ಬೆಂಗಳೂರು: ವಿಸ್ತಾರ ಪೋಲಿಂಗ್ ಬೂತ್‌ಗೆ 14ನೇ ದಿನವೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸಮೀಕ್ಷೆಯ ಕೊನೆಯ ದಿನವಾದ ಮಂಗಳವಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಮುಂದಿನ ಸಂಸದರು ಯಾರಾಗಬೇಕು ಎಂದು ಮತದಾರರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಕ್ಷೇತ್ರದಿಂದ ವಿಸ್ತಾರ ಪೋಲಿಂಗ್ ಬೂತ್‌ಗೆ ಸಾವಿರಾರು ಕರೆಗಳು ಬಂದಿದ್ದು, ಈ ಪೈಕಿ ಒಟ್ಟು 6128 ಕರೆಗಳನ್ನು ಸ್ವೀಕರಿಸಲಾಗಿದೆ. ಕಾಂಗ್ರೆಸ್ ಪರ 3142 ಮತಗಳು ಬಂದಿದ್ದರೆ, ಬಿಜೆಪಿ ಪರ 2986 ಮತಗಳು ಬಂದಿವೆ. ಇದರಿಂದ ಕಲಬುರಗಿ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಫೈಟ್ ಖಚಿತವಾಗಿದ್ದು, ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬುವುದು ಮತದಾರರ ಅಭಿಪ್ರಾಯವಾಗಿದೆ.
ಕರೆಗಳ ಶೇಕಡಾವಾರು ವಿವರ
ಸ್ವೀಕರಿಸಿದ ಕರೆಗಳು: 6128
ಬಿಜೆಪಿ : 2986 (ಶೇ. 49)
ಕಾಂಗ್ರೆಸ್ : 3142 (ಶೇ. 51)
ಇತರೆ : 00
ಇದನ್ನೂ ಓದಿ | Vistara News Polling Booth: ಉತ್ತರ ಕನ್ನಡದಲ್ಲಿ ಬಿಜೆಪಿಯೇ ಪ್ರಬಲ; ಜೆಡಿಎಸ್ ಬಂಡಾಯ ಅಭ್ಯರ್ಥಿಗೆ ಗಣನೀಯ ಮತ!
ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಹಾಲಿ ಸಂಸದ ಉಮೇಶ್ ಜಾಧವ್ ಅವರು ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಸ್ಪರ್ಧಿಸುತ್ತಿದ್ದಾರೆ. 2009, 2014ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಜಯಗಳಿಸಿದ್ದರು. ಆದರೆ, 2019ರ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ಅವರು ಖರ್ಗೆ ಅವರ ವಿರುದ್ಧ ಗೆದ್ದು ಬೀಗಿದ್ದರು. ತಮ್ಮ ಮಾವ ಖರ್ಗೆ ಅವರು ಐದು ದಶಕಗಳಿಂದ ಚುನಾವಣೆಯಲ್ಲಿದ್ದರೂ ಇದೇ ಮೊದಲ ಬಾರಿ ರಾಧಾಕೃಷ್ಣ ದೊಡ್ಡಮನಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದೀಗ ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್ ಪ್ರಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತದಾರರು ಒಲುವು ತೋರಿರುವುದು ಕಂಡುಬಂದಿದೆ.
1971ರಿಂದ ಕಾಂಗ್ರೆಸ್‌ನ ಅಭೇದ್ಯ ಕೋಟೆಯಾಗಿದ್ದ ಕ್ಷೇತ್ರದಲ್ಲಿ 1996ರಲ್ಲಿ ಜನತಾ ದಳದ ಖಮರುಲ್ ಇಸ್ಲಾಂ ಬ್ರೇಕ್ ಹಾಕಿದ್ದರು. ನಂತರ 1998ರಲ್ಲಿ ಬಿಜೆಪಿಯ ಬಸವರಾಜ್ ಪಾಟೀಲ್ ಸೇಡಂ ಗೆಲುವು ಕಂಡಿದ್ದರು. ಬಳಿಕ 2014ರವರೆಗೆ ಕ್ಷೇತ್ರವು ಕಾಂಗ್ರೆಸ್ ತೆಕ್ಕೆಯಲ್ಲಿತ್ತು. 2019ರಲ್ಲಿ ಖರ್ಗೆ ವಿರುದ್ಧ ಬಿಜೆಪಿಯ ಉಮೇಶ ಜಾಧವ್ ಅವರು ಜಯಭೇರಿ ಮೊಳಗಿಸಿದ್ದರು. ಇದೀಗ ಮತ್ತೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.
ಇದನ್ನೂ ಓದಿ | Vistara News Polling Booth: ಬಾಗಲಕೋಟೆಯಲ್ಲಿ ಮತ್ತೊಮ್ಮೆ ಅರಳಲಿದೆ ಕಮಲ; ಕಾಂಗ್ರೆಸ್‌ಗೆ ಬಂಡಾಯ ಬಿಸಿ?
2024 ಲೋಕಸಭಾ ಚುನಾವಣೆ ವೇಳೆ ಕ್ಷೇತ್ರದ ಒಟ್ಟು ಮತದರರು 22,68,944 ಮತದಾರರು ಇದ್ದರು. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರು ನಿರ್ಣಾಯಕರಾಗಿದ್ದಾರೆ. ಜೊತೆಗೆ ಮುಸ್ಲಿಂ, ಪ.ಜಾತಿ, ಪ.ಪಂಗಡ, ಲಂಬಾಣಿ, ಕಬ್ಬಲಿಗ, ಕುರುಬ ಸಮುದಾಯ ಸೇರಿದಂತೆ ಇತರೆ ಸಮುದಾಯದ ಮತದಾರರಿದ್ದಾರೆ.