ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿವೆ. ಈ ನಡುವೆ ಜನರ ನಾಡಿ ಮಿಡಿತ ಅರಿಯಲು ತೆರೆದಿರುವ ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು, ಬುಧವಾರ (ಮಾ.20) ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್ ಬೂತ್ ಸಮೀಕ್ಷೆಯಲ್ಲಿ (Vistara news polling booth) ಸಾವಿರಾರು ಮತದಾರರು, ಮುಂದಿನ ಸಂಸದರು ಯಾರಾಗಬೇಕು ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕ್ಷೇತ್ರದಿಂದ ಸಾವಿರಾರು ಕರೆಗಳು ಬಂದಿದ್ದು, ಇವುಗಳ ಪೈಕಿ ಒಟ್ಟು 5415 ಕರೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಶೇ. 52ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಶೇ.48ರಷ್ಟು ಜನರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ.
ವಿಸ್ತಾರ ಪೋಲಿಂಗ್ ಬೂತ್‌ನಲ್ಲಿ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಕಠಿಣ ಬಿಜೆಪಿ-ಕಾಂಗ್ರೆಸ್ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಗೆ 2814 ಮತದಾರರು ಮತ ನೀಡಿದ್ದು, ಕಾಂಗ್ರೆಸ್ ಪಕ್ಷಕ್ಕೆ 2601 ಮತಗಳು ಬಂದಿವೆ. ಆದರೂ ಮತ್ತೊಮ್ಮೆ ಬಿಜೆಪಿ ಪರವೇ ಹೆಚ್ಚಿನ ಜನರು ಒಲವು ತೋರಿದ್ದಾರೆ.
ಇದನ್ನೂ ಓದಿ | Vistara News Polling Booth: ರಾಯಚೂರು ಲೋಕಸಭಾ ಕ್ಷೇತ್ರ ಮತ್ತೊಮ್ಮೆ ಕಮಲ ತೆಕ್ಕೆಗೆ!
ಕರೆಗಳ ಶೇಕಡಾವಾರು ವಿವರ
ಸ್ವೀಕರಿಸಿದ ಕರೆಗಳು: 5415
ಬಿಜೆಪಿ: 2814 (ಶೇ.52)
ಕಾಂಗ್ರೆಸ್: 2601 (ಶೇ.48)
ಇತರೆ: ೦0
ಕ್ಷೇತ್ರದಲ್ಲಿ ಹಾಲಿ ಸಂಸದ ಪಿ.ಸಿ.ಮೋಹನ್ ಅವರೇ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಎನ್.ಎ.ಹ್ಯಾರಿಸ್, ಎಸ್.ಎ.ಹುಸೇನ್, ಮನ್ಸೂರ್ ಅಲಿಖಾನ್, ನಜೀರ್ ಅಹ್ಮದ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
2008ರಲ್ಲಿ ಕ್ಷೇತ್ರ ವಿಗಂಡಣೆಯಾದ ಬಳಿಕ ಉದಯವಾದ ಕ್ಷೇತ್ರಗಳಲ್ಲಿ ಬೆಂಗಳೂರು ಸೆಂಟ್ರಲ್ ಕೂಡ ಒಂದಾಗಿದೆ. ನಂತರ ನಡೆದ 2009, 2014, 2019 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯದ್ದೇ ಇಲ್ಲಿ ಪಾರುಪತ್ಯ. ಸತತ ಮೂರು ಬಾರಿ ಪಿ.ಸಿ.ಮೋಹನ್ ಅವರು ವಿಜಯಭೇರಿ ಮೊಳಗಿಸಿದ್ದಾರೆ.
2009ರಲ್ಲಿ ಕಾಂಗ್ರೆಸ್‌ನಿಂದ ಎಚ್.ಟಿ.ಸಾಂಗ್ಲಿಯಾನ ಮತ್ತು ಜೆಡಿಎಸ್‌ನಿಂದ ಜಮೀರ್ ಅಹ್ಮದ್ ಖಾನ್, 2014ರಲ್ಲಿ ಕಾಂಗ್ರೆಸ್‌ನಿಂದ ರಿಜ್ವಾನ್ ಅರ್ಷದ್, 2019ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ರಿಜ್ವಾನ್ ಮತ್ತು ಪಕ್ಷೇತರರಾಗಿ ಚಿತ್ರನಟ ಪ್ರಕಾಶ್ ರಾಜ್ ಸ್ಪರ್ಧಿಸಿ ಸೋತಿದ್ದರು. 2014 ಮತ್ತು 2019ರ ಚುನಾವಣೆಯ ಗೆಲುವಿನ ಅಂತರ ತೀರಾ ಕಮ್ಮಿಯಾಗಿರುವುದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಸದ್ಯ ಕ್ಷೇತ್ರದಲ್ಲಿನ 8 ವಿಧಾನಸಭಾ ಕ್ಷೇತ್ರದಲ್ಲಿ 5 ಕಡೆ ಕಾಂಗ್ರೆಸ್, 3 ಕಡೆ ಬಿಜೆಪಿ ಶಾಸಕರು ಇದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್ ಅವರು ಮೂರು ಬಾರಿ ಸಂಸದರಾಗಿ ಆಯ್ಕೆಯಾದರೂ ಪೋಲಿಂಗ್‌ನಲ್ಲಿ ಶೇಕಡಾವಾರು ಮತಗಳು ಕಡಿಮೆ ಬಂದಿವೆ. ಕ್ಷೇತ್ರದಲ್ಲಿ 22,04,520 ಮತದಾರರು ಇದ್ದಾರೆ. ಜಾತಿವಾರು ಲೆಕ್ಕಾಚಾರ ನೋಡುವುದಾದರೆ ಎಸ್‌ಸಿ, ಎಸ್‌ಟಿ, ಒಬಿಸಿ ಮತಗಳು 8 ಲಕ್ಷಕ್ಕೂ ಅಧಿಕ ಇದ್ದು, ತಮಿಳರು 5 ಲಕ್ಷ, ಮುಸ್ಲಿಮರು 4.5 ಲಕ್ಷ ಮತದಾರರು ಇದ್ದಾರೆ. ಇನ್ನು ವಿಸ್ತಾರ ನ್ಯೂಸ್ ಪೋಲಿಂಗ್ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ಬಾರಿ ಜಿದ್ದಾಜಿದ್ದಿ ಹೋರಾಟಕ್ಕೆ ಕ್ಷೇತ್ರ ಸಾಕ್ಷಿಯಾಗಲಿದೆ. ಆದರೆ ಬಿಜೆಪಿ ಪರವಾಗಿಯೇ ಹೆಚ್ಚಿನ ಜನರು ಒಲವು ತೋರಿರುವುದು ಕಂಡುಬಂದಿದೆ.
ಗುರುವಾರ ಯಾವ ಕ್ಷೇತ್ರ?
ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ದಾವಣಗೆರೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಬೀದರ್ ಕ್ಷೇತ್ರದ ಜನ ಫೋನ್ ಮಾಡಿ ಓಟ್ ಮಾಡಬಹುದು. ರಾತ್ರಿ 8 ಗಂಟೆಗೆ ಎರಡೂ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ | Vistara News Polling Booth: ಚಾಮರಾಜನಗರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಟಫ್ ಫೈಟ್; ಯಾರಿಗೆಷ್ಟು ಮತ?
ಈಗಾಗಲೇ ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ಮುಕ್ತಾಯಗೊಂಡಿವೆ.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488