ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನ ಗೌರಿಶಂಕರ ನಗರದ ಶ್ರೀ ಅವಧೂತ ದತ್ತಪೀಠದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ(Vistara News Launch) ಬುಧವಾರ ಅದ್ಧೂರಿಯಾಗಿ ನೆರವೇರಿತು. ವಿಸ್ತಾರ ನ್ಯೂಸ್ ಚಾನೆಲ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅವಧೂತ ದತ್ತಪೀಠದ ಪೀಠಾಧ್ಯಕ್ಷರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು.
ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಮಾತನಾಡಿ, ದುಸ್ತರ ಎಂದರೆ ಬಹಳ ಕಠಿಣವಾದುದು ಎಂದರ್ಥ. ರಾಮನು ಸಮುದ್ರದ ಮೇಲೆ ಸೇತುವೆ ಕಟ್ಟಿಕೊಂಡು ಲಂಕೆಗೆ ತೆರಳಿ ಅರಿಷಡ್ವರ್ಗ ರೂಪವಾದ ರಾವಣನನ್ನು ಗೆದ್ದ. ಇದು ಕತೆಯಲ್ಲ, ನಮ್ಮ ಮನುಷ್ಯರಿಗೆ ಹೋಲಿಸಿಕೊಳ್ಳುವ ಕತೆಯಾಗಿದೆ. ಅರಿಷಡ್ವರ್ಗಗಳನ್ನು ಗೆದ್ದರೆ ಸಿಗುವುದು ಜಯ. ರಾಮ ಅಂತಹ ಗೆಲುವು ಸಾಧಿಸಿದ ಬಳಿಕ ಆತ್ಮಾರಾಮನಾದ. ಅದರಂತೆ ಸಮುದ್ರ ಬಹಳ ಆಳ, ವಿಸ್ತಾರವಾದುದು. ಹೀಗಾಗಿ ವಿಸ್ತಾರ ಎಂಬ ಹೆಸರಿನಲ್ಲೇ ವಿಶೇಷತೆ ಇದೆ. ಹೊಸ ವಿಚಾರಗಳನ್ನು ಹುಡುಕುವಂತಹ ಒಳ್ಳೆಯ ಸದಾಶಯಗಳನ್ನು ಇದು ಹೊಂದಿದೆ. ಈ ಚಾನೆಲ್‌ಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೈಸೂರು, ಕರ್ನಾಟಕದ ಕೀರ್ತಿಯನ್ನು ದೇಶ ಮತ್ತು ವಿಶ್ವದಲ್ಲಿ ಮೆರೆಸಿದೆ. ಇದೊಂದು ಐತಿಹಾಸಿಕ ಮತ್ತು ಮಹತ್ವದ ಸಾಂಸ್ಕೃತಿಕ ಕ್ಷೇತ್ರ. ಹಾಗಾಗಿ ಇಲ್ಲಿ ವಿಸ್ತಾರ ಕನ್ನಡ ಸಂಭ್ರಮ ಆಯೋಜಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಒಂದು ಮಾಧ್ಯಮ ಏಕಮುಖ ಆಗಬಾರದು. ಇವತ್ತಿನ ಮಾಧ್ಯಮಗಳ ಮನಸ್ಥಿತಿ ಹೇಗಿದೆ ಎಂದರೆ, ನಾವು ಹೇಳಿದ್ದೆಲ್ಲ ಸರಿ ಹಾಗೂ ನಾವು ಹೇಳಿದ್ದೇ ಕೇಳಬೇಕು ಎಂಬ ಸಂದರ್ಭದಲ್ಲಿ ನಾವು ಹೊಸ ಮಾಧ್ಯಮವನ್ನು ಹುಟ್ಟುಹಾಕಿದ್ದೇವೆ. ಮಾಧ್ಯಮಗಳಿಗೆ ಮಾತನಾಡಲು ಬಾಯಿ, ಕೈಯಲ್ಲಿ ಪೆನ್ ಮಾತ್ರವಲ್ಲ, ನಮಗೊಂದು ಹೃದಯವಿದೆ. ನಮಗೊಂದು ಮನಸ್ಸಿದೆ, ಬೇರೆಯವರು ಹೇಳುವುದು ಕೇಳಿಸಿಕೊಳ್ಳಲು ನಮಗೆ ಕಿವಿಯೂ ಇದೆ ಎಂಬುವುದನ್ನು ತಿಳಿಸಿಕೊಡಲು ನಾವು ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಎಲ್ಲದಕ್ಕಿಂತ ಮುಖ್ಯ. ಎಲ್ಲರಿಗೂ ಶಿಕ್ಷಣ ಎನ್ನುವುದು ಈಗಲೂ ಮರೀಚಿಕೆಯಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ, ವಿಸ್ತಾರ ನ್ಯೂಸ್ ಸರ್ಕಾರಿ ಶಾಲೆಗಳ ದತ್ತು ಅಭಿಯಾನಕ್ಕೆ ಚಾಲನೆ ನೀಡಿರುವುದು ಸಂತಸದ ಸಂಗತಿ ಎಂದರು.
ಇದನ್ನೂ ಓದಿ | Vistara News Launch | ಕನ್ನಡ ಮಾಧ್ಯಮ ಲೋಕದಲ್ಲಿ ವಿಸ್ತಾರ ನ್ಯೂಸ್ ಎತ್ತರಕ್ಕೆ ಬೆಳೆಯಲಿ: ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹಾಗೂ ಮಾಜಿ ಶಾಸಕ ವಾಸು ಅವರು ಚಾನೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಾಹಿನಿಯ ʼನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಅಭಿಯಾನ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಇದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶ್ರೀ ರಾಮಕೃಷ್ಣ ಆಶ್ರಮದ ಮುಕ್ತಿದಾನಂದಜೀ ಮಹಾರಾಜ್, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು.
ಪ್ರೊ.ಕೃಷ್ಣೇಗೌಡ ಮಾತನಾಡಿ, ನಮ್ಮ ಉದ್ದೇಶ ಶುದ್ಧ ಹಾಗೂ ಸತ್ಯವಾಗಿದ್ದರೆ ಸಮಾಜದಲ್ಲಿ ತನ್ನಿಂತಾನೇ ಸಹಕಾರ ದೊರೆಯುತ್ತದೆ. ಜನ ಬಯಸುವುದೇ ಬೇರೆ, ಜನ ಕೇಳುವುದೂ ಬೇರೆ. ವಿಸ್ತಾರ ನ್ಯೂಸ್ ಜನ ಬಯಸುವುದನ್ನು ಕೊಡುವ ಚಾನೆಲ್ ಆಗಲಿ ಆಶಿಸಿದರು.
ಕಾರ್ಯಕ್ರಮದಲ್ಲಿ ಮಠದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಜಿ.ಎಸ್.ಎಸ್. ಸಮೂಹ ಸಂಸ್ಥೆಗಳ ಚೇರ್ಮನ್ ಶ್ರೀಹರಿ ದ್ವಾರಕಾನಾಥ್, ಪ್ರತಿನಿಧಿ ಪತ್ರಿಕೆ ಪ್ರಧಾನ ಸಂಪಾದಕ ಸಿ.ಕೆ.ಮಹೇಂದ್ರ, ಕಾರ್ಯನಿರ್ವಾಹಕ ಸಂಪಾದಕ ಧರ್ಮಾಪುರ ನಾರಾಯಣ, ವಿಧಾನ ಪರಿಷತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಸೇರಿ ಹಲವರು ಉಪಸ್ಥಿತರಿದ್ದರು. .
ಇದನ್ನೂ ಓದಿ | Vistara News Launch | ಜನರ ಅಗತ್ಯಕ್ಕೆ ತಕ್ಕಂತೆ ವಿಸ್ತಾರ ಕಾರ್ಯನಿರ್ವಹಣೆ: ಸಿದ್ದಬಸವ ಮಹಾಸ್ವಾಮಿ