Site icon Vistara News

ವಿಸ್ತಾರ Explainer: ಮರಳಿ ಸುದ್ದಿಯಲ್ಲಿರುವ ಲೋಕಾಯುಕ್ತ; ಎಷ್ಟಿದೆ ಇದರ ಅಧಿಕಾರ, ಆಳ ಮತ್ತು ಅಗಲ?

lokayukta

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಯ ಮೇಲಿನ ಲೋಕಾಯುಕ್ತ ದಾಳಿ (Lokayukta Raid) , ಅಲ್ಲಿ ಸಿಕ್ಕಿದ ಎಂಟು ಕೋಟಿ ರೂಪಾಯಿ ಅಕ್ರಮ ಹಣಕಾಸು ಪ್ರಕರಣ ಇದೀಗ ಲೋಕಾಯುಕ್ತದ ಮುಂದೆ ವಿಚಾರಣೆಯ ಪ್ರಕ್ರಿಯೆಯಲ್ಲಿದೆ. ಚುನಾವಣೆಗೆ ಮುನ್ನ ನಡೆದ ಈ ಘಟನೆ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕವನ್ನು ಕಂಗೆಡಿಸಿದೆ ಕೂಡ.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ನ ಅಧ್ಯಕ್ಷರೂ ಆಗಿದ್ದರು. ಅವರ ಪುತ್ರ ಪ್ರಶಾಂತ್‌ ಮಾಡಾಳು ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯ ಹಣಕಾಸು ಸಲಹೆಗಾರರಾಗಿದ್ದರು. ಇದೀಗ, ತಮಗೆ ಬೇಕಾದವರಿಗೆ ಟೆಂಡರ್‌ ನೀಡಲು ದೊಡ್ಡ ಮೊತ್ತದ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಇದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ʼʼಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಶಿಥಿಲಗೊಳಿಸಿದ್ದ ಲೋಕಾಯುಕ್ತವನ್ನು ನಮ್ಮ ಪಕ್ಷವೇ ಮರಳಿ ತಂದಿದೆ. ಕಾಂಗ್ರೆಸ್‌ನ ಅವಧಿಯಲ್ಲಿ ಎಷ್ಟೋ ಭ್ರಷ್ಟಾಚಾರ ಪ್ರಕರಣಗಳು ಹಾಗೆಯೇ ಮುಚ್ಚಿಹೋಗಿದ್ದವುʼʼ ಎಂದು ಆರೋಪಿಸಿದ್ದಾರೆ. ʼʼಲೋಕಾಯುಕ್ತ ಸ್ವಾಯತ್ತ ಸಂಸ್ಥೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆʼʼ ಎಂದಿದ್ದಾರೆ.

ಲೋಕಾಯುಕ್ತ ಎಷ್ಟು ಸ್ವಾಯತ್ತ?

ಹೌದೆ? ಲೋಕಾಯುಕ್ತ ಅಷ್ಟೊಂದು ಸ್ವಾಯತ್ತವೇ? ಲೋಕಾಯುಕ್ತ ಎಂದರೇನು?

ಕೇಂದ್ರದ ಲೋಕಪಾಲ್‌ನ ಸಮಾನಾಂತರ ಸಂಸ್ಥೆಗಳು ರಾಜ್ಯದ ಲೋಕಾಯುಕ್ತಗಳು. ಲೋಕಪಾಲ್‌ ಮತ್ತು ಲೋಕಾಯುಕ್ತ ಕಾಯಿದೆ- 2013 ಹೇಳುವಂತೆ ʼʼಪ್ರತಿ ರಾಜ್ಯವೂ ಆಯಾ ರಾಜ್ಯದಲ್ಲಿ ಅಲ್ಲಿನ ಶಾಸನಸಭೆಯಲ್ಲಿ ರೂಪಿಸಲಾದ ಕಾಯಿದೆಯಡಿ ಕಾರ್ಯಾಚರಿಸುವ ಸಂಸ್ಥೆಯನ್ನು ಈ ಕಾಯಿದೆ ಬಂದ ಒಂದು ವರ್ಷದ ಒಳಗಾಗಿ ಸ್ಥಾಪಿಸಬೇಕು. ಅದು ಅಲ್ಲಿನ ಸಾರ್ವಜನಿಕ ಆಡಳಿತಗಾರರ ಮೇಲೆ ಬರುವ ಭ್ರಷ್ಟಾಚಾರದ ದೂರುಗಳನ್ನು ತನಿಖೆಗೊಳಪಡಿಸಬೇಕು.ʼʼ

ಇದನ್ನು ಲೋಕಪಾಲ್‌ ಹೇಳಿದ್ದು 2013ರಲ್ಲಿ. ಪ್ರತಿ ರಾಜ್ಯದಲ್ಲೂ ಲೋಕಾಯುಕ್ತವನ್ನು ಕಡ್ಡಾಯಗೊಳಿಸುವುದು ಅದರ ಗುರಿಯಾಗಿತ್ತು. ಆದರೆ ಆಗಿನ ಪ್ರತಿಪಕ್ಷಗಳು, ಬಿಜೆಪಿಯೂ ಸೇರಿದಂತೆ, ಇದು ಒಕ್ಕೂಟ ವ್ಯವಸ್ಥೆಯ ಚೈತನ್ಯಕ್ಕೆ ವಿರುದ್ಧ ಎಂದು ಗಲಾಟೆ ಎಬ್ಬಿಸಿದವು. ಹೀಗಾಗಿ, ಆಗ ರಚನೆಯಾದ ಕಾಯಿದೆಯು, ಲೋಕಾಯುಕ್ತ ರಚನೆಯ ಹೊಣೆಯನ್ನು ಆಯಾ ರಾಜ್ಯಗಳಿಗೆ ಬಿಟ್ಟುಬಿಟ್ಟಿತು.

ಕೇಂದ್ರದ ಲೋಕಪಾಲ್‌ ಕಾಯಿದೆ 2014ರ ಜನವರಿ ಒಂದರಂದು ರಾಷ್ಟ್ರಪತಿಗಳ ಅಂಕಿತ ಪಡೆದು ಜನವರಿ 16ರಂದು ಜಾರಿಗೆ ಬಂತು. ಈ ಕಾಯಿದೆ ಅಣ್ಣಾ ಹಜಾರೆಯಂಥವರು ಮಾಡಿದ ಲೋಕಪಾಲ್‌ ಚಳವಳಿ ಮುಂತಾದ ಹಲವಾರು ಹೋರಾಟಗಳ ಫಲವಾಗಿತ್ತು.

ಈ ಕಾಯಿದೆಯಿಂದಾಗಿ ಆಗಿದ್ದು ಎಂದರೆ ಲೋಕಪಾಲ್‌ ಸೃಷ್ಟಿ. ಇದರ ಅಧ್ಯಕ್ಷರು ದೇಶದ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ, ಅಥವಾ ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವ ಉನ್ನತ ಹುದ್ದೆಯ ವ್ಯಕ್ತಿಯಾಗಿರಬೇಕು. ಇದು 8 ಸದಸ್ಯರನ್ನು ಹೊಂದಿರಬೇಕು. ಇವರು ನ್ಯಾಯಾಂಗದವರಾಗಿರಬೇಕು. ಇದರಲ್ಲಿ 50% ಸದಸ್ಯರು ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ವರ್ಗ ಮತ್ತು ಮಹಿಳೆಯರಾಗಿರಬೇಕು. ಆದರೆ ಸದ್ಯಕ್ಕೆ ಕೇಂದ್ರದ ಲೋಕಾಯುಕ್ತ ಸಕ್ರಿಯವಾಗಿಲ್ಲ. ನಾಮಕಾವಸ್ಥೆ ಎಂಬಂತಿದೆ.

ಕರ್ನಾಟಕದ ಮಾದರಿ

ಈ ಕಾಯಿದೆ ಜಾರಿಗೆ ಬಂದಾಗ ಆಗಲೇ ಹಲವು ರಾಜ್ಯಗಳಲ್ಲಿ ಲೋಕಾಯುಕ್ತವಿತ್ತು ಮತ್ತು ಚುರುಕಾಗಿಯೇ ಅವು ಕಾರ್ಯ ನಿರ್ವಹಿಸುತ್ತಿದ್ದವು. ಮಧ್ಯಪ್ರದೇಶ ಹಾಗೂ ಕರ್ನಾಟಕಗಳಲ್ಲಿತ್ತು. ಲೋಕಪಾಲ್‌ ಕಾಯಿದೆ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದ ಬಳಿಕ ಇಂದು ಎಲ್ಲ ರಾಜ್ಯಗಳಲ್ಲೂ ಲೋಕಾಯುಕ್ತ ಸೃಷ್ಟಿಯಾಗಿದೆ. ಆದರೆ ಚುರುಕಾಗಿರುವುದು ಕೆಲವೇ ಕಡೆ ಮಾತ್ರ.

ನ್ಯಾ.ಎನ್‌ ವೆಂಕಟಾಚಲ

ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ, ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ವಿಧೇಯಕವನ್ನು ವಿಧಾನಸಭೆಯಲ್ಲಿ (1983) ಮಂಡಿಸಲಾಯಿತು. ಅದು ಅವರ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ-1984 ಜಾರಿಗೆ ಬಂದದ್ದು 1986, ಜನವರಿ 15ರಂದು. ಸಾರ್ವಜನಿಕ ಆಡಳಿತದ ಗುಣಮಟ್ಟವನ್ನು ಉತ್ತಮಗೊಳಿಸುವುದು, ಆಡಳಿತಗಾರರ ಭ್ರಷ್ಟಾಚಾರ ಪತ್ತೆ ಹಚ್ಚುವುದು ಮತ್ತು ತನಿಖೆಗೊಳಪಡಿಸುವುದು ಇದರ ಗುರಿ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಶಿಸ್ತಿಗೆ ಶಿಕ್ಷೆ ಕೂಡ ಇದರ ವ್ಯಾಪ್ತಿ. 1908ರ ಕೋಡ್‌ ಆಫ್‌ ಸಿವಿಲ್‌ ಪ್ರೊಸೀಜರ್‌ ಪ್ರಕಾರ ಸರ್ಚ್‌ ವಾರಂಟ್‌ ಹೊರಡಿಸುವ, ವಿಚಾರಣೆ ನಡೆಸುವ, ಸಿವಿಲ್‌ ಕೋರ್ಟ್‌ಗಳ ಅಧಿಕಾರ ಲೋಕಾಯುಕ್ತಕ್ಕೂ ದತ್ತವಾಗಿದೆ.

ನ್ಯಾ. ಸಂತೋಷ್‌ ಹೆಗ್ಡೆ

ಕರ್ನಾಟಕದ ಮೊದಲ ಲೋಕಾಯುಕ್ತರಾದವರು ಏ.ಡಿ. ಕೋಶಲ್. ಅವರು ಜನವರಿ 1986ರಿಂದ 1991ರವರೆಗೆ ಅಧಿಕಾರದಲ್ಲಿದ್ದರು. ಬಳಿಕ ರವೀಂದ್ರನಾಥ ಪೈ, ಅಬ್ದುಲ್ ಹಕೀಮ್ ಅವರು ಅಧಿಕಾರಕ್ಕೆ ಬಂದರು. ಕರ್ನಾಟಕದಲ್ಲಿ ಲೋಕಾಯುಕ್ತರಾಗಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ಮಾಜಿ ನ್ಯಾಯಮೂರ್ತಿಗಳಾದ ಎನ್.‌ ವೆಂಕಟಾಚಲ(2001-2006), ಸಂತೋಷ್‌ ಹೆಗ್ಡೆ (2006-2011) ಭ್ರಷ್ಟರಲ್ಲಿ ಇನ್ನಿಲ್ಲದ ನಡುಕ ಹುಟ್ಟಿಸಿದರು. ಅವರ ಆಗಮನವಾದರೆ ಸಾಕು, ಸರ್ಕಾರಿ ಅಧಿಕಾರಿಗಳು ಗಡಗಡ ನಡುಗುತ್ತಿದ್ದರು. ಇವರು ದಾಳಿ ನಡೆಸಿದ ವೇಳೆ ಬೆದರಿ ಮೂರ್ಛೆ ಹೋದ ಅಧಿಕಾರಿಗಳೂ ಇದ್ದರು. ಹಲವರು ರಾಜಕಾರಣಿಗಳಿಗೂ ಲೋಕಾಯುಕ್ತ ತನಿಖೆಯ ಬಿಸಿ ಮುಟ್ಟಿತು. ಲೋಕಾಯುಕ್ತದ ಪರಿಣಾಮಕಾರಿ ಕಾರ್ಯತಂತ್ರ, ಹೆಚ್ಚುತ್ತಿದ್ದ ಲೋಕಪಾಲ ಚಳವಳಿಯ ಬಿಸಿ ರಾಜಕಾರಣಿಗಳಿಗೂ ಮುಟ್ಟಿತು. ಬಳಿಕ ಶಿವರಾಜ್ ಪಾಟೀಲ್, ವೈ.ಭಾಸ್ಕರ್ ರಾವ್, ಪಿ. ವಿಶ್ವನಾಥ ಶೆಟ್ಟಿ, ನ್ಯಾ. ಬಿ ಎಸ್ ಪಾಟೀಲ್ ಅಧಿಕಾರ ನಿರ್ವಹಿಸಿದ್ದಾರೆ.

ಎಸಿಬಿ ರಚನೆ

ಇದರಿಂದೆಲ್ಲ ಬೆದರಿದ ರಾಜಕಾರಣಿಗಳು ಲೋಕಾಯುಕ್ತವನ್ನು ಶಿಥಿಲಗೊಳಿಸುವ ತಂತ್ರದ ಮೊರೆ ಹೋದರು. ಅಂಥ ಒಂದು ಪ್ರಯತ್ನವೆಂದರೆ 2016ರ ಮಾರ್ಚ್‌ 14ರಂದು ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ಸೃಷ್ಟಿಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ). ಭ್ರಷ್ಟಾಚಾರ ತಡೆ ಕಾಯಿದೆ-1988ರ ಬಹುತೇಕ ಎಲ್ಲಾ ಅಧಿಕಾರಗಳನ್ನು ಲೋಕಾಯುಕ್ತದಿಂದ ಎಸಿಬಿಗೆ ಸರ್ಕಾರ ವರ್ಗಾಯಿಸಿತು.

ಎಸಿಬಿ ರಚನೆಗೂ ಮುನ್ನ ಲೋಕಾಯುಕ್ತ ತನಗೆ ಬಂದ ದೂರುಗಳ ತನಿಖೆಯನ್ನು ತನ್ನದೇ ಪೊಲೀಸ್ ವಿಭಾಗದಿಂದ ಮಾಡುತ್ತಿತ್ತು. ಸಂಸ್ಥೆಗೆ 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಕಾರ ಈ ಅಧಿಕಾರ ಇತ್ತು. ಆದರೆ ಈ ಬಳಿಕ ಸಂಸ್ಥೆಗೆ ತನಿಖೆ ನಡೆಸುವ ಅಧಿಕಾರ ಇಲ್ಲವಾಯ್ತು. ಅದು ಕೇವಲ ದೂರುಗಳನ್ನು ಮಾತ್ರ ಸ್ವೀಕರಿಸಿ ಎಸಿಬಿಗೆ ತನಿಖೆ ನಡೆಸಲು ಸೂಚಿಸಬೇಕಾಯಿತು. ಇದು ಲೋಕಾಯುಕ್ತದ ಶಕ್ತಿಗುಂದಿಸಿತು. ಆದರೆ ಇತ್ತೀಚೆಗೆ ಹೈ ಕೋರ್ಟ್‌ ತೀರ್ಪಿನಿಂದಾಗಿ ಮತ್ತೆ ಲೋಕಾಯುಕ್ತಕ್ಕೆ ಕಳೆದುಹೋಗಿದ್ದ ಸ್ಥಾನಮಾನ ಮತ್ತೆ ಪ್ರಾಪ್ತವಾಗಿದೆ. 2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ (ಚಿದಾನಂದ ಅರಸ್‌ V/S ಕರ್ನಾಟಕ ರಾಜ್ಯ ಸರ್ಕಾರ) ಒಂದು ತೀರ್ಪು ನೀಡಿ, ಏಸಿಬಿಯನ್ನು ರದ್ದುಗೊಳಿಸಿ, ಲೋಕಾಯುಕ್ತದ ಅಧಿಕಾರಗಳನ್ನು ಮರುಸ್ಥಾಪಿಸಿತು.

ಲೋಕಾಯುಕ್ತ ತನಿಖೆಯ ವ್ಯಾಪ್ತಿ ಎಷ್ಟು?

ಹತ್ತು ವರ್ಷಗಳ ಅವಧಿಗೆ ಹೈಕೋರ್ಟ್‌ನ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿದ ಯಾವುದೇ ವ್ಯಕ್ತಿಯನ್ನು ಲೋಕಾಯುಕ್ತ ಮತ್ತು ಐದು ವರ್ಷ ಉಪ ಲೋಕಾಯುಕ್ತನನ್ನಾಗಿ ನೇಮಿಸಬಹುದು. ಲೋಕಾಯುಕ್ತವು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ಸಂಸ್ಥೆ. ಕರ್ನಾಟಕ ರಾಜ್ಯಪಾಲರು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ನೇಮಕ ಮಾಡಲಾಗುತ್ತದೆ. ಇವರು ಐದು ವರ್ಷಗಳ ಅಧಿಕಾರ ಹೊಂದಿರುತ್ತಾರೆ. ಇವರ ಅವಧಿಯನ್ನು ಅಗತ್ಯ ಬಿದ್ದರೆ ವಿಸ್ತರಿಸಬಹುದು.

ಇದನ್ನೂ ಓದಿ: Lokayukta raid : ಕೊನೆಗೂ ಲೋಕಾಯುಕ್ತ ಮುಂದೆ ಹಾಜರಾದ ಶಾಸಕ ಮಾಡಾಳ್‌; ಮೂರು ತಾಸು ವಿಚಾರಣೆ, ಪ್ರಶ್ನೆಗಳ ಸುರಿಮಳೆ

ಲೋಕಾಯುಕ್ತವು ಮುಖ್ಯಮಂತ್ರಿ, ಯಾವುದೇ ಸಚಿವ ಅಥವಾ ಕಾರ್ಯದರ್ಶಿ, ರಾಜ್ಯ ಶಾಸಕಾಂಗದ ಸದಸ್ಯ ಅಥವಾ ಯಾವುದೇ ಇತರ ಸಾರ್ವಜನಿಕ ಸೇವಕ (ಅಧಿಕಾರಿ) ಕೈಗೊಂಡ ಕ್ರಮಗಳ ಕುಂದುಕೊರತೆಯ ಬಗ್ಗೆ ಅಥವಾ ಅವರ ಮೇಲೆ ಬಂದ ಭ್ರಷ್ಟಾಚಾರದ ಆರೋಪವನ್ನು ತನಿಖೆ ಮಾಡಬಲ್ಲ ಅಧಿಕಾರವನ್ನು ಹೊಂದಿದೆ. 1988ರಲ್ಲಿ ಮಾಡಲಾದ ತಿದ್ದುಪಡಿಯ ಪ್ರಕಾರ, ಆರೋಪಿ ಮಾಡಿದ ಕೃತ್ಯದ ದೂರು ಆರು ತಿಂಗಳ ನಂತರ ಬಂದರೆ, ಅದನ್ನು ಸ್ವೀಕರಿಸಬೇಕಿಲ್ಲ. ಭ್ರಷ್ಟಾಚಾರದ ಕೇಸ್‌ಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು. ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದ್ದಾರೆ. ಭ್ರಷ್ಟಾಚಾರ ಅಥವಾ ದುರಾಡಳಿತದ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಬಹುದು. ಅಗತ್ಯವಿದ್ದರೆ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಉಲ್ಲೇಖಿಸುವ ಅಧಿಕಾರವನ್ನು ಹೊಂದಿದೆ. ಇದು ನೇರವಾಗಿ ರಾಜ್ಯ ಶಾಸಕಾಂಗಕ್ಕೆ ವರದಿ ಮಾಡಿಕೊಳ್ಳುತ್ತದೆ. ಯಾವುದೇ ಕಾರ್ಯಕಾರಿ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಆದರೆ ಇವರು ಶಿಕ್ಷೆ ಘೋಷಿಸುವ ಅಧಿಕಾರವನ್ನು ಹೊಂದಿಲ್ಲ.

ಈ ಹಿಂದೆ ಹಲವು ಹೈ ಪ್ರೊಫೈಲ್‌ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ಕೈಗೆತ್ತಿಕೊಂಡು ತನಿಖೆ ನಡೆಸಿ ನ್ಯಾಯ ಒದಗಿಸಿದೆ. ಅಕ್ರಮ ಗಣಿಗಾರಿಕೆ ಕುರಿತ ತನಿಕೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಂಡದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಮಾಜಿ ಸಚಿವರು ಭಾಗಿಯಾಗಿದ್ದ ಭೂ ಹಗರಣ, ವಸತಿ ಹಗರಣ, ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಅಧಿಕಾರಿಗಳ ಬಂಧನವಾಗಿದೆ. 2015ರಲ್ಲಿ ಅಂದಿನ ಲೋಕಾಯುಕ್ತರ ವಿರುದ್ಧವೇ ಅಧಿಕಾರಿಗಳಿಗೆ ಅನುಕೂಲಕರ ಹುದ್ದೆ ನೀಡಲು ಲಂಚ ಪಡೆದ ಆರೋಪ ಬಂದು, ಅವರ ರಾಜೀನಾಮೆಗೂ ಮೂಲವಾಯಿತು.

ಇದನ್ನೂ ಓದಿ: Lokayukta raid : ಮಾಡಾಳು ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ರದ್ದು ಕೋರಿ ಸು.ಕೋರ್ಟ್‌ಗೆ ಲೋಕಾಯುಕ್ತ ಮೊರೆ

Exit mobile version