಿವೆ. ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ 280 ಕೋಟಿ ರೂ. ವೆಚ್ಚದಲ್ಲಿ ವಾರದಲ್ಲಿ ಎರಡು ದಿನ ನೀಡುವ ಪೂರಕ ಪೌಷ್ಟಿಕ ಆಹಾರದಿಂದ 60 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಜಾರಿಯಿಂದ ನಗರದ ಸಂಚಾರ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ನೀರಿನ ನಿರ್ವಹಣೆ ಇತ್ಯಾದಿಗಳು ಸುಗಮವಾಗಲಿವೆ. ಬೆಂಗಳೂರು ಅಭಿವೃದ್ಧಿಗೆ 45 ಸಾವಿರ ಕೋಟಿ ಅನುದಾನ ಹಾಗೂ ಮೆಟ್ರೋ 3ನೇ ಹಂತಕ್ಕೆ ಗ್ರೀನ್‌ಸಿಗ್ನಲ್ ದೊರೆತಿರುವುದು ನಗರವಾಸಿಗಳಿಗೆ ಆನಂದ ತರಲಿದೆ. ಕೃಷಿ ಭಾಗ್ಯಕ್ಕೆ 100 ಕೋಟಿ ಮೀಸಲಿಟ್ಟಿರುವುದು ಉತ್ತಮ ನಡೆ. ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿರುವುದು, ಶೇ.3 ಬಡ್ಡಿದರದ ಸಾಲದ ಮಿತಿ 10ರಿಂದ 15 ಲಕ್ಷಕ್ಕೆ ಹೆಚ್ಚಿಸಿರುವುದು ಲಕ್ಷಾಂತರ ಸಣ್ಣ- ಮಧ್ಯಮ ರೈತರಿಗೆ ವರವಾಗಲಿದೆ. ಮೀನುಗಾರರಿಗೂ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ ದೊರೆಯಲಿದೆ. 770 ಕೋಟಿ ರೂ. ವೆಚ್ಚದಲ್ಲಿ 899 ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸುವ ಮುಂದಾಗಿರುವುದು ಬರಪೀಡಿತ ಜಿಲ್ಲೆಗಳಿಗೆ ನೆರವಾಗಲಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 126 ಶಾದಿ ಮಹಲ್ ನಿರ್ಮಾಣ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ಸೇರಿದಂತೆ ಅಹಿಂದ ವರ್ಗಕ್ಕೆ ಬಂಪರ್ ಅನುದಾನ ದೊರೆತಿದೆ. ಇಂದಿರಾ ಕ್ಯಾಂಟೀನ್ ಮತ್ತೆ ಆರಂಭಿಸಿರುವುದು ಬಡವರಿಗೆ ಅನುಕೂಲ.
ಈ ಬಜೆಟ್‌ನ ಒಟ್ಟು ಗಾತ್ರ ದಾಖಲೆಯ 3,27,747 ಕೋಟಿ ರೂ. ಆದರೆ ಇದು 12,522 ಕೋಟಿ ರೂ. ಕೊರತೆಯ ಬಜೆಟ್ ಕೂಡ ಅಗಿದೆ. ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ವರ್ಷಕ್ಕೆ 4000 ಕೋಟಿ ರೂ., ಗೃಹಜ್ಯೋತಿ ಯೋಜನೆಗೆ ವರ್ಷಕ್ಕೆ 13,910 ಕೋಟಿ ರೂ., ಗೃಹಲಕ್ಷ್ಮಿ ಯೋಜನೆಗೆ 30,000 ಕೋಟಿ ರೂ., ಅನ್ನ ಭಾಗ್ಯಕ್ಕೆ ವಾರ್ಷಿಕ 10,000 ಕೋಟಿ ರೂ. ವೆಚ್ಚವಾಗಲಿದೆ. ಹೀಗಾಗಿ ಬಜೆಟ್‌ನ ಬಹುಭಾಗ ಈ ಉಚಿತ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿ ವ್ಯಯವಾಗಿದೆ,. ಇದರಿಂದಾಗಿ, ಇನ್ನಷ್ಟು ಅನುದಾನ ದೊರೆಯಬೇಕಾದ ಯೋಜನೆಗಳಿಗೆ ಕತ್ತರಿಯಾಡಿಸಲಾಗಿದೆ. ಹಲವು ಇಲಾಖೆಗಳು ಇದರಿಂದ ಬಡವಾಗಲಿವೆ. ಅಬಕಾರಿ, ವಾಣಿಜ್ಯ, ನೋಂದಣಿ ಇಲಾಖೆಗೆ ಹೆಚ್ಚಿನ ತೆರಿಗೆ ಗುರಿ ಭಾರ ಹೊರಿಸಲಾಗಿದೆ. ಕೃಷಿ, ತೋಟಗಾರಿಕೆ ಇಲಾಖೆಗಳಿಗೆ 3596 ಕೋಟಿ ರೂ.ಗಳಷ್ಟು ಅನುದಾನ ಕಡಿತಗೊಳಿಸಲಾಗಿದೆ. ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೂ ಹೀಗೆಯೇ ಹೊಡೆತ ಬಿದ್ದಿದೆ.
ಹಣಕಾಸು ವಿನಿಯೋಗದಂತಹ ದೊಡ್ಡ ಯೋಜನೆಗಳು ಬಹುತೇಕ ಇಲ್ಲ. ಹೆಚ್ಚಿನ ಅನುದಾನಗಳನ್ನು ಒಳಗೊಂಡ ಯೋಜನೆಗಳೂ ಇರುತ್ತಿದ್ದ ಜಲಸಂಪನ್ಮೂಲ ಇಲಾಖೆಯಲ್ಲೂ ಕೇವಲ “ಆದ್ಯತೆ ಮೇಲೆʼ ಪರಿಗಣಿಸಲಾಗುವುದು ಎನ್ನುವ ಮಾತುಗಳಿವೆ. ಇದು ಉಚಿತ ಗ್ಯಾರಂಟಿಗಳಿಂದಾಗಿ ರಾಜ್ಯಕ್ಕೆ ಬಿದ್ದಿರುವ ಹೊಡೆತ. ಇದು ಒಂದು ವರ್ಷದ ಕತೆಯಲ್ಲವೆಂಬುದನ್ನೂ, ಪ್ರತಿವರ್ಷ ಇದಕ್ಕಾಗಿ ಸರ್ಕಸ್ ಮಾಡಬೇಕಾಗಲಿದೆ ಎಂಬುದನ್ನೂ ನೆನಪಿಡಬೇಕು. ಮುಂಬರುವ ಯಾವ ಸರ್ಕಾರವೂ ಇದನ್ನು ರದ್ದುಮಾಡುವ ಧೈರ್ಯ ಮಾಡದು. ಹೀಗಾಗಿ ಇದೊಂದು ಶಾಶ್ವತ ತೂತು. ಇದಕ್ಕಾಗಿ ಹಣ ಹೊಂಚುತ್ತಲೇ ಇರಬೇಕಾಗುತ್ತದೆ. ಇತರ ಕಡೆ ಕರಭಾರ ಹೆಚ್ಚಿಸುತ್ತಲೇ ಇರಬೇಕಾಗುತ್ತದೆ. ಜತೆಗೆ, ಕೊರತೆ ಬಜೆಟ್ ಇಟ್ಟುಕೊಂಡು ವಿಧಾನಸಭೆ ಕ್ಷೇತ್ರಗಳಿಗೆ ದೊಡ್ಡ ಅನುದಾನಗಳಿಲ್ಲದೆ, ಇಲಾಖೆಗಳಿಗೆ ಹೆಚ್ಚಿನ ಹಣವಿಲ್ಲದೆ ಶಾಸಕರನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಂತ್ರಸ್ತ ಆದಿವಾಸಿಯ ಕಾಲು ತೊಳೆದರೆ ಸಾಲದು, ಸಮಾಜದ ಮನೋಭಾವವೇ ಬದಲಾಗಬೇಕು
ಇನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯ 13ಕ್ಕೂ ಹೆಚ್ಚು ಯೋಜನೆಗಳಿಗೆ ಬ್ರೇಕ್ ಹಾಕಲಾಗಿದೆ. ಇದೊಂದು ಅನಪೇಕ್ಷಿತ ಮಾದರಿಯನ್ನು ಸಿದ್ದರಾಮಯ್ಯ ಹಾಕಿಕೊಟ್ಟಿದ್ದಾರೆ. ಪ್ರತಿ ಸರ್ಕಾರ ಬಂದಾಗಲೂ ಹೀಗೇ ಸಿದ್ದರಾಮಯ್ಯನವರ ಮಾದರಿ ಅನುಸರಿಸಿ ಹಳೆಯ ಸರ್ಕಾರದ ಯೋಜನೆಗಳನ್ನು ರದ್ದುಪಡಿಸಿದರೆ ಏನಾಗಬಹುದು? ದೇಶಿ ಗೋವುಗಳಿಗೆ ಆಧಾರವಾಗಿದ್ದ ಹೋಬಳಿಗೊಂದು ಗೋಶಾಲೆ ರದ್ದುಪಡಿಸಲಾಗಿದೆ. ರಾಷ್ಟ್ರವಿಡೀ ಒಂದೇ ಬಗೆಯ ಆಧುನಿಕ ಶಿಕ್ಷಣ ನೀತಿ ಇರಬೇಕೆಂಬ ಆಶಯದ ಎನ್‌ಇಪಿಗೆ ಕೊಕ್ ನೀಡಲಾಗಿದೆ. ಇದು ಉತ್ತಮ ಮಾದರಿಯಲ್ಲ.
ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.