ಬೆಂಗಳೂರು: ʼಕನ್ನಡತಿʼ ಕಿರುತೆರೆ ಧಾರಾವಾಹಿ ತಂಡದ ಜತೆಗೆ ವೀಕ್ಷಕರು ಆತ್ಮೀಯವಾಗಿ ಸಂವಾದಿಸಿದರು. ಸೀರಿಯಲ್ ಮುಂದುವರಿಯುತ್ತಿರುವ ರೀತಿಯ ಬಗ್ಗೆ ವೀಕ್ಷಕರ ಹಲವಾರು ಕುತೂಹಲದ ಪ್ರಶ್ನೆಗಳು ಧಾರಾವಾಹಿ ತಂಡಕ್ಕೆ ಎದುರಾದುವು. ನಾಡಿನ ಹಲವು ಕಡೆಯಿಂದ ಬಂದ ಧಾರಾವಾಹಿ ವೀಕ್ಷಕರು ಧಾರಾವಾಹಿ ತಂಡವನ್ನು ತಮ್ಮ ಪ್ರಶ್ನೆಗಳಿಂದ ಕಾಲೆಳೆದರು, ಕತೆ ಬಿಟ್ಟುಕೊಡುವಂತೆ ಮಾಡಲು ಯತ್ನಿಸಿದರು!
ಇದು ʼವಿಸ್ತಾರ ನ್ಯೂಸ್ ಟಿವಿ ವಾಹಿನಿ ಅನಾವರಣʼ ಸಂದರ್ಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಂವಾದವಾಗಿತ್ತು. ಸಂವಾದದ ಆಯ್ದ ಭಾಗ ಹೀಗಿದೆ:
ಕೇಳುಗರು: ಕನ್ನಡಿಗರಿಗೆ ಯಾಕೆ ಧಾರಾವಾಹಿ ಇಷ್ಟು ಇಷ್ಟವಾಯಿತು?
ನಿರ್ದೇಶಕ ಯಶವಂತ್: ಕನ್ನಡದ ಜನರ ಮನಸ್ಸಿಗೆ ಮುಟ್ಟುವಂಥ ಕತೆ, ಕನ್ನಡಕ್ಕೆ ಆತ್ಮೀಯವಾದ ಪಾತ್ರಗಳು, ಕನ್ನಡವನ್ನು ಸ್ಪಷ್ಟವಾಗಿ ಬಳಸುವ ಪಾತ್ರಗಳು, ಸೀರಿಯಲ್‌ಗಳಲ್ಲೇ ಅತ್ಯಂತ ವಿಭಿನ್ನತೆ, ಕನ್ನಡದ ಬಗ್ಗೆ ಕಾಳಜಿ ಇರುವ ಸ್ಪಷ್ಟ ಸಂಭಾಷಣೆ, ಸಹಜ ಅನಿಸುವ ಅಭೀನಯ ಇವೆಲ್ಲವೂ ಧಾರಾವಾಹಿಯನ್ನು ಗೆಲ್ಲಿಸಿರಬಹುದು.
ಬರಹಗಾರ ವಿಕಾಸ್: ತುಂಬಾ ಜನ ಮೊದಲಿಂದ ಈ ಧಾರಾವಾಹಿಯನ್ನು ಹಿಂಬಾಲಿಸುತ್ತಿದ್ದಾರೆ. ತುಂಬಾ ವಿಷಯಗಳು ಇಲ್ಲಿ ಸಂಯೋಗಗೊಂಡು ಇದನ್ನು ಜನಪ್ರಿಯ ಮಾಡಿವೆ. ಭುವಿ ಎಂಬ ಹಳ್ಳಿಯ ಹುಡುಗಿ, ಕನ್ನಡದ ಬಗ್ಗೆ ಪ್ರೇಮ ಇಟ್ಟುಕೊಂಡ ಹುಡುಗಿ ನಗರಕ್ಕೆ ಬಂದು ಬೆಳೆದ ರೀತಿ ತುಂಬಾ ಜನಕ್ಕೆ ರಿಲೇಟ್ ಆಗಿರಬಹುದು. ರತ್ನಮಾಲ ತನ್ನ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದರೂ ನಂತರ ಆಕೆಗೆ ಉತ್ತರಾಧಿಕಾರಿಯಾಗಿ ಭುವಿ ಸಿಕ್ಕಿದ್ದಾಳೆ. ಇಲ್ಲಿ ರೋಚಕತೆಯ ಜತೆಗೆ ಕನ್ನಡವೆಂಬುದು ವಯಸ್ಸಾದ ಭಾಷೆ, ನಾಟ್ ಕೂಲ್ ಎಂಬ ಭಾವನೆಯನ್ನು ತೊಡೆದುಹಾಕುವಲ್ಲಿ, ಕನ್ನಡವೂ ಕೂಲ್ ಎಂದು ಹೇಳಲು ಬಯಸಿದ್ದು ಎಲ್ಲವೂ ಕನೆಕ್ಟ್ ಆಗಿವೆ. ಆಕೆಗೆ ಹರ್ಷನಂಥ ಕನ್ನಡದಲ್ಲಿ ಮಾತಾಡುವಂತೆ ಪರಿವರ್ತಿತನಾಗುವ ಹುಡುಗ ಸಿಕ್ಕಿದ್ದು ಜನಕ್ಕೆ ಇಷ್ಟವಾಯಿತು. ಜನ ಇದನ್ನು ಒಪ್ಪಿಕೊಂಡದ್ದು ಭಾಗ್ಯ.
ಕೇಳುಗರು: ಇತ್ತೀಚಿನ ದಿನಗಳಲ್ಲಿ ಭುವಿ ಮೂಕಿಯಾಗುತ್ತಿದ್ದಾಳೆ, ಮೂಲೆಗುಂಪಾಗುತ್ತಿದ್ದಾಳೆ ಅನಿಸುತ್ತಿದೆ. ಕನ್ನಡ ಉಪನ್ಯಾಸಕ ವೃತ್ತಿಯಿಂದ ಆಲೆಯನ್ನು ಬಿಡಿಸಿ ಮನೆಗೆಲಸಕ್ಕೆ ಕೂರಿಸಲಾಗಿದೆ. ಭಾಷೆಗೆ ಪ್ರಾಧಾನ್ಯ ಹೊರಟುಹೋಗಿದೆ.
ವಿಕಾಸ್: ವಿಮಾನ ಟೇಕಾಫ್ ಆಗಲು ರನ್‌ವೇಯಲ್ಲಿ ಸ್ವಲ್ಪ ಹೊತ್ತು ತೆಗೆದುಕೊಳ್ಳುತ್ತದೆ. ಅಮ್ಮಮ್ಮ ಆರೋಗ್ಯ ಹದಗೆಟ್ಟಿದೆ. ಇದಕ್ಕೆಲ್ಲಾ ಉತ್ತರ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತದೆ. ಭುವಿ ಮದುವೆಗಿಂತ ಮೊದಲು ಇದ್ದವಳಂತೆ ಈಗ ತಾನು ಒಬ್ಬಳೇ ಅಲ್ಲ, ಕುಟುಂಬದಲ್ಲಿ ಸೊಸೆಯ ಪಾತ್ರವನ್ನೂ ನಿರ್ವಹಿಸುತ್ತಿದ್ದಾಳೆ. ಮುಂದೆ ಅವಳ ಕತೆ ಶುರುವಾಗುತ್ತೆ.
ಕೇಳುಗರು: ವರೂಧಿನಿಗೆ ಯಾವಾವ ಶಿಕ್ಷೆ?
ವರೂಧಿನಿ ಪಾತ್ರಧಾರಿ ಸಾರಾ ಅಣ್ಣಯ್ಯ: ವರೂಧಿನಿಗೆ ತಾನು ಬಯಸುತ್ತಿದ್ದ ಹರ್ಷನ ಜತೆ ಮದುವೆ ತಪ್ಪಿಹೋಗಿದೆ. ಅದೇ ಆಕೆಗೆ ಶಿಕ್ಷೆ. ಆಕೆ ಜೈಲಿಗೂ ಹೋಗಿದ್ದಾಳೆ.
ಕೇಳುಗರು: ಎಲ್ಲ ಪುರುಷ ಪಾತ್ರಗಳೂ ಇಂದು ದಾಡಿ ಬಿಡುತ್ತಿವೆ. ಅದು ಚೆನ್ನಾಗಿಲ್ಲ.
ಹರ್ಷ ಪಾತ್ರಧಾರಿ ಕಿರಣ್: ನಾನು ದಾಡಿ ತೆಗೆಯಲು ಪ್ರಯತ್ನಪಟ್ಟೆ. ಚೆನ್ನಾಗಿ ಕಾಣಿಸುವುದಿಲ್ಲ ಎಂದು ಗೊತ್ತಾಯಿತು!
ಕೇಳುಗ: ಮುಂದಿನ ಭಾಗಗಳಲ್ಲಿ ಅಮ್ಮಮ್ಮ ಇರುತ್ತಾರೋ ಇಲ್ಲವೋ? ಅವರನ್ನು ಏನು ಮಾಡುತ್ತೀರಿ?
ಅಮ್ಮಮ್ಮ ಪಾತ್ರಧಾರಿ ಚಿತ್ಕಲಾ ಬಿರಾದರ್: ಅಮ್ಮಮ್ಮ ಇರುತ್ತಾರೋ ಇಲ್ವಾ ಎಂಬ ಅನುಮಾನ ನನಗೂ ಇದೆ. ಇದಕ್ಕೆ ಉತ್ತರ ಬರಹಗಾರರ ಬಳಿ ಕೇಳಬೇಕು. ವಾಸ್ತವವಾಗಿ ಸೀನುಗಳನ್ನು ಮಿಕ್ಸ್ ಮಾಡಿ ಶೂಟ್ ಮಾಡಲಾಗುತ್ತದೆ. ಹೀಗಾಗಿ ನನಗೂ ಗೊತ್ತಿಲ್ಲ,. ಕುತೂಹಲವಿದೆ. ಭುವಿ ಮತ್ತು ಅಮ್ಮಮ್ಮ ಎರಡು ದೀಪಗಳ ಹಾಗೆ. ಒಂದು ಪ್ರಜ್ವಲವಾದರೆ ಇನ್ನೊಂದು ಮಂಕಾಗುತ್ತದೆ. ಒಂದು ಮೆಗಾ ಸೀರಿಯಲ್ ಟೇಕಾಫ್‌ಗೆ ಸಾಕಷ್ಟು ಸಮಯ ಬೇಕು. ಕೆಲವೊಮ್ಮೆ ಕೆಲವು ಪಾತ್ರಗಳು ಮಂಕಾಗುತ್ತವೆ.
ಕೇಳುಗರು: ಅಮ್ಮಮ್ಮ ಮತ್ತು ಹರ್ಷ ಜತೆಗಿನ ಭಾವುಕ ದೃಶ್ಯಗಳು ಅಳಿಸುತ್ತಿವೆ. ನಿರಂತರ ಬೇಸರದ ದೃಶ್ಯಗಳು ಬರುತ್ತಿವೆ. ಇದು ಬೇಡ. ಹರ್ಷನಿಗೆ ಇನ್ನಷ್ಟು ಸ್ಕ್ರೀನ್ ಸ್ಪೇಸ್ ಕೊಡಬೇಕು.
ಯಶವಂತ್: ಕುಟುಂಬ ಎಂದಮೇಲೆ ಎಲ್ಲರೂ ಇರುತ್ತಾರೆ. ಎಲ್ಲರಿಗೂ ಅವಕಾಶ ಕೊಡಬೇಕು. ಕತೆ ಹಾಗೆ ಸಾಗುತ್ತದೆ.
ಕೇಳುಗರು: ಅಮ್ಮಮ್ಮನ ವಿಲ್‌ನ ಕತೆ ಮುಂದೇನಾಗುತ್ತದೆ?
ವಿಕಾಸ್: ಇಡೀ ಕತೆಯಿರುವುದು ವಿಲ್‌ನ ಜತೆಯಲ್ಲಿ. ಭುವಿ ಜತೆಗೆ ರತ್ನಮಾಲ ಇರುವುದು ಅಂಜನೇಯನ ಶಕ್ತಿ ನೆನಪಿಸಲು ಜಾಂಬವ ಜತೆಗೆ ಇದ್ದ ಹಾಗೆ. ಹರ್ಷ ಒಳ್ಳೆಯವನು ಆದರೆ ಮುಂಗೋಪಿ. ಹರ್ಷ ಮತ್ತು ಸಾನಿಯಾ ಬೆಂಕಿ ಮತ್ತು ಗಾಳಿ ಇದ್ದ ಹಾಗೆ. ಭುವಿಯ ಸಜ್ಜನಿಕೆಯಿಂದ ಇದನ್ನು ಶಮನಗೊಳಿಸಲು ಸಾಧ್ಯ. ತನ್ನ ಮಗ ಆಸ್ತಿ ಮುಂದುವರಿಸಿಕೊಂಡು ಹೋಗಲಾರ ಅನಿಸಿಯೇ ರತ್ನಮಾಲ ವಿಲ್ ಬರೆದಿರುವುದು.
ಚಿತ್ಕಲಾ: ಮಗನ ಮೇಲೆ ಇದ್ದಷ್ಟೇ ಪ್ರೀತಿ ಸಂಸ್ಥೆ ಮೇಲೆ ರತ್ನಮಾಲಾಗೆ ಇದೆ. ಸೊಸೆಯನ್ನು ಅಸ್ತಿ ಎಂದೇ ತಿಳಿದರೆ ಕಲಹವಿರುವುದಿಲ್ಲ ಎಂಬುದು ಇದರ ಸಂದೇಶ. ಸೊಸೆಯೇ ಆಸ್ತಿ ಎಂದು ರತ್ನಮಾಲ ತಿಳಿದಿದ್ದಾಳೆ. ಹಾಗಾಗಿ ಆಸ್ತಿ ಆಕೆಗೆ ವರ್ಗಾಯಿಸುತ್ತಿದ್ದಾಳೆ.
ಕೇಳುಗರು: ವರೂ ಯಾಕೆ ಹಾಗೆ? ಅಷ್ಟೊಂದು ಹಠ ಯಾಕೆ?
ವಿಕಾಸ್: ವರೂ ಯಾಕೆ ಹಾಗೆ, ಭುವಿ ಯಾಕೆ ಹಾಗೆ ಎಂದರೆ ಅವರು ಬೆಳೆದು ಬಂದ ಪರಿಸ್ಥಿತಿ ಹಾಗಿದೆ ಎಂಬುದೇ ಉತ್ತರ. ನಮ್ಮೆಲ್ಲರಲ್ಲೂ ಒಂದೊಂದು ಗುಣವಿರುತ್ತದೆ. ಹೀಗಾಗಿ ಪ್ರತಿಕ್ರಿಯೆಗಳೂ ಅದೇ ಥರ. ವರೂ ಹರ್ಷನನ್ನು ಪಡೆಯಲೇಬೇಕು ಎಂಬ ಹಠದಿಂದ ಬೆಳೆದ ಹುಡುಗಿ. ಹೀಗಾಗಿ ಹಠ ಸಹಜ.
ಕೇಳುಗರು: ಸಾನಿಯಾ ಯಾವಾಗ ಒಳ್ಳೆಯವಳಾಗುತ್ತಾಳೆ?
ವಿಕಾಸ್: ತುಂಬಾ ಸನ್ನಿವೇಶಗಳಲ್ಲಿ ಸಾನಿಯಾ ಪಾಠ ಕಲಿತಿದ್ದಾಳೆ. ಆದರೆ ಕತೆಗೆ ಪೂರಕವಾಗಿ ಅವರ ಪಾತ್ರ ವಿಭಿನ್ನ ರೀತಿಯಲ್ಲಿ ವರ್ತಿಸುತ್ತಾ ಹೋಗುತ್ತಿದೆ. ಕತೆಯೆ ನಡೆಗೆ ತಕ್ಕಂತೆ ಆಕೆ ಬದಲಾಗಬಹುದು, ಕಾದು ನೋಡೋಣ.
ಸಂವಾದದದಲ್ಲಿ ಕನ್ನಡತಿ ಧಾರಾವಾಹಿ ನಿರ್ದೇಶಕ ಯಶವಂತ್, ಕತೆಗಾರ ವಿಕಾಸ್ ನೇಗಿಲೋಣಿ, ಪಾತ್ರಧಾರಿಗಳಾದ ಚಿತ್ಕಲಾ ಬಿರಾದಾರ್, ಕಿರಣ್ ರಾಜ್, ಸಾರಾ ಅಣ್ಣಯ್ಯ ಹಾಗೂ ಸಾನಿಯಾ ಪಾತ್ರಧಾರಿಗಳು ಭಾಗವಹಿಸಿದ್ದರು.