ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ (Acharya Sri Kamakumara Nandi Maharaj) ಭೀಕರ ಕೊಲೆ ಪ್ರಕರಣವು ಹಲವು ತಿರುವು ಪಡೆದುಕೊಳ್ಳುತ್ತಿದೆ. ಜೈನ ಸಮುದಾಯದ ಪ್ರಮುಖ ಸ್ವಾಮೀಜಿಯೊಬ್ಬರ ಕೊಲೆಯು ಆ ಸಮುದಾಯದ ಭಕ್ತವೃಂದದಲ್ಲಿ ತಲ್ಲಣ ಸೃಷ್ಟಿಸಿರುವುದು ಸಹಜವಾಗಿದೆ. ಅದೇ ಕಾರಣಕ್ಕೆ ಆ ಸಮುದಾಯದ ಹಿರಿಯ ಸ್ವಾಮೀಜಿಗಳು, ನಾಯಕರು, ಗಣ್ಯರು ಆಮೂಲಾಗ್ರ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ತನಿಖಾಧಿಕಾರಿಗಳು ಈ ಪ್ರಕರಣವನ್ನು ಸಾಮಾನ್ಯ ಕೊಲೆ ಪ್ರಕರಣ ಎಂದು ನೋಡದೇ, ವಿಶೇಷ ಪ್ರಕರಣ ಎಂದು ಸಮಗ್ರ ತನಿಖೆ ನಡೆಸಬೇಕಾಗಿದೆ(Vistara Editorial).
ಅಹಿಂಸೆಯನ್ನೇ ಪ್ರತಿಪಾದಿಸುವ ಜೈನ ಮುನಿಯ ಬರ್ಬರ ಹತ್ಯೆ ಆಘಾತಕಾರಿಯಾಗಿದೆ. ಮೇಲ್ನೋಟಕ್ಕೆ ಈ ಕೊಲೆ ಪ್ರಕರಣವು ವೈಯಕ್ತಿಕ ಅಥವಾ ಸಾಲದ ಕಾರಣಕ್ಕೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಆಳವಾದ ತನಿಖೆಯನ್ನು ಸರಿಯಾದ ನಿಟ್ಟಿನಲ್ಲಿ ಕೈಗೊಂಡಾಗಲೇ ನಿಜವಾದ ಸತ್ಯ ಸಂಗತಿಗಳು ಹೊರ ಬೀಳಬಹುದು. ಜೈನ ಸಮುದಾಯದ ಹಿರಿಯರು ಕೂಡ ಇದನ್ನೇ ಒತ್ತಿ ಹೇಳುತ್ತಿದ್ದಾರೆ. ಈಗ ಸೆರೆ ಸಿಕ್ಕಿರುವ ಆರೋಪಿಗಳ ಜತೆ ಇನ್ನೂ ಯಾರಿದ್ದಾರೆ, ಈ ಕೊಲೆಯ ಹಿಂದೆ ಬೇರೆ ಏನಾದರು ಸಂಚಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಯಬೇಕು. ಹಂತಕರಿಗೆ ಕಠಿಣ ಶಿಕ್ಷೆಯಾಗುವಂತೆ ಸಾಕ್ಷ್ಯಗಳನ್ನು ಸಂಗ್ರಹಿಸುವ ಗುರುತರ ಜವಾಬ್ದಾರಿ ಪೊಲೀಸರ ಮೇಲಿದೆ.
ಜೈನ ಮುನಿಗಳ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರು ಸಮರ್ಥವಾಗಿ ನಡೆಸುತ್ತಿದ್ದಾರೆಂಬುದು ಸರ್ಕಾರದ ವಾದ. ಆದರೆ, ಕೇಂದ್ರ ಸಚಿವರು ಹಾಗೂ ಜೈನ ಸಮುದಾಯದ ಕೆಲವರು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಒಂದೊಮ್ಮೆ ಅಗತ್ಯ ಕಂಡು ಬಂದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರವು ಹಿಂಜರಿಯಬಾರದು. ಭೀಕರ ಕೊಲೆಯಾಗಿರುವ ಜೈನ ಮುನಿಗಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕೊಲೆಪಾತಕರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಈ ನಿಟ್ಟಿನಲ್ಲಿ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕಬಾರದು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಪಶ್ಚಿಮ ಬಂಗಾಳದ ಚುನಾವಣಾ ಹಿಂಸೆ ಆತಂಕಕಾರಿ
ಇತ್ತೀಚಿನ ದಿನಗಳಲ್ಲಿ ಬರ್ಬರ ಕೊಲೆಗಳು, ದೇಹವನ್ನು ಕ್ರೂರವಾಗಿ ತುಂಡು ತುಂಡಾಗಿ ಕತ್ತರಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಹಂತಕರಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಇದು ನಮ್ಮ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಬಹಿರಂಗಪಡಿಸಿವೆ. ಆರೋಪಿಗಳ ವಿರುದ್ಧ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಕುರಿತು ಪೊಲೀಸರಿಗೆ ಸೂಕ್ತ ತರಬೇತಿ ನೀಡುವ ಅಗತ್ಯ ಇದೆ. ಪೊಲೀಸ್ ವ್ಯವಸ್ಥೆಯ ಸುಧಾರಣೆ ಮಾಡಬೇಕಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಪರಾಧಗಳನ್ನು ಮಟ್ಟ ಹಾಕುವ ಕೆಲಸವಾಗಬೇಕಿದೆ. ಯಾವುದೇ ಅಪರಾಧಿಯು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಆಗಲೇ ಸಂತ್ರಸ್ತರಿಗೆ ನ್ಯಾಯ ದೊರೆಯಲು ಸಾಧ್ಯ.
ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.