ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವುದು ಬಹಿರಂಗ ಸತ್ಯ. ಇದನ್ನು ಸ್ವತಃ ಇಬ್ಬರು ನಾಯಕರೂ ಒಪ್ಪಿಕೊಂಡಿದ್ದಾರೆ. ಆದರೆ, “ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಲು ಹೈಕಮಾಂಡ್ ಒಪ್ಪುವುದಿಲ್ಲ” ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿರುವುದು ಇದೀಗ ಕಾಂಗ್ರೆಸ್‌ನಲ್ಲಿ ಬಿರುಗಾಳಿ ಸೃಷ್ಟಿಸಿದೆ.
ಈ ಬಾರಿಯ ವಿಧಾನಸಭೆ ಚುನಾವಣೆ ಆರಂಭವಾದಾಗಿನಿಂದಲೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಿಎಂ ಗಾದಿಗೆ ಪೈಪೋಟಿ ನಡೆಸಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಮತ್ತೆ ಬಿಜೆಪಿಯೇ ಬಂದುಬಿಡುತ್ತದೆ ಎಂದು ಹೈಕಮಾಂಡ್ ಹುಷಾರಾಗಿತ್ತು. ಇಬ್ಬರನ್ನು ದೆಹಲಿಗೆ ಕರೆಸಿದ್ದ ರಾಹುಲ್ ಗಾಂಧಿ ಮೂರು ದಿನ ಸಮಾಲೋಚನೆ ನಡೆಸಿದ್ದರು.
ಮೊದಲು ಸರಳ ಬಹುಮತ ಗಳಿಸೋಕೆ ಎಲ್ಲರೂ ಕೆಲಸ ಮಾಡಿ. ಆಮೇಲೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದರಾಯಿತು ಎಂದು ಸಂಧಾನ ಮಾಡಿದ್ದರು. ಅದರಂತೆ ಇಬ್ಬರೂ ನಾಯಕರು, ತಾವು ಸಿಎಂ ಆಗುವ ಬಯಕೆಯನ್ನು ಅನೇಕ ಬಾರಿ ಹೊರಹಾಕಿದ್ದಾರೆ. ಆದರೆ ಇನ್ನೊಬ್ಬರು ಸಿಎಂ ಆಗಬಾರದು ಎಂದು ಹೇಳಿರಲಿಲ್ಲ. ಈ ನಡುವೆ ಎನ್‌ಡಿಟಿವಿ ಸಂದರ್ಶನ ಮಾಡಿದೆ.
ಮಾರ್ಚ್ 4ರಂದು ತನ್ನ ವೆಬ್‌ಸೈಟ್‌ನಲ್ಲಿ ಈ ಸಂದರ್ಶನದ ಅಕ್ಷರ ರೂಪವನ್ನು ಎನ್‌ಡಿಟಿವಿ ಪ್ರಕಟಿಸಿತ್ತು. ಶೀರ್ಷಿಕೆಯಲ್ಲಿ “ಹೈಕಮಾಂಡ್ ಹಾಗೆ ಮಾಡುವುದಿಲ್ಲ…” ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ” ಎಂದು ಹೇಳಲಾಗಿತ್ತು. ಸುದ್ದಿಯ ಒಳಭಾಗದಲ್ಲಿ, “ಮುಖ್ಯಮಂತ್ರಿಯಾಗಲು ನಾನೂ ಆಕಾಂಕ್ಷಿ, ಶಿವಕುಮಾರ್ ಅವರೂ ಆಕಾಂಕ್ಷಿ. ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹೈಕಮಾಂಡ್ ನೀಡುವುದಿಲ್ಲ ಎಂದು ಹೇಳಲಾಗಿತ್ತು.
ಆದರೆ ಈ ವಿಚಾರ ವಿವಾದವಾದ ನಂತರದಲ್ಲಿ ಎನ್‌ಡಿಟಿವಿ ಸಂದರ್ಶನದ ವಿಡಿಯೊ ಲಭ್ಯವಾಗಿದೆ. ಅದರಲ್ಲಿ ಸಂದರ್ಶಕರ ನಡುವೆ ಸಿದ್ದರಾಮಯ್ಯ ಸಂವಾದ ಈ ರೀತಿ ಇದೆ.
ಸಂದರ್ಶಕಿ: ಜನರು ನಿಮ್ಮನ್ನೇ ಮಾಸ್ ಲೀಡರ್ ಎನ್ನುತ್ತಿದ್ದಾರೆ. ನಿಮ್ಮ ಅಭಿಪ್ರಾಯವೇನು?
ಸಿದ್ದರಾಮಯ್ಯ: ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿ, ಡಿ.ಕೆ. ಶಿವಕುಮಾರ್ ಅವರೂ ಆಕಾಂಕ್ಷಿ. ಪ್ರಜಾಪ್ರಭುತ್ವದಲ್ಲಿ ಇಂತಹದ್ದು ನಡೆಯುತ್ತವೆ, ನಡೆಯಬೇಕು. ಇದರಲ್ಲಿ ತಪ್ಪಿಲ್ಲ. ನಾನು, ಡಿ.ಕೆ. ಶಿವಕುಮಾರ್ ಅಷ್ಟೆ ಅಲ್ಲದೆ ಮತ್ತೊಬ್ಬರೂ ಆಗಬಹುದು, ಅದೂ ತಪ್ಪಿಲ್ಲ. ಆಯ್ಕೆಯಾದ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡಬೇಕು. ಕೊನೆಯದಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ, ಇದೇ ಪ್ರಜಾಪ್ರಭುತ್ವದ ಪ್ರಕ್ರಿಯೆ.
ಸಂದರ್ಶಕಿ: ನಿಮ್ಮ ಪಕ್ಷದ ನಾಡಿ ಮಿಡಿತ ಏನಿದೆ?
ಸಿದ್ದರಾಮಯ್ಯ: ಜನರ ನಾಡಿ ಮಿಡಿತವೇ ಪಕ್ಷದ ನಾಡಿಮಿಡಿತ
ಸಂದರ್ಶಕಿ: ಯುವಕರಿಗೆ ಮಾರ್ಗ ಮಾಡಿಕೊಡೋಣ ಎಂದು ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಿದರೆ, ಇದರ ಬಗ್ಗೆ ನಿಮ್ಮ ನಿಲುವೇನು?
ಸಿದ್ದರಾಮಯ್ಯ: ಹಾಗೆ ಆಗುವುದಿಲ್ಲ. ಏಕೆಂದರೆ ಪ್ರಜಾಪ್ರಭುತ್ವ ಮಾರ್ಗದಲ್ಲಿ ಸಾಗಬೇಕಿದೆ. ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೈಕಮಾಂಡ್ ತನ್ನಷ್ಟಕ್ಕೆ ತಾನೇ ನಿರ್ಧಾರ ಮಾಡಲಾಗುವುದಿಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯದಂತೆ ಹೋಗಬೇಕಾಗುತ್ತದೆ.
ಅಖಾಡಕ್ಕಿಳಿದ ಸುರ್ಜೆವಾಲ
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸರ್ಜೆವಾಲ ಟ್ವೀಟ್ ಮಾಡಿದ್ದರು.
“ಬಿಜೆಪಿ ಪ್ರತಿದಿನ ಕರ್ನಾಟಕದಲ್ಲಿ ಕುಸಿಯುತ್ತಿದೆ ಹಾಗೂ ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ನಾಯಕರ ನಡುವೆ ನಕಲಿ ಜಗಳದ ಸುಳ್ಳು ಸುದ್ದಿಯನ್ನು ಅದಾನಿಯವರ ಎನ್‌ಡಿಟಿವಿ ಮೂಲಕ ಪ್ರಸಾರ ಮಾಡುತ್ತಿದೆ. ಇಂತಹ ಕೆಲಸವನ್ನು ಬಿಟ್ಟು, ಮುಳುಗುತ್ತಿರುವ ಬಿಜೆಪಿ ಹಡಗಿನ ಕುರಿತು ಕಾಳಜಿ ಮಾಡಿ. 40% ಸರ್ಕಾರ ತನ್ನ ಪಾಪಗಳಿಗೆ ಬೆಲೆ ತೆರಲೇಬೇಕಾಗುತ್ತದೆ. ಟಿವಿಯೂ ಬಿಜೆಪಿಯನ್ನು ಕಾಪಾಡಲು ಆಗುವುದಿಲ್ಲ” ಎಂದಿದ್ದರು. ಇದರ ಜತೆಗೆ ಎನ್‌ಡಿಟಿವಿ ಸಂದರ್ಶನದ ವಿಡಿಯೋ ತುಣುಕು ಮತ್ತು ವೆಬ್‌ಸೈಟ್ ಸುದ್ದಿಯ ಫೋಟೊವನ್ನೂ ಹಾಕಿದ್ದರು.
ಸಿದ್ದರಾಮಯ್ಯ ಸಹ ಟ್ವೀಟ್:
“ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರಿತು ಎನ್‌ಡಿಟಿವಿ(ಅದಾನಿ ಟಿವಿ) ಪ್ರಸಾರ ಮಾಡಿದ್ದ ಸುದ್ದಿ ಸತ್ಯಕ್ಕೆ ದೂರವಾದದ್ದು. ನಾನು ಅಂತಹ ಹೇಳಿಕೆ ನೀಡಿಲ್ಲ, ನಾನು ಅಂತಹ ಕೀಳು ರಾಜಕಾರಣ ಮಾಡುವುದಿಲ್ಲ. ಎನ್‌ಡಿಟಿವಿ ಈ ಕುರಿತು ಸ್ಪಷ್ಟನೆ ನೀಡಬೇಕು ಹಾಗೂ ಈ ಸುದ್ದಿಯನ್ನು ತೆಗೆದುಹಾಕಬೇಕು ಎಂದು ಆಗ್ರಹಿಸುತ್ತೇನೆʼ ಎಂದಿದ್ದಾರೆ.
ಸುದ್ದಿ ಬದಲಾಯಿಸಿದ ಎನ್‌ಡಿಟಿವಿ
ಸುರ್ಜೆವಾಲ ಆಕ್ಷೇಪಣೆ ನಂತರದಲ್ಲಿ ಎನ್‌ಡಿಟಿವಿ ಸುದ್ದಿಯನ್ನು ಬದಲಾವಣೆ ಮಾಡಿದೆ. ಶೀರ್ಷಿಕೆಯನ್ನು ಬದಲಾಯಿಸಿ, “ಪ್ರಜಾಪ್ರಭುತ್ವ ಮಾರ್ಗ… ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ಕುರಿತು ಸಿದ್ದರಾಮಯ್ಯ” ಎಂದು ಬದಲಾಯಿಸಿದೆ. ಸುದ್ದಿಯ ಒಳಭಾಗದಲ್ಲೂ, “ಹೈಕಮಾಂಡ್ ಹಾಗೆ ಮಾಡುವುದಿಲ್ಲ…” ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ” ಎನ್ನುವುದನ್ನು ತೆಗೆದು, ವಿಡಿಯೋದಲ್ಲಿರುವಂತೆ ಬರೆದಿದೆ. ಅಲ್ಲಿಗೆ, ಎನ್‌ಡಿಟಿವಿ ವೆಬ್‌ಸೈಟ್‌ನಲ್ಲಿ ಮೊದಲಿಗೆ ಪ್ರಸಾರವಾದ ಸುದ್ದಿ ಸತ್ಯವಲ್ಲ ಎನ್ನುವುದು ಸಾಬೀತಾಗಿದೆ.