ಬೆಂಗಳೂರು: ಕನ್ನಡ ಮಾಧ್ಯಮ ಲೋಕದಲ್ಲಿ ವಿನೂತನ ಪ್ರಯತ್ನವಾದ ವಿಸ್ತಾರ ನ್ಯೂಸ್ ವೆಬ್‌ಸೈಟ್ ಹಾಗೂ ಲೋಗೊ ಅನಾವರಣವನ್ನು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಿದರು.
ಬೆಂಗಳೂರಿನ ಎಫ್‌ಕೆಸಿಸಿಐನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಾಡಿನ ವಿವಿಧ ಗಣ್ಯ ಉದ್ಯಮಿಗಳು, ಜನಪ್ರತಿನಿಧಿಗಳು, ಸಾಹಿತಿಗಳು, ಲೇಖಕರು, ವಿವಿಧ ಮಾಧ್ಯಮ ಪ್ರತಿನಿಧಿಗಳು, ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅನಾವರಣಗೊಂಡಿತು.
ಅನಾವರಣಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ಮಾಧ್ಯಮ ನಾಲ್ಕನೇ ಅಂಗವಾಗಿ ಇದುವರೆಗೂ ಉಳಿದ ಮೂರು ಅಂಗಗಳಿಗೆ ಪ್ರತ್ಯೇಕವಾದದ್ದು ಎಂಬ ಭಾವನೆ ಇದೆ. ಇಂತಹ ಆಕ್ಷೇಪ ಸಮಾಜದಲ್ಲಿಯೂ ಇದೆ. ವರದಿ ಮಾಡುವುದು, ಟೀಕೆ ಮಾಡುವುದು, ವಿಶ್ಲೇಷಣೆ ಮಾಡುವುದು ಮಾತ್ರವೇ ನಮ್ಮ ಹೊಣೆಗಾರಿಕೆ ಎಂದು ತಿಳಿದಂತಿದೆ.
ಈ ದೇಶದಲ್ಲಿ ಯಾವುದೆಲ್ಲ ಒಳಿತಾಗಿದೆಯೋ, ಅದೆಲ್ಲದಕ್ಕೂ ಮಾಧ್ಯಮ ಕಾರಣ, ಈ ವ್ಯವಸ್ಥೆಯನ್ನು ಬಡಿದೆಬ್ಬಿಸಲು ಮಾಧ್ಯಮ ಕಾರಣ ಎಂದು ನಾವು ತಿಳಿದರೆ, ಇಲ್ಲಿರುವ ದೋಷಗಳಿಗೂ ನಾವು ಹೊಣೆ ಹೊರಬೇಕಾಗುತ್ತದೆ. ಇದೇ ವಿಸ್ತಾರ ಮೀಡಿಯಾದ ಆಶಯ. ಪಾರದರ್ಶಕತೆಗೆ ಮಾಧ್ಯಮ ಪರ್ಯಾಯವಾದಾಗ ಸಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ. ಧರ್ಮೇಶ್, ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್, ಕೂ ಸಾಮಾಜಿಕ ಜಾಲತಾಣದ ಸಹ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ, ಓಪನ್ ಡಾಟ್ ಮನಿ ಜಾಲತಾಣದ ಸಹ ಸ್ಥಾಪಕ ಅನೀಶ್ ಅಚ್ಯುತನ್, ಫ್ರೀಡಂ ಆ್ಯಪ್‌ನ ಸ್ಥಾಪಕ ಹಾಗೂ ಸಿಇಒ ಸಿ.ಎಸ್. ಸುಧೀರ್, ಎಫ್‌ಕೆಸಿಸಿಐ ಅಧ್ಯಕ್ಷ ಡಾ. ಸಿ.ಎ. ಐ.ಎಸ್. ಪ್ರಸಾದ್, ವಿಸ್ತಾರ ನ್ಯೂಸ್ ಎಕ್ಸೆಕ್ಯೂಟಿವ್ ಎಡಿಟರ್ ಶರತ್ ಎಂ.ಎಸ್. ಉಪಸ್ಥಿತರಿದ್ದರು.