ಕಾಲ ಗರ್ಭದೊಳಗೆ 2023 ಲೀನವಾಗಿದ್ದು, ಹೊಸ ಭರವಸೆಯೊಂದಿಗೆ 2024ರ ಹೊಸ ವರ್ಷ ನಮ್ಮನ್ನು ಆಲಂಗಿಸಿದೆ. ಮೇಲ್ನೋಟಕ್ಕೆ ಹೊಸ ವರ್ಷ ಎನ್ನುವುದು ಗೋಡೆಯ ಮೇಲೆ ಕ್ಯಾಲೆಂಡರ್ ಬದಲಿಸುವುದಕಷ್ಟೇ ಸೀಮಿತ. ಆದರೆ, ಅಲೌಕಿಕವಾಗಿ, ಭಾವನಾತ್ಮಕವಾಗಿ, ಸಂಕಲ್ಪಗಳ ದೃಷ್ಟಿಯಿಂದ ಹೊಸ ವರ್ಷ ಎನ್ನುವುದು ನಿಜಕ್ಕೂ ಹೊಸದೇ. ಪ್ರತಿ ವರ್ಷ ಕೆಡುಕು-ಒಳಿತು ಇದ್ದೇ ಇರುತ್ತದೆ. ಆದರೆ, ನಾವೆಲ್ಲರೂ ಮುಂಬರುವ ವರ್ಷ ಸಂಪೂರ್ಣವಾಗಿ ಹರ್ಷವನ್ನೇ ತರಲಿ ಎಂದು ಆಶಿಸುತ್ತೇವೆ. ಆ ಕಾರಣಕ್ಕಾಗಿಯೇ, 2024 ಕೂಡ ನಮ್ಮೆಲ್ಲರ ಪಾಲಿಗೆ ಶಾಂತಿ, ಸಮೃದ್ಧಿ ಮತ್ತು ನೆಮ್ಮದಿಯನ್ನೇ ಹೊತ್ತು ತರಲಿ; ಎಲ್ಲೆಡೆಯೂ ಸಂತೋಷವೇ ತುಂಬಿರಲಿ. ಹೊಸ ವರ್ಷವನ್ನು ಅಪ್ಪಿಕೊಳ್ಳುವಾಗ, ಹಳೆಯ ವರ್ಷದ ಒಳಿತು, ಕೆಡುಕುಗಳು; ಲಾಭ, ನಷ್ಟ; ಸಾಧನೆ, ವೈಫಲ್ಯಗಳನ್ನು ವಿಮರ್ಶಿಸಿಕೊಳ್ಳಲು ಇದು ಸಕಾಲ ಎಂಬುದನ್ನು ಮರೆಯಬಾರದು(Vistara Editorial).
ಭಾರತದ ಪಾಲಿಗೆ 2023 ಅದ್ಭುತ ವರ್ಷ. ಸಾಕಷ್ಟು ಸಾಧನೆಗಳು ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಭಾರತವು ಜಿ20 ಶೃಂಗಕ್ಕೆ ಯಶಸ್ವಿ ಆತಿಥ್ಯ ನೀಡಿ, ಇಡೀ ವಿಶ್ವದ ಗಮನ ಸೆಳೆಯಿತು. ಈ ಮೂಲಕ ಅಂತಾರಾಷ್ಟ್ರೀಯವಾಗಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲು ತಾನು ಸಿದ್ಧ ಎಂಬುದನ್ನು ಸಾಬೀತುಪಡಿಸಿತು. ಇನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಚಂದ್ರಯಾನ 3 ಕೈಗೊಂಡು, ಕೀರ್ತಿ ಪತಾಕೆ ಹಾರಿಸಿತು. ಈವರೆಗೂ ಯಾವ ದೇಶವೂ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿರಲಿಲ್ಲ. ಆದರೆ, ಚಂದ್ರಯಾನ 3 ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು, ಬಾಹ್ಯಾಕಾಶದ ಭಾರತದ ಪರಾಕ್ರಮವನ್ನು ಎಲ್ಲಡೆ ಪಸರಿಸಿತು. ಅದೇ ರೀತಿ, ಸಾಕಷ್ಟು ಸಾಧನೆಗಳು ದೇಶವಾಸಿಗಳು ಅಭಿಮಾನಪಡುವಂತೆ ಮಾಡಿವೆ. ಆರ್ಥಿಕತೆ ದೃಷ್ಟಿಯಿಂದಲೂ ಭಾರತ ಇದುವರೆಗೆ ತಲುಪದ ಸ್ಥಾನವನ್ನು ತಲುಪಿದೆ. ಜಗತ್ತಿನ ಮೂರನೇ ಬೃಹತ್ ಆರ್ಥಿಕತೆ ರಾಷ್ಟ್ರವಾಗುತವತ್ತ ದಾಪುಗಾಲು ಹಾಕಿದೆ. ಹಾಗಂತ ದುಃಖ ದುಮ್ಮಾನಗಳು, ಕಹಿ ಘಟನೆಗಳು ನಡೆದೇ ಇಲ್ಲ ಎಂದಲ್ಲ. ಮಣಿಪುರದಲ್ಲಿ ನಡೆದ ಕ್ರೂರ ಹಿಂಸಾಚಾರಗಳು ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ. ಎರಡು ಸಮುದಾಯಗಳ ಮಧ್ಯೆ ಸುಮಾರು 6 ತಿಂಗಳಿಂದ ಹೊತ್ತಿ ಉರಿಯುತ್ತಿರುವ ಮಣಿಪುರ ಹಿಂಸಾಚಾರ ಇನ್ನೂ ಪೂರ್ತಿ ನಿಂತಿಲ್ಲ.
ಇನ್ನು, ಕುಸ್ತಿ ಫೆಡರೇಷನ್ ರಂಪಾಟ ಕೂಡ ಅಂತಾರಾಷ್ಟ್ರೀಯವಾಗಿ ಭಾರತದ ಘನತೆಗೆ ಕುಂದು ತಂದಿತು. ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಸಿಂಗ್ ಪರಮಾಪ್ತನೇ ಮತ್ತೆ ಫೆಡರೇಷನ್ ಮುಖ್ಯಸ್ಥನಾಗಿದ್ದನ್ನು ವಿರೋಧಿಸಿ ಒಲಂಪಿಕ್ ಪದಕ ವಿಜೇತರು ಕುಸ್ತಿ ಪಟುಗಳು ತಮ್ಮ ಪದಕಗಳು, ನಾಗರಿಕ ಪ್ರಶಸ್ತಿಗಳನ್ನು ಪ್ರಧಾನಿ ಕಚೇರಿ ರಸ್ತೆಯಲ್ಲಿಟ್ಟು ಹೋಗಿದ್ದು ನಿಜಕ್ಕೂ ಚಿಂತಿಸಬೇಕಾದ ಸಂಗತಿಯೇ ಆಗಿದೆ. ಇದರ ಮಧ್ಯೆಯೂ, ಹಲವು ಕ್ರೀಡೆಗಳಲ್ಲಿ ನಮ್ಮ ಕ್ರೀಡಾಪಟುಗಳ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಗುಜರಾತ್ ಮತ್ತು ಬಿಹಾರದಲ್ಲಿ ಬ್ರಿಜ್ ಕುಸಿದು ನೂರಾರು ಮಂದು ಪ್ರಾಣ ತೆತ್ತ ಘಟನೆ 2023ರ ಒಡಲಲ್ಲಿ ಅಡಗಿದೆ.
ದೇಶದ ಭದ್ರತೆಯ ವಿಷಯದಲ್ಲಿ 2023 ನೆನಪಿಡಬೇಕಾದ ವರ್ಷವಾಗಿದೆ. ಕಾಶ್ಮೀರದ ಗಡಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಉಗ್ರರ ಉಪಟಳವನ್ನು ನಿಯಂತ್ರಿಸುವಲ್ಲಿ ಭಾರತದ ಭದ್ರತಾ ಪಡೆಗಳು ಯಶಸ್ವಿಯಾಗಿವೆ. 180ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಲಾಗಿದೆ. ಹಾಗೆಯೇ ಹಲವು ಯೋಧರು ಹುತಾತ್ಮರಾಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ದೇಶಾದ್ಯಂತ ನಿರಂತರವಾಗಿ ದಾಳಿ ಮಾಡುವ ಮೂಲಕ ದೇಶದ್ರೋಹಿ ಶಕ್ತಿಗಳನ್ನು ಮಟ್ಟ ಹಾಕಿತು. ಈ ಎಲ್ಲ ಕಾರಣಗಳಿಂದ ಹೊಸ ವರ್ಷ ನಾವು ಇನ್ನಷ್ಟು ಸುರಕ್ಷತೆಯ ಭಾವವನ್ನು ಅನುಭವಿಸಬಹುದು.
ಇನ್ನು ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ, ಸಿನಿಮಾ, ಕ್ರೀಡಾ ಕ್ಷೇತ್ರಗಳಲ್ಲಿ ಭಾರತವು ಸಾಕಷ್ಟು ಮೈಲುಗಲ್ಲಗಳನ್ನು ನೆಟ್ಟಿದೆ. ಕನ್ನಡದ ಕಾಂತಾರ ಸಿನಿಮಾ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳು ಈ ವರ್ಷವೂ ಅಕ್ಷರಶಃ ಭಾರತೀಯ ಚಿತ್ರರಂಗವನ್ನು ಆಳಿವೆ. ಈ ಟ್ರೆಂಡ್ 2024ರಲ್ಲೂ ಮುದುವರಿಯಲಿ ಎಂದು ಆಶಿಸೋಣ.
ಇನ್ನು ರಾಜಕೀಯವಾಗಿ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆದಿವೆ. ಬಿಜೆಪಿ ತನ್ನ ಪ್ರಾಬಲ್ಯವನ್ನು ಈ ವರ್ಷವೂ ಮುಂದುವರಿಸಿದೆ. ಅಸಲಿಗೆ, ಉತ್ತರ ಭಾರತದಲ್ಲಿ ಬಿಜೆಪಿಯ ಬಿಗಿ ಹಿಡಿತ ಇನ್ನಷ್ಟು ಗಟ್ಟಿಯಾಗಿದೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ದಕ್ಷಿಣ ಭಾರತದಲ್ಲಿ ಮಾತ್ರ ಬಿಜೆಪಿಯ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ, ತೆಲಂಗಾಣದಲ್ಲೂ ಅಂಥ ಯಶಸ್ಸೇನೂ ಗಳಿಸಿಲ್ಲ. 2024ರಲ್ಲಿ ಲೋಕಸಭೆ ಜತೆಗೆ, ಆಂಧ್ರ ಪ್ರದೇಶ ಮತ್ತು ಒಡಿಶಾ ಸೇರಿ ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ ರಾಜಕೀಯ ಪಕ್ಷಗಳ ನಡುವೆ ವೈಮನಸ್ಸು, ದ್ವೇಷ, ವಾಕ್ಸಮರ ಎಲ್ಲವೂ ಎಂದಿನಂತಿದೆ. 2024ರಲ್ಲಾದರೂ ಇದೆಲ್ಲಾ ಇತಿ ಮಿತಿಯಲ್ಲಿರಲಿ; ರಾಜಕೀಯ ಜಿದ್ದಾಜಿದ್ದಿ ಆರೋಗ್ಯಕರವಾಗಿರಲಿ. ಸುಸೂತ್ರವಾಗಿ ಚುನಾವಣೆ ನಡೆದು, ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬರಲಿ. ಅಭಿವೃದ್ಧಿ ಕೇಂದ್ರಿತ ರಾಜಕಾರಣಕ್ಕೆ ನಾಂದಿ ಹಾಡಲಿ. ಗತಿಸಿ ಹೋದ ಕಹಿ ಘಟನೆಗಳನ್ನು ಮರೆತು, ಸಿಹಿ ಸಂಗತಿಗಳ ಆಶಯಯೊಂದಿಗೆ 2024ರ ಹೊಸ ವರ್ಷವನ್ನು ಸ್ವಾಗತಿಸೋಣ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಅಯೋಧ್ಯೆಗೆ ಹೊಸ ರೂಪ, ಇದು ಮೋದಿ-ಯೋಗಿ ಇಚ್ಛಾಶಕ್ತಿಯ ಪ್ರತಿರೂಪ