ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಸೂಚನೆಯಂತೆ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆದಿದೆ. ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ. ಗದಗ ಮತ್ತು ಬೆಳಗಾವಿ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲೂ ಜನತಾ ದರ್ಶನ ನಡೆದಿದೆ. ರಾಜ್ಯಾದ್ಯಂತ 6684 ಅಹವಾಲು ಮತ್ತು ಮನವಿಗಳು ಸ್ವೀಕೃತಗೊಂಡು 21ಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಉಳಿದಂತೆ 6663 ಅರ್ಜಿ, ಅಹವಾಲುಗಳು ದಾಖಲಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರವಾನೆಯಾಗಿವೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ʼʼನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ರೀತಿಯ ಪ್ರತಿಕ್ರಿಯೆ ಸಾರ್ವಜನಿಕರಿಂದ ಸಿಕ್ಕಿದೆ. ಅಧಿಕಾರಿಗಳ ಸ್ಪಂದನೆ ಕೂಡ ಸಮಾಧಾನಕರವಾಗಿದೆ. ಇವತ್ತಿನ ಅನುಭವದ ಹಿನ್ನೆಲೆಯಲ್ಲಿ ಮುಂದಿನ ಜನತಾ ದರ್ಶನದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆʼʼ ಎನ್ನುವ ಅಭಿಪ್ರಾಯ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳಿಂದ ವ್ಯಕ್ತವಾಗಿದೆ(Vistara Editorial).
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಡಿಪಿ ಸಭೆಗಳನ್ನು ಅತ್ಯಂತ ಗಂಭೀರವಾಗಿ ನಡೆಸುತ್ತಿದ್ದಾರೆ. ಅವರು ಜಿಲ್ಲೆಗಳಿಗೆ ಭೇಟಿ ನೀಡುವಾಗ ಹಲವಾರು ಮಂದಿ ಅವರ ಮುಂದೆ ಅಹವಾಲು ಹೇಳಿಕೊಳ್ಳಲು ಬರುತ್ತಿದ್ದಾರೆ. ಇದನ್ನು ಗಮನಿಸಿದ ಅವರು ಸಿಎಂ ಬಂದಾಗ ಜನರ ದೂರು ನೀಡಲು ಬರುತ್ತಾರೆ ಎಂದರೆ ಅವರಿಗೆ ಹೇಳಿಕೊಳ್ಳಲು ಇದೆ ಎಂದಾಯಿತು. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲೂ ಜನತಾ ದರ್ಶನ ನಡೆಸಬೇಕು ಎಂಬ ಸೂಚನೆಯನ್ನು ನೀಡಿದ್ದರು. ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳ ಮೀಟಿಂಗ್‌ನಲ್ಲಿ ಈ ಸೂಚನೆ ನೀಡಲಾಗಿತ್ತು. ಇದು ಸಫಲವಾಗಿದೆ ಎನ್ನುವುದಕ್ಕೆ ಇವತ್ತಿನ ದೃಶ್ಯವೇ ಸಾಕ್ಷಿ. ಸ್ವೀಕರಿಸಲಾಗಿರುವ ಅಹವಾಲುಗಳಲ್ಲಿ ಕಂದಾಯ ಇಲಾಖೆಯದ್ದೇ ಸಿಂಹಪಾಲು. ನಂತರದ ಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೇರಿದ ಅಹವಾಲುಗಳಿವೆ. ಮೂರನೇ ಅತಿ ಹೆಚ್ಚು ಅಹವಾಲುಗಳು ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಒಟ್ಟು ಅರ್ಜಿ ರೂಪದಲ್ಲಿ ಬಂದ ಅಹವಾಲುಗಳನ್ನು ದಾಖಲಿಸಿಕೊಳ್ಳುವ ಮತ್ತು ಸ್ಥಳದಲ್ಲೇ ಪರಿಹಾರಕ್ಕೆ ಪ್ರಯತ್ನಿಸುವ ಪ್ರಕ್ರಿಯೆ ಒಂದು ಕಡೆ ನಡೆದಿದೆ. ಮತ್ತೊಂದು ಕಡೆ ಅರ್ಜಿ ಇಲ್ಲದೆ ಮೌಖಿಕವಾಗಿ ಬಂದ ಅಹವಾಲುಗಳನ್ನೂ ದಾಖಲಿಸಿಕೊಳ್ಳುವ ಜತೆಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ.
ಜನರಿಗೆ ದೂರುಗಳಿದ್ದೇ ಇರುತ್ತವೆ. ಜನ ಯಾವಾಗ ಮಂತ್ರಿಗಳ ಬಳಿಗೆ ಬರುತ್ತಾರೆ ಎಂಬುದನ್ನೂ ಗಮನಿಸಬೇಕು. ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ನೋಂದಣಿ, ಕಂದಾಯ ಹೀಗೆ ವಿಭಾಗವಾರು ಇಲಾಖೆಗಳಲ್ಲಿ ಕೇಸ್ ವರ್ಕರ್‌ಗಳು ತಮ್ಮ ಅರ್ಜಿಗಳ ವಿಲೇವಾರಿ ಮಾಡಲು ವಿಫಲರಾದಾಗ, ಮೇಲಧಿಕಾರಿಗಳತ್ತ ಜನ ಎಡತಾಕುವುದು ಸಾಮಾನ್ಯ. ಆದರೆ ಮೇಲಧಿಕಾರಿಗಳು ಇಂಥ ಅರ್ಜಿಗಳನ್ನು ʼಸರಿಯಾದ ರೀತಿಯಲ್ಲಿʼ (through proper channel) ಬರಲಿ ಎಂದು ಮತ್ತೆ ಅದನ್ನು ಕೆಳಗಿನ ಮೇಜುಗಳ ಕಡೆಗೆ ತಳ್ಳುವುದೂ ಸಾಮಾನ್ಯ. ಹೀಗೆ ಪ್ರಭಾವಿಗಳಲ್ಲದ ಜನಸಾಮಾನ್ಯರು ಮೇಜಿನಿಂದ ಮೇಜಿಗೆ ಅಲೆದಾಡುವುದು, ನಾಳೆ ಬಾ ಎಂದು ಹೇಳಿಸಿಕೊಳ್ಳುವುದು ಅತಿ ಸಾಮಾನ್ಯ ದೃಶ್ಯ. ಅನೇಕ ಮಂದಿಯ ಬದುಕು ಹೀಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ ʼತಬರನ ಕಥೆʼಯಂತೆ ಮುಗಿದುಹೋಗುತ್ತದೆ. ಇದೊಂದು ದಃಸ್ವಪ್ನವೇ ಸರಿ. ಇದರಿಂದ ಪಾರಾಗಲು ಸಣ್ಣ ಸಣ್ಣ ವಿಚಾರಗಳಿಗೂ ಜನ ಪುಢಾರಿಗಳ ಮೊರೆ ಹೋಗುತ್ತಾರೆ; ಅಥವಾ ದಲ್ಲಾಳಿಗಳನ್ನು ಹಿಡಿದುಕೊಳ್ಳುತ್ತಾರೆ. ಇವರ ಮೂಲಕ ಕೆಲಸ ಮಾಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ.
ಹೀಗೆ ಸರ್ಕಾರಿ ಕೆಲಸದ ಕೆಂಪು ಪಟ್ಟಿಯ ವಿಳಂಬ ನರಕದಿಂದ ಬೇಸತ್ತ ಜನಸಾಮಾನ್ಯನಿಗೆ, ಪಾರಾಗುವ ಒಂದು ಕಿಂಡಿಯಂತೆ ಜನತಾ ದರ್ಶನ ಕಾಣಿಸಿದರೆ ಆಶ್ಚರ್ಯವಿಲ್ಲ. ನೇರವಾಗಿ ಜಿಲ್ಲಾಧಿಕಾರಿ ಅಥವಾ ಮಂತ್ರಿಗಳಿಗೆ ಅರ್ಜಿ ಸಲ್ಲಿಸಿದರೆ ತಮ್ಮ ಕೆಲಸ ಕೂಡಲೇ ಆಗಬಹುದು ಎಂಬ ಆಸೆ ಅವರಲ್ಲಿ ಮೂಡುವುದು ಸಹಜ. ಹೀಗಾಗಿಯೇ ಇಂಥ ಕಾರ್ಯಕ್ರಮಗಳಿಗೆ ಜನಸ್ಪಂದನ ದೊಡ್ಡ ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ. ಜನ ಸರ್ಕಾರಿ ಕಚೇರಿಗಳ ಬಾಗಿಲಿಗೆ ಅಲೆದಾಡುವ ಬದಲು, ಜನತಾ ದರ್ಶನದ ಮೂಲಕ ಸರ್ಕಾರವೇ ಜನರ ಬಳಿ ಹೋಗುವುದು ಆಶಾದಾಯಕ. ಈ ಹಿಂದಿನ ಮುಖ್ಯಮಂತ್ರಿಗಳೂ ಇಂಥದೊಂದು ಪ್ರಯತ್ನ ಮಾಡಿದ್ದುಂಟು. ಆದರೆ ಇಷ್ಟೊಂದು ವ್ಯಾಪಕವಾಗಿ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಮಾಡಿರಲಿಲ್ಲ. ಆ ನಿಟ್ಟಿನಿಂದ ಇದು ಸ್ವಾಗತಾರ್ಹ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಂದೇ ಭಾರತ್; ಭಾರತದಲ್ಲಿ ರೈಲು ಕ್ರಾಂತಿ
ಈ ಹಿಂದಿನ ಜನತಾ ದರ್ಶನಗಳ ಅರ್ಜಿಗಳ ಕತೆ ಏನಾಗಿದೆ ಎಂಬುದನ್ನೂ ಗಮನಿಸಬೇಕಿದೆ. ಜನತಾ ದರ್ಶನಗಳು ಕೇವಲ ತೋರಿಕೆಯ ಕಾರ್ಯಕ್ರಮ ಆಗದೆ ಜನರ ಸಂಕಷ್ಟ ಪರಿಹಾರ ಆಗುವಂತಾಗಲಿ. ಸ್ವಲ್ಪ ಆಳವಾಗಿ ವಿಮರ್ಶೆ ಮಾಡಿದರೆ, ಜನತಾ ದರ್ಶನಗಳು ಸರ್ಕಾರಗಳ ವೈಫಲ್ಯವನ್ನು ಕಾಣಿಸುವ ಕಾರ್ಯಕ್ರಮವೇ ಹೊರತು ಸಾಫಲ್ಯವನ್ನಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ಸಮಯದಲ್ಲಿ ಕೆಲಸ ಆಗುತ್ತಿಲ್ಲ ಅನ್ನುವ ಕಾರಣಕ್ಕಾಗಿ ತಾನೇ ಜನತಾ ದರ್ಶನದ ಸಮಯದಲ್ಲಿ ಅಷ್ಟೊಂದು ಪ್ರಮಾಣದ ಅಹವಾಲುಗಳು ಬರುವುದು? ಮೊದಲು ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಜನತೆಗೆ ತಮ್ಮ ಕಚೇರಿಯಲ್ಲಿಯೇ ದರ್ಶನ ಕೊಡಬೇಕು. ಕೆಳಹಂತದ ಅಧಿಕಾರಿಗಳ ಜನತಾ ದರ್ಶನ ಮೊದಲಾಗಲಿ. ಅವರ ಮೇಲೆ ಮೇಲಧಿಕಾರಿಗಳು ನಿಗೂ ಇಡುವುದೂ ಆಗಲಿ. ಹಾಗೇ ಜಿಲ್ಲಾ ಮಟ್ಟದಲ್ಲೇ ಜನತಾ ದರ್ಶನ ಪರಿಣಾಮಕಾರಿಯಾಗಿ ನಡೆದಿದ್ದೇ ಆದಲ್ಲಿ ಜನ ದೂರದ ವಿಧಾನ ಸೌಧದವರೆಗೆ ದೂರುದುಮ್ಮಾನ ಹಿಡಿದುಕೊಂಡು ಮುಖ್ಯಮಂತ್ರಿಗಳನ್ನು ಹುಡುಕಿಕೊಂಡು ಬರುವ ಪ್ರಶ್ನೆಯೇ ಬರುವುದಿಲ್ಲ. ಜನತಾ ದರ್ಶನದ ಅರ್ಜಿಗಳನ್ನೇ ಕಾಲಕಾಲಕ್ಕೆ ವಿಲೇವಾರಿ ಮಾಡುವ ಒಂದು ವ್ಯವಸ್ಥೆ ರೂಪುಗೊಳ್ಳಬೇಕು. ಆಗ ಮಾತ್ರ ಜನತಾ ದರ್ಶನದ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡಬಹುದು. ಇಲ್ಲದಿದ್ದಲ್ಲಿ ಇದೂ ಹತ್ತರಲ್ಲಿ ಇನ್ನೊಂದು ಎಂಬಂತಾಗುತ್ತದೆ.