ಬೆಂಗಳೂರು: ಬೆಂಗಳೂರು ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೂರನೇ ಅತಿದೊಡ್ಡ ನಗರ. ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿ ಹಬ್ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಕೋಟ್ಯಂತರ ಮಂದಿಯ ಬದುಕು ರೂಪಿಸಿದೆ. ಆದರೆ ಈಗ ಮಳೆ ಮತ್ತು ರಸ್ತೆ ಗುಂಡಿಗಳಿಂದಾಗಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತುತ್ತಾಗಿದೆ. ಮಳೆ ಮತ್ತು ರಸ್ತೆ ಗುಂಡಿಗಳು ಬೆಂಗಳೂರಿನ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡಿವೆ.
ದೇಶದಲ್ಲಿ ಅತಿಹೆಚ್ಚು ಬಹುರಾಷ್ಟ್ರೀಯ ಕಂಪನಿಗಳನ್ನು ಹೊಂದಿರುವ ಈ ಮೂರನೇ ದೊಡ್ಡ ನಗರಕ್ಕೆ ಉದ್ಯೋಗವನ್ನರಸಿ ಬಂದವರೆಷ್ಟೋ. ನಗರದಲ್ಲಿರುವ ಜನಸಂಖ್ಯೆಯಲ್ಲಿ 3ನೇ 2 ಭಾಗ ವಲಸಿಗರೇ ಇದ್ದು, ಐಟಿ ಕ್ಷೇತ್ರದಿಂದಲೇ 1.8 ಲಕ್ಷ ಕೋಟಿ ರೂ.ಗಳ ವಾರ್ಷಿಕ ಆದಾಯವನ್ನು ಈ ನಗರ ಸೃಷ್ಟಿಸಿಕೊಳ್ಳುತ್ತಿದೆ. ದಕ್ಷಿಣ ಭಾರತದಲ್ಲೇ ಅತಿದೊಡ್ಡ ಹಾಗೂ ವಿಶ್ವದಲ್ಲಿ 27ನೇ ಅತಿದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾದ ಬೆಂಗಳೂರು, ಬೆಳವಣಿಗೆ ಹೊಂದಿದ ಪರಿ ನಿಜಕ್ಕೂ ಬೆರಗು!
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡುತ್ತಾ, ದೇಶವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾರಣದಿಂದಲೇ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದೂ ಕರೆಯಲಾಗುತ್ತಿದೆ. ದೇಶದಲ್ಲಿ 107 ಯೂನಿಕಾರ್ನ್‌ಗಳು ಅಂದರೆ 1 ಶತಕೋಟಿ ಡಾಲರ್‌ವರೆಗಿನ ವಹಿವಾಟು ನಡೆಸುವ ನವೋದ್ಯಮಗಳ ಪೈಕಿ ಅತಿಹೆಚ್ಚು ಯೂನಿಕಾರ್ನ್‌ಗಳಿರುವುದು ಕೂಡ ಬೆಂಗಳೂರಿನಲ್ಲೇ. ಹೀಗೆ ತಾಂತ್ರಿಕವಾಗಿ ನವೋದ್ಯಮಗಳಿಗೆ ಬುನಾದಿಯಾಗಿ ನಿಂತು, ಬೆಳವಣಿಗೆಯತ್ತ ಸಾಗುತ್ತಿರುವ ಬೆಂಗಳೂರು ವರ್ಲ್ಡ್ ಇನ್ಫೋಟೆಕ್ ಕ್ಯಾಪಿಟಲ್ ಎಂಬ ಬಿರುದನ್ನು ಮುಡಿಗೇರಿಸಿಕೊಳ್ಳಲು ನಾಗಾಲೋಟ ಆರಂಭಿಸಿದೆ. ಹಾಗಾಗಿಯೇ ಇಡೀ ವಿಶ್ವದ ಚಿತ್ತ ಬೆಂಗಳೂರಿನತ್ತ ನೆಟ್ಟಿದ್ದು, ವಿಶ್ವದ ಅನೇಕ ರಾಷ್ಟ್ರಗಳು ಬೆಂಗಳೂರಿನ ಸಂಸ್ಥೆಗಳಲ್ಲಿ ಹೂಡಿಕೆ ಮಾಡೋದಕ್ಕೆ ನಾ ಮುಂದು, ತಾ ಮುಂದು ಎಂತಿವೆ.
ಯುನಿಕಾರ್ನ್‌ಗಳಿರುವ ಅಗ್ರ 5 ನಗರಗಳು
ಬೆಂಗಳೂರು 39
ಮುಂಬೈ 16
ಗುರುಗಾಂವ್ 15
ದಿಲ್ಲಿ 10
ನೋಯ್ಡಾ 74
ಆದರೆ ಬೆಂಗಳೂರಿನಲ್ಲಾದ ಮಳೆ ವಿಶ್ವ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕುವಂತೆ ಮಾಡಿದೆ! ರಾಜ್ಯ ರಾಜಧಾನಿ ಎಂಥ ದೊಡ್ಡ ಅವ್ಯವಸ್ಥೆಗಳ ಆಗರವಾಗಿದೆ ಎನ್ನುವುದನ್ನು ಮಳೆ ಬಟಾಬಯಲು ಮಾಡಿದೆ.
ಆರ್ಥಿಕವಾಗಿ, ತಾಂತ್ರಿಕವಾಗಿ ಎಷ್ಟೆಲ್ಲ ಮುಂದುವರಿದಿರುವ ನಗರ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲೇ ಎಡವಿ ಬಿದ್ದಿದೆ.
ಇದನ್ನೂ ಓದಿ | Pot holes | ಬೆಂಗಳೂರಿನ ಶ್ರೀರಾಂಪುರದಲ್ಲಿ ರಸ್ತೆ ಕುಸಿದು ಬೃಹತ್ ಗುಂಡಿ ಸೃಷ್ಟಿ, ಕಳಪೆ ಕಾಮಗಾರಿಯ ಫಲ!
ಬೆಂಗಳೂರಿನಲ್ಲಿ ಜೋರಾಗಿ ಮಳೆಯಾದರೆ ಸಾಕು ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಕಳಪೆ ಕಾಮಗಾರಿಯಂಥ ಸಾಕಷ್ಟು ಅವ್ಯವಸ್ಥೆಗಳನ್ನು ಬಹಿರಂಗಪಡಿಸುತ್ತಿವೆ. ಕೆರೆಗಳ ಒತ್ತುವರಿ, ರಾಜ ಕಾಲುವೆ ಒತ್ತುವರಿಗಳಿಂದಾಗಿ ನಡೆದಿರುವ ಅಕ್ರಮ ಕಾಮಗಾರಿಗಳಿಂದಾಗಿ ಈಗ ಐಟಿ ಹಬ್ ಸಮಸ್ಯೆಗೆ ಸಿಲುಕುವಂತಾಗಿದೆ. ಮಳೆಯಿಂದಾಗಿ ಅನೇಕ ಐಟಿ ಕಂಪನಿಗಳು ನೀರಿನಲ್ಲಿ ಮುಳುಗಡೆಯಾಗುವ ಹಂತಕ್ಕೆ ಬಂದಿದೆ. ಲಕ್ಷಾಂತರ ರೂಪಾಯಿಯ ಲಕ್ಸುರಿ ಕಾರುಗಳಲ್ಲಿ ಓಡಾಡುತ್ತಿದ್ದ ಟೆಕ್ಕಿಗಳು ಟ್ರ್ಯಾಕ್ಟರ್, ಜೆಸಿಬಿಗಳ ಮೂಲಕ ರಸ್ತೆ ದಾಟುವಂಥ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಮೂಲಸೌಕರ್ಯ ನಿರ್ವಹಣೆಯಲ್ಲಿ ಸರ್ಕಾರ ಯಾವ ಮಟ್ಟದ ಅಧೋಗತಿಗೆ ತಲುಪಿದೆ ಎನ್ನುವುದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುವಂತಾಗಿದೆ.
ಗುಂಡಿ ಇಲ್ಲದ ರಸ್ತೆಗಳೇ ಇಲ್ಲ!
11 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿರುವ ನಗರದ ರಸ್ತೆಯಲ್ಲಿ ಕನಿಷ್ಠ 1 ಕಿ.ಮೀ. ಕೂಡ ಗುಂಡಿಗಳಿಲ್ಲದೆ ಇಲ್ಲ. ಯಾವ ಮಟ್ಟಕ್ಕೆ ರಸ್ತೆಗಳು ಗುಂಡಿಮಯ ಆಗಿವೆ ಅಂದರೆ, ಜನ ಕೈಯಲ್ಲಿ ಜೀವ ಹಿಡಿದುಕೊಂಡು ವಾಹನ ಓಡಿಸುವಂತಾಗಿದೆ. ರಸ್ತೆ ಗುಂಡಿಯಿಂದಾಗಿ ಉರುಳಿ ಬಿದ್ದು ದ್ವಿಚಕ್ರ ವಾಹನ ಸವಾರರು ದಾರುಣವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ 2021-22ರಲ್ಲಿ ಈವರೆಗೆ 17 ಮಂದಿ ರಸ್ತೆ ಗುಂಡಿಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
2022ರಲ್ಲಿ ಗುಂಡಿಗಳಿಂದ ಮೃತಪಟ್ಟವರು: 17 ಮಂದಿ
11 ಸಾವಿರ ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ 10 ಸಾವಿರ ಗುಂಡಿಗಳು!
5 ವರ್ಷದಲ್ಲಿ ರಸ್ತೆ ಗುಂಡಿ ದುರಸ್ತಿಗಾದ ವೆಚ್ಚ 215 ಕೋಟಿ ರೂ.
ಯಾರು ಹೊಣೆ?
ಬಿಬಿಪಿಎಂಪಿ: ಬೆಂಗಳೂರು ಮೇಯರ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಬೇಕಿರುವ ಮುಖ್ಯ ಕೆಲಸಗಳೆಂದರೆ ರಸ್ತೆ, ಒಳಚರಂಡಿ, ಕೆರೆ, ಮೇಲ್ ಸೇತುವೆಗಳ ನಿರ್ಮಾಣದ ನಿರ್ವಹಣೆ.
ಬಿಡಿಎ: ಸ್ವಾಯತ್ತ ಸಂಸ್ಥೆಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ್ದು ಮೂಲ ಸೌಕರ್ಯ ಯೋಜನೆಗಳು ಸೇರಿದಂತೆ ನಗರದ ಮಾಸ್ಟರ್ ಪ್ಲಾನ್ ಹೊಣೆ.
ಬಿಡಬ್ಲ್ಯೂಎಸ್ಎಸ್‌ಬಿ: ಬೆಂಗಳೂರು ನಗರದಲ್ಲಿ ಅಗತ್ಯವಿರುವ ಕುಡಿಯುವ ನೀರನ್ನು ಸರಬರಾಜು ಮಾಡುವುದು.
ಬಿಎಎಸ್‌ಡಬ್ಲ್ಯೂಎಂಎಲ್: ನಗರದಲ್ಲಿನ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದು.
ಈ ಏಜೆನ್ಸಿಗಳ ಜತೆಗೆ ಬಿಎಂಆರ್‌ಸಿಎಲ್, ಬೆಸ್ಕಾಂ, ಬಿಎಂಟಿಸಿ, ಕೆಐಎಡಿಬಿಗಳು ಕೂಡ ಮೂಲಸೌಕರ್ಯಗಳ ಮೇಲ್ವಿಚಾರಣೆ ಏಜೆನ್ಸಿಗಳಾಗಿವೆ. ಇಷ್ಟೆಲ್ಲ ಇದ್ದರೂ ಬೆಂಗಳೂರಿನಲ್ಲಿ ಜನ ಸಾಮಾನ್ಯರೇ ಮೂಲ ಸೌಕರ್ಯದ ಅವ್ಯವಸ್ಥೆಯನ್ನ ಸರಿ ಪಡಿಸೋದಕ್ಕೆ ಒದ್ದಾಡುವಂತಾಗಿದೆ.
ನಗರದಲ್ಲಿ ಜೋರಾಗಿ ಮಳೆಯಾದರೆ ಸಾಕು, ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ನೂರಾರು ಮನೆಗಳು ಮುಳುಗಡೆಯಾಗುತ್ತವೆ.
ಕಾರಣ ಏನು?
ಮಳೆ ಸಮಸ್ಯೆಗೆ ಮುಖ್ಯ ಕಾರಣ ರಾಜಕಾಲುವೆ ಒತ್ತುವರಿ. ಕೆರೆ ನೀರಿನ ಹರಿವಿಗಾಗಿ ಶತಮಾನದ ಹಿಂದೆ ನಿರ್ಮಿಸಿದ್ದ ರಾಜಕಾಲುವೆಗಳನ್ನೇ ಒತ್ತುವರಿ ಮಾಡಿ ಅಪಾರ್ಟ್‌ಮೆಂಟ್, ಲೇಔಟ್‌ಗಳನ್ನು ನಿರ್ಮಿಸಲಾಗಿದೆ. ಮತ್ತೊಂದೆಡೆ ಬೆಳೆಯುತ್ತಿರುವ ನಗರ ಕೆರೆಗಳನ್ನೇ ನುಂಗಿ ಬಿಟ್ಟಿದೆ. ಕಳೆದ 40 ವರ್ಷಗಳಲ್ಲಿ ಬೆಂಗಳೂರಿನ ಸುತ್ತಮುತ್ತಲಿದ್ದ ನೂರಾರು ಕೆರೆಗಳನ್ನು ಮುಚ್ಚಿ ಹಾಕಲಾಗಿದೆ. ಈಗ 200ಕ್ಕಿಂತ ಕಡಿಮೆ ಕೆರೆಗಳಿವೆ.
ನಿರ್ಮಾಣ ಕಾರ್ಯಗಳಿಗಾಗಿ ಹಲವಾರು ಒಳಚರಂಡಿಗಳನ್ನು ಬಂದ್ ಮಾಡಲಾಗಿದೆ. ಮತ್ತೊಂದಷ್ಟು ಒಳಚರಂಡಿಗಳು ನಿರ್ವಹಣೆಯೇ ಇಲ್ಲದೆ ಚರಂಡಿ ನೀರಿನ ಹರಿವಿಗೆ ತಡೆಯಾಗಿವೆ. ಈ ಎಲ್ಲ ಕಾರಣಗಳಿಂದಾಗಿ ನಗರದಲ್ಲಿ ಅರ್ಧ ಗಂಟೆ ಮಳೆ ಸುರಿದರೂ ಹಾಹಾಕಾರ ಉಂಟಾಗುತ್ತದೆ.
ಬಜೆಟ್‌ನ ದುಡ್ಡು ಎಲ್ಲಿಗೆ ಹೋಗುತ್ತದೆ?
2021-22ರ ಬಜೆಟ್‌ನಲ್ಲಿ ಸರ್ಕಾರ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 6 ಸಾವಿರ ಕೋಟಿ ರೂ.ಗಳ ಅನುದಾನ ಘೋಷಿಸಿತ್ತು. ಈ ಪೈಕಿ ರಾಜಕಾಲುವೆ ನಿರ್ವಹಣೆ, ರಸ್ತೆ ಅಭಿವೃದ್ಧಿ, ಉದ್ಯಾನವನ ಸೇರಿ ವಿವಿಧ ಕಾಮಗಾರಿಗಳಿಗೆ ಉಪಯೋಗಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಇನ್ನು ಬಿಬಿಎಂಪಿ ಕೂಡ 10,480 ಕೋಟಿ ರೂ. ಘೋಷಿಸಿದೆ. ಇಷ್ಟೆಲ್ಲ ಹಣವಿದ್ದರೂ ನಗರದ ರಸ್ತೆಗಳ ಗುಣಮಟ್ಟ ಮಾತ್ರ ತೀರ ಕಳಪೆ. ಅದೆಷ್ಟೇ ಬಾರಿ ಟಾರ್ ಹಾಕಿದರೂ ತಿಂಗಳ ಒಳಗೆ ಮತ್ತೆ ಗುಂಡಿ ಬಿದ್ದಿರುತ್ತದೆ.
ರಸ್ತೆ ಗುಂಡಿ ದುರಸ್ತಿಗೆ ಯಾವ ವರ್ಷದಲ್ಲಿ ಎಷ್ಟು ವೆಚ್ಚ?
2017 | 47.8 ಕೋಟಿ ರೂ. |
2018 | 49.2 ಕೊಟಿ ರೂ. |
2020 | 54.8 ಕೋಟಿ ರೂ. |
2021 | 16.4 ಕೊಟಿ ರೂ. |
2022 (ಮೇವರೆಗೆ) | 47 ಕೋಟಿ ರೂ. |
ರಸ್ತೆ ಹಾಳಾಗಲು ಏನು ಕಾರಣ?
ತಜ್ಞರ ಪ್ರಕಾರ ರಸ್ತೆಗಳು ಈ ರೀತಿ ಕಿತ್ತು ಬರುವುದಕ್ಕೆ ಪ್ರಮುಖ ಕಾರಣ, ರಸ್ತೆಗಳಿಗೆ ಸರಿಯಾದ ಪ್ರಮಾಣದಲ್ಲಿ ಟಾರ್ ಹಾಕುತ್ತಿಲ್ಲ. ಮೊದಲು ಹಳೆಯ ರಸ್ತೆಯನ್ನು ಕ್ಲೀನ್ ಮಾಡಿಕೊಳ್ಳಬೇಕು. ಹಳೆ ಪದರ, ಹೊಸ ಪದರ ಅಂಟಿಕೊಂಡ ಬಳಿಕ ಅಗ್ರಿಗೇಟರ್, ಅಂದರೆ ಜೆಲ್ಲಿ ಮತ್ತು ಮರಳನ್ನು ಪ್ರತ್ಯೇಕವಾಗಿ ಬಿಸಿ ಮಾಡಬೇಕು. ರಸ್ತೆ ನಿರ್ಮಾಣಕ್ಕೆ ಬಳಸುವ ಬಿಟುಮಿನ್ ಕೂಡ ಪ್ರತ್ಯೇಕವಾಗಿ ಬಿಸಿ ಮಾಡಬೇಕು. ಟಾರ್ ಕಾಯಿಸಿದ ಬಳಿಕ ಆದಷ್ಟು ಬೇಗ ರಸ್ತೆಗೆ ಹಾಕಬೇಕು. ಮಿಶ್ರಣ ತಣ್ಣಗಾದರೆ ಹಿಡಿತ ಕಡಿಮೆಯಾಗುತ್ತದೆ. ಆದರೆ ಇಷ್ಟೆಲ್ಲ ಕ್ರಮಗಳನ್ನು ಬಿಬಿಎಂಪಿ ಗುತ್ತಿಗೆದಾರರು ಪಾಲಿಸುತ್ತಿಲ್ಲ. ಜನ ಸಾಮಾನ್ಯರ ತೆರಿಗೆ ದುಡ್ಡು ಲೂಟಿಯಾಗುತ್ತಿದೆ.
ಹದಗೆಟ್ಟ ರಸ್ತೆಯಿಂದ ಜನ ಪ್ರಾಣ ಕಳೆದುಕೊಂಡರೆ ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳೇ ನೇರ ಹೊಣೆ ಎಂಬ ಸುತ್ತೋಲೆಯನ್ನು ಹೈಕೋರ್ಟ್ ವಾರ್ನಿಂಗ್ ಬಳಿಕ ಹೊರಡಿಸಲಾಗಿದೆ. ಆದರೆ, ಅಧಿಕಾರಿಗಳು ಈ ಬಗ್ಗೆ ಕೇರ್ ಮಾಡುತ್ತಿಲ್ಲ. ಜನ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ.
ಇದನ್ನೂ ಓದಿ | ರಸ್ತೆ ಗುಂಡಿ ಕಾರಣಕ್ಕೆ ಮಹಿಳೆ ಸಾವಿನ ತನಿಖೆಗೆ ಆದೇಶ ನೀಡಿದ ಸಿಎಂ ಬೊಮ್ಮಾಯಿ: ಬಿಬಿಎಂಪಿ ಅಧಿಕಾರಿಗಳಲ್ಲಿ ನಡುಕ