Site icon Vistara News

ವಿಸ್ತಾರ ಸಂಪಾದಕೀಯ: ಹೆಚ್ಚಿದ ಪ್ರಯಾಣಿಕರ ಸಂಖ್ಯೆ; ಸರ್ಕಾರಿ ಬಸ್ಸುಗಳ ಸಂಖ್ಯೆ ಹೆಚ್ಚಿಸಿ

Bus and People

ಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕೊಡುಗೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾಪೂರ್ವ ಗ್ಯಾರಂಟಿಯಂತೆ ಘೋಷಿಸಿದ ಬಳಿಕ ಸರ್ಕಾರಿ ಬಸ್‌ಗಳು ತುಂಬಿ ತುಳುಕುತ್ತಿವೆ. ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯವನ್ನು ಹೆಚ್ಚು ಹೆಚ್ಚು ಪಡೆಯುತ್ತಿದ್ದಾರೆ. ಗುಂಪು ಗುಂಪಾಗಿ ಸರ್ಕಾರಿ ಬಸ್ ಸೌಕರ್ಯದ ಮೂಲಕ ತೀರ್ಥಯಾತ್ರೆ ಮಾಡುವುದು, ಕಚೇರಿ ಕೆಲಸಗಳಿಗೆ ತೆರಳುವುದು ಮಾಡುತ್ತಿದ್ದಾರೆ. ಮೆಟ್ರೋ ಹಾಗೂ ಆಟೋಗಳಲ್ಲಿ, ಖಾಸಗಿ ಬಸ್ಸುಗಳಲ್ಲಿ ತೆರಳುತ್ತಿದ್ದವರೂ ಈಗ ಸರ್ಕಾರಿ ಬಸ್ಸುಗಳ ಪ್ರಯಾಣ ಪ್ರಯೋಜನ ಪಡೆಯುತ್ತಿದ್ದಾರೆ. ದುಡಿಯುವ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿರುವುದು ಶ್ಲಾಘನೀಯ. ಮಾಸಿಕ ದುಡಿಮೆ ಅಥವಾ ಕಡಿಮೆ ಸಂಬಳದಲ್ಲಿ ಗಣನೀಯ ಪ್ರಮಾಣದ ಹಣಕಾಸನ್ನು ಪ್ರಯಾಣಕ್ಕೆ ತೆರುತ್ತಿದ್ದವರಿಗೆ ಇದರಿಂದ ಪ್ರಯೋಜನವಾಗಿದೆ.

ಆದರೆ ಇದರಿಂದ ಕೆಲವು ಅನಪೇಕ್ಷಿತ ಬೆಳವಣಿಗೆಗಳೂ ಆಗಿವೆ. ಸರ್ಕಾರಿ ಬಸ್‌ಗಳಲ್ಲಿ ನಿತ್ಯ ರಾಜ್ಯಾದ್ಯಂತ ಸರಾಸರಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು‌ ಸಂಚರಿಸುತ್ತಿದ್ದಾರೆ. ಅಂದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ಇತರ ಪ್ರಯಾಣಿಕರು, ವಿದ್ಯಾರ್ಥಿಗಳು ಬವಣೆ ಅನುಭವಿಸುತ್ತಿದ್ದಾರೆ. ಹಾವೇರಿಯಲ್ಲಿ ಬಸ್ ತುಂಬಿ ತುಳುಕುತ್ತಿದ್ದ ಕಾರಣ ಬಾಗಿಲಿನಲ್ಲಿ ನೇತಾಡಿಕೊಂಡು ಹೋಗುತ್ತಿದ್ದ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳು ಕೈಜಾರಿ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾಳೆ. ಇದಕ್ಕೆ ಯಾರನ್ನು ದೂರಬೇಕು? ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆ ಮಕ್ಕಳಿಗೆ, ನಗರದ ಮಕ್ಕಳಿಗಿರುವ ಖಾಸಗಿ ಸಾರಿಗೆ ಸೌಲಭ್ಯವಿಲ್ಲ. ಅವರು ಸರ್ಕಾರಿ ಬಸ್ಸುಗಳನ್ನೇ ಅವಲಂಬಿಸಬೇಕಿದೆ. ಆದರೆ ಇದೀಗ ಸರ್ಕಾರಿ ಬಸ್ಸುಗಳ ರಶ್‌ನಿಂದಾಗಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿ ತಲುಪಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ನಾನಾ ಕಚೇರಿಗಳಿಗೆ ಹೋಗುವ ನೌಕರರೂ ಸರ್ಕಾರಿ ಬಸ್ಸುಗಳಲ್ಲಿ ಸ್ಥಳಾವಕಾಶ ಸಿಗದೆ ಪರದಾಡುತ್ತಿದ್ದಾರೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಲ್ಲು ತೂರಾಟದಿಂದ ಮಾದರಿ ಹಾದಿಯತ್ತ ಕಾಶ್ಮೀರಿ ಯುವಜನ

ಇನ್ನೊಂದೆಡೆ, ರಾಜ್ಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ಸಂಚಾರವೇ ಇಲ್ಲ. ಇದರಿಂದಾಗಿ ಆ ಭಾಗಗಳ ಮಹಿಳೆಯರಿಗೆ ಸಿದ್ದರಾಮಯ್ಯ ಸರ್ಕಾರದ ಜನೋಪಯೋಗಿ ಯೋಜನೆಯಾದ ಉಚಿತ ಬಸ್ ಪ್ರಯೋಜನ ಸಿಗುತ್ತಿಲ್ಲ. ಇನ್ನು ಕರಾವಳಿ ಹಾಗೂ ಮಲೆನಾಡು ಪ್ರದೇಶದ ಕೆಲವು ಕಡೆಗಳಲ್ಲಿ ಖಾಸಗಿ ಬಸ್ಸುಗಳ ಅಬ್ಬರವೂ ಹೆಚ್ಚಾಗಿದೆ. ಇಲ್ಲಿಯೂ ಸರ್ಕಾರಿ ಬಸ್ಸುಗಳ ವ್ಯವಸ್ಥೆ ನಾಮಕಾವಸ್ಥೆ ಎಂಬಂತಿದೆ. ಕೆಲವೇ ಸರ್ಕಾರಿ ಬಸ್ಸುಗಳು ಇರುವ ಕಡೆ ಮಿತಿ ಮೀರಿ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಇದು ಕಾನೂನುಬಾಹಿರ ಮತ್ತು ಅಪಾಯಕಾರಿಯೂ ಹೌದು. ಹಾಗಾಗಿ ರಾಜ್ಯ ಸರ್ಕಾರ ತಕ್ಷಣವೇ ಸರ್ಕಾರಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ, ಬಸ್ಸಿನೊಳಗಿನ ನೂಕುನುಗ್ಗಲು ತಪ್ಪಿಸಲಿ. ಈ ವಿಚಾರ ಇಂದಿಗೋ ನಾಳೆಗೋ ಮುಕ್ತಾಯವಾಗುವಂಥದಲ್ಲ. ಬಸ್ಸಿನಲ್ಲಿ ಕೊಡಲಾಗಿರುವ ಉಚಿತ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ಇನ್ನು ಮುಂದೆ ಸದಾ ಕಾಲಕ್ಕೂ, ಮುಂದಿನ ಸರ್ಕಾರಗಳೂ ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. ಹೀಗಾಗಿ ದಿನದಿಂದ ದಿನಕ್ಕೆ ಇದರಲ್ಲಿರುವ ಲಾಭವನ್ನು ಮನಗಂಡು ಹೆಚ್ಚು ಹೆಚ್ಚು ಮಹಿಳೆಯರು ಇದರತ್ತ ಬರಲಿರುವುದು ಖಂಡಿತ. ಅವರೂ ಸೇರಿದಂತೆ ಎಲ್ಲ ಪ್ರಯಾಣಿಕರೂ ಸುರಕ್ಷಿತ ಪ್ರಯಾಣವನ್ನು ಕಾಣಬೇಕಾದರೆ ಬಸ್ಸುಗಳ ಸಂಖ್ಯೆ ಹೆಚ್ಚಿಸುವುದು ಅವಶ್ಯಕ.

ಇನ್ನಷ್ಟು ವಿಸ್ತಾರ ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version