Site icon Vistara News

ವಿಸ್ತಾರ ಸಂಪಾದಕೀಯ: ಟೊಮೆಟೊ ಬೆಲೆ ಗಗನಕ್ಕೆ; ಇದು ದಾಸ್ತಾನು ಅವ್ಯವಸ್ಥೆಯ ಫಲ

Tomato

ಟೊಮೆಟೊ ದರ ಗಗನಕ್ಕೇರಿದೆ. ಟೊಮೆಟೊ ಮಾರುವ ಅಂಗಡಿಗೆ ಬೌನ್ಸರ್ ನೇಮಿಸಬೇಕಾದ, ಹೊಲಕ್ಕೆ ಝಡ್‌ ಪ್ಲಸ್‌ ಮಾದರಿಯ ಭದ್ರತೆ ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ! ಹಲವು ಕಡೆ ರೈತರು ಹೊಲದಲ್ಲೇ ಟೆಂಟ್ ಹಾಕಿಕೊಂಡು ಕಾವಲು ಕಾಯುತ್ತಿದ್ದಾರೆ. ಟೊಮೆಟೊ ಇಲ್ಲದೆ ಅಡುಗೆ ಮನೆಯಲ್ಲಿ ಹಾಹಾಕಾರ ಎದ್ದಿದೆ! ಹಲವು ಕಡೆ ಟೊಮೆಟೊ ತುಂಬಿಸಿದ ಗಾಡಿಗಳನ್ನು ಅಪಹರಿಸಿದ, ಟೊಮೆಟೊಗಾಗಿ ಹಲ್ಲೆ ನಡೆದ ಪ್ರಸಂಗಗಳೂ ವರದಿಯಾಗಿವೆ. ಟೊಮೊಟೊಗೆ ಚಿನ್ನದ ದರ ಬಂದಿದೆ. ಕೋಲಾರದ ರೈತ ಸಹೋದರರಿಬ್ಬರು 2000 ಬಾಕ್ಸ್ ಟೊಮೆಟೊ ಮಾರಿ 38 ಲಕ್ಷ ರೂ. ಸಂಪಾದಿಸಿದ್ದಾರೆ. ಟೊಮೆಟೊ ದರದ ಬಿಸಿ ದೇಶಾದ್ಯಂತ ತಟ್ಟಿದೆ. ಕೇಂದ್ರ ಸರ್ಕಾರ ಕೂಡ ಈ ದರ ಬಿಕ್ಕಟ್ಟು ನಿಭಾಯಿಸಲು ಮಧ್ಯ ಪ್ರವೇಶ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಟೊಮೆಟೊ ಮಾತ್ರವಲ್ಲ, ಹಲವು ತರಕಾರಿಗಳ ದರವೂ ಆಗಾಗ ಆಕಾಶಕ್ಕೆ-ಪಾತಾಳಕ್ಕೆ ಏರಿಳಿಯುತ್ತಿರುತ್ತದೆ. ಈಗಂತೂ ಬೆಲೆ ಏರಿಕೆಯದೇ ಕಾಲ. ಈರುಳ್ಳಿ, ಆಲೂಗಡ್ಡೆ, ಶುಂಠಿ, ಮೆಣಸು ದರ ಕೂಡ ಏರಿವೆ. ಇದರಲ್ಲಿ ಹವಾಮಾನ ವೈಪರೀತ್ಯದ ಪಾತ್ರವೂ ಇರಬಹುದು. ಈ ವರ್ಷ ಸೂಕ್ತ ಕಾಲದಲ್ಲಿ ಮುಂಗಾರು ಆರಂಭವಾಗಲಿಲ್ಲ. ಇದರಿಂದ ಬಿತ್ತನೆಯೂ ವಿಳಂಬವಾಗಿದೆ. ತರಕಾರಿ ಬೆಳೆಯುವವರು ಅನೇಕ ಕಡೆ ಬಿತ್ತನೆಯನ್ನೇ ಮಾಡಿಲ್ಲ. ಇದು ತರಕಾರಿಗಳ ಬೆಲೆ ಏರಿಕೆಯಲ್ಲಿ ಪರ್ಯವಸಾನಗೊಂಡಿದೆ. ಮುಖ್ಯವಾಗಿ ಟೊಮೆಟೊ, ಶೀಘ್ರ ಬೆಲೆಯೇರಿಕೆ- ಇಳಿಕೆಗೆ ಹೆಸರುವಾಸಿ. ಬೇಗನೆ ಹಾಳಾಗುವ ಇದನ್ನು ಕಾಪಾಡಿಕೊಳ್ಳಲು ಸೂಕ್ತ ವ್ಯವಸ್ಥೆ ರೈತರ ಬಳಿ ಇಲ್ಲ. ದೊಡ್ಡ ಪ್ರಮಾಣದಲ್ಲಿ ಇದನ್ನು ಬೆಳೆಯುವವರು ಕೂಡ ತಮ್ಮ ಹೊಲಗಳಲ್ಲಿ ಶೀತಲೀಕೃತ ದಾಸ್ತಾನು ವ್ಯವಸ್ಥೆ ಇಟ್ಟುಕೊಂಡಿರುವುದಿಲ್ಲ. ಯಾಕೆಂದರೆ ಇದು ಕಟಾವು ಮಾಡಿದ ಕೂಡಲೇ ಮಾರಾಟ ಮಾಡುವ ಬೆಳೆ. ಅದಕ್ಕೆ ತಕ್ಕಂತೆ ರೈತ- ಮಧ್ಯವರ್ತಿ- ವ್ಯಾಪಾರಿ ವ್ಯವಸ್ಥೆಯೂ ಹೆಚ್ಚಿನ ಕಡೆ ಇದೆ. ಎಪಿಎಂಸಿಗಳು ಇದ್ದಲ್ಲಿ ನೇರ ಮಾರಾಟ ವ್ಯವಸ್ಥೆಯಿದ್ದರೂ, ಬೆಳೆ ಕಡಿಮೆ ಬಂದಾಗ ಬೆಲೆ ಏರುವುದು ಸಹಜ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಬಡತನ ನಿರ್ಮೂಲನೆಗೆ ವಿಶ್ವ ಸಂಸ್ಥೆ ಶ್ಲಾಘನೆ, ಇನ್ನಷ್ಟು ಹಾದಿ ಕ್ರಮಿಸಬೇಕಿದೆ

ಸೂಕ್ತ ವೈಜ್ಞಾನಿಕ ದಾಸ್ತಾನು ವ್ಯವಸ್ಥೆ ಇಲ್ಲದಿರುವುದರ ಫಲವೂ ಟೊಮೆಟೊ ಮತ್ತಿತರ ತರಕಾರಿಗಳ ದರ ಏರಿಕೆಯಲ್ಲಿ ಪ್ರತಿಫಲಿಸಿದೆ. ಶೀತಲೀಕೃತ ಸಂಗ್ರಹಾಗಾರಗಳ ವ್ಯವಸ್ಥೆ ಎಲ್ಲ ಕಡೆ ಲಭ್ಯವಾಗಬೇಕು ಎಂದು ಹೇಳುತ್ತಲೇ ಬರಲಾಗಿದೆ. ಆದರೆ ಅದು ಬೆಳೆಗಾರರಿಗೆ ದಕ್ಕಿಲ್ಲ. ಅನೇಕ ಸಲ ಬೆಳೆ ಹೆಚ್ಚಾಗಿ ಬಂದು ಬೆಲೆಯೇ ಇಲ್ಲದೆ ಹೋದಾಗ, ಟೊಮೆಟೊವನ್ನು ರೈತರು ಬೀದಿಗೆ ಎಸೆಯಬೇಕಾದ ಸನ್ನಿವೇಶ ಎದುರಾದುದೂ ಉಂಟು. ಇಲ್ಲಿ ರೈತರೂ ಗ್ರಾಹಕರೂ ಬಲಿಪಶುಗಳಾಗುತ್ತಾರೆ. ಸೂಕ್ತ ಸಂಗ್ರಹಾಗಾರಗಳ ವ್ಯವಸ್ಥೆ ಇದ್ದಾಗ ಅವುಗಳನ್ನು ಕೆಡದಂತೆ ಇರಿಸಿಕೊಳ್ಳಬಹುದು ಮಾತ್ರವಲ್ಲ, ಇದರಿಂದ ಬೆಲೆ ನಿಯಂತ್ರಣವೂ ಸಾಧ್ಯವಾಗುತ್ತದೆ. ತರಕಾರಿ ಹಾಗೂ ಹಣ್ಣುಗಳು ಬೇಗನೆ ಹಾಳಾಗಬಲ್ಲಂಥ ಸಾಮಗ್ರಿಗಳು. ಇವುಗಳನ್ನು ದಿನದ ಲೆಕ್ಕಾಚಾರದಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಅನೇಕ ಸಲ ಯಾವುದೇ ಸ್ಟೋರೇಜ್‌ ವ್ಯವಸ್ಥೆ ಇಲ್ಲದೆ ಭಾರ ಪ್ರಮಾಣದ ಬೆಳೆಗಳು ಹಾಳಾಗಿವೆ. ಇದಕ್ಕೆ ತಡೆ ಹಾಕಲು ಸೂಕ್ತ ಮೂಲಸೌಕರ್ಯ ಬೇಕಿದೆ.

ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಟೊಮೆಟೋವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದೀಗ ಬೆಲೆಯೇರಿಕೆಯ ಹೊಡೆತ ಎಲ್ಲ ಕಡೆ ಆಗಲಿದೆ. ಈರುಳ್ಳಿ ಕೂಡ ಹೀಗೆಯೇ ಆತಂಕ ಸೃಷ್ಟಿಸುವ ಬೆಳೆ. ಭಾರತದ ಎಲ್ಲರ ಮನೆಯ ಅಡುಗೆಗೆ ಅತ್ಯಗತ್ಯವಾಗಿರುವ ಈ ಎರಡು ತರಕಾರಿಗಳಿಗೆ ಸಮರ್ಪಕ ಸಂಗ್ರಹ ವ್ಯವಸ್ಥೆಯನ್ನು ಸಮರೋಪಾದಿಯಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳು ಕೈಗೊಳ್ಳಬೇಕು. ಎಲ್ಲ ತರಕಾರಿ, ಧಾನ್ಯಗಳಿಗೂ ಇದು ಅಗತ್ಯ. ಹವಾಮಾನ ವೈಪರೀತ್ಯವಂತೂ ಇನ್ನು ಮುಂದೆ ಪ್ರತಿ ವರ್ಷ ಸೃಷ್ಟಿಯಾಗಲಿದೆ ಎಂಬಂತಿದೆ. ಇದು ದಾರುಣ ಪರಿಣಾಮ ಬೀರುವ ಮೊದಲೇ ನಾವು ಎಚ್ಚೆತ್ತುಕೊಳ್ಳಬೇಕಿದೆ.

ಇನ್ನಷ್ಟು ವಿಸ್ತಾರ ನ್ಯೂಸ್ ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version