Site icon Vistara News

Janapada University | ವಿಸ್ತಾರ ವರದಿ ಪರಿಣಾಮ; ಒತ್ತುವರಿ ಸಂಬಂಧ ಪೊಲೀಸ್‌ ದೂರು ಕೊಟ್ಟರೆ ತೆರವು: ಅಶ್ವತ್ಥನಾರಾಯಣ

janapada vv and ashwathanarayana Karnataka Janapada University old VV land encroachment

ಬೆಳಗಾವಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ (Janapada University) ೧66 ಎಕರೆ ಜಮೀನಿನಲ್ಲಿ 1೧೩ ಎಕರೆಗೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ ಎಂಬ ವಿಸ್ತಾರ ನ್ಯೂಸ್‌ ವರದಿಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತ್ವರಿತವಾಗಿ ಸ್ಪಂದಿಸಿದ್ದು, ವಾಹಿನಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿವಿಯವರು ಪೊಲೀಸ್‌ ದೂರು ಕೊಟ್ಟರೆ ಕೂಡಲೇ ಕ್ರಮ ವಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.

ಜಾನಪದ ವಿಶ್ವವಿದ್ಯಾಲಯಕ್ಕೆ ಸೇರಿದ 16೬ ಎಕರೆ ಜಮೀನಿನಲ್ಲಿ ೧೧೩ಕ್ಕೂ ಹೆಚ್ಚು ಎಕರೆ ಜಾಗವು ಒತ್ತುವರಿಯಾಗಿದೆ ಎಂಬ ಬಗ್ಗೆ ವಿಸ್ತಾರ ನ್ಯೂಸ್‌ ವರದಿ ಮಾಡಿತ್ತು. ಈ ಬಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ, ಇಂತಹ ಸುದ್ದಿಯನ್ನು ವರದಿ ಮಾಡಿದ ವಿಸ್ತಾರ ನ್ಯೂಸ್‌ಗೆ ನನ್ನ ಅಭಿನಂದನೆನ್ನು ಹೇಳಬಯಸುತ್ತೇನೆ. ಇದು ಒಳ್ಳೆಯ ವರದಿ, ಒಳ್ಳೆಯ ಆರಂಭ ಎಂದು ಹೇಳಿದರು.

ವಿಶ್ವವಿದ್ಯಾಲಯದ ಸಿಬ್ಬಂದಿ ತಕ್ಷಣವೇ ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ನೀಡಬೇಕು. ದೂರು ಕೊಟ್ಟರೆ ತಕ್ಷಣವೇ ಒತ್ತುವರಿ ತೆರವು ಆಗಲಿದೆ. ಜಾನಪದ ವಿವಿ ಕುಲಸಚಿವರು ಜಿಲ್ಲಾಧಿಕಾರಿ, ತಹಸೀಲ್ದಾರ್‌ಗೆ ಪತ್ರ ಬರೆಯುವ ಬದಲು ದೂರು ನೀಡಬೇಕು. ನಾನೂ ಕೂಡ ಒತ್ತುವರಿ ತೆರವು ಮಾಡಲು ತಿಳಿಸುತ್ತೇನೆ. ಸರ್ಕಾರಿ ಜಾಗವನ್ನು ಯಾರೇ ಒತ್ತುವರಿ ಮಾಡಿರಲಿ, ಅದು ಕಾನೂನು ಉಲ್ಲಂಘನೆಯಾಗುತ್ತದೆ. ಈ ಸಂಬಂಧ ತಕ್ಷಣವೇ ದೂರು ನೀಡಬೇಕು, ಒತ್ತುವರಿ ತೆರವು ಆಗುತ್ತದೆ. ಒತ್ತುವರಿ ಮಾಡಿಕೊಂಡವರ ಬಂಧನವೂ ಆಗುತ್ತದೆ ಎಂದು ಸಚಿವರು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ | Voter data | ಚಿಲುಮೆ ಮಾದರಿಯಲ್ಲೇ ವಿಜಯಪುರದಲ್ಲೂ ಗೋಲ್‌ಮಾಲ್‌: ಸಿಕ್ಕಿಬಿದ್ದವನ ಹಿಂದಿದ್ದಾರಾ ಬಿಜೆಪಿ ನಾಯಕ ಯತ್ನಾಳ್‌?

ಏನಿದು ಪ್ರಕರಣ?
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ (Janapada University) ೧66 ಎಕರೆ ಜಮೀನಿನಲ್ಲಿ 1೧೩ ಎಕರೆಗೂ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ. ಪ್ರಸ್ತುತ ವಿವಿ ಇರುವ ಪ್ರದೇಶದ ಹೊರತಾಗಿ ಉಳಿದ ಎಲ್ಲ ಕಡೆಯೂ ಒತ್ತುವರಿಯನ್ನು ಮಾಡಿಕೊಳ್ಳಲಾಗಿದೆ ಎಂದು ವಿವಿ ಆಡಳಿತ ಮಂಡಳಿ ಈಗ ಜಿಲ್ಲಾಡಳಿತದ ಕದ ತಟ್ಟಿತ್ತು.

ಈಗ ವಿಶ್ವ ವಿದ್ಯಾಲಯವನ್ನು ಕಟ್ಟಿಕೊಂಡಿರುವ 52 ಎಕರೆ ಜಾಗ ಮಾತ್ರ ವಿವಿ ಬಳಿ ಉಳಿದುಕೊಂಡಿದೆ. ಉಳಿದ ಐದಾರು ಕಡೆಗಳಾದ ನಿಡಗುಂದಿ, ಸೋಮಾಪುರ, ರಾಷ್ಟ್ರೀಯ ಹೆದ್ದಾರಿ ೪ರ ಬಳಿ ಇರುವ ಜಾಗಗಳಲ್ಲಿ ಒತ್ತುವರಿಯಾಗಿರುವುದು ಈಗ ವಿವಿ ಗಮನಕ್ಕೆ ಬಂದಿದೆ. ಇನ್ನೂ ಹಲವಾರು ಕಡೆ ಒತ್ತುವರಿಯಾಗಿರುವ ಶಂಕೆ ಇದ್ದು, ಅಲ್ಲೆಲ್ಲ ಕಡೆ ವಿವಿ ಪರಿಶೀಲನೆ ನಡೆಸಲು ಮುಂದಾಗಿದೆ ಎಂದು ಹೇಳಿಕೊಂಡಿತ್ತು.

ಜಿಲ್ಲಾಧಿಕಾರಿಗೆ ಪತ್ರ ಬರೆದ ಕುಲಸಚಿವರು
ಕರ್ನಾಟಕ ವಿಶ್ವ ವಿದ್ಯಾಲಯದ 113 ಎಕರೆಗೂ ಹೆಚ್ಚು ಜಾಗವು ಒತ್ತುವರಿಯಾಗಿದೆ. ಈ ಜಾಗವು ಕರ್ನಾಟಕ ಸರ್ಕಾರದಿಂದ ವಿವಿಗೆ ಮಂಜೂರಿಯಾಗಿರುವ ಪ್ರದೇಶವಾಗಿದೆ. ಗೊಟಗೋಡಿ, ಶೀಲವಂತ ಸೋಮಾಪುರ, ಹುಲಸೋಗಿ, ಅಡವಿಸೋಮಾಪುರ, ತಡಸ, ಗುಡಗೇರಿ, ಹಿರೇಬೆಂಡಿಗೇರಿ, ನಿಡಗುಂದಿ, ತಿಮ್ಮಾಪುರ ಗ್ರಾಮಗಳಲ್ಲಿ ಒತ್ತುವರಿಯಾಗಿದೆ. ಈ ಸಂಬಂಧ ದಾಖಲೆ ಸಲ್ಲಿಸಲಾಗಿದ್ದು, ಒತ್ತುವರಿಯಾಗಿರುವ ಸರ್ವೇ ನಂಬರ್‌ ಹೊಂದಿರುವ ಜಮೀನನ್ನು ಹದ್ದುಬಸ್ತು ಮಾಡಿಕೊಡುವಂತೆ ಮನವಿ ವಿವಿ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್‌ ಅವರು ತಹಸೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಒತ್ತುವರಿಯಾಗಿರುವ ಪ್ರದೇಶಗಳು ಯಾವುವು?
೧. ಗೊಟಗೋಡಿಯಲ್ಲಿರುವ ಸರ್ವೇ ನಂಬರ್ 116 ಎ ನಲ್ಲಿ 7 ಎಕರೆ 38 ಗುಂಟೆ
೨. ಗೊಟಗೋಡಿಯಲ್ಲಿರುವ ಸರ್ವೇ ನಂಬರ್ 116ಎ ನಲ್ಲಿ 45 ಎಕರೆ 38 ಗುಂಟೆ
೩. ಶೀಲವಂತ ಸೋಮಾಪುರದಲ್ಲಿ‌ ಸರ್ವೆ ನಂಬರ್ 51 ರಲ್ಲಿ 9 ಎಕರೆ 18 ಗುಂಟೆ
೪. ಹುಲಸೋಗಿಯಲ್ಲಿ ಸರ್ವೇ ನಂಬರ್ 107/ಅ ನಲ್ಲಿ 9 ಎಕರೆ 02 ಗುಂಟೆ
೫. ಅಡವಿಸೋಮಾಪುರದಲ್ಲಿರುವ ಸರ್ವೇ ನಂಬರ್ 76ರಲ್ಲಿ‌ 3 ಎಕರೆ 11 ಗುಂಟೆ
೬. ತಡಸದಲ್ಲಿರುವ ಸರ್ವೇ ನಂಬರ್ 168 ರಲ್ಲಿ 11 ಎಕರೆ 12 ಗುಂಟೆ
೭. ಗುಡಗೇರಿಯಲ್ಲಿರುವ ಸರ್ವೇ ನಂಬರ್ 16 ರಲ್ಲಿ 19 ಎಕರೆ 37 ಗುಂಟೆ
೮. ಹಿರೇಬೆಂಡಿಗೇರಿಯಲ್ಲಿ ಸರ್ವೇ ನಂಬರ್ 70/1ಅ ನಲ್ಲಿ 3 ಎಕರೆ 09 ಗುಂಟೆ
೯. ನಿಡಗುಂದಿಯಲ್ಲಿ ಸರ್ವೇ ನಂಬರ್ 42/1ಅ ನಲ್ಲಿರುವ 56 ಎಕರೆ 19 ಗುಂಟೆ
೧೦. ತಿಮ್ಮಾಪುರದ ಸರ್ವೇ ನಂಬರ್ 10ಎ ನಲ್ಲಿರುವ 1 ಎಕರೆ 33 ಗುಂಟೆ ಭೂಮಿ

ಹಾಲಿ ವಿವಿ ಸ್ಥಾಪನೆಗೊಂಡಿರುವ ಗೊಟಗೋಡಿಯಲ್ಲಿರುವ ಭೂಮಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಭೂ ಒತ್ತುವರಿಯಾಗಿದೆ ಎಂದು ವಿವಿ ದೂರಿದೆ. ಜಾನಪದ ವಿವಿ ಭೂಮಿಯಲ್ಲಿ ಜನರು ಉಳುಮೆ ಪ್ರಾರಂಭ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಎಲ್ಲ ಕಾರಣಗಳಿಂದ ಜಾಗವನ್ನು ಮರಳಿ ಕೊಡಿಸುವಂತೆ ಜಿಲ್ಲಾಡಳಿತದ ಮೊರೆ ಹೋಗಲಾಗಿದೆ. ಈಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಪೊಲೀಸ್‌ ಠಾಣೆಗೆ ದೂರು ಕೊಟ್ಟರೆ ನಿಶ್ಚಯವಾಗಿ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Criminal politics | ಕ್ರಿಮಿನಲ್‌ ಹಿನ್ನೆಲೆ ಬಗ್ಗೆ ಫೈಟರ್‌ ರವಿಯಿಂದ ಮಾಹಿತಿ ಕೇಳಿದ ನಳಿನ್‌ ಕುಮಾರ್‌ ಕಟೀಲ್‌

Exit mobile version