| ಅರವಿಂದ ಸಿಗದಾಳ್, ಮೇಲುಕೊಪ್ಪ
ಪ್ರತೀ ವರ್ಷ ಬಹುತೇಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಮರುದಿನ ಪತ್ರಿಕೆಗಳಲ್ಲಿ ಕಾಣುವ ಸಾಮಾನ್ಯ ಹೆಡ್ಡಿಂಗ್: ‘ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ’ ಅಥವಾ ‘ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೇ ಮುಂದೆ’ ಅಥವಾ ‘ಹೆಣ್ಮಕ್ಳೇ ಸ್ಟ್ರಾಂಗು ಗುರು’ ಇತ್ಯಾದಿ. ಅದರಲ್ಲೂ ‘ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ’ ಎಂಬುದು ಒಂದು ವಿಶೇಷವಾದ ವಿಚಾರ. ಹಾಗೆಯೇ ಮತದಾನ ಸಂದರ್ಭಗಳಲ್ಲೂ ಇದೇ ವಿಶೇಷ ಕಾಣುತ್ತೇವೆ. ಗ್ರಾಮೀಣ ಪ್ರದೇಶಗಳಲ್ಲಿ ಯಾವಾಗಲೂ ಅತಿ ಹೆಚ್ಚು ಮತದಾನ ನಡೆಯುತ್ತದೆ. ಸ್ವೀಪ್ (SVEEP Systematic Voters’ Education and Electoral Participation) ಜಾಗೃತಿ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದವರನ್ನು (Vistara Gramadani) ತಲುಪದೇ ಇದ್ದರೂ ಮತದಾನ ಮಾತ್ರ ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲಿ ಹೆಚ್ಚು.
ನಗರಗಳಿಗಿಂತ ಹಳ್ಳಿ, ಪಟ್ಟಣಗಳಲ್ಲಿ ಶೇಕಡಾವಾರು ಓಟ್ ಜಾಸ್ತಿ ಕಾರಣವೇನು?
ಹೌದು, ಹಳ್ಳಿ ಪಟ್ಟಣಗಳಲ್ಲಿ ಮತದಾನ ಹೆಚ್ಚು. ಹಳ್ಳಿ ಪಟ್ಟಣಗಳ ಕೆಲವು ಬೂತ್‌ಗಳಲ್ಲಿ 100% ಮತದಾನ ಆಗಿದ್ದೂ ಇದೆ. ಸಾಮಾನ್ಯವಾಗಿ ಹಳ್ಳಿಗಳ ಬೂತ್‌ಗಳಲ್ಲಿ 80-90% ಮತದಾನ ‘ಗ್ಯಾರಂಟಿ’. ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಹೆಚ್ಚಾಗಲು ಹಲವರು ಕಾರಣಗಳಿವೆ.
- ಹಳ್ಳಿಗಳಲ್ಲಿ ಹೆಚ್ಚಿನ ಮತದಾರರು ಕೇವಲ ಮತದಾರರಾಗಿ ಇರುವುದಿಲ್ಲ. ಯಾವುದೋ ಪಕ್ಷಗಳ ವ್ಯಕ್ತಿಗಳ ಬೆಂಬಲಿತ ವ್ಯಕ್ತಿಗಳಾಗಿರುತ್ತಾರೆ.
- ಪಕ್ಷಗಳ ಬೂತ್ ಕಾರ್ಯಕರ್ತರೊಂದಿಗೆ ಎಲ್ಲಾ ಮತದಾರರ ಸಂಪರ್ಕ ಇರುತ್ತದೆ. ಮತ ಹಾಕಿಲ್ಲ ಅಂದರೆ, ಮತ ಹಾಕದಿರುವ ವಿಚಾರ ಇಡೀ ಹಳ್ಳಿಗೆ ಗೊತ್ತಾಗುತ್ತದೆ. ‘ಮತ ಹಾಕದೆ ಸುದ್ದಿ ಆಗುವುದು ಬೇಡ’ ಎಂಬ ಕಾರಣಕ್ಕೆ ಹಳ್ಳಿಗಳಲ್ಲಿ ಮತದಾನ ಮಾಡುವವರೂ ಇದ್ದಾರೆ.
- ಹಳ್ಳಿ ಪಟ್ಟಣಗಳಲ್ಲಿ ಮತದಾರರಿಗೆ ರಾಜಕೀಯದಾಟದಲ್ಲಿ ಆಸಕ್ತಿ ಜಾಸ್ತಿ. ದೊಡ್ಡ ನಗರಗಳಲ್ಲಿ ಹೆಚ್ಚಿನ ಜನರಿಗೆ, ಅದರಲ್ಲೂ ದೊಡ್ಡ ಸಂಬಳದ ದೊಡ್ಡ ಹುದ್ದೆಯಲ್ಲಿ ಇರುವವರಿಗೆ ರಾಜಕೀಯ ಆಸಕ್ತಿ ವಿಷಯ ಆಗಿರುವುದಿಲ್ಲ. ಒಂದು ರೀತಿಯಲ್ಲಿ ನಗರವಾಸಿಗಳಿಗೆ ರಾಜಕೀಯ ಒಂದು ಜಿಗುಪ್ಸೆ.
- ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಜನರು ಸರ್ಕಾರಿ ಇಲಾಖೆಗಳಿಂದ ಫಲಾನುಭವಿ ಆಗಿರುತ್ತಾರೆ ಅಥವಾ ಯಾವುದಾದರೂ ಕೆಲಸಗಳು ಇಲಾಖೆಗಳಿಂದ ಬಾಕಿ ಉಳಿದಿರುತ್ತವೆ. ಆಗಿರುವ ಕೆಲಸ ಅಥವಾ ಆಗಬೇಕಿರುವ ಕೆಲಸದ ಹಿಂದೆ ಓಡಾಡುವವರು ಪಕ್ಷ ಪ್ರತಿನಿಧಿಗಳಾಗಿರುತ್ತಾರೆ ಮತ್ತು ಆ ಪ್ರತಿನಿಧಿಗಳು ಮತದಾನ ಸಂದರ್ಭದಲ್ಲಿ ಮತದಾರರನ್ನು ಮತದಾರ ಪ್ರಕ್ರಿಯೆಗೆ ತೊಡಗುವಂತೆ ಪ್ರಭಾವ ಬೀರಿರುತ್ತಾರೆ.
- ಜಾತ್ರೆ, ಊರಿನ ಹಬ್ಬಗಳಂತೆ ಎಲೆಕ್ಷನ್ ಕೂಡ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಒಂದು ಉತ್ಸವ ಇದ್ದಂತೆ, ಹೆಚ್ಚಿನವರು ಉತ್ಸಾಹದಿಂದಲೇ ಭಾಗವಹಿಸುತ್ತಾರೆ. ಹಳ್ಳಿಯ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯುವಾಗ, ಭೇಟಿಯಾದ ಸಂದರ್ಭಗಳಲ್ಲಿ ರಾಜಕೀಯ ವಿಚಾರಗಳು ಚರ್ಚೆಯ ಒಂದು ಸಬ್ಜೆಕ್ಟ್ ಆಗಿರುತ್ತದೆ. ಇದರ ಪ್ರಭಾವ, ಮತದಾನ ಹೆಚ್ಚಲು ಪರೋಕ್ವ ಕಾರಣಗಳಲ್ಲಿ ಒಂದಾಗಿರುತ್ತದೆ.
- ದೊಡ್ಡ ನಗರಗಳಲ್ಲಿ ವೃತ್ತಿಯಲ್ಲಿ ಇರುವವರು, ಚುನಾವಣೆಯ ರಜೆಯಲ್ಲಿ ಊರಿಗೆ ಬಂದಿರುವುದರಿಂದ ಮತ್ತು ಕುಟುಂಬದವರು ಮತದಾನ ಮಾಡುವಾಗ ಸಹಜವಾಗಿ ಪ್ರೇರಿತಗೊಂಡು ಮತದಾನಕ್ಕೆ ಮುಂದಾಗುತ್ತಾರೆ. ನಗರದಲ್ಲೇ ಹುಟ್ಟಿ ಬೆಳೆದವರು ರಜೆ ಸಿಕ್ಕಿದರೆ ಗಿರಿಧಾಮದ ತುದಿಗೆ ಜಾಲಿ ಪಿಕ್‌ನಿಕ್ ಹೋಗುವವರೇ ಹೆಚ್ಚು!
- ದೊಡ್ಡ ನಗರದ ಜನರು ಹಣ, ವೃತ್ತಿ, ಐಷಾರಾಮಿ ಜೀವನಕ್ಕೆ ಕೊಟ್ಟ ಪ್ರಾಧಾನ್ಯತೆಯನ್ನು ಜೀವನದ ಅಗತ್ಯದ ಪ್ರಮುಖ ವಿಚಾರಗಳಲ್ಲಿ ಕೊಡುವುದಿಲ್ಲ. ಅದು ಅಡುಗೆ ಮನೆಯ ಕೆಲಸವಿರಬಹುದು, ಸಾಮಾಜಿಕ ಚಟುವಟಿಕೆಗಳಿರಬಹುದು, ರಾಜಕೀಯವಿರಬಹುದು. ಹಳ್ಳಿಗಳಲ್ಲಿ ಆ ರೀತಿ ವಾತಾವರಣ ಇರುವುದಿಲ್ಲ.
- ಹಳ್ಳಿಗಳ ಜನಗಳ ಮಧ್ಯೆ ಒಂದು ಸ್ನೇಹ ಸಂಬಂಧ ಅಥವಾ ಬಾಂಧವ್ಯದ ಸಂಬಂಧ ಗಟ್ಟಿ ಇರುತ್ತದೆ. ಅದರ ಪರಿಣಾಮ, ಎಲ್ಲಾ ವಿಚಾರಗಳಂತೆ ರಾಜಕೀಯ ಸಂವಹನವೂ ನಡೆಯುತ್ತಿರುತ್ತದೆ. ಮತದಾನಕ್ಕೆ ಆ ಸಂವಹನ ಪ್ರೇರಣೆಯೂ ಆಗಿರುತ್ತದೆ.
- ಹಳ್ಳಿಗಳ ಜನರಲ್ಲಿ ರಾಜಕೀಯದ ಆಗುಹೋಗುಗಳ ಅರಿವು, ತಿಳಿವಳಿಕೆ ಹೆಚ್ಚು. ರಾಜಕಾರಣಿಗಳು/ಪಕ್ಷಗಳು ಮಾಡಿದ ಸಾಧನೆಗಳು ಅಥವಾ ನಿಷ್ಕ್ರಿಯತೆ ಬಗ್ಗೆ ಹಳ್ಳಿಯ ಸಾಮಾನ್ಯ ಪ್ರಜೆಗೆ ಇರುವ ಜ್ಞಾನ, ಪರಿಚಯ ದೊಡ್ಡ ನಗರವಾಸಿಗಳಿಗೆ ಇರುವುದಿಲ್ಲ. ನಗರ ನಿವಾಸಿಗಳಲ್ಲಿ ಅನೇಕರಿಗೆ ತಮ್ಮ MLA ಯಾರು? ಕಾರ್ಪೋರೇಟರ್ ಯಾರು ಅಂತಾನೇ ಗೊತ್ತಿರುವುದಿಲ್ಲ. ಹಳ್ಳಿಯ ಸಾಮಾನ್ಯರಿಗೂ MLA ಯಾರು ಅಂತ ಕೇಳಿದರೆ, ಕಳೆದ ಮೂರು ಬಾರಿಯ MLA ಗಳ ಪೂರ್ಣ ವಿವರ ಕೊಡುವಷ್ಟು ಮಾಹಿತಿ ಅವರ ಬಳಿ ಇರುತ್ತದೆ. ಇಂತಹ ಅರಿವು ಹಳ್ಳಿಗಳಲ್ಲಿ ಜನರನ್ನು ಮತಗಟ್ಟೆಗೆ ಬರುವಂತೆ ಮಾಡುತ್ತವೆ.
- ಹಳ್ಳಿಯ ಮತದಾರರು ನಗರದ ನಿವಾಸಿಗಳಷ್ಟು ಸೋಮಾರಿಗಳಲ್ಲ! ನಿರಾಶಾವಾದಿಗಳಲ್ಲ! ಸಾಮಾನ್ಯವಾಗಿ, ನಗರದವರಿಗಿಂತ ಹಳ್ಳಿಗರು ಹೆಚ್ಚು ಶ್ರಮಿಕರಾಗಿರುವುದರಿಂದ, ಮಾನಸಿಕ ಮತ್ತು ದೈಹಿಕ ಆರೋಗ್ಯದ ವಿಚಾರದಲ್ಲಿ, ಗಟ್ಟಿತನದಲ್ಲಿ ಹಳ್ಳಿಗರು ಒಂದು ಹೆಜ್ಜೆ ಮುಂದೆ ಇರ್ತಾರೆ. ಸರದಿಯಲ್ಲಿ ಅರ್ಧ ಗಂಟೆ ಮತದಾನಕ್ಕೆ ನಿಲ್ಲಬೇಕಾದರೆ, ಅದನ್ನೂ ಕೂಡ ಸಂಭ್ರಮಿಸುತ್ತಾರೆ. ನಗರದವರಂತೆ ಅಸಹನೆ, ಚಡಪಡಿಕೆ ಹಳ್ಳಿಗರಲ್ಲಿ ಕಡಿಮೆ.
ಹಾಗೆ ನೋಡಿದರೆ, ಹೆಚ್ಚು ಓದಿದದವರು ನಾಗರಿಕತೆಯಲ್ಲಿ ಮುಂದಿದ್ದೇವೆ ಅಂತ ಭ್ರಮಿಸುವ ನಗರವಾಸಿಗಳು ಮತದಾನದಂತಹ ಕರ್ತವ್ಯದಲ್ಲಿ ಗ್ರಾಮೀಣ ಪ್ರದೇಶದವರಿಗಿಂತ ಪರ್ಸಂಟೇಜಿನಲ್ಲಿ ಮುಂದಿರಬೇಕಿತ್ತು. ಆದರೆ, ವಾಸ್ತವವಾಗಿ ಮತದಾನ ಇರಲಿ, ಪಿಯುಸಿ ಪರೀಕ್ಷೆ ಫಲಿತಾಂಶ ಇರಲಿ, ಒಟ್ಟಾರೆ ಆರೋಗ್ಯ ನೆಮ್ಮದಿಗಳ ವಿಚಾರವೇ ಇರಲಿ… ಗ್ರಾಮೀಣ ಪ್ರದೇಶದಲ್ಲೇ ಪರ್ಸಂಟೇಜ್ ಜಾಸ್ತಿ.
ಇದನ್ನೂ ಓದಿ | Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ
ನಗರದಲ್ಲಿ ಯಾವುದೇ ಕಾರಣವಿಲ್ಲದೆ ಮತದಾನದಿಂದ ತಪ್ಪಿಸಿಕೊಳ್ಳುವ, ವಿವೇಕ ರಹಿತರಾಗಿ ಮತದಾನ ಕರ್ತವ್ಯ ಮಾಡದ ನಾಗರಿಕರಿಗೆ ಧಿಕ್ಕಾರ ಹೇಳುವಾಗಲೇ, ಮತದಾನ ಪೂಜೆಯನ್ನು ಶ್ರದ್ಧೆಯಿಂದ ಮಾಡಿದ ಗ್ರಾಮೀಣವಾಸಿ ದೇಶ ಪ್ರೇಮಿಗಳಿಗೆ ಒಂದು ಜೈಕಾರ ಹೇಳೋಣ.