Site icon Vistara News

ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಉದ್ಘಾಟನೆ | ಸಕಾರಾತ್ಮಕ ಭಾಗೀದಾರಿಕೆಯ ಮಾದರಿ: ಶಿಕ್ಷಣ ಸಚಿವ ಬಿ.ಸಿ ನಾಗೇಶ್

nammura shale nammellara shale

ಬೆಂಗಳೂರು: ಸಮಾಜ ಬೆಳೆಯಬೇಕಾದರೆ ಶಿಕ್ಷಣ ಕ್ಷೇತ್ರ ಬೆಳೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳಿಗೆ ನೆರವಾಗುವ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನ ಆರಂಭಿಸುತ್ತಿರುವುದು ಸಕಾರಾತ್ಮಕ ಕಾರ್ಯಕ್ರಮ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ.

ಅವರು ವಿಸ್ತಾರ ನ್ಯೂಸ್‌ ವಾಹಿನಿ ಆರಂಭಿಸುತ್ತಿರುವ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ವಿಸ್ತಾರ ನ್ಯೂಸ್‌ ಪ್ರಾರಂಭದಿಂದಲೂ ಇಂಥ ಪಾಸಿಟಿವ್‌ ಯೋಚನೆಗಳಿಗೆ ಒತ್ತು ನೀಡುತ್ತಿದೆ. ಸರ್ಕಾರಕ್ಕೆ ಈ ವಿಚಾರದಲ್ಲಿ ಎಚ್ಚರಿಕೆ ನೀಡುವುದು ಮಾತ್ರವಲ್ಲ, ಸರಿಪಡಿಸುವ ಕಾರ್ಯದಲ್ಲಿ ಕೂಡ ಕೈ ಜೋಡಿಸುತ್ತಿರುವುದು ಮಹತ್ತರವಾದುದು. ಇದಕ್ಕಾಗಿ ಸಚಿವನಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಈ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬದಲಾವಣೆ ತರಲು ಅನೇಕ ಸರ್ಕಾರಗಳು ಪ್ರಯತ್ನಿಸಿವೆ. ಎಸ್‌ಡಿಎಂಸಿ ಮಾಡಿ ಸರಿಮಾಡುವ ಪ್ರಯತ್ನಗಳಾಗಿವೆ. ಸಾಕಷ್ಟು ಸುಧಾರಣೆ ಆಗಿದೆ. ಇನ್ನೂ ತುಂಬಾ ಆಗುವುದಿದೆ. ವಿಸ್ತಾರ ನ್ಯೂಸ್‌ನ ಈ ಪ್ರಯತ್ನಕ್ಕೆ ಸರ್ಕಾರದ ಪೂರ್ಣ ಸಹಕಾರವಿದೆ. ನಮ್ಮ ಸಮಾಜದಲ್ಲಿ ಕೊಡುಗೈ ದಾನಿಗಳಿಗೆ ಕೊರತೆಯಿಲ್ಲ. ಜನಪರ ಕೆಲಸಕ್ಕೆ ಜನ ಸದಾ ಸಹಾಯ ಮಾಡಲು ಸಿದ್ಧರಿದ್ದಾರೆ. ನೀಡುವ ಸಹಾಯದ ಪ್ರಾಮಾಣಿಕ ಉಪಯೋಗದ ಬಗ್ಗೆ ಪಾರದರ್ಶಕತೆಯಿರಬೇಕು ಎಂದರು.

ಸರ್ಕಾರದ ವತಿಯಿಂದ ʼನಮ್ಮ ಶಾಲೆ ನಮ್ಮ ಕೊಡುಗೆʼ ಆಪ್‌ ಡೆವಲಪ್‌ ಮಾಡುತ್ತಿದ್ದೇವೆ. ಇದು ಡಿಸೆಂಬರ್ ಎರಡನೇ‌ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಆಪ್‌ನಲ್ಲಿ ಸಾರ್ವಜನಿಕರು ತಮಗಿಷ್ಟ ಬಂದ ಶಾಲೆಗೆ ಕೊಡುಗೆ ನೀಡಬಹುದು. ಇದರಲ್ಲಿ ಎಲ್ಲ ಶಾಲೆಗಳೂ ಓಪನ್‌ ಆಗಿದ್ದು, ಪ್ರತೀ ಶಾಲೆಯ ಅವಶ್ಯಕತೆ ಏನು ಎಂದು ತಿಳಿದು ಸಹಾಯ ಮಾಡಬಹುದು. ಮೂಲಭೂತ ಸೌಕರ್ಯ ಮಾತ್ರವಲ್ಲದೆ ಪ್ರತಿಭಾವಂತ ಮಕ್ಕಳ ಶಿಕ್ಷಣವನ್ನೂ ದತ್ತು ತೆಗೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಬಾಲು ಉತ್ಸವ ಸಂಸ್ಥೆಯ ಸಹಸಂಸ್ಥಾಪಕ ರಮೇಶ್‌ ಬಾಲಸುಂದರಂ ಉಪಸ್ಥಿತರಿದ್ದರು. ‌

ಇದೇ ವೇಳೆ, ವಿಸ್ತಾರ ನ್ಯೂಸ್ ಅಭಿಯಾನಕ್ಕೆ ಕೈ ಜೋಡಿಸಿದ ಬೆಳಗಾವಿ ಜಿಲ್ಲೆಯ ಕುಡುಚಿ ಶಾಸಕ ಪಿ.ರಾಜೀವ್ ಅವರು ನೀಡಿದ ಒಂದು ಲಕ್ಷ ರೂಪಾಯಿ ಚೆಕ್ ಅನ್ನು ಸಚಿವ ಬಿ.ಸಿ ನಾಗೇಶ್ ಅವರ ಮೂಲಕ ಬಾಲಂಸುದರಂಗೆ ನೀಡಲಾಯಿತು. ತಾವು ಓದಿದ ಪ್ರಾಥಮಿಕ ಶಾಲೆ ಅಭಿವೃದ್ಧಿಗೆ ಶಾಸಕ ರಾಜೀವ್ ದೇಣಿಗೆ ನೀಡಿದ್ದಾರೆ.

ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸಹಾಯ ಮಾಡುವ, ದಾನಿಗಳನ್ನು ಗುರುತಿಸುವ ಹಾಗೂ ಪ್ರೇರಣೆ ನೀಡುವ, ಮಾದರಿ ಶಾಲೆಗಳನ್ನಾಗಿ ರೂಪಿಸುವ ದೃಷ್ಟಿಯಿಂದ ವಿಸ್ತಾರ ನ್ಯೂಸ್‌ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನವನ್ನು ಆಯೋಜಿಸಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ನಮ್ಮೂರ ಶಾಲೆ ನಮ್ಮೆಲ್ಲರ ಶಾಲೆಯಾಗಲಿ

Exit mobile version