Site icon Vistara News

Vistara Kannada Sambhrama : ವಿಸ್ತಾರ ನ್ಯೂಸ್‌ನ ಶೈಕ್ಷಣಿಕ, ಜನಪರ ಕಾಳಜಿ ಶ್ಲಾಘನೀಯ: ಡಿ.ಕೆ. ಶಿವಕುಮಾರ್‌ ಮೆಚ್ಚುಗೆ

DK Shivakumar in vistara kannada sambrama

ಬೆಂಗಳೂರು: ವಿಸ್ತಾರ ನ್ಯೂಸ್‌ ಶೈಕ್ಷಣಿಕವಾಗಿ ಉತ್ತಮ ಕೆಲಸವನ್ನು ಮಾಡುತ್ತಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಒತ್ತು ನೀಡುವ ಕೆಲಸವನ್ನು ಮಾಡುತ್ತಿದೆ. ಅವುಗಳಿಗೆ ಮೂಲಸೌಕರ್ಯವನ್ನು ಒದಗಿಸುವಂತಹ ಉತ್ತಮ ಕಾರ್ಯ ಮಾಡುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ. ಈ ಮೂಲಕ ಸರ್ಕಾರ ಮಾಡುವ ಕೆಲಸವನ್ನು ಜನರಿಗಾಗಿ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿಸ್ತಾರ ಕನ್ನಡ ಸಂಭ್ರಮ (Vistara Kannada Sambhrama) ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದರು.

ನಾಡಿನ ಜನಪ್ರಿಯ ಮತ್ತು ಜನಪರ ಮಾಧ್ಯಮ ಸಂಸ್ಥೆಯಾದ ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿರುವ “ವಿಸ್ತಾರ ಕನ್ನಡ ಸಂಭ್ರಮ” (Vistara Kannada Sambhrama) ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ವಿಸ್ತಾರ ನ್ಯೂಸ್‌ ಶೈಕ್ಷಣಿಕವಾಗಿ ನೀಡುತ್ತಿರುವ ಕೊಡುಗೆಯನ್ನು ಹೀಗೆಯೇ ಮುಂದುವರಿಸಲಿ. ಅಲ್ಲದೆ, ಈ ನಿಟ್ಟಿನಲ್ಲಿ ಸರ್ಕಾರ ಮಾಡುತ್ತಿರುವ ಶೈಕ್ಷಣಿಕ ಕೆಲಸಗಳಿಗೂ ಸಹಕಾರ ನೀಡಲಿ ಎಂದು ಆಶಿಸಿದರು.

ಶೈಕ್ಷಣಿಕ ಪ್ರಗತಿಯ ಕನಸು ಬಿಚ್ಚಿಟ್ಟ ಡಿಕೆಶಿ

ನನಗೂ ಸಹ ರಾಜ್ಯದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕು ಎಂಬ ಗುರಿ ಇದೆ. ಈ ಕಾರಣಕ್ಕಾಗಿಯೇ ನಮ್ಮ ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ್ದೆವು. ಈಗ ಆ ನಿಟ್ಟಿನಲ್ಲಿ ನಮ್ಮ ಕಾರ್ಯ ಸಾಗಿದೆ. ಇಡೀ ರಾಜ್ಯದಲ್ಲಿ ನೂತನ ಮಾದರಿಯ “ಕರ್ನಾಟಕ ಪಬ್ಲಿಕ್‌ ಶಾಲೆ”ಯನ್ನು ಪ್ರಾರಂಭಿಸಲು ನಾನು ಮುಂದಾಗಿದ್ದೇನೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಇದರ ಮೂಲ ಉದ್ದೇಶವೆಂದರೆ ಶಿಕ್ಷಣಕ್ಕಾಗಿ ಗ್ರಾಮೀಣ ಮಕ್ಕಳು ನಗರಗಳಿಗೆ ಬರಬಾರದು. ಅವರು ಇದ್ದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಅವರಿಗೆ ಸಿಗುವಂತಾಗಬೇಕು. ಹಾಗಾಗಿ ರಾಜ್ಯಾದ್ಯಂತ ಎರಡು ಸಾವಿರ ಸರ್ಕಾರಿ ಶಾಲೆಗಳನ್ನು ಮಾದರಿ “ಪಬ್ಲಿಕ್‌ ಶಾಲೆ”ಗಳಾಗಿ ಪರಿವರ್ತಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಅದೂ ಸಹ ಸರ್ಕಾರದ ಒಂದು ಪೈಸೆ ಖರ್ಚು ಇಲ್ಲದೆ ಎಂದು ಡಿ.ಕೆ. ಶಿವಕುಮಾರ್‌ ವಿವರಿಸಿದರು.

ಇದನ್ನೂ ಓದಿ: Vistara Kannada Sambhrama : ವಿಸ್ತಾರ ಕನ್ನಡ ಸಂಭ್ರಮದಲ್ಲಿ ಹೇಗಿತ್ತು ಮನರಂಜನೆಯ ಸುಗ್ಗಿ; ಇಲ್ಲಿವೆ ಫೋಟೊ ಝಲಕ್‌

ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ಕಾರ್ಪೊರೇಟ್‌ನವರೊಂದಿಗೆ ಕೈಜೋಡಿಸಿ ಸಿಎಸ್‌ಆರ್‌ ನಿಧಿ ಮೂಲಕ ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಕೊಂಡೊಯ್ಯುವ ಗುರಿ ನಮ್ಮದಾಗಿದೆ. ಕಾರ್ಪೋರೇಟ್‌ ಕಂಪನಿಗಳು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಮಾದರಿ ಶಾಲೆಯನ್ನಾಗಿ ಮಾಡುವ ಗುರಿಯನ್ನು ನಾನು ಹೊಂದಿದ್ದೇನೆ. ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಸಹ ನಮಗೆ ಸಹಕಾರ ನೀಡಲಿ ಎಂದು ಡಿ.ಕೆ. ಶಿವಕುಮಾರ್‌ ಕೋರಿದರು.

ಸುದ್ದಿ ವಾಹಿನಿ ನಡೆಸುವುದು ಸುಲಭವಲ್ಲ

ಸುದ್ದಿ ವಾಹಿನಿಯನ್ನು ನಡೆಸುವುದು ಸುಲಭದ ಕೆಲಸ ಅಲ್ಲ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗವು ಪ್ರಜಾಪ್ರಭುತ್ವದ ಮೂರು ಅಂಗಗಳಾಗಿದ್ದು, ಆಧಾರ ಸ್ತಂಭಗಳಾಗಿವೆ. ಮಾಧ್ಯಮವನ್ನು ನಾಲ್ಕನೇ ಅಂಗ ಎಂದು ಪರಿಗಣಿಸಲಾಗುತ್ತದೆ. ಸುದ್ದಿ ವಾಹಿನಿಯನ್ನು ನಾನೂ ನಡೆಸಲು ಮುಂದಾದೆ. ಆದರೆ, ನನ್ನ ಕೈಯಲ್ಲಾಗದೆ ಹಿಂದೇಟು ಹಾಕಿದೆ. ಆದರೆ, ವಿಸ್ತಾರ ನ್ಯೂಸ್‌ನ ಈ ಏಳಿಗೆಯನ್ನು ನಾನು ಶ್ಲಾಘಿಸುತ್ತೇನೆ. ನಾನು ಯಾವುದೇ ಮಾಧ್ಯಮದೆದುರು ಬಿಚ್ಚು ಮನಸ್ಸಿನಿಂದ ಮಾತನಾಡಿಲ್ಲ. ಆದರೆ, ವಿಸ್ತಾರ ಮಾಧ್ಯಮಕ್ಕೆ ಸಂದರ್ಶನ ನೀಡಿದಾಗ ನಾನು ನನ್ನ ಮುಕ್ತ ಮನಸ್ಸಿನಿಂದ ಹೇಳಿಕೆ ನೀಡಿದ್ದೇನೆ.

ಸುದ್ದಿಗಳ ವೈಭವೀಕರಣ ಬೇಡ

ನಮ್ಮ ಪ್ರತಿ ಹೆಜ್ಜೆಯನ್ನು ಪ್ರತಿಯೊಬ್ಬರೂ ಗಮನಿಸುತ್ತಾರೆ. ಆದರೆ, ರಾಜಕಾರಣಿಗಳನ್ನು ಟಿವಿಯಲ್ಲಿ ಹೀರೋಗಳನ್ನಾಗಿಯೂ ಮಾಡುತ್ತಾರೆ. ವಿಲನ್‌ಗಳನ್ನಾಗಿಯೂ ಮಾಡುತ್ತಾರೆ. ನಮ್ಮನ್ನು ಈಗ ಜೈಲು – ಬೇಲು ಎಂದೆಲ್ಲ ತೋರಿಸಿ, ನಮ್ಮನ್ನು ನೋಡಿದರೆ ಕಳ್ಳ ಕಳ್ಳ ಎಂದು ಕರೆಯುವ ಪರಿಸ್ಥಿತಿ ಬಂದಿದೆ. ಸುದ್ದಿಗಳ ವೈಭವೀಕರಣ ಇಲ್ಲದೆ ಎಲ್ಲ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಕರ್ನಾಟಕ ರಾಜ್ಯಕ್ಕೆ 50 ವರ್ಷ ತುಂಬಿದೆ. ಇದನ್ನು ಇಡೀ ಕರ್ನಾಟಕ ಆಚರಣೆ ಮಾಡುತ್ತಿದೆ. ಹಂಪಿಯಲ್ಲಿ ಕಾರ್ಯಕ್ರಮ ಮಾಡಿದೆವು. ನಿನ್ನೆ ಗದಗದಲ್ಲಿ ಕನ್ನಡ ಜ್ಯೋತಿಗೆ ಚಾಲನೆ ನೀಡಿದೆವು. ಇದು ಇಡೀ ಕರ್ನಾಟಕವನ್ನು ಸುತ್ತಿ ಬರುತ್ತದೆ. ಇಂದು ಕನ್ನಡದ ಸಂಭ್ರಮವನ್ನು ವಿಸ್ತಾರ ನ್ಯೂಸ್‌ ಚಾನೆಲ್‌ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ವಿಸ್ತಾರದ ವಿನೂತನ ಕಾರ್ಯಕ್ರಮ ಬೇರೆಲ್ಲೂ ಇಲ್ಲ: ದಿನೇಶ್‌ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ವಿಸ್ತಾರ ನ್ಯೂಸ್‌ ವಿನೂತನವಾದ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದೆ. ಇಂತಹ ಒಂದು ಕಾರ್ಯಕ್ರಮವನ್ನು ಯಾವ ಚಾನೆಲ್‌ಗಳೂ ಮಾಡಿಲ್ಲ ಎಂದು ನನಗೆ ಅನ್ನಿಸುತ್ತದೆ. ಇಂದು ನಾವು ಬಹಳಷ್ಟು ಸುದ್ದಿಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ನೋಡುತ್ತಿರುತ್ತೇವೆ. ಆದರೆ, ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಎಂದು ತಿಳಿಯುವುದು ಕಷ್ಟವಾಗಿದೆ. ಗೊಂದಲದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದರು.

ಪತ್ರಿಕೆ, ಟಿವಿ ಮೀಡಿಯಾ ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ ಸುದ್ದಿಗಳ ವೈಭವೀಕರಣ ಆಗುತ್ತಿದೆ. ಜನರನ್ನು ಸೆಳೆಯುವ ಉದ್ದೇಶವೇ ಹೆಚ್ಚಾಗಿದೆ. ಆ ಸುದ್ದಿಯ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ನೋಡದೇ ಸುದ್ದಿ ಬಿತ್ತರಿಸುವ ಪದ್ಧತಿ ಶುರುವಾಗಿದೆ. ಇಂಥ ಸಂದರ್ಭದಲ್ಲಿ ಗುಣಮಟ್ಟದ, ನೈಜ ಸುದ್ದಿಯನ್ನು ಕೊಡುವ ಸಂಕಲ್ಪದೊಂದಿಗೆ ವಿಸ್ತಾರ ನ್ಯೂಸ್‌ ಬಿತ್ತರಗೊಳ್ಳುತ್ತಿರುವುದು ಶ್ಲಾಘನೀಯ. ವಿಸ್ತಾರವನ್ನು ಯಾವ ರೀತಿಯಾಗಿ ಪ್ರಾರಂಭ ಮಾಡಲಾಗಿದೆಯೋ ಈಗಲೂ ಸಹ ಯಾವುದೇ ರಾಜಿ ಇಲ್ಲದೆ ಅದೇ ರೀತಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂದು ಹೇಳಲು ನನಗೆ ಸಂತಸವಾಗುತ್ತದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಬಹಳಷ್ಟು ಮಾಧ್ಯಮಗಳು ಒಳ್ಳೆಯ ಉದ್ದೇಶ ಇಟ್ಟುಕೊಂಡು ಪ್ರಾರಂಭವಾಗುತ್ತವೆ. ಆದರೆ, ಕಾಲಾ ನಂತರದಲ್ಲಿ ಆ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗದೆ, ಕೆಲವೊಂದು ವಿಚಾರಕ್ಕೆ ರಾಜಿ ಮಾಡಿಕೊಂಡು ಜನರ ಮೆಚ್ಚುಗೆಯನ್ನು ಕಳೆದುಕೊಂಡಿದ್ದನ್ನು ನಾವು ಕಂಡಿದ್ದೇವೆ. ಆದರೆ, ವಿಸ್ತಾರ ಯಾವುದೇ ವೈಭವೀಕರಣ ಇಲ್ಲದೆ ಸರಳವಾಗಿ ಮತ್ತು ನೇರವಾಗಿ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ ಅವರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಸೀರೆ – ಟೆಂಪ್ರೇಚರ್‌ ಬಗ್ಗೆ ಯೋಗರಾಜ್‌ ಭಟ್‌ ಮಾತು!

ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿ, ವಿಸ್ತಾರ ನ್ಯೂಸ್‌ನ್‌ ಕನ್ನಡ ಸಂಭ್ರಮದಲ್ಲಿ ಆಯೋಜಿಸಿದ್ದ “ಸೀರೆ ಸೊಬಗು” ಕಾರ್ಯಕ್ರಮದಲ್ಲಿ ಸೀರೆ ಉಟ್ಟ ನಾರಿಯರನ್ನು ನೋಡಿದೆ. ಆಗ ನನಗೆ ನಾನು ಬರೆದ ಒಂದು ಹಾಡು ನೆನಪಾಯಿತು. “ಸೀರೇಲಿ ಹುಡುಗೀರ ನೋಡಲೆಬಾರದು, ನಿಲ್ಲಲ್ಲ ಟೆಂಪ್ರೇಚರು” ಎಂಬ ಹಾಡನ್ನು ಬರೆದಿದ್ದು, ಅದು ಸೂಪರ್‌ ಹಿಟ್‌ ಕೂಡಾ ಆಯಿತು. ಆದರೆ, ನಾನು ಟೆಂಪ್ರೇಚರು ಎಂದು ಮೊದಲು ಬರೆದಿರಲಿಲ್ಲ. ಅದರ ಬದಲು ರೋಮಾಂಚನ ಎಂಬ ಪದವನ್ನು ಬಳಕೆ ಮಾಡಿದ್ದೆ. ಅಷ್ಟರಲ್ಲಿ ಬೆಂಗಳೂರಿನ ಒಂದು ಹುಡುಗರ ತಂಡವು ಶಾರ್ಟ್‌ ಫಿಲ್ಮ್‌ ಮಾಡಿ ನನ್ನ ಬಳಿಗೆ ತೆಗೆದುಕೊಂಡು ಬಂದಿದ್ದರು. ಆಗ ಈ ಹಾಡಿನ ಪ್ರಸ್ತಾಪವನ್ನು ಅವರ ಮುಂದೆ ಮಾಡಿದೆ. ಅಲ್ಲಿ ಒಬ್ಬ ಬೆಂಗಳೂರಿನ ಹುಡುಗ ನನ್ನ ಬಳಿ ಕೇಳುತ್ತಾ, “ರೋಮಾಂಚನ” ಎಂದರೆ ಏನು ಅಂದ! ಆತನಿಗೆ ಆ ಪದದ ಬಗ್ಗೆ ಗೊತ್ತೇ ಇರಲಿಲ್ಲ. ಕೊನೆಗೆ ನಾನು ಸಂದರ್ಭ ಸಹಿತ ವಿವರಿಸಿ, ಇದನ್ನು ನಿಮ್ಮ ಕನ್ನಡ ಭಾಷೆಯಲ್ಲಿ ಏನು ಹೇಳುತ್ತೀಯಾ ಎಂದು ಕೇಳಿದೆ. ಅದಕ್ಕಾತ, “ಟೆಂಪ್ರೇಚರ್‌” ಎಂಬ ಶಬ್ದವನ್ನು ಹೇಳಿದ. ಹಾಗಾಗಿ ಕನ್ನಡ ಹಾಡಿನಲ್ಲಿ “ಟೆಂಪ್ರೇಚರ್‌” ಎಂಬ ಇಂಗ್ಲಿಷ್‌ ಪದ ಸೇರಿಕೊಂಡಿತು ಎಂಬುದನ್ನು ವಿವರಿಸಿದರು.

ಹೊಸ ಚಾನೆಲ್‌ ಇರಬಹುದು, ಹೊಸ ವಾಹನ ಸೇರಿದಂತೆ ಯಾವುದೇ ಇದ್ದರೂ ಅದರಲ್ಲಿ ಪ್ರೋಗ್ರೆಸ್‌ ಇರಬೇಕು. ಆ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಸಾಗುತ್ತಿದೆ. ಇನ್ನು ಹೆಸರೇ ವಿಸ್ತಾರ ಎಂದಿದ್ದು, ಅದರಂತೆ ವಿಸ್ತೃತವಾಗಿ ಬೆಳೆಯುತ್ತಿದೆ. ಈ ಚಾನೆಲ್‌ ಒಂದು ವರ್ಷ ದಾಟಿದ್ದೇ ಗೊತ್ತಾಗಲಿಲ್ಲ. ಸೂಕ್ಷ್ಮ ಮನಸ್ಥಿತಿಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಚಾನೆಲ್‌ ಉತ್ತಮ ಗುಣಮಟ್ಟದೊಂದಿಗೆ ಸಾಗುತ್ತಿದೆ. ಈ ಕೆಲಸವು ಹೀಗೇ ಮುಂದುವರಿಯಲಿ ಎಂದು ಯೋಗರಾಜ್‌ ಭಟ್‌ ಹೇಳಿದರು.

ವಿಸ್ತಾರ ಚಾನೆಲ್‌ಗೆ ಶುಭಾಶಯ ಹೇಳಿದ ರಾಗಿಣಿ

ನಟಿ ರಾಗಿಣಿ ದ್ವಿವೇದಿ ಮಾತನಾಡಿ, ನಾನು ಸಹ ಪತ್ರಿಕೋದ್ಯಮವನ್ನು ಓದಿದ್ದೇನೆ. ಸಿನಿಮಾ ಕ್ಷೇತ್ರಕ್ಕೆ ಬರುವ ಮುಂಚೆ ಅಭ್ಯಾಸ ಮಾಡಿದ್ದು, ಈ ಕ್ಷೇತ್ರದ ಸವಾಲುಗಳ ಬಗ್ಗೆ ತಿಳಿದಿದ್ದೇನೆ. ಇಂದು ಎಲ್ಲರಿಗೂ ಮಾಧ್ಯಮ ಎಂಬುದು ಬೇಕು. ವಿಸ್ತಾರ ನ್ಯೂಸ್‌ ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ಉತ್ತಮ ಗುಣಮಟ್ಟದ ಸುದ್ದಿಗಳನ್ನು ಕೊಡುತ್ತಿದೆ. ವಿಸ್ತಾರ ಚಾನೆಲ್‌ಗೆ ಶುಭಾಶಯಗಳು ಎಂದು ಹೇಳಿದರು.

ಇದನ್ನೂ ಓದಿ: Vistara Kannada Sambhrama : ನಿಮ್ಮ ನಿರ್ಧಾರ ನಿಮ್ಮದಾಗಲಿ; ವಿಸ್ತಾರ ಕನ್ನಡ ಸಂಭ್ರಮದಲ್ಲಿ ಯುವಜನತೆಗೆ ರಮೇಶ್‌ ಕಿವಿಮಾತು

ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ವಿಸ್ತಾರ ನ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಕ್ಸಿಕ್ಯೂಟಿವ್‌ ಚೇರ್ಮನ್ ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಚ್.‌ ವಿ. ಧರ್ಮೇಶ್‌, ನಿರ್ದೇಶಕರಾಗಿರುವ ಶ್ರೀನಿವಾಸ ಹೆಬ್ಬಾರ್‌, ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು – ಸ್ಪೆಷಲ್‌ ಆಪರೇಷನ್ಸ್‌ ಸಂಪಾದಕರಾಗಿರುವ ಕಿರಣ್‌ ಕುಮಾರ್‌ ಡಿ.ಕೆ. ಸೇರಿದಂತೆ ಹಲವು ಗಣ್ಯರು‌, ಕಲಾಸಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version