ಬೆಂಗಳೂರು: ವಿಸ್ತಾರ ಲೋಗೊ ಹಾಗೂ ವೆಬ್‌ಸೈಟ್ ಜುಲೈ 23ರಂದು ಅನಾವರಣಗೊಂಡಿದೆ. ಈ ದಿನಕ್ಕೆ ಪತ್ರಿಕೋದ್ಯಮದ್ದೇ ಆದ ಒಂದು ಐತಿಹಾಸಿಕ ಹಿನ್ನೆಲೆಯೂ ಇದೆ. ಪತ್ರಿಕೋದ್ಯಮಿಗಳು ನೆನಪಿಸಿಕೊಳ್ಳಬೇಕಾದ ʻಕೇಸರಿʼ ಪತ್ರಿಕೆಯ ಸಂಸ್ಥಾಪಕ ಬಾಲಗಂಗಾಧರ ತಿಲಕ್ ಜನ್ಮದಿನ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಹುಟ್ಟು ಹಬ್ಬ ಇಂದು. ಈ ದಿನ ವಿಸ್ತಾರ ಮೀಡಿಯಾ ಸಂಸ್ಥೆಯ ಲೋಗೊ ಹಾಗೂ ವೆಬ್‌ಸೈಟ್ ಅನಾವರಣಗೊಳ್ಳುತ್ತಿರುವುದು ಮಹತ್ವಪೂರ್ಣ ಎಂದು ಪ್ರಧಾನ ಸಂಪಾದಕ ಹಾಗೂ ಸಿಇಒ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯಟ್ಟರು.
ಅಭಿಮತ ಸ್ವಾತಂತ್ರ್ಯದ ಕಲಿಗಳು
ಬೆಂಗಳೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿಸ್ತಾರ ನ್ಯೂಸ್ ವೆಬ್‌ಸೈಟ್ ಲೋಕಾರ್ಪಣೆ ಹಾಗೂ ವಿಸ್ತಾರ ಮೀಡಿಯಾ ಲೋಗೊ ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮಾಡಿದ ಪ್ರಾಸ್ತಾವಿಕ ನುಡಿಯಲ್ಲಿ “”ಇಂದು ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮದಿನ. ಕೇಸರಿ ಪತ್ರಿಕೆಯ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಸಿದ ಬಾಲಗಂಗಾಧರ ತಿಲಕ್ ಹಾಗೂ ಸ್ವಾತಂತ್ರ್ಯ ಹೋರಾಟದ ಕಲಿ ಚಂದ್ರಶೇಖರ ಆಜಾದ್ ಜನಿಸಿದ ದಿನ. ಇತಿಹಾಸದೊಂದಿಗೆ ವರ್ತಮಾನವನ್ನು ನಾವು ಜೋಡಿಸುತ್ತಿದ್ದೇವೆʼʼ ಎಂದು ಹೇಳಿದರು.
“”ಮಾಧ್ಯಮವು ಪ್ರಜಾತಂತ್ರದ ನಾಲ್ಕನೇ ಅಂಗವಾಗಿದ್ದು, ಸಾಮಾಜಿಕ ಒಳಿತೇ ನಮ್ಮ ಆಶಯವಾಗಿದೆ. ಟೀಕೆ, ವಿಶ್ಲೇಷಣೆಗಳ ಹೊರತಾಗಿಯೂ ಮಾಧ್ಯಮ ಸಂಸ್ಥೆಗೆ ಜವಾಬ್ದಾರಿಯಿದೆ. ದೇಶದ ಹಿತದ ಪ್ರಶ್ನೆ ಬಂದಾಗ ದೇಶ ಮೊದಲು, ನಂತರ ನಾವು. ಅದು ಮಾಧ್ಯಮವೇ ಇರಲಿ, ಉದ್ಯಮವೇ ಇರಲಿ. ನಮ್ಮ ವಿಶ್ವಾಸಾರ್ಹತೆ ನಿರೂಪಿಸುತ್ತೇವೆʼʼ ಎಂದು ಹರಿಪ್ರಕಾಶ್ ಹೇಳಿದರು.
ಬಾಲ ಗಂಗಾಧರ ತಿಲಕ್ ಅವರು ಕೇಸರಿ ಪತ್ರಿಕೆಯ ಮೂಲಕವೇ ಕ್ರಾಂತಿಯ ಅಲೆಯನ್ನು ಎಬ್ಬಿಸಿದವರು.
ಬಾಲಗಂಗಾಧರ್ ತಿಲಕ್
ಲೋಕಮಾನ್ಯ ತಿಲಕ್ ಅವರು “ಕೇಸರಿʼ ಎಂಬ ಮರಾಠಿ ಪತ್ರಿಕೆಯನ್ನು ಸ್ಥಾಪಿಸಿದ್ದರು. ಬ್ರಿಟಿಷರು ಭಾರತೀಯರ ಮೇಲೆ ಯಾವ ರೀತಿ ದಬ್ಬಾಳಿಕೆ ಮಾಡುತ್ತಿದ್ದರು ಎಂಬುದನ್ನು ಸಂಪೂರ್ಣ ವಿವರವಾಗಿ ಈ ಪತ್ರಿಕೆಯಲ್ಲಿ ಉಲ್ಲೇಖಿಸುತ್ತಿದ್ದರು. ದೇಶದ ಕೊನೆಯ ನಾಗರಿಕನಿಗೂ ಈ ಸುದ್ದಿ ತಲುಪುವಂತೆ ತಿಲಕರು ಶ್ರಮಿಸುತ್ತಿದ್ದರು. ಹೀಗಾಗಿ ಈ ಪತ್ರಿಕೆ ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅವರು ಅಭಿಪ್ರಾಯ ಸ್ವಾತಂತ್ರ್ಯದ ವಕ್ತಾರರಾಗಿದ್ದರು. 1905ರ ಬಂಗಾಳದ ವಿಭಜನೆಯನ್ನು ಭಾರತೀಯರು ವಿರೋಧಿಸಿದ್ದರು. ಈ ವಿರೋಧವನ್ನು ಬ್ರಿಟಿಷರು ಹತ್ತಿಕ್ಕಿದ್ದರು. ಭಾರತದ ನಾಗರಿಕರನ್ನು, ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿ ಅವರು ಕೇಸರಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪತ್ರಿಕೆಯ ಮೂಲಕ ಬ್ರಿಟಿಷರ ಮೇಲೆ ಒತ್ತಡ ಹಾಕಿದ್ದರು.
ಒಂದು ಪತ್ರಿಕೆ ಹೇಗೆಲ್ಲ ಸ್ಫೂರ್ತಿ ನೀಡುತ್ತದೆ ಎಂಬುದಕ್ಕೆ ತಿಲಕ್ ಅವರು ಸ್ಥಾಪಿಸಿದ ಕೇಸರಿ ಪತ್ರಿಕೆಯೇ ಸಾಕ್ಷಿಯಾಗಿದೆ. ಇದಕ್ಕೊಂದು ದೃಷ್ಟಾಂತ ಇಲ್ಲಿದೆ:
ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಮೊತ್ತಮೊದಲು ರಾಜಕೀಯ ಹತ್ಯೆ ನಡೆದದ್ದು ( political killing) 1897ರಲ್ಲಿ. ಆ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಪ್ಲೇಗ್ ಕಾಯಿಲೆ ಅತೀ ಹೆಚ್ಚು ಪ್ರಮಾಣದಲ್ಲಿ ಹರಡುತ್ತಿತ್ತು. ಭಾರತದಲ್ಲಿ ಆಗ ತಾನೆ ಕ್ರಾಂತಿಕಾರಿಗಳು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿ ಹೋರಾಡಲು ಮುಂದೆ ಬರುತ್ತಿದ್ದ ಕಾಲಘಟ್ಟವಾಗಿತ್ತು. ಬ್ರಿಟಿಷ್ ಸರ್ಕಾರ ಆಗ ಪ್ಲೇಗ್ ರೋಗದ ನಿಯಂತ್ರಣಕ್ಕಾಗಿ ಸ್ಪೆಷಲ್ ಪ್ಲೇಗ್ ಕಮಿಟಿ ರಚನೆ ಮಾಡಿ ಅದರ ಮುಖ್ಯ ಜವಾಬ್ದಾರಿಯನ್ನು ಡಬ್ಲೂ.ಸಿ.ರ‍್ಯಾಂಡ್ ಎನ್ನುವ ಅಧಿಕಾರಿಗೆ ನೀಡಿತ್ತು. ಆ ಅಧಿಕಾರಿ ಹೆಚ್ಚು ವೈದ್ಯರನ್ನು ನೇಮಕ ಮಾಡುವ ಬದಲು 800 ಸೈನಿಕರನ್ನು ನೇಮಕಗೊಳಿಸಿದ. ಪ್ರತಿಯೊಬ್ಬರೂ ಮನೆ ಮನೆಗೆ ಹೋಗಿ ಯಾವುದಾದರೂ ಮನೆಯಲ್ಲಿ ಕಾಯಿಲೆ ಇರುವ ವ್ಯಕ್ತಿ ಇದ್ದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲು ರ‍್ಯಾಂಡ್ ಆದೇಶ ನೀಡಿದ್ದ. ಇದರಿಂದ ಎಲ್ಲರ ಮನದಲ್ಲಿ ಭಯದ ಮೋಡ ಕವಿದಿತ್ತು. ರ‍್ಯಾಂಡ್ ಮಾಡುತ್ತಿದ್ದ ಈ ಪಾಪ ಕೃತ್ಯದ ವಿರುದ್ಧ ಬಾಲಗಂಗಾಧರ ತಿಲಕ್ ಅವರು ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ರ‍್ಯಾಂಡ್ ವಿರುದ್ಧ, ಬ್ರಿಟಿಷ್ ಸರ್ಕಾರದ ವಿರುದ್ಧ ತಿಲಕ್ ತಮ್ಮ ಪತ್ರಿಕೆಯಲ್ಲಿ. “Plague is merciful than British” ಎಂದು ಬರೆದರು. ಅಂದರೆ ʼಬ್ರಿಟಿಷರಿಗಿಂತ ಪ್ಲೇಗ್ ರೋಗವೇ ವಾಸಿʼ ಎಂಬ ಧಾಟಿಯಲ್ಲಿ ಅನೇಕ ಲೇಖನಗಳನ್ನು ತಿಲಕ್ ಪ್ರಕಟಿಸಿದ್ದರು.
ಈ ಲೇಖನಗಳು ದೇಶದ ಯುವಕರಿಗೆ ಸ್ಫೂರ್ತಿ ನೀಡಿತ್ತು. ಸತ್ಯಾಂಶಗಳನ್ನು ಪ್ರಕಟಿಸಿದ್ದ ಕಾರಣದಿಂದ ದೇಶದ ಯುವ ಜನತೆ ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣವಾಗಿತ್ತು. ಹೀಗೆ ಸ್ಫೂರ್ತಿ ಪಡೆದವರು ಚಾಪೇಕರ್ ಸಹೋದರು! ದಾಮೋದರ್, ವಾಸುದೇವ್ ಹಾಗು ಬಾಲಕೃಷ್ಣ ಚಾಪೇಕರ್ ಎನ್ನುವ ಮೂವರು ಸಹೋದರರು, ಭಾರತೀಯರನ್ನು ಹತ್ಯೆ ಮಾಡುತ್ತಿದ್ದ ರ‍್ಯಾಂಡ್ ಕೊಲೆಗೆ ಯೋಜನೆ ಸಿದ್ಧಪಡಿಸಿಕೊಂಡು ಅದನ್ನು ಸಾಧಿಸಿದರು.
ಚಂದ್ರಶೇಖರ್ ಆಜಾದ್
ಚಂದ್ರಶೇಖರ್ ಆಜಾದ್ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮನ್ನು ಮುಡಿಪಾಗಿಡಲು ನಿರ್ಧರಿಸಿದವರು.
ಈ ನಿಟ್ಟಿನಲ್ಲಿ ಒಂದು ಸಂಘಟನೆಯನ್ನು ಕಟ್ಟುವುದು ಅಗತ್ಯವಾಗಿತ್ತು. ಹೊಸದೊಂದು ಅಲೆಯನ್ನು ಎಬ್ಬಿಸಲು ಸಮಾನ ಮನಸ್ಕರ ಒಂದು ತಂಡ ಬೇಕಿತ್ತು. ಇದರ ಪ್ರಥಮ ಹೆಜ್ಜೆಯಾಗಿ ಅವರು ‘ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್(HSRA)ʼ ಎಂಬ ಸಂಘಟನೆಯನ್ನು ಆರಂಭಿಸಿದರು. ಭಗತ್ ಸಿಂಗ್, ಸುಖದೇವ್, ಬಟುಕೇಶ್ವರ ದತ್ತ ಮತ್ತು ರಾಜಗುರುರಂತಹ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು. ಸಮಾಜವಾದಿ ತತ್ವದ ಮೇಲೆ ಆಧಾರಿತವಾದ ನವೀನ ಭಾರತವನ್ನು ನಿರ್ಮಿಸುವ ಮಹೋನ್ನತ ಉದ್ದೇಶವನ್ನು ಈ ಸಂಸ್ಥೆ ಹೊಂದಿತ್ತು. ಆಜಾದರು ಮತ್ತು ಅವರ ಬೆಂಬಲಿಗರು ಈ ಸಂಘಟನೆಯ ಮೂಲಕ ಬ್ರಿಟಿಷರ ವಿರುದ್ಧ ಅನೇಕ ಕ್ರಾಂತಿಕಾರಿ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು.
ಇದನ್ನೂ ಓದಿ: ವಿಸ್ತಾರ ಮೀಡಿಯಾ: ಏನು, ಎತ್ತ? | ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು