ಬದುಕಿನ ಸೂಕ್ಷ್ಮ ಸಂವೇದನೆಗಳನ್ನು ಸಿನಿಮಾದಂತಹ ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಡುತ್ತಾ, ವರ್ತಮಾನದ ಹಲವು ಸಂಕೀರ್ಣ ವಿಷಯಗಳನ್ನು ಮನಮುಟ್ಟುವಂತೆ ಚಿತ್ರಿಸಿ ಏಳು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತದ ಏಕೈಕ ಚಿತ್ರ ನಿರ್ದೇಶಕ ಪಿ. ಶೇಷಾದ್ರಿ.
ತುಮಕೂರು ಜಿಲ್ಲೆಯವರಾದ ಶೇಷಾದ್ರಿ ಅವರು 1985ರಲ್ಲಿ ಬೆಂಗಳೂರಿಗೆ ಬಂದು ನವಕರ್ನಾಟಕ ಪಬ್ಲಿಕೇಷನ್‌ನಲ್ಲಿ ಬುಕ್ ಡಿಸೈನಿಂಗ್ ಕೆಲಸಕ್ಕೆ ಸೇರಿದರು. ನಂತರ ಪತ್ರಕರ್ತರಾಗಿ ವೃತ್ತಿ ಆರಂಭಿಸಿ, ವರದಿಗಳಿಗೆ ಪೂರಕವಾದ ಚಿತ್ರಗಳನ್ನೂ ರಚಿಸಲಾರಂಭಿಸಿದರು. 1985ರಿಂದ ಸ್ವತಂತ್ರವಾಗಿ ದೂರದರ್ಶನಕ್ಕಾಗಿ ಧಾರಾವಾಹಿ, ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು.
2000ರಲ್ಲಿ ತೆರೆ ಕಂಡಿದ್ದ ಇವರ ನಿರ್ದೇಶನದ ಮೊದಲ ಚಿತ್ರ ‘ಮುನ್ನುಡಿ’ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿತ್ತು. ಆ ಬಳಿಕ 2001ರಲ್ಲಿ ‘ಅತಿಥಿ’, 2004ರಲ್ಲಿ ‘ಬೇರು’, 2005ರಲ್ಲಿ ‘ತುತ್ತೂರಿ’, 2008ರಲ್ಲಿ ‘ವಿಮುಕ್ತಿ’, 2010ರಲ್ಲಿ ‘ಬೆಟ್ಟದ ಜೀವʼ ಮತ್ತು 2012ರಲ್ಲಿ ‘ಭಾರತ್ ಸ್ಟೋರ್ಸ್’ ಚಿತ್ರಗಳು ರಾಷ್ಟ್ರ ಪ್ರಶಸ್ತಿಯ ಗರಿ ಏರಿಸಿಕೊಂಡವು. ಕನಸಿನಲ್ಲಿಯೂ ಕನ್ನಡ ಚಿತ್ರರಂಗದ ಯಶಸ್ಸಿನ ಕುರಿತೇ ಕನವರಿಸುವ ಪಿ. ಶೇಷಾದ್ರಿ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | Vistara News Launch | ಸಾರಸ್ವತ ಲೋಕದ ಸಾಧಕ ಬಸವರಾಜ ಕೊನೇಕ ಅವರಿಗೆ ಕಾಯಕ ಯೋಗಿ ಗರಿ