ಬೆಂಗಳೂರು: ವಿಸ್ತಾರ ನ್ಯೂಸ್ ಮೀಡಿಯಾ ಬಳಗದ ಮೂರನೇ ಯೂಟ್ಯೂಬ್ ಚಾನೆಲ್ ʼವಿಸ್ತಾರ ಓಂಕಾರʼವನ್ನು ತುಮಕೂರು ರಾಮಕೃಷ್ಣ- ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು.
ʼಓಂಕಾರʼ ಯೂಟ್ಯೂಬ್ ವಾಹಿನಿಯು ಸರ್ವರ ಆಧ್ಯಾತ್ಮಿಕ- ಮಾನಸಿಕ ನೆಮ್ಮದಿ, ಆನಂದಕ್ಕೆ ಪೂರಕವಾದ ವಿಚಾರಗಳನ್ನು ಪ್ರಸ್ತುತಪಡಿಸಲಿದೆ. ಇದು ವಿಸ್ತಾರ ನ್ಯೂಸ್ ಬಳಗದ ನಾಲ್ಕನೇ ಕೊಡುಗೆ. ಈಗಾಗಲೇ vistaranews.com ವೆಬ್ ತಾಣ, ಆರ್ಥಿಕ ಶಿಕ್ಷಣ ಒದಗಿಸುವ ʼಮನಿ ಪ್ಲಸ್ʼ ಹಾಗೂ ಆರೋಗ್ಯ ವಿಚಾರಗಳಲ್ಲಿ ಅರಿವು ಮೂಡಿಸುವ ʼಹೆಲ್ತ್ʼ ಯೂಟ್ಯೂಬ್ ಚಾನೆಲ್‌ಗಳು ವೀಕ್ಷಕರಿಗೆ ಲಭ್ಯ ಇವೆ.
ಮನುಷ್ಯನಿಗೆ ಅಗತ್ಯವಿರುವ ಆಧ್ಯಾತ್ಮಿಕ ಆಯಾಮದ ಬಗ್ಗೆ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಚಾನೆಲ್ ಲೋಕಾರ್ಪಣೆಯ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ವಿವರಿಸಿದರು. ಚಾನೆಲ್‌ನ ಧ್ಯೇಯೋದ್ದೇಶಗಳನ್ನು ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು. ವಿಸ್ತಾರ ಮೀಡಿಯಾದ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ ಧರ್ಮೇಶ್, ವಿಸ್ತಾರ ನ್ಯೂಸ್‌ನ ಎಕ್ಸಿಕ್ಯೂಟಿವ್ ಎಡಿಟರ್ ಶರತ್ ಎಂ.ಎಸ್ ಜತೆಗಿದ್ದರು.
ಓಂಕಾರ ಚಾನೆಲ್‌ನ ಆಶಯ ಏನು?
ನಾವು ಹಣವಿದ್ದರೆ, ಸಂಪತ್ತು ಹೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅಂದುಕೊಳ್ಳುತ್ತೇವೆ. ಅದುವೇ ಬದುಕಿನ ಪರಮಸುಖ ಎಂದುಕೊಳ್ಳುತ್ತೇವೆ. ಅದರೆ, ಆರೋಗ್ಯ ಕೈಕೊಟ್ಟಾಗ ಎಷ್ಟು ಹಣ ಸುರಿದರೂ ಅದನ್ನು ಮರಳಿ ಪಡೆಯಲು ಸಾಧ್ಯವಾಗದೆ ಇದ್ದಾಗ ಈ ಸಂಪತ್ತು ಎಷ್ಟೊಂದು ನಿರರ್ಥಕ ಅನಿಸುತ್ತದೆ. ಕೆಲವೊಮ್ಮೆ ಹಣ, ಆರೋಗ್ಯ, ಬಂಧು ಬಳಗ ಎಲ್ಲವೂ ಜತೆಗಿರುತ್ತವೆ. ಆದರೆ, ಇದ್ದಕ್ಕಿದ್ದಂತೆಯೇ ಸಂಕಷ್ಟಗಳ ಬರ ಸಿಡಿಲು ಅಪ್ಪಳಿಸಿಬಿಡುತ್ತದೆ. ಎಲ್ಲ ದಾರಿಗಳೂ ಮುಚ್ಚಿ ಹೋದ ಅನುಭವವಾಗುತ್ತದೆ. ಅಂಥ ಹತಾಶೆಯ ಕಟ್ಟಕಡೆಯ ಸ್ಥಿತಿಯಲ್ಲಿ, ಇನ್ನು ಏನೂ ಮಾಡಲಾಗದು ಎನ್ನುವ ಹೊತ್ತಿನಲ್ಲಿ ನಮಗೆ ಬದುಕಿನ ಬಗ್ಗೆ ಒಂದು ಸಣ್ಣ ಭರವಸೆಯನ್ನು ಮೂಡಿಸುವುದು, ಯಾವುದೋ ಒಂದು ಶಕ್ತಿ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತದೆ ಎನ್ನುವ ನಂಬಿಕೆ.
ಈ ಕಾಣದ ಕೈಯನ್ನು ಕೆಲವರು ದೇವರು ಅಂತ ಹೇಳಬಹುದು, ಇನ್ನು ಕೆಲವರು ಯಾವುದೋ ಅವ್ಯಕ್ತವಾದ ಶಕ್ತಿ ಎನ್ನಬಹುದು. ಅಂತೂ ನಮ್ಮನ್ನೆಲ್ಲ ಮೀರಿ, ನಮ್ಮ ಅಳತೆಗೆ ಸಿಗದ, ನಮ್ಮ ಕಲ್ಪನೆಗಳನ್ನು ಮೀರಿದ ಯಾವುದೋ ಒಂದು ನಿಯಾಮಕ ಶಕ್ತಿಯೊಂದು ಎಲ್ಲವನ್ನೂ ನಿಯಂತ್ರಿಸುತ್ತಿದೆ ಎನ್ನುವುದನ್ನಂತೂ ಎಲ್ಲರೂ ಒಪ್ಪುತ್ತಾರೆ. ನಾವು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದ್ದೇವೆ. ಭೂಮಿ, ಆಕಾಶಗಳ ಆಳಾಂತರಾಳಗಳನ್ನು ನಾವು ಬಗೆದಿದ್ದೇವೆ, ಅನ್ಯಗ್ರಹವೂ ನಮಗೆ ಪಕ್ಕದ ಮನೆಯಾಗುವ ಕಾಲ ಸನ್ನಿಹಿತವಾಗುತ್ತಿದೆ. ಕೃತಕ ಬುದ್ಧಿಮತ್ತೆಯ ಮೂಲಕ ಎಲ್ಲವನ್ನೂ ಅರಿಯುತ್ತಾ ಮೆರೆಯುತ್ತಿದ್ದೇವೆ. ಆದರೆ, ಸಾವು-ಬದುಕಿನ ಈ ಚಕ್ರ ಸುಳಿಯ ಮಹಾ ನಿಗೂಢತೆಯನ್ನು ಅರ್ಥ ಮಾಡಿಕೊಳ್ಳುವ ಯಾವ ಮಾಯೆಯೂ ನಮಗಿನ್ನೂ ಒಲಿದಿಲ್ಲ. ಅಲ್ಲಿಗೆ ಜಗನ್ನಿಯಾಮಕವಾದ ದಿವ್ಯ ಸಾನಿಧ್ಯವೊಂದರ ಕೈಯಲ್ಲಿ ಆಡುವ ಆಟದ ಬೊಂಬೆಗಳು ನಾವು ಎನ್ನುವುದನ್ನು ಅರಿವಿಲ್ಲದೆಯೇ ಒಪ್ಪಿಕೊಂಡಿದ್ದೇವೆ.
ಈ ನಂಬಿಕೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಒಂದು ಧರ್ಮಕ್ಕೆ ಒಂದು ದೇಶಕ್ಕೆ ಸೀಮಿತವಾದ ಸಂಗತಿ ಇದಲ್ಲ. ಒಂದು ಅಧ್ಯಯನದ ಪ್ರಕಾರ, ಜಗತ್ತಿನಲ್ಲಿರುವ ಶೇ. 86ರಷ್ಟು ಮಂದಿ ದೇವರ ಅಸ್ತಿತ್ವವನ್ನು ನಂಬುತ್ತಾರೆ, ಶೇ. 95ರಷ್ಟು ಜನರು ಯಾವುದೋ ಒಂದು ಶಕ್ತಿಯ ಉಪಸ್ಥಿತಿಯನ್ನು ಒಪ್ಪಿಕೊಳ್ಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈಗೀಗ ನಮ್ಮ ಈ ನಂಬಿಕೆಗಳಿಗೆ ವೈಜ್ಞಾನಿಕ ತಳಹದಿಗಳು ಗಟ್ಟಿಗೊಳ್ಳುತ್ತಿವೆ. ಹಿಂದೆ ಕಾಣದ ದೇವರ ಪೂಜೆಯೋ, ಭಕ್ತಿಯೋ, ಆರಾಧನೆಯೋ ಕೇವಲ ನಂಬಿಕೆಯ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ, ಈಗ ನಾವು ಮಾಡುವ ಪ್ರತಿ ಪ್ರಾರ್ಥನೆ, ಆಚರಣೆಗಳಿಗೆ ಒಂದು ಫಲ ಇದ್ದೇ ಇದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಕೆಲವರು ಇದನ್ನು ಫಲಾಫಲಗಳ ಮೂಲಕ ನೇರವಾಗಿ ಅನುಭವಿಸಿರಬಹುದು, ಕೆಲವರಿಗೆ ಅದೊಂದು ಮನೋಬಲವಾಗಿ ಶಕ್ತಿಯನ್ನು ಕೊಟ್ಟಿರಬಹುದು.
ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್ ಸಿದ್ಧತೆಗೆ ಮೆಚ್ಚುಗೆ
ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸಬೇಕು, ಯುವಕರು ಒಳಿತಿನ ಮಾರ್ಗದಲ್ಲಿ ಸಾಗಬೇಕು, ನಾವು ಕೂಡಾ ಸಹನಶೀಲರಾಗಬೇಕು, ಒತ್ತಡ ಮುಕ್ತರಾಗಿ ಬಾಳುವಂತಾಗಬೇಕು ಎಂದೇ ಎಲ್ಲರೂ ಬಯಸುತ್ತಿದ್ದಾರೆ. ಅವರ ದಾರಿಗೆ ಬೆಳಕಾಗುವ, ಧಾರ್ಮಿಕ ಜೀವನಕ್ಕೆ ದೀವಿಗೆಯಾಗುವ ಉದ್ದೇಶದೊಂದಿಗೆ ವಿಸ್ತಾರ ನ್ಯೂಸ್‌ನ ಹೊಸ ಯೂಟ್ಯೂಬ್ ಚಾನೆಲ್ ಶುಭಾರಂಭ ಮಾಡುತ್ತಿದೆ. ನಮ್ಮ ಪರಂಪರಾಗತ ನಂಬಿಕೆಗಳ ಹಿಂದಿನ ಸತ್ಯಗಳನ್ನು ತೆರೆದಿಡುವುದು, ಭಕ್ತಿಯ ಶಕ್ತಿಯನ್ನು ಬಯಲುಗೊಳಿಸುವುದು, ಸನ್ಮಾರ್ಗ, ಸತ್ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಬಗೆಯನ್ನು ಅತ್ಯಂತ ಹಿತವಾಗಿ ಎಲ್ಲರಿಗೂ ತಲುಪಿಸುವುದು ನಮ್ಮ ಉದ್ದೇಶ.
ಧಾರ್ಮಿಕತೆಯನ್ನು, ಅಧ್ಯಾತ್ಮಿಕತೆಯನ್ನು ವೈಜ್ಞಾನಿಕ ಆಧಾರದಲ್ಲಿ ನಿರೂಪಿಸುವುದು ನಮ್ಮ ಧ್ಯೇಯ. ನಾವು ಧಾರ್ಮಿಕ ಆಚರಣೆಗಳನ್ನು ಭಕ್ತಿ ಮತ್ತು ವಿಜ್ಞಾನಗಳ ಸಂಗಮವಾಗಿ ನೋಡುತ್ತೇವೆ. ಭವಿಷ್ಯ, ಜೋತಿಷ್ಯವನ್ನು ಜ್ಯೋತಿರ್ವಿಜ್ಞಾನದ ನೆಲೆಯಲ್ಲೇ ನೋಡುತ್ತೇವೆ. ನಾವು ಮೌಢ್ಯಗಳನ್ನು ಪ್ರತಿಪಾದಿಸುವುದಿಲ್ಲ. ಜನರನ್ನು ಹೆದರಿಸುವುದಿಲ್ಲ. ನೋಡುವವರಲ್ಲಿ ದೇವರು, ಅಧ್ಯಾತ್ಮದ ಕುರಿತ ನಂಬಿಕೆ ಹೆಚ್ಚಿಸುವುದಷ್ಟೇ ನಮ್ಮ ಗುರಿ ಅಲ್ಲ, ಅವರ ಮೇಲೆ ಅವರಿಗೇ ನಂಬಿಕೆ ಹುಟ್ಟುವಂತೆ ಮಾಡುವುದು ನಮ್ಮ ಮೂಲ ಉದ್ದೇಶ. ಅವರನ್ನು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಜ್ಜುಗೊಳಿಸುವುದು ನಮ್ಮ ಪರಿಕಲ್ಪನೆ.
ನಾವಿಲ್ಲಿ ಆಧ್ಯಾತ್ಮಿಕತೆಯನ್ನು ಧರ್ಮದೊಂದಿಗೆ ಬೆಸೆಯುತ್ತೇವೆ. ವಿಜ್ಞಾನಕ್ಕೆ ತಳುಕು ಹಾಕುತ್ತೇವೆ. ಆಧ್ಯಾತ್ಮದ ಮೂಲಕ ಪ್ರಗತಿಯ ಅಧ್ಯಾಯ ಬರೆಯಲು ಬಯಸಿದ್ದೇವೆ. ನಮ್ಮ ಅಧ್ಯಾತ್ಮ ಕುಟುಂಬವನ್ನು ಗಟ್ಟಿಗೊಳಿಸುತ್ತದೆ, ಮನಸಿನಲ್ಲಿ ಧೈರ್ಯ ತುಂಬುತ್ತದೆ. ಇದು ದೈಹಿಕ ಆರೋಗ್ಯಕ್ಕೂ, ಮಾನಸಿಕ ನೆಮ್ಮದಿಗೂ ಆಧಾರವಾಗಿ ನಿಲ್ಲುತ್ತದೆ. ವೃತ್ತಿಯಲ್ಲಿ ಸಾಧನೆಗೆ ಬೆಂಬಲವಾಗಿ ನಿಲ್ಲುತ್ತದೆ, ಅಷ್ಟೇ ಅಲ್ಲ ಸೌಂದರ್ಯಕ್ಕೂ ವರವಾಗುವ ರೀತಿಯಲ್ಲಿ ನಮ್ಮ ಸಂಸ್ಕಾರ ನಿಮ್ಮ ಜತೆಗಿರುತ್ತದೆ. ನಮ್ಮ ಚಾನೆಲ್‌ನಲ್ಲಿ ಎಲ್ಲ ಪ್ರಮುಖ ಹಬ್ಬ ಹರಿದಿನಗಳನ್ನು ಮಹತ್ವವನ್ನು ಹೇಳಲಿದ್ದೇವೆ. ಪೂಜೆ, ಆರಾಧನೆಗಳ ವಿಧಿ ವಿಧಾನಗಳನ್ನು ತಿಳಿಸುತ್ತೇವೆ. ಸನ್ಮಾರ್ಗ, ಸತ್‌ಚಿಂತನೆಗಳನ್ನು ಬಿತ್ತುತ್ತೇವೆ. ಜ್ಯೋತಿಷ, ಭವಿಷ್ಯ, ಸಂಖ್ಯಾಶಾಸ್ತ್ರ, ಶಕುನ ಶಾಸ್ತ್ರಗಳನ್ನು ಕರಾರುವಕ್ಕಾಗಿ ಹೇಳುತ್ತೇವೆ. ಸದಾಚಾರ ಸಂಪನ್ನತೆಯನ್ನು ಪ್ರೋತ್ಸಾಹಿಸುವ, ಬದುಕನ್ನು ಹೊಸ ದಿಕ್ಕಿನೆಡೆಗೆ ಕರೆದೊಯ್ಯುವ ಗುರಿಯನ್ನು ಹೊಂದಿರುವ ಈ ಚಾನೆಲನ್ನು ನೀವು ಫಾಲೋ ಮಾಡಿ, ನಿಮ್ಮ ಬಂಧುಗಳಿಗೆ ಪರಿಚಯಿಸಿ. ಆ ಮೂಲಕ ಎಲ್ಲರೂ ಸೇರಿ ಹೊಸ ಆಶಾವಾದದ ತರಂಗಗಳನ್ನು ಪಸರಿಸೋಣ.
ವಿಸ್ತಾರ ಯೂಟ್ಯೂಬ್ ಚಾನೆಲ್ ʼಓಂಕಾರʼಕ್ಕೆ ಭೇಟಿ ನೀಡಿ, ಶಾಂತಿ-ನೆಮ್ಮದಿಯ ಸರಳ ಸೂತ್ರಗಳನ್ನು ಪಡೆಯಿರಿ.
ಇದನ್ನೂ ಓದಿ | Navratri 2022 | ನವರಾತ್ರಿ ನವವರ್ಣ: ವಿಸ್ತಾರ ಡಿಜಿಟಲ್ ಸಂಭ್ರಮ