ವಾಣಿಜ್ಯ ಬೆಳೆ ಅಡಿಕೆ ಅಮರಿಕೊಂಡಿರುವ ಸಂಕಷ್ಟಗಳು ಒಂದೆರಡಲ್ಲ. ರಾಜ್ಯದಲ್ಲಿ ಬೆಳೆ ನಷ್ಟ, ಎಲೆ ಚುಕ್ಕೆ ರೋಗ (Leaf spot disease for areca nut), ಹಳದಿ ರೋಗ, ಬೆಲೆ ಕುಸಿತಗಳಂತಹ ಹೊಡೆತದಿಂದ ಕಂಗಾಲಾಗಿರುವ ಅಡಿಕೆ ಬೆಳಗಾರರಿಗೆ ಈಗ ಮತ್ತೊಂದು ಶಾಕಿಂಗ್ ನ್ಯೂಸ್. ರಾಜ್ಯದಲ್ಲಿ ಅಡಿಕೆ ಅಕ್ರಮ ದಂಧೆಯ ವ್ಯವಸ್ಥಿತ ಜಾಲವೊಂದು ಹುಟ್ಟಿಕೊಂಡಿದೆ. ಅಂತಾರಾಜ್ಯ ಜಾಲ ಇದಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11 ಟನ್ ಅಕ್ರಮ ಅಡಿಕೆಯನ್ನು (Illegal Areca nut) ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಈ ವಿಷಯ ತಿಳಿದುಬಂದಿದೆ. ಇತರ ರಾಜ್ಯಗಳಿಂದ ರಾಜ್ಯದ ಮಾರುಕಟ್ಟೆಯನ್ನು ಅಡಿಕೆ ಅಕ್ರಮವಾಗಿ ಪ್ರವೇಶ ಮಾಡುತ್ತಿದೆ ಎಂಬುದು ಕಳವಳಕಾರಿ ಸಂಗತಿ. ಭೂತಾನ್, ಮ್ಯಾನ್ಮಾರ್ನಿಂದ ಅಕ್ರಮವಾಗಿ ಅಡಿಕೆಯನ್ನು ಭಾರತಕ್ಕೆ ಸಾಗಾಟ ಮಾಡಲಾಗುತ್ತಿದೆ. ಈಶಾನ್ಯ ಪ್ರದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಗಳು ಬರುತ್ತಿವೆ. ಅಸ್ಸಾಂ ಮತ್ತು ಮಣಿಪುರದಂತಹ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟ ಇಲ್ಲದ ಅಡಿಕೆ ಪೂರೈಸುವ ಜಾಲ ವ್ಯಾಪಕವಾಗಿ ವ್ಯಾಪಿಸುತ್ತಿದೆ. ಇದು ಇಲ್ಲಿ ಅಡಿಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಆತಂಕ ಎದುರಾಗಿದೆ. ಇಂತಹ ಅಕ್ರಮಕ್ಕೆ ಕೂಡಲೇ ಕಡಿವಾಣ ಹಾಕಿ, ಈ ಬಗ್ಗೆ ಕಠಿಣ ಕಾನೂನು ರೂಪಿಸಬೇಕು ಎಂಬುದು ಎಲ್ಲ ಅಡಿಕೆ ಬೆಳೆಗಾರರ ಆಗ್ರಹ(Vistara Editorial).
ಭಾರತದಲ್ಲಿ ಅಡಿಕೆ ಬೆಳೆಯುವ ಪ್ರಮುಖ ರಾಜ್ಯ ಕರ್ನಾಟಕ. ಅದರಲ್ಲೂ ಇಂದು ಮಲೆನಾಡು ಹಾಗೂ ಕರಾವಳಿ ಭಾಗಗಳ ಜೀವನಾಡಿಯೇ ಅಡಿಕೆ ಎಂಬಂತಾಗಿದೆ. ಭೂತಾನ್ನಿಂದ ಹಸಿ ಅಡಿಕೆ ಆಮದಿಗೆ ಸರ್ಕಾರ ಒಪ್ಪಿಗೆ ನೀಡಿದ್ದ ಸುದ್ದಿ ಹರಡುತ್ತಿದ್ದಂತೆ ರಾಜ್ಯದಲ್ಲಿ ರಾಶಿ ಕೆಂಪಡಿಕೆಯ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿತ್ತು. ಅಂದರೆ ಇಲ್ಲಿ ಆಗುವ ಒಂದು ಸಣ್ಣ ಚಲನೆಯೂ ಕೋಟ್ಯಂತರ ಮೌಲ್ಯದ ಅಡಿಕೆ ಮಾರುಕಟ್ಟೆಯಲ್ಲಿ ತೀವ್ರ ಏರುಪೇರಿಗೆ ಕಾರಣವಾಗುತ್ತದೆ. ಇದರ ಜೊತೆಗೆ ಅಡಿಕೆಯನ್ನು ಕಾಡುತ್ತಿರುವ ಇನ್ನೂ ಹಲವು ಸಮಸ್ಯೆಗಳಿವೆ. ಮುಖ್ಯವಾಗಿ ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗ. ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲವು ಕಡೆ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗದ (Leaf spot Disease) ವಿಷಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಪ್ರಸ್ತಾಪವಾಗಿದೆ. ಎಲೆ ಚುಕ್ಕಿ ರೋಗದ ತೀವ್ರತೆ ಬಗ್ಗೆ ಪರಿಷತ್ನಲ್ಲಿ ಪರಿಷತ್ ಸದಸ್ಯ ರುದ್ರೇಗೌಡ ಪ್ರಸ್ತಾಪಿಸಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉತ್ತರಿಸಿದ್ದಾರೆ.
ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಸಂಶೋಧನೆ ನಡೆಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸಂಶೋಧನೆಗೆ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಚಲುವರಾಯಸ್ವಾಮಿ ಉತ್ತರಿಸಿದ್ದಾರೆ. ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗದ ಕುರಿತು ʻವಿಸ್ತಾರ ನ್ಯೂಸ್ʼ ನಡೆಸಿದ್ದ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ (Congress Government) ಈ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ಹಣಕಾಸಿನ ನೆರವನ್ನು ಈಚೆಗೆ ನೀಡಿತ್ತು. ಮೊದಲ ಹಂತವಾಗಿ ಶಿವಮೊಗ್ಗ ತೋಟಗಾರಿಕಾ ವಿವಿಗೆ ಸಂಶೋಧನೆಯ ಉದ್ದೇಶಕ್ಕಾಗಿ 43.61 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ರಾಜ್ಯದ 7 ಜಿಲ್ಲೆಗಳಲ್ಲಿನ 53,977.04 ಹೆಕ್ಟೇರ್ಗೂ ಹೆಚ್ಚಿನ ಅಡಿಕೆ ತೋಟಗಳು ಎಲೆಚುಕ್ಕಿ ರೋಗದಿಂದ ನಾಶವಾಗುವ ಹಂತ ತಲುಪಿವೆ. ಇದರ ನಿಯಂತ್ರಣಕ್ಕೆ ನಿರ್ದಿಷ್ಟವಾದ ಔಷಧ ಇಲ್ಲದಿರುವುದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಮಲೆನಾಡು ಜಿಲ್ಲೆಗಳಲ್ಲಿ ಈ ರೋಗದ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶೇ.74 ಅಡಿಕೆ ತೋಟ ನಾಶವಾಗಿದೆ. ಈ ರೋಗದ ನಿಯಂತ್ರಣಕ್ಕೆ ಔಷಧಿಯನ್ನು ಕಂಡು ಹಿಡಿಯಬೇಕೆಂಬ ಉದ್ದೇಶದಿಂದ ಶೃಂಗೇರಿ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗಿದೆ.
ಹಾಗೆಯೇ ಹಳದಿ ರೋಗ ಕೂಡ. ಆರಂಭದಲ್ಲಿ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಭಾಗದಲ್ಲಿ ಕಾಣಿಸಿಕೊಂಡ ಹಳದಿ ರೋಗ ಅಡಿಕೆ ತೋಟವನ್ನು ನಾಶ ಮಾಡಿ ಅಡಕೆ ಕೃಷಿಕರ ಬದುಕನ್ನು ಸಂಕಷ್ಟಕ್ಕೀಡು ಮಾಡಿತ್ತು. ನಂತರ ಇದು ದಕ್ಷಿಣ ಕನ್ನಡದಾದ್ಯಂತ ವ್ಯಾಪಿಸಿದೆ. ತುಂಬಾ ಕೃಷಿಕರು ಹಳದಿ ರೋಗ ಬಂದು ನಾಶವಾದ ತೋಟವನ್ನು ಕಡಿದುಹಾಕಿದ್ದಾರೆ. ಅಡಿಕೆ ದೀರ್ಘಾವಧಿ ಬೆಳೆಯಾದ್ದರಿಂದ ಅದನ್ನು ಕಡಿದುಹಾಕಿದರೆ ಮುಂದಿನ ಹಲವಾರು ವರ್ಷಗಳು ಯಾವ ಆದಾಯವೂ ಇರುವುದಿಲ್ಲ. ಕಾಸರಗೋಡಿನ ಸಿಪಿಸಿಆರ್ಐನಿಂದ 7 ಕೋಟಿ ವೆಚ್ಚದಲ್ಲಿ ಹಳದಿ ಎಲೆ ರೋಗದ ನಿಯಂತ್ರಣ ಅಧ್ಯಯನ ಆರಂಭಿಸಲಾಗಿತ್ತು. ಹಳದಿ ಎಲೆ ರೋಗ ನಿರೋಧಕ ತಳಿಯ ಅಭಿವೃದ್ಧಿಯ ಬಗ್ಗೆಯೂ ಸಂಶೋಧನೆ ಆರಂಭವಾಗಿತ್ತು. ಎಲೆಚುಕ್ಕಿ ಹಾಗೂ ಹಳದಿ ರೋಗಗಳ ಕಾಟದಿಂದ ರೋಗದಿಂದ ತೋಟ ನಾಶವಾಗಿದ್ದರಿಂದ ಮುಂದೇನು ಮಾಡಬೇಕೆಂದು ತೋಚದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಶೃಂಗೇರಿ ತಾಲೂಕಿನಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಊರು ತೊರೆದಿದ್ದವು.
ಸರ್ಕಾರ ತಾನು ನೀಡಿರುವ ಭರವಸೆಗಳನ್ನು ಈಡೇರಿಸುವ ಕೆಲಸ ಕೂಡಲೇ ಮಾಡಬೇಕು. ಎಲೆಚುಕ್ಕಿ ಹಾಗೂ ಹಳದಿ ರೋಗಗಳ ಮತ್ತದರ ಪರಿಹಾರದ ಕುರಿತ ಅಧ್ಯಯನ ಎಲ್ಲಿಗೆ ತಲುಪಿದೆ, ಅದರ ಮೇಲೆ ಸರ್ಕಾರದ ನೆಲೆಯಿಂದ ಯಾರಾದರೂ ನಿಗಾ ಇಟ್ಟಿದ್ದಾರೆಯೇ, ಎಂಬುದರ ಬಗ್ಗೆ ಮಾಹಿತಿಯಿಲ್ಲ. ಈ ರೋಗಗಳ ಕಂಟಕದ ನಡುವೆ ಅಕ್ರಮ ಅಡಿಕೆಯೂ ರಾಜ್ಯವನ್ನು ಪ್ರವೇಶಿಸಿದರೆ ನಮ್ಮ ಅಡಿಕೆ ಬೆಳೆಗಾರರ ಮರಣ ಶಾಸನ ಬರೆದಂತೆಯೇ. ರೋಗಗಳ ಬಗೆಗೆ ಹೇಗೋ ಹಾಗೇ ಅಕ್ರಮ ಅಡಿಕೆಯ ಆಗಮನವನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಡಿಕೆಯು ಕರಾವಳಿ ಹಾಗೂ ಮಲೆನಾಡಿನ ನಾಲ್ಕು ಜಿಲ್ಲೆಗಳ, ಆ ಮೂಲಕ ನಾಡಿನ ಶ್ರೀಮಂತಿಕೆಗೆ ಕಾರಣವಾಗಿದೆ. ಇಲ್ಲಿಂದ ರಫ್ತಾಗುವ ಅಡಿಕೆಗೆ ಉತ್ತಮ ಗುಣಮಟ್ಟ, ಒಳ್ಳೆಯ ಹೆಸರು ಇದೆ. ಅದನ್ನು ಉಳಿಸಿಕೊಳ್ಳಬೇಕು. ಅಗ್ಗದ ಅಡಿಕೆಗೆ ಹಾಗೂ ಮದ್ದಿಲ್ಲದ ರೋಗಗಳಿಗೆ ನಮ್ಮ ಅಡಿಕೆ ಬಲಿಯಾಗದಿರಲಿ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ