ಶರ ವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದೊಳಗಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆಗೆ ಮುಕ್ತ ಅಧಿಕಾರ ನೀಡಿದ್ದಾರೆ. ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಲಭ್ಯ ಕಾನೂನುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅವರು ಸಲಹೆ ಕೊಟ್ಟಿದ್ದಾರೆ. ಅಪರಾಧಗಳ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು ಪೊಲೀಸ್ ಇಲಾಖೆ ಇಚ್ಛಾಶಕ್ತಿ ಪ್ರದರ್ಶಿಸಿದರೆ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಸಾಧ್ಯವೆಂದು ಹೇಳಿಕೊಂಡಿದ್ದಾರೆ. ಇದರೊಂದಿಗೆ ಗ್ಲೋಬಲ್ ಸಿಟಿ ಬೆಂಗಳೂರನ್ನು ನಿರ್ಭೀತ ನಗರವನ್ನಾಗಿಸುವ ಉಮೇದು ತೋರಿದ್ದಾರೆ.
ಬೆಂಗಳೂರು ನಗರ ಹೂಡಿಕೆಗೆ ಪ್ರಶಸ್ತ ಸ್ಥಳವೆಂಬುದು ಜಾಗತಿಕ ಉದ್ಯಮ ಲೋಕಕ್ಕೆ ಚಿರಪರಿಚಿತ. ಇದರ ಫಲವಾಗಿ ಜಗತ್ತಿನಾದ್ಯಂತದ ದೊಡ್ಡ ದೊಡ್ಡ ಕಂಪನಿಗಳು ಇಲ್ಲಿ ಬಂದು ನೆಲೆಸಿವೆ. ಐಟಿ ಕ್ಷೇತ್ರವನ್ನಂತೂ ಬೆಂಗಳೂರು ನಗರ ವಿಶಾಲ ಹೃದಯದಿಂದ ಸ್ವಾಗತಿಸಿದೆ. ದೇಶದ ಮೂಲೆಮೂಲೆಗಳಿಂದ ಹಾಗೂ ಜಗತ್ತಿನ ನಾನಾ ದೇಶಗಳಿಂದ ಈ ಸುಂದರ ನಗರಕ್ಕೆ ಉದ್ಯೋಗ ಅರಸಿ ಬಂದಿದ್ದಾರೆ. ಇವೆಲ್ಲವೂ ಬ್ರಾಂಡ್ ಬೆಂಗಳೂರಿನ ಮೌಲ್ಯ ಹೆಚ್ಚಿಸಿದೆ. ಏತನ್ಮಧ್ಯೆ ಬೇಸರದ ವಿಚಾರವೆಂದರೆ ಬೆಂಗಳೂರಿನಲ್ಲಿ ಅಪರಾಧಗಳು ಮಿತಿಮೀರುತ್ತಿರುವುದು. ನಗರದಲ್ಲಿ ಡ್ರಗ್ಸ್ ಹಾವಳಿ ಎಗ್ಗಿಲ್ಲದೇ ಸಾಗಿದ್ದು, ಪುಟಾಣಿ ಮಕ್ಕಳಿಗೂ ಡ್ರಗ್ ರುಚಿ ಹತ್ತಿಸಲಾಗುತ್ತಿದೆ ಏನೂ ಅರಿಯದ ವಯಸ್ಸಲ್ಲಿ ಡ್ರಗ್ಸ್ ಪಿಡುಗಿಗೆ ಬಲಿಯಾಗುವ ಮಕ್ಕಳು ಮುಂದೆ ಕ್ರಿಮಿನಲ್ಗಳಾಗಿ ಪರಿವರ್ತನೆಗೊಳ್ಳುತ್ತಾರೆ.
ಭೂಮಿ ಬೆಲೆ ಗಗನಕ್ಕೆ ಏರಿರುವ ಕಾರಣ ರಿಯಲ್ ಎಸ್ಟೇಟ್ ದಂಧೆಗಳು ನಗರದ ಪಾಲಿಗೆ ವಾಸಿಯಾಗದ ಕಾಯಿಲೆಯಾಗಿ ಪರಿವರ್ತನೆಗೊಂಡಿದೆ. ಡ್ರಗ್ಸ್ ಮತ್ತು ರಿಯಲ್ ಎಸ್ಟೇಟ್ ಜಾಲದೊಳಗೆ ದೊಡ್ಡ ಕುಳಗಳೇ ಇರುವ ಕಾರಣ ಕಾನೂನು ಪಾಲಕರ ಕೈ ಕಟ್ಟಿದಂತಾಗಿದೆ. ಈ ಎರಡೂ ಅಪರಾಧಗಳನ್ನು ತಡೆಯುವ ಪ್ರಯತ್ನಕ್ಕೆ ಪ್ರತಿ ಬಾರಿಯೂ ಸೋಲಾಗುತ್ತಿವೆ. ರಿಯಲ್ ಎಸ್ಟೇಟ್ ವಹಿವಾಟಿನ ದ್ವೇಷಕ್ಕೆ ನಡೆಯುವ ಹತ್ಯೆಗಳು ಜನರ ಸ್ಥೈರ್ಯಕ್ಕೆ ಪೆಟ್ಟು ಕೊಡುತ್ತಿದೆ. ಪುಡಿ ರೌಡಿಗಳ ಅಟ್ಟಹಾಸ, ಅನ್ಯ ಪ್ರದೇಶಗಳ ಜನರ ಮೇಲಿನ ದಬ್ಬಾಳಿಕೆ, ಹಫ್ತಾ ದಂಧೆಗಳು ಈ ನಗರಕ್ಕೆ ಕೆಟ್ಟ ಹೆಸರು ತರುತ್ತಿವೆ.
ಬೆಂಗಳೂರು ನಗರದ ಒಳಿತಿಗಾಗಿ ಡ್ರಗ್ಸ್ ಮಾಫಿಯಾವನ್ನು ಮೂಲದಿಂದಲೇ ನಿರ್ಮೂಲನೆ ಮಾಡಲು ಪೊಲೀಸರು ಮುಂದಾಗಬೇಕು. ಬಲಿಷ್ಠ ವ್ಯಕ್ತಿ ನಿಂತು ದಂಧೆ ನಡೆಸಿದಲೂ ಆತನನ್ನು ಕಾನೂನಿನ ಕುಣಿಕೆಯೊಳಗೆ ಸಿಲುಕಿಸಬೇಕು. ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ತೀರ್ಮಾನ ಕೈಗೊಂಡು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಅದೇ ರೀತಿ ದುಡ್ಡಿಗಾಗಿ ದರೋಡೆ ಮಾಡುವವರನ್ನು ನಿಯಂತ್ರಿಸಲು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ಜೀವನ ಮಾಡುವವರನ್ನು ಗುರುತಿಸಿ ಅವರ ರಕ್ಷಣೆಗೆ ಆದ್ಯತೆ ನೀಡಬೇಕು. ರಾತ್ರಿ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ ಬಲಪಡಿಸಬೇಕು. ಅದು ಕೇವಲ ಪೊಲೀಸರ ರಾತ್ರಿ ನಗರ ಸಂಚಾರವಾಗಬಾರದು.
ನಗರದಲ್ಲಿರುವ 241 ಹೊಯ್ಸಳ ವಾಹನಗಳ ಗಸ್ತುಪಡೆಯನ್ನು ಬಲಪಡಿಸಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಿಯಲ್ ಎಸ್ಟೇಟ್‌ನವರ ಜೊತೆ ಶಾಮೀಲಾಗುವುದು ನಿಲ್ಲಬೇಕಾಗಿದೆ. ಹಿರಿಯ ಅಧಿಕಾರಿಗಳು ಅಂಥವರ ಬಗ್ಗೆ ನಿಗಾ ಇಡಬೇಕು ಹಾಗೂ ಜನರಿಗೆ ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡುವಂತೆ ಮಾಡಬೇಕು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಶೇ.7.3 ಜಿಡಿಪಿ ನಿರೀಕ್ಷೆ, ಈಡೇರುತ್ತಿದೆ ಭಾರತದ ಪ್ರಗತಿಯ ಆಕಾಂಕ್ಷೆ
ರೌಡಿಗಳ ಪರೇಡ್ ನಡೆಸಿ ಅವರಿಗೆ ಎಚ್ಚರಿಕೆ ನೀಡುವ ಪರಿಪಾಠ ಇತ್ತೀಚೆಗೆ ಕಡಿಮೆಯಾಗಿದೆ. ಕಾಲಕಾಲಕ್ಕೆ ಸಮಾಜಘಾತುಕರಿಗೆ ಪೊಲೀಸ್ ಇಲಾಖೆಗೆ ಇರುವ ಶಕ್ತಿಯನ್ನು ಪ್ರದರ್ಶಿಸುವುದು ಒಳಿತು. ಅನ್ಯ ಪ್ರದೇಶದವರ ಮೇಲೆ ಅನಗತ್ಯ ತಗಾದೆ ತೆಗೆದು ದಬ್ಬಾಳಿಕೆ ಮಾಡುವವರ ಪರ ನಿಲ್ಲಬಾರದು.
ಸಿಎಂ ಸಿದ್ದರಾಮಯ್ಯ ಅವರು ಇದನ್ನು ಕೇವಲ ಮಾತಿಗೆ ಸೀಮಿತಗೊಳಿಸಬಾರದು. ಸರ್ಕಾರದ ಕಣ್ಣು ತಪ್ಪಿಸಿ ಕಾನೂನು ಉಲ್ಲಂಘಿಸುವವರ ಜತೆಗೆ ನಿಲ್ಲುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು. ನಿರ್ಭೀತ ಬೆಂಗಳೂರು ಆಲೋಚನೆಯನ್ನು ನಿಜವಾಗಿಸಬೇಕು.