Site icon Vistara News

Vistara News | ವಿಸ್ತಾರ ನ್ಯೂಸ್‌ ಚಾನೆಲ್‌ ಇಂದು ಲೋಕಾರ್ಪಣೆ, ದಿನವಿಡೀ ʼವಿಸ್ತಾರ ಕನ್ನಡ ಸಂಭ್ರಮʼ

vistara launch

ಬೆಂಗಳೂರು: ಕನ್ನಡ ಮಾಧ್ಯಮ ಲೋಕದಲ್ಲಿ ಸದಭಿರುಚಿಯ ಟಿವಿ ಚಾನೆಲ್‌ ಲೋಕಾರ್ಪಣೆಯ ದಿನ ಸನ್ನಿಹಿತವಾಗಿದೆ. ಹಿರಿಯ ಪತ್ರಕರ್ತ ಮತ್ತು ಹರಿತ ವಿಶ್ಲೇಷಣೆಗಳಿಗೆ ಹೆಸರಾದ ಹರಿಪ್ರಕಾಶ್‌ ಕೋಣೆಮನೆ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ವಿಸ್ತಾರ ನ್ಯೂಸ್‌ ಚಾನೆಲ್‌ ಅನಾವರಣ ಇಂದು (ನ.೬) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ವಿಸ್ತಾರ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ನ ಈ ಹೆಮ್ಮೆಯ ಕಾಣಿಕೆ ನಾಡಿನ ಹಲವಾರು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ವೈಭವೋಪೇತವಾಗಿ ತೆರೆದುಕೊಳ್ಳಲಿದೆ.

ವಿಸ್ತಾರ ನ್ಯೂಸ್‌ ಚಾನೆಲ್‌ ಅನಾವರಣದ ಈ ಸಂಭ್ರಮದ ಕ್ಷಣವನ್ನು ʻವಿಸ್ತಾರ ಕನ್ನಡ ಸಂಭ್ರಮʼವಾಗಿ ಆಚರಿಸಲಾಗುತ್ತಿದೆ. ಅಂದು ಬೆಳಗ್ಗಿನಿಂದ ರಾತ್ರಿಯವರೆಗೆ ನಡೆಯುವ ಈ ಸಂಭ್ರಮದಲ್ಲಿ ನಾಡಿನ ೩೨ ಮಹಾ ಸಾಧಕರಿಗೆ ಕಾಯಕ ಯೋಗಿ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ದಿನವಿಡೀ ಹಾಡು, ಮಾತು, ಹಾಸ್ಯ, ಜಾದೂ, ಯಕ್ಷಗಾನಗಳಂಥ ಅತ್ಯುತ್ಕೃಷ್ಟ, ವೈವಿಧ್ಯಮಯ ಸಾಂಸ್ಕೃತಿಕ, ಮನೋರಂಜನಾತ್ಮಕ ಕಾರ್ಯಕ್ರಮಗಳು ಮೇಳೈಸಲಿವೆ. ಸಂಗೀತೋತ್ಸವ, ವಿಶಿಷ್ಟ ಆಹಾರ ಮೇಳ, ಪುಸ್ತಕೋತ್ಸವಗಳು, ಜಾನಪದ ವೈಭವ ಮತ್ತು ಚಿಣ್ಣರ ಕಲರವಗಳೊಂದಿಗೆ ರವೀಂದ್ರ ಕಲಾಕ್ಷೇತ್ರದ ಆವರಣ ರಂಗೇರಲಿದೆ.

ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್‌.ವಿ. ಧರ್ಮೇಶ್‌ ಹಾಗೂ ನಿರ್ದೇಶಕರಾಗಿರುವ ಶ್ರೀನಿವಾಸ್‌ ಹೆಬ್ಬಾರ್‌ ಅವರ ನೇತೃತ್ವದಲ್ಲಿ ನಾಡಿನ ಜನ ಸಕುಟುಂಬಿಕರಾಗಿ ಬಂದು ಸಂಭ್ರಮಿಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಎರಡು ಪ್ರಧಾನ ವೇದಿಕೆ ಕಾರ್ಯಕ್ರಮಗಳು
ಬೆಳಗ್ಗೆ ೧೧.೩೦ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಡಿನ ೩೨ ಸಾಧಕರಿಗೆ ವಿಸ್ತಾರ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಂಜೆ ೬ ಗಂಟೆಗೆ ಆರಂಭವಾಗಲಿರುವ ಮತ್ತೊಂದು ಅದ್ಧೂರಿ ಕಾರ್ಯಕ್ರಮದಲ್ಲಿ ನಾಡಿನ ಜನತೆಯ ಬಹುನಿರೀಕ್ಷೆಯ ವಿಸ್ತಾರ ನ್ಯೂಸ್‌ ಚಾನೆಲ್‌ ಲೋಕಾರ್ಪಣೆಗೊಳ್ಳಲಿದೆ. ಉಳಿದಂತೆ ಹಲವು ವೇದಿಕೆಗಳಲ್ಲಿ ಏಕಕಾಲದಲ್ಲಿ ಸಾಂಸ್ಕೃತಿಕ ವೈಭವಗಳು ಮೇಳೈಸಲಿವೆ.

3೨ ಸಾಧಕರಿಗೆ ವಿಸ್ತಾರ ಕಾಯಕ ಯೋಗಿ ಪ್ರಶಸ್ತಿ ಪ್ರದಾನ
ವಿಸ್ತಾರ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಳಗ್ಗೆ 1೧.೩೦ಕ್ಕೆ ಆರಂಭವಾಗಲಿದೆ. ಈ ಸಮಾರಂಭದಲ್ಲಿ ಹಿರಿಯ ಸಂತರಾದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಶ್ರೀ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಶ್ರೀ ಶ್ರೀ ವಚನಾನಂದ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ ಕೃಷ್ಣ, ಬಿ.ಎಸ್‌ ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ. ಸಿ.ಎನ್‌ ಅಶ್ವತ್ಥನಾರಾಯಣ, ವಿ ಸೋಮಣ್ಣ, ಗೋಪಾಲಯ್ಯ‌, ಶಿವರಾಮ ಹೆಬ್ಬಾರ್‌, ಎಂ.ಟಿ.ಬಿ ನಾಗರಾಜ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಭಾಗವಹಿಸಲಿದ್ದಾರೆ.

ವಿಸ್ತಾರ ನ್ಯೂಸ್‌ ಚಾನೆಲ್‌ಗೆ ಅದ್ಧೂರಿ ಚಾಲನೆ
ರಾಜ್ಯಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ವಿಸ್ತಾರ ನ್ಯೂಸ್‌ ಚಾನೆಲ್‌ನ ಲೋಕಾರ್ಪಣೆ ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಸ್ತಾರ ನ್ಯೂಸ್‌ ಚಾನೆಲ್‌ಗೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ವಿಸ್ತಾರ ಪ್ರಕಾಶನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಎಲ್‌. ಮುರುಗನ್‌ ಅವರು ವಿಸ್ತಾರ ಆ್ಯಪ್‌ ಅನಾವರಣ ಮಾಡಲಿದ್ದಾರೆ.

ಉಪಸ್ಥಿತರಿರುವ ಗಣ್ಯರು: ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವರಾದ ಆರ್‌. ಅಶೋಕ್‌, ಡಾ. ಕೆ. ಸುಧಾಕರ್‌, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ್‌, ಮುನಿರತ್ನ, ಮಾಜಿ ಸಚಿವ ಆರ್‌.ವಿ ದೇಶಪಾಂಡೆ, ಲೋಕಸಭಾ ಸದಸ್ಯ ಪಿ.ಸಿ ಮೋಹನ್‌, ಕಸಾಪ ಅಧ್ಯಕ್ಷರಾದ ನಾಡೋಜ ಮಹೇಶ್‌ ಜೋಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ ಪಿ.ಎಸ್‌. ಹರ್ಷ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿ ಕುಮಾರ್‌ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್‌. ಷಡಾಕ್ಷರಿ ಅವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ, ಸದಭಿರುಚಿಯ ಮತ್ತು ನಾಡಿನ ಹೆಮ್ಮೆಯ ಕೊಡುಗೆಯಾದ ವಿಸ್ತಾರ ನ್ಯೂಸ್‌ ಟಿವಿ ಚಾನೆಲ್‌ ಅನ್ನು ಪ್ರೋತ್ಸಾಹಿಸಿ ಶುಭ ಹಾರೈಸಬೇಕು ಎಂದು ವಿಸ್ತಾರ ಮೀಡಿಯಾ ಪ್ರೈ. ಲಿ.ನ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್‌ ವಿ ಧರ್ಮೇಶ್‌ ಹಾಗೂ ನಿರ್ದೇಶಕ ಶ್ರೀನಿವಾಸ್‌ ಹೆಬ್ಬಾರ್‌ ಅವರು ಮನವಿ ಮಾಡಿದ್ದಾರೆ.

ವಿಸ್ತಾರ ಕಾಯಕ ಯೋಗಿ ಪುರಸ್ಕೃತರು ಇವರು

-ಸ್ಫೂರ್ತಿದಾಯಕ ಉದ್ಯಮಿ, ವಿಆರ್‌ಎಲ್‌ ಸಮೂಹ ಸಂಸ್ಥೆಯ ಸಿಎಂಡಿ ಡಾ. ವಿಜಯ ಸಂಕೇಶ್ವರ
– ಖ್ಯಾತ ಚಲನಚಿತ್ರ ಕಲಾವಿದರಾದ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌
– ಹೆಸರಾಂತ ಸಾಹಿತಿ, ಗೀತ ರಚನೆಕಾರ ಮತ್ತು ನಿರ್ದೇಶಕರಾದ ಡಾ. ಎಚ್.ಎಸ್‌ ವೆಂಕಟೇಶಮೂರ್ತಿ
– ಪ್ರಖ್ಯಾತ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಪಂಡಿತ್‌ ವೆಂಕಟೇಶ್ ಕುಮಾರ್
– ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ, ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು
– ಅಧ್ಯಾತ್ಮ ಸಾಧಕ, ಕೃಷಿ ಪ್ರಯೋಗ ನಿರತರಾದ ಕೊಲ್ಲಾಪುರ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
_ 200ಕ್ಕೂ ಹೆಚ್ಚು ಬಾಲ್ಯ ವಿವಾಹ ತಡೆದ ಸಾಧಕಿ ಗುರಮ್ಮ ಪಂಪಯ್ಯ ಸಂಕಿನಮಠ
– ಬಿಸಿಯೂಟ ತಯಾರಕಿ, ಮಕ್ಕಳ ಶಿಕ್ಷಣಕ್ಕಾಗಿ ಎರಡು ಎಕರೆ ಭೂಮಿ ದಾನ ಮಾಡಿರುವ ಕೊಪ್ಪಳದ ಹುಚ್ಚಮ್ಮ ಚೌದ್ರಿ
– ಶ್ರೀ ಯೋಗಿ ನಾರೇಯಣ ಮಠ ಟ್ರಸ್ಟ್‌, ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿಗಳಾದ ಡಾ. ಎಂ.ಆರ್. ಜಯರಾಂ
– ಕಿರುತೆರೆಯಲ್ಲಿ ವಿಭಿನ್ನ ಪ್ರಯೋಗ ಮಾಡಿರುವ ಹಿರಿಯ ನಿರ್ದೇಶಕರು, ನಾಟಕಕಾರರಾದ ಶ್ರೀ ಟಿ.ಎನ್ ಸೀತಾರಾಂ
– ಖ್ಯಾತ ವರ್ಣಚಿತ್ರ ಕಲಾವಿದರಾದ ಡಾ. ಬಿ.ಕೆ.ಎಸ್. ವರ್ಮ
– ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್‌. ಮಂಜುನಾಥ್‌
– ಖ್ಯಾತ ಟೆನಿಸ್‌ ಆಟಗಾರ, ಗ್ರ್ಯಾನ್‌ಸ್ಲ್ಯಾಮ್‌ ವಿಜೇತರಾದ ರೋಹನ್ ಬೋಪಣ್ಣ
– ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ
– ಪಿಇಎಸ್‌ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಹಾಗೂ ಕುಲಾಧಿಪತಿಗಳಾದ ಪ್ರೊ. ಎಂ.ಆರ್. ದೊರೆಸ್ವಾಮಿ
– ಫ್ರೀಡಂ ಆ್ಯಪ್ ಸಂಸ್ಥಾಪಕರು ಮತ್ತು ಸಿಇಒ ಸಿ.ಎಸ್. ಸುಧೀರ್
– ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕರಾದ ಪಿ. ಶೇಷಾದ್ರಿ
– ಹಿರಿಯ ಸಹಕಾರಿ ಧುರೀಣ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್
– ಮೈಸೂರು ಮರ್ಕೆಂಟೈಲ್‌ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎಸ್ ಶೆಟ್ಟಿ
– ಜನಪ್ರಿಯ ಸಮಾಜ ಸೇವಕರಾದ ದಾವಣಗೆರೆಯ ಡಾ. ಆರ್‌.ಎಲ್ ಉಮಾಶಂಕರ್
– ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪಿ ಅರುಣ್ ಯೋಗಿರಾಜ್
– 4.5 ಲಕ್ಷಕ್ಕೂ ಅಧಿಕ ಯುವ ಕನ್ನಡಿಗರಿಗೆ ಬ್ಯಾಂಕಿಂಗ್‌ ಪರೀಕ್ಷೆ ಉಚಿತ ತರಬೇತಿ ನೀಡಿರುವ ಆರ್.ಕೆ ಬಾಲಚಂದ್ರ
– ಕಲಬುರಗಿಯ ಸಿದ್ದಲಿಂಗೇಶ್ವರ ಬುಕ್‌ ಡಿಪೋದ ಸಂಸ್ಥಾಪಕರಾದ ಬಸರಾಜ ಕೊನೇಕ
– ಖ್ಯಾತ ಸಾವಯವ ಗುರು ಡಾ. ಕೆ. ಆರ್. ಹುಲ್ಲುನಾಚೆಗೌಡರು
– ಸರಕಾರಿ ಶಾಲೆ ಉಳಿಸಿ ಬೆಳೆಸಿ ಆಂದೋಲನದ ರೂವಾರಿ ಕುಮಾರಿ ಅನು ಹೇಮಣ್ಣ
– ಕೆಜಿಎಫ್‌, ಕಾಂತಾರ ಮೊದಲಾದ ಹಿಟ್‌ ಚಿತ್ರಗಳ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು
– ಕಿಮ್ಮನೆ ಗಾಲ್ಫ್‌ ಕ್ಲಬ್‌ ವ್ಯವಸ್ಥಾಪಕ ನಿರ್ದೇಶಕರಾದ ಜಯರಾಮ ಕಿಮ್ಮನೆ
– ವಿದ್ಯಾಶಿಲ್ಪ ಎಜುಕೇಶನ್‌ ಗ್ರೂಪ್‌ನ ಜಾಯಿಂಟ್‌ ಮ್ಯಾನೇಜಿಂಗ್‌ ಟ್ರಸ್ಟಿ ರವೀಂದ್ರ ಪೈ
– ಅಟ್ರಿಮೆಡ್‌ ಲೈಫ್‌ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹೃಷಿಕೇಶ್‌ ದಾಮ್ಲೆ
– ಸೈಕಲ್‌ ಪ್ಯೂರ್‌ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್‌ ರಂಗ
– ಸಿಇಒ ಪಿಕ್ಸೆಲ್‌ ಸಂಸ್ಥೆಯ ಸಂಸ್ಥಾಪಕರು, ಶಕುಂತಲಾ ಖಾಸಗಿ ಉಪಗ್ರಹದ ರೂವಾರಿ ಅವೇಜ್ ಅಹಮದ್
– ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು.

ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳ ಮಹಾಮೇಳ

ವಿಸ್ತಾರ ಕನ್ನಡ ಸಂಭ್ರಮದಲ್ಲಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಮೇಳವೇ ಇರುತ್ತದೆ.

ಎಂ.ಡಿ. ಪಲ್ಲವಿ ಗಾಯನ
ನವೆಂಬರ್‌ ೬ರಂದು ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಖ್ಯಾತ ಗಾಯಕಿ ಎಂ.ಡಿ ಪಲ್ಲವಿ ಅವರಿಂದ ಗಾನಸುಧೆ ಹರಿಯಲಿದೆ. ಕನ್ನಡದ ಜನಪ್ರಿಯ ಗೀತೆಗಳು ಮೊಳಗಲಿವೆ.

ಕನ್ನಡತಿ ಜತೆ ಸಂವಾದ
ಮಧ್ಯಾಹ್ನ 2.30ರಿಂದ ಜನಪ್ರಿಯ ಕಿರುತೆರೆ ಧಾರಾವಾಹಿ ʻಕನ್ನಡತಿʼ ತಂಡದೊಂದಿಗೆ ವೀಕ್ಷಕರ ಆಪ್ತ ಸಂವಾದ ಇರಲಿದೆ. ʻಕನ್ನಡತಿʼ ಧಾರಾವಾಹಿ ವೀಕ್ಷಕರು ಕಲಾವಿದರ ಜತೆ ನೇರವಾಗಿ ಮಾತನಾಡಬಹುದು.

ವೆಂಕಟೇಶ್ ಕುಮಾರ್‌ ಅಮೃತಗಾನ
ಸಂಜೆ 4ರಿಂದ 5 ಗಂಟೆಯವರೆಗೆ ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪಂ. ವೆಂಕಟೇಶ್‌ ಕುಮಾರ್‌ ಅವರ ಗಾಯನ ನಾದಸುಧೆ ಎಲ್ಲರನ್ನೂ ಸಂಗೀತ ಲೋಕದಲ್ಲಿ ವಿಹರಿಸುವಂತೆ ಮಾಡಲಿದೆ. ಸಂಗೀತಾಸಕ್ತರು ಮುಕ್ತವಾಗಿ ಭಾಗವಹಿಸಬಹುದು.

ಹಾಸ್ಯ ಕಾರಂಜಿ, ಜಾದೂ ಕೈಚಳಕ
ಸಂಜೆ 4ರಿಂದ 5ರವರೆಗೆ ಸಂಸ ಬಯಲು ರಂಗ ಮಂದಿರದಲ್ಲಿ ಪ್ರೊ. ಕೃಷ್ಣೇಗೌಡರ ತಂಡ ಹಾಸ್ಯದ ಚಟಾಕಿ ಹಾರಿಸಲಿದೆ. ಸಂಜೆ 5ರಿಂದ 6ರವರೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಉದಯ್‌ ಜಾದೂಗಾರ್‌ ಅವರಿಂದ ಚಿಣ್ಣರಿಗಾಗಿ ಜಾದೂ ಪ್ರದರ್ಶನ ಇದೆ.

ವಾಸುಕಿ ಮ್ಯೂಸಿಕಲ್‌ ನೈಟ್‌ ವೈಭವ
ರಾತ್ರಿ 8ರಿಂದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ವಾಸುಕಿ ವೈಭವ್‌ ಅವರ Live in Concert ಆಯೋಜಿಸಲಾಗಿದೆ. ಮನಸಿಂದ ಕೇಳಿ, ಕಾಗದದ ದೋಣಿಯಲಿ, ಗಿರ ಗಿರ ತಿರುಗಿ, ಇನ್ನೂ ಬೇಕಾಗಿದೆ ಅನ್ನಿ ಇತ್ಯಾದಿ ಒಂದು ಡಜನ್‌ಗೂ ಹೆಚ್ಚು ಸೂಪರ್‌ ಹಿಟ್‌ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ ವಾಸುಕಿ ವೈಭವ್‌ ಮತ್ತು ಟೀಮ್‌.

ತೆರೆದುಕೊಳ್ಳಲಿದೆ ಯಕ್ಷಲೋಕ
ರಾತ್ರಿ 10ರಿಂದ ಹೇರಂಜಾಲು ಯಕ್ಷ ಬಳಗ ಹಾಗೂ ಟೀಮ್‌ ಉತ್ಸಾಹಿ ತಂಡದಿಂದ ʻಶಶಿಪ್ರಭಾ ಪರಿಣಯʼ ಯಕ್ಷಗಾನ ಪ್ರದರ್ಶನವಿದೆ. ಚಂದ್ರಕಾಂತ್‌ ರಾವ್‌ ಮೂಡುಬೆಳ್ಳೆ, ಪಲ್ಲವ ಹೇರಂಜಾಲು ಅವರ ಭಾಗವತಿಕೆ, ಶಶಿಕಾಂತ್‌ ಆಚಾರ್ಯ ಮದ್ದಳೆ, ಶ್ರೀನಿವಾಸ ಪ್ರಭು ಅವರ ಚಂಡೆಯ ಹಿಮ್ಮೇಳವಿದೆ. ಮುಮ್ಮೇಳದಲ್ಲಿ ಶಶಿಕಾಂತ್‌ ಶೆಟ್ಟಿ ಕಾರ್ಕಳ, ರವೀಂದ್ರ ದೇವಾಡಿಗ ಕಮಲಶಿಲೆ, ಪ್ರಕಾಶ್‌ ಕಿರಾಡಿ, ಚಂದ್ರಹಾಸ ಗೌಡ, ಪುನೀತ್‌ ಬೋಳಿಯಾರ್‌, ಪ್ರಶಾಂತ ವರ್ದನ, ನಾಗಶ್ರೀ ಜಿ.ಎಸ್‌ ಮತ್ತು ನಿಹಾರಿಕಾ ಭಟ್‌ ಮೊದಲಾದ ಜನಪ್ರಿಯ ಕಲಾವಿದರು ವಿವಿಧ ಪಾತ್ರಗಳಲ್ಲಿ ಮನರಂಜಿಸಲಿದ್ದಾರೆ. ಯಕ್ಷಗಾನ ಪ್ರಿಯರಿಗೆ ಇದೊಂದು ಅಪರೂಪದ ಅವಕಾಶ.

ಆಹಾರೋತ್ಸವ, ಪುಸ್ತಕೋತ್ಸವ, ಜಾನಪದ ಉತ್ಸವ

ಕನ್ನಡ ಸಂಭ್ರಮದಲ್ಲಿ ಮನರಂಜನೆಯ ಜತೆಗೆ ಆಹಾರೋತ್ಸವ, ಪುಸ್ತಕೋತ್ಸವಗಳು ನಡೆಯಲಿವೆ.

ವಿಶಿಷ್ಟ ಆಹಾರ ಮೇಳ: ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಎಲ್ಲ ಭಾಗಗಳ ವಿಶೇಷ ತಿನಿಸುಗಳಿರುವ ಆಹಾರ ಮಳಿಗೆಗಳು ಇರಲಿವೆ.
ಪುಸ್ತಕ ಮೇಳ: ಸಿರಿಗನ್ನಡ ಪುಸ್ತಕ ಮಳಿಗೆ, ವಿಸ್ತಾರ ಪ್ರಕಾಶನ, ಸ್ನೇಹ ಬುಕ್‌ ಹೌಸ್, ವೀರಲೋಕ ಬುಕ್ಸ್, ರಾಷ್ಟ್ರೋತ್ಥಾನ ಸಾಹಿತ್ಯ, ಸಾವಣ್ಣ ಬುಕ್ಸ್, ಸಮನ್ವಿತ ಪ್ರಕಾಶನ, ವಿಕ್ರಂ ಪ್ರಕಾಶನ ಮುಂತಾದ ಹೆಸರಾಂತ ಪ್ರಕಾಶನ ಸಂಸ್ಥೆಗಳಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಜಾನಪದ ವೈಭವ: ಪ್ರಖ್ಯಾತ ಜಾನಪದ ತಂಡಗಳಿಂದ ಡೊಳ್ಳು ಕುಣಿತ, ವೀರಗಾಸೆ, ಚಂಡೆ ವಾದನ, ಹುಲಿ ವೇಷ ಪ್ರದರ್ಶನದ ವಿಶೇಷ ಆಕರ್ಷಣೆ ಈ ಸಮಾರಂಭಕ್ಕಿದೆ. ಮಕ್ಕಳು ಆಟ ಆಡಿ ನಲಿಯಲು ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಅಪೋಲೊ ಆಸ್ಪತ್ರೆಯಿಂದ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ದಯಾನಂದ ಹಾಸ್ಪಿಟಲ್ಸ್‌ನಿಂದ ಉಚಿತ ದಂತ ತಪಾಸಣೆಯ ಉಚಿತ ಕೊಡುಗೆಯೂ ಇರುತ್ತದೆ.

Exit mobile version