Site icon Vistara News

ವಿಸ್ತಾರ ಸಂಪಾದಕೀಯ: ಅಯೋಧ್ಯೆ ಹೋರಾಟಗಾರರ ವಿರುದ್ಧ ದ್ವೇಷ ರಾಜಕಾರಣ ಬೇಡ

Vistara Editorial, No hate politics against ram kar sevakas

ರಾಜ್ಯಾದ್ಯಂತ ಬಿಜೆಪಿಯ ಪ್ರತಿಭಟನೆಗೆ ಕಾರಣವಾಗಿರುವ, 31 ವರ್ಷಗಳ ಹಿಂದಿನ ಪ್ರಕರಣವೊಂದನ್ನು ರಿಓಪನ್‌ ಮಾಡಿರುವ ರಾಜ್ಯ ಸರ್ಕಾರದ (Karnataka government) ನಡೆ ಕುತೂಹಲಕರವಾಗಿದೆ. ಅಯೋಧ್ಯೆಯಲ್ಲಿ 1992ರ ಡಿಸೆಂಬರ್‌ನಲ್ಲಿ ನಡೆದ ಕರಸೇವೆಗೂ (Kar Sevak) ಮುನ್ನ, ಅದೇ ತಿಂಗಳ 5ರಂದು ಹುಬ್ಬಳ್ಳಿಯಲ್ಲೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದು ಕಾರ್ಯಕರ್ತರು ಆ ವೇಳೆ ಕೆಲ ಕಾಲ ತಲೆಮರೆಸಿಕೊಂಡಿದ್ದರು. ಬಳಿಕ ಪ್ರಕರಣ ಯಾವುದೇ ವಿಚಾರಣೆ ಕಾಣದೆ ಹಾಗೇ ಉಳಿದಿತ್ತು. ಈಗ 31 ವರ್ಷಗಳ ಹಳೇ ಪ್ರಕರಣಕ್ಕೆ ಹುಬ್ಬಳ್ಳಿ ಪೊಲೀಸರು ಜೀವ ಕೊಟ್ಟಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳ ಏಕಾಏಕಿ ಹುಡುಕಾಟ ಆರಂಭವಾಗಿದೆ. 31 ವರ್ಷದ ಬಳಿಕ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ(Vistara Editorial).

ಹೀಗೆ ಇಷ್ಟು ಹಳೆಯ ಕಡತಕ್ಕೆ ಮರುಜೀವ ನೀಡಿರುವುದು ಮತ್ತು ರಿಓಪನ್‌ ಮಾಡಲು ಆರಿಸಿಕೊಂಡಿರುವ ಸಮಯ ಸಂಶಯಾಸ್ಪದವಾಗಿದೆ. ಇದನ್ನು ವಿಪಕ್ಷ ಬಿಜೆಪಿಯೂ ತೀವ್ರವಾಗಿ ಖಂಡಿಸಿದ್ದು, ಇದನ್ನು ವಿರೋಧಿಸಿ ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ”ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ. 31 ವರ್ಷಗಳ ಹಿಂದಿನ ಕೇಸ್‌ ಅನ್ನು ರಿಓಪನ್‌ ಮಾಡುವುದಕ್ಕೆ ರಾಮ ಮಂದಿರ ಪ್ರಾಣ ಪ್ರತಿಷ್ಠಾನದ ಸಂದರ್ಭವೇ ಬೇಕಿತ್ತೇ? ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇರುವಾಗ ಅದಕ್ಕೆ ಭಂಗ ತರುವ ಕೆಲಸಕ್ಕೆ ಸಿಎಂ ಕೈ ಹಾಕುತ್ತಿದ್ದಾರೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುಡುಗಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ನವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಟೀಕಿಸಿದ್ದಾರೆ. ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದು ವಿಪಕ್ಷದ ಖಂಡತುಂಡ ಆರೋಪ. ಆದರೆ ನಾವು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ; ಹಳೆಯ ಕಡತಗಳನ್ನು ವಿಲೇವಾರಿ ಮಾಡುವ ಕೆಲಸ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ.

ಪ್ರಕರಣ ದಾಖಲಾದಾಗ ಆರೋಪಿತರು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬದುಕಿನಲ್ಲಿ ನೆಲೆ ಕಂಡಿದ್ದಾರೆ. ಇದು ನ್ಯಾಯಾಂಗ ಪ್ರಕ್ರಿಯೆಯ ವಿಳಂಬ ಹಾಗೂ ನ್ಯಾಯ ದ್ರೋಹದ ಉದಾಹರಣೆಯೂ ಆಗಿದೆ. ಆಗಿಂದಾಗಲೇ ತನಿಖೆ, ವಿಚಾರಣೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗಿದ್ದರೆ ನ್ಯಾಯ ಸಂದಂತೆ ಆಗುತ್ತಿತ್ತು. ಇದೀಗ ಸಂತ್ರಸ್ತರೂ ಪ್ರಕರಣವನ್ನು ಮರೆತಿರಬಹುದು; ಆರೋಪಿಗಳಂತೂ ಹೇಗೂ ಮರೆತು ಮುಂದೆ ಹೋಗಿದ್ದಾರೆ. ಸಂತ್ರಸ್ತ- ಆರೋಪಿಗಳಿಬ್ಬರಿಗೂ ಬೇಡವಾದ ಪ್ರಕರಣಕ್ಕೆ ಮರುಜೀವ ಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹಳೆಯ ಪ್ರಕರಣಗಳಿಗೆ ಮರುಜೀವ ಕೊಟ್ಟು, ಸಂತ್ರಸ್ತರಿಗೆ ನ್ಯಾಯ ಒದಗಿಸುವುದೇ ಇವರ ನಿಜವಾದ ಉದ್ದೇಶವಾಗಿದ್ದರೆ, ಇದಕ್ಕಿಂತಲೂ ಗಂಭೀರವಾದ ಪ್ರಕರಣಗಳಿವೆ. ಅನೇಕ ಕೊಲೆ ಪ್ರಕರಣಗಳು, ವಂಚನೆಗಳ ಕಡತಗಳು ಕಾಲದ ಪ್ರವಾಹದಲ್ಲಿ ಮುಚ್ಚಿಹೋಗಿವೆ. ಅವುಗಳನ್ನು ಕೈಗೆತ್ತಿಕೊಳ್ಳಬಹುದು. ಹೀಗೆ ಕೇಸ್‌ ರಿಓಪನ್‌ ಮಾಡುವಾಗ ಹಿಂದೂ ಕಾರ್ಯಕರ್ತರ ಪ್ರಕರಣವೇ ಪೊಲೀಸರ ಕೈಗೆ ಸಿಕ್ಕಿದ್ದೂ ಒಂದು ಚೋದ್ಯವೇ ಸರಿ! ಯಾವುದೇ ಕಾಂಗ್ರೆಸ್‌ ಕಾರ್ಯಕರ್ತನೂ ಹಳೆಯ, ಇತ್ಯರ್ಥವಾಗದ ಯಾವ ಪ್ರಕರಣದಲ್ಲೂ ಇಲ್ಲ ಎಂದು ಪೊಲೀಸರು ಎದೆ ತಟ್ಟಿಕೊಂಡು ಹೇಳಲಿ. 31 ವರ್ಷಗಳ ಬಳಿಕ ಪ್ರಕರಣ ರಿಓಪನ್ ಎಂದರೆ ಇಷ್ಟು ವರ್ಷ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಯೂ ಬರುತ್ತದೆ.

ಹಾಗೇ ʼಹಳೆಯ ಪ್ರಕರಣಗಳ ವಿಲೇವಾರಿʼಗೆ ಆರಿಸಿಕೊಂಡಿರುವ ಸಮಯವೂ ಸರಿಯಾಗಿಲ್ಲ. ಈ ಪ್ರಕರಣದ ಆರೋಪಿಗಳು ಕರಸೇವಕರಾಗಿರುವುದು, ಹಿಂದೂ ಕಾರ್ಯಕರ್ತರಾಗಿರುವುದು ಹಾಗೂ ಇದೀಗ ದೇಶಾದ್ಯಂತ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ- ಲೋಕಾರ್ಪಣೆಯ ಸಂಭ್ರಮ ಹಬ್ಬಿರುವುದು ಏಕಕಾಲಕ್ಕೆ ಆಗಿದೆ. ಇದು ಕಾಕತಾಳೀಯವೋ ಉದ್ದೇಶಪೂರ್ವಕವೋ ಎಂಬುದು ಮುಖ್ಯಮಂತ್ರಿಗಳು, ಗೃಹ ಸಚಿವರು, ಕಡತ ತೆರೆದ ಪೊಲೀಸರಿಗಷ್ಟೇ ಗೊತ್ತಿರಬಹುದು. ಆದರೆ ಇದು ಉದ್ದೇಶಪೂರ್ವಕ ಎನ್ನುವುದು ವಿಪಕ್ಷಗಳ ಆರೋಪ. ಹೀಗಾಗಿಯೇ ಅದು ಇದೇ ಸಂದರ್ಭವನ್ನು ಬಳಸಿಕೊಂಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಈಗಾಗಲೇ ಬಿಜೆಪಿಯು ಪ್ರಸ್ತುತ ಸರ್ಕಾರವನ್ನು ʼಹಿಂದೂ ವಿರೋಧಿ ಸರ್ಕಾರʼ ಎಂದು ಕರೆದಿದೆ. ಸರ್ಕಾರದ ಹಲವು ನಡೆಗಳು ಅದಕ್ಕೆ ಪೂರಕವಾಗಿಯೇ ಕಾಣಿಸುತ್ತಿವೆ. ಈ ಅಪಖ್ಯಾತಿಯನ್ನು ಪ್ರಸ್ತುತ ಪ್ರಕರಣ ಮತ್ತಷ್ಟು ವಿಸ್ತರಿಸಲಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಊಹೆಗೂ ಮೀರಿದ ವಿದ್ಯಾರ್ಥಿಗಳ ಕ್ರೌರ್ಯ, ಈಗಲೇ ತಿದ್ದದಿದ್ದರೆ ಮುಂದಿದೆ ಆಪತ್ತು

Exit mobile version