Site icon Vistara News

ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Vistara Editorial, Let the strengthening government schools

ಸರ್ಕಾರಿ ಶಾಲೆಗಳು ಹಾಗೂ ಆ ಶಾಲೆಗಳಿಗೆ ತೆರಳುವ ಮಕ್ಕಳ ಹಿತದೃಷ್ಟಿಯಿಂದ ಆಗಲೇಬೇಕಾದ ಹಲವಾರು ಕಾರ್ಯಗಳ ಬಗ್ಗೆ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಶಿಕ್ಷಣ ಸಚಿವರ ಗಮನಕ್ಕೆ ತಂದಿದೆ. ಏಕೋಪಾಧ್ಯಾಯ/ ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಕಾಯಂ ಶಿಕ್ಷಕರ ನೇಮಕ ಮಾಡಬೇಕು. ಕಾಯಂ ಶಿಕ್ಷಕರನ್ನು ಅತ್ಯಗತ್ಯವಿರುವ ಗ್ರಾಮೀಣ ಪ್ರದೇಶಗಳಿಗೆ ನಿಯೋಜನೆ ಮಾಡುವುದು ಸೇರಿದಂತೆ ಇನ್ನಿತರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪತ್ರ ಬರೆದು ಒತ್ತಾಯ ಮಾಡಿದೆ. ಈ ಸಂಬಂಧ ಹತ್ತು ಸೂತ್ರವನ್ನೂ ನೀಡಿದೆ. ಮಕ್ಕಳ ಶೈಕ್ಷಣಿಕ (Education News) ಪ್ರಗತಿಯ ಹಿತದೃಷ್ಟಿಯಿಂದ ಈ ಕಾರ್ಯಗಳನ್ನು ಮಾಡುವಂತೆ ಒತ್ತಾಯ ಮಾಡಿದೆ. ಇದೇ ಸಂದರ್ಭದಲ್ಲಿ, 8ನೇ ತರಗತಿಯಲ್ಲಿ ಓದುವ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತ ಸೈಕಲ್‌ (Free bicycle) ಕೊಡಲು ಬಜೆಟ್‌ನಲ್ಲಿ ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಭರವಸೆ ನೀಡಿದ್ದಾರೆ. ಭರವಸೆಗಳನ್ನು ಆಗುಮಾಡುವುದರ ಜೊತೆಗೆ, ತಜ್ಞರ ಮಾತುಗಳ ಬಗೆಗೂ ಸಚಿವರು ಕಿವಿಗೊಡುವುದು ಅಗತ್ಯವಾಗಿದೆ(Vistara Editorial).

ಶಾಲಾ ಶಿಕ್ಷಣದಲ್ಲಿ ಮಕ್ಕಳು ಕಲಿಕೆಯ ಕೇಂದ್ರ ಬಿಂದು. ಮಕ್ಕಳಿಗಿರುವ ಶಿಕ್ಷಣದ ಮೂಲಭೂತ ಹಕ್ಕಿನ ಭಾಗವಾಗಿ ಒದಗಿಸಬೇಕಾದ ಉತ್ತೇಜಕಗಳು, ಕಲಿಯಲು ಅಗತ್ಯವಾದ ಮೂಲ ಸೌಕರ್ಯ ಹಾಗೂ ಕಲಿಸಲು ಬೇಕಾದ ಅರ್ಹ ಶಿಕ್ಷಕರನ್ನು ಒದಗಿಸುವುದು ಸರ್ಕಾರದ ಮೊದಲ ಆದ್ಯತೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಶಾಲೆ ಪ್ರಾರಂಭವಾಗಿ ಹಲವು ತಿಂಗಳು ಕಳೆದರೂ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕ, ಸಮವಸ್ತ್ರ ಮತ್ತು ಶೂ, ಸಾಕ್ಸ್ ಸಕಾಲಕ್ಕೆ ದೊರೆತಿಲ್ಲ. ಜತೆಗೆ, ಏಳನೇ ತರಗತಿಯಿಂದ ಎಂಟು ಅಥವಾ ಎಂಟರಿಂದ ಒಂಬತ್ತನೇ ತರಗತಿಗೆ ಹೋಗುತ್ತಿರುವ ಮಕ್ಕಳಿಗೆ ಕಳೆದ ಮೂರು ವರ್ಷದಿಂದ ಉಚಿತ ಬೈಸಿಕಲ್ ಸಿಕ್ಕಿಲ್ಲ. ಎಲ್ಲ ಮಕ್ಕಳಿಗೆ ಪರಿಷ್ಕೃತ ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕ, 2 ಜತೆ ಸಮವಸ್ತ್ರ ಮತ್ತು 2 ಜತೆ ಶೂ ಹಾಗೂ ಸಾಕ್ಸ್ ವಿತರಣೆ ಮಾಡಬೇಕು. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ. ವಿಳಂಬವಾದಲ್ಲಿ ಶಾಲೆ ಪ್ರಾರಂಭದಲ್ಲಿಯೇ ಅತಿಥಿ ಶಿಕ್ಷಕರ ನೇಮಕ. ಏಕೋಪಾಧ್ಯಾಯ/ ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಕಾಯಂ ಶಿಕ್ಷಕರ ನೇಮಕ ಮುಂತಾದ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲು ತಜ್ಞರ ವೇದಿಕೆ ಆಗ್ರಹಿಸಿದೆ.

ಇವರ ಬೇಡಿಕೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ/ ವಿಲೀನಗೊಳಿಸುವ ಪ್ರಕ್ರಿಯೆಗಳು ಪೂರ್ಣವಾಗಿ ನಿಲ್ಲಬೇಕು ಎಂಬುದು ಇದೆ. ಇದು ಮುಖ್ಯವಾದುದು. ಇಂಗ್ಲಿಷ್‌ ಶಾಲೆಗಳು ಹಳ್ಳಿಹಳ್ಳಿಗಳಲ್ಲಿ ಹೆಚ್ಚುತ್ತಿರುವುದು ಮತ್ತು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳು ಕಡಿಮೆಯಾಗುತ್ತಿರುವುದು ಬಡ ಮಕ್ಕಳ ಶಿಕ್ಷಣಕ್ಕೆ ಚಪ್ಪಡಿಕಲ್ಲು ಎಳೆದಂತೆ. ಹೀಗಾಗಬಾರದು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಭಾಗವಾಗಿ ಮಧ್ಯಾಹ್ನದ ಬಿಸಿಯೂಟದ ವೆಚ್ಚಕ್ಕೆ ಈಗಿರುವ ಪ್ರತಿ ಮಗುವಿನ ಯುನಿಟ್ ವೆಚ್ಚವನ್ನು ಹೆಚ್ಚಿಸಬೇಕು. ಈ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಸ್ಥಿತಿಗತಿ ಅರಿಯಲು ಸಿಆರ್‌ಪಿ, ಶಿಕ್ಷಣ ಸಂಯೋಜಕರು, ಬಿಆರ್‌ಸಿ, ಬಿಆರ್‌ಪಿ, ಬಿಇಒ, ಡಿಡಿಪಿಐ ಮತ್ತು ಡಯಟ್ ಸಿಬ್ಬಂದಿ ಶಾಲೆಗಳಿಗೆ ಭೇಟಿ ನೀಡಿ ವಿವರವಾದ ವರದಿ ಸಲ್ಲಿಸಲು ಕ್ರಮ ವಹಿಸಬೇಕು. ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಎಲ್ಲ ಮೂಲಭೂತ ಸೌಕರ್ಯ ಒದಗಿಸಲು ಕಾಲಮಿತಿ ಯೋಜನೆ ರೂಪಿಸಬೇಕು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ರಚಿಸಿ ಬಲವರ್ಧನೆಗೊಳಿಸಬೇಕು. ಕನಿಷ್ಠ 12ನೆಯ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ವಿಸ್ತರಿಸಲು ಸಂವಿಧಾನ ಹಾಗೂ ಶಿಕ್ಷಣ ಹಕ್ಕು ಕಾಯಿದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದೂ ವೇದಿಕೆ ಆಗ್ರಹಿಸಿದೆ. ಇವೆಲ್ಲವೂ ಆಗಬೇಕಾದ ವಿಚಾರಗಳೇ. ಸರ್ಕಾರ ಇವುಗಳ ಬಗ್ಗೆ ಶೀಘ್ರ ಗಮನ ಹರಿಸಬೇಕು.

ಇದೇ ಹೊತ್ತಿಗೆ ರಾಜ್ಯ ಸರ್ಕಾರ, ಕೇಂದ್ರವು ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿ ಮಾಡಲು ಮುಂದಾಗಿದೆ. ಶಿಕ್ಷಣ ನೀತಿ ಎಂಬುದು ಒಂದೊಂದು ರಾಜ್ಯಕ್ಕೊಂದೊಂದು ಎಂಬಂತಾಗುವುದರಲ್ಲಿ ಅರ್ಥವಿಲ್ಲ. ಕೇಂದ್ರ ತಂದಿರುವ ಶಿಕ್ಷಣ ನೀತಿಯು ವೃತ್ತಿಪರ ಶಿಕ್ಷಣ, ಮಕ್ಕಳ ಜ್ಞಾನವರ್ಧನೆ ಇತ್ಯಾದಿಗಳ ಕಡೆಗೆ ಹೆಚ್ಚಿನ ಗಮನ ಕೊಟ್ಟು ವೈಜ್ಞಾನಿಕವಾಗಿ ರೂಪುಗೊಂಡಿದೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ರಾಜಕೀಯ ಕಾರಣಗಳಿಗಾಗಿ ಇದನ್ನು ಬದಲಾಯಿಸಲು ಹೊರಟಂತಿದೆ. ರಾಜ್ಯ ನೀತಿ ಒಂದು, ರಾಷ್ಟ್ರದ ನೀತಿಯೇ ಒಂದು ಎಂಬಂತಾಗುವುದರಿಂದ ಮಕ್ಕಳಿಗೆ ಭವಿಷ್ಯದಲ್ಲಿ ಸಮಸ್ಯೆಯೇ ಆಗುತ್ತದೆ ಹೊರತಾಗಿ ಯಾವುದೇ ಪ್ರಯೋಜನವಿಲ್ಲ. ಈ ಬಗ್ಗೆ ಕೂಡ ಸರಿಯಾದ ತಜ್ಞರ ಅಭಿಪ್ರಾಯವನ್ನು ಪಡೆದು ಸರ್ಕಾರ ಒಂದು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಂಸದೆಯ ಕೃತ್ಯಕ್ಕೆ ತಕ್ಕ ಶಿಕ್ಷೆ, ಇತರರಿಗೂ ಪಾಠವಾಗಲಿ

Exit mobile version