ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ, ಪಕ್ಷದ ಸೂಚನೆಗಳಿಗೆ ನಿರುತ್ಸಾಹ ತೋರುವುದರ ಕುರಿತು ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಆಕ್ರೋಶಗೊಂಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾನುವಾರ ಈ ಕುರಿತು ಖಾರವಾಗಿ ಮಾತನಾಡಿದ್ದಾರೆ.
ಭಾನುವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 40 ಕ್ಕೂ ಹೆಚ್ಚು ಶಾಸಕರು ಗೈರಾಗಿದ್ದರು. ಹಾಜರಿದ್ದವರೂ ಆಸಕ್ತಿಯಿಂದ ಭಾಗವಹಿಸದೇ ಇದ್ದದ್ದನ್ನು ಕಂಡು ಸುರ್ಜೆವಾಲ ಗರಂ ಆಗಿದ್ದಾರೆ. ಅನೇಕ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ನಡಿಗೆ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದು, ಸದಾ ಬೆಂಗಳೂರಿಗೆ ಆಗಮಿಸುವುದಕ್ಕೆ ಕೆಲವು ಶಾಸಕರು ಆನಾಸಕ್ತಿ ತೋರಿದ್ದಾರೆ ಎನ್ನಲಾಗಿದೆ.
ಅಂಜಲಿ ನಿಂಬಾಳ್ಕರ್ ಹೊರತುಪಡಿಸಿ ಬೆಳಗಾವಿ ಕಾಂಗ್ರೆಸ್ ಶಾಸಕರು ಗೈರಾಗಿದ್ದರು, ಎಂಎಲ್‌ಸಿ ನಜೀರ್ ಅಹ್ಮದ್ ಹೊರತುಪಡಿಸಿ ಕೋಲಾರದ ಎಲ್ಲ ಶಾಸಕರೂ ಗೈರಾಗಿದ್ದರು. ಇದು ತುರ್ತು ಸಭೆಗೆ ಆಗಿರುವುದರಿಂದ ಕೆಲ ಶಾಸಕರು ಬಂದಿಲ್ಲ ಎಂದು ಸಭೆಯಲ್ಲಿ ರಾಜ್ಯ ನಾಯಕರು ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ ಇದಕ್ಕೆ ಸುರ್ಜೆವಾಲ ಒಪ್ಪಲಿಲ್ಲ.
ಪಾರ್ಟಿ ಫಸ್ಟ್ – ಪರ್ಸನಲ್ ನೆಕ್ಸ್ಟ್ ಎಂದು ಆಂಗ್ಲ ಭಾಷೆಯಲ್ಲೇ ಸ್ಪಷ್ಟನೆ ನೀಡಿದ ಸುರ್ಜೆವಾಲ, ಪಕ್ಷಕ್ಕೆ ನಾನು ಸೇರಿದಂತೆ ಯಾರೂ ಅನಿವಾರ್ಯವಲ್ಲ. ಪಕ್ಷದ ಸಿದ್ಧಾಂತ ಮೇಲೆ ಕೆಲಸ ಮಾಡಿ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ದೂರ ಇಟ್ಟು ಪಕ್ಷ ಸಂಘಟನೆ ಕೆಲಸ ಮಾಡಿ ಎಂದರು.
ತಾವೂ ವೈಯಕ್ತಿಕ ಬದುಕನ್ನು ಬದಿಗೊತ್ತಿ ಇಲ್ಲಿ ಪಕ್ಷ ಸಂಘಟನೆಗೆ ಬಂದಿದ್ದಾಗಿ ಉದಾಹರಣೆ ಸಮೇತ ವಿವರಿಸಿದ ಸುರ್ಜೆವಾಲ, ನನ್ನ ಮಗ ವಿದೇಶದಿಂದ ಬಂದಿದ್ದಾನೆ. ನಾಲ್ಕು ವರ್ಷದ ನಂತರ ಆತ ಮನೆಗೆ ಬಂದಿದ್ದಾನೆ. ಆತನ ಜತೆ ಕೇವಲ ಎರಡು ಗಂಟೆ ಕಾಲ ಕಳೆದಿದ್ದೇನೆ ಎಂದರು. ಆಗಸ್ಟ್ 15 ರಂದು ಫ್ರೀಡಂ ವಾಕ್‌ಗೂ ಮುನ್ನ ವಿದೇಶದಲ್ಲಿದ್ದೆ. ಇನ್ನೂ ಚಿಕಿತ್ಸೆ ಪಡೆಯಬೇಕಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದೆ ಎಂದು ತಮ್ಮದೇ ಉದಾಹರಣೆಯನ್ನು ನೀಡಿದರು.
ದೇಶದ ಕಾಂಗ್ರೆಸ್‌ಗೆ ರಾಜ್ಯದಿಂದಲೇ ಶಕ್ತಿ ತುಂಬಬೇಕು. ಇಲ್ಲಿಂದಲೇ ಕಾಂಗ್ರೆಸ್‌ಗೆ ಗೆಲುವಿನ ಉತ್ಸಾಹ ಆರಂಭವಾಗಬೇಕು. ಆ ಕೆಲಸ ನಿಮ್ಮಿಂದ ಆಗಬೇಕಿದೆ. ಕಾಂಗ್ರೆಸ್ ಕಟ್ಟಲು ತಮ್ಮ ವೈಯಕ್ತಿಕ ಆಸೆಗಳನ್ನು ಪಕ್ಕಕ್ಕೆ ಇಡಿ. ಚುನಾವಣಾ ಸಮಯದಲ್ಲಿ ಮಾತ್ರ ಆಕ್ಟಿವ್ ಆಗಬೇಡಿ. ನಮಗೆ ಸೋಲೇ ಗೊತ್ತಿಲ್ಲ, ಗೆದ್ದೇ ಗೆಲ್ಲುತ್ತೇವೆ ಎನ್ನುವ ಅಹಂ ಬೇಡ. ಸೋಲುವ ಕ್ಷೇತ್ರ ಗೆಲ್ಲೋದು, ಗೆಲ್ಲುವ ಕ್ಷೇತ್ರದಲ್ಲಿ ಸೋಲುವುದನ್ನು ನಾವು ನೋಡಿದ್ದೇವೆ. ಎಲ್ಲವೂ ನಮ್ಮಿಂದಲೇ ಎನ್ನುವ ಭಾವನೆ ಬೇಡ ಎಂದು ಎರಡೂ ಬಣಗಳಿಗೆ ಎಚ್ಚರಿಕೆ ನೀಡಿದರು.
ಚುನಾವಣಾ ವರ್ಷ ಆಗಿರುವುದರಿಂದ ಒಗ್ಗಟ್ಟಿನಿಂದ ಕೆಲಸ ಮಾಡಿ. ಪಕ್ಷ ಗೆದ್ದರೆ ನೀವು ಗೆದ್ದಂತೆ. ನೀವು ಗೆದ್ದು ಪಕ್ಷ ಸೋತರೆ ನೀವು ಗೆದ್ದರೂ ಸೋತಂತೆಯೇ ಎಂಬುದನ್ನು ನೆನಪಿಡಿ ಎಂದು ತಿಳಿಸಿದ್ದಾಗಿ ಸಭೆಯಲ್ಲಿದ್ದ ಪ್ರಮುಖರೊಬ್ಬರು ಮಾಹಿತಿ ನೀಡಿದ್ದಾರೆ.
350ಕ್ಕೂ ಹೆಚ್ಚು ಪದಾಧಿಕಾರಿಗಳ ಪಟ್ಟಿ ತಿರಸ್ಕಾರ
ಪಕ್ಷದ ವಿವಿಧ ಹುದ್ದೆಗಳಿಗೆ ನೇಮಕ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ್ದ 350ಕ್ಕೂ ಹೆಚ್ಚು ಜನರ ಪಟ್ಟಿಯನ್ನು ರಣದೀಪ್‌ಸಿಂಗ್ ಸುರ್ಜೆವಾಲ ತಿರಸ್ಕರಿಸಿದ್ದಾರೆ. ಈ ಕುರಿತು ಪಕ್ಷದ ಮೂಲಗಳಿಂದ ಮಾಹಿತಿ ಲಭಿಸಿದೆ. ಕಾರ್ಯಕರ್ತರ ಪಟ್ಟಿ ಕೊಟ್ಟು ಇದನ್ನು ಫೈನಲ್ ಮಾಡಿಸಿ ಎಂದು ಶಿವಕುಮಾರ್ ಕೇಳಿದರು. ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವವರು ಬೇಕಿದ್ದಾರೆ. ವಿಸಿಟಿಂಗ್ ಕಾರ್ಡ್ ಪಡೆದು ವಿಧಾನಸೌಧ ಹಾಗು ನಾಯಕರ ಮನೆಗಳಿಗೆ ರೌಂಡ್ಸ್ ಹೊಡೆಯುವ ನಾಯಕರು ಬೇಕಿಲ್ಲ. ಪಕ್ಷದ ಸಿದ್ದಾಂತಕ್ಕೆ ಬದ್ಧರಾಗಿರುವ 150 ಜನರ ಪಟ್ಟಿ ಕೊಡಿ, ಹಗಲು ರಾತ್ರಿ ಕೆಲಸ ಮಾಡುವವರ ಪಟ್ಟಿ ಕೊಡಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.