ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮುಕ್ತ ಮಾತು
ನಮಸ್ಕಾರ..
ನಾನು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬರೊಬ್ಬರಿ ಇಪ್ಪತ್ತು ವರ್ಷಗಳಾದವು. ಇದುವರೆಗೆ ಹೆಚ್ಚು ಕಾಲ ಮುದ್ರಣ ಮಾಧ್ಯಮದಲ್ಲಿ, ಅಲ್ಪಕಾಲ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಿ ಇದೀಗ ಸಂಪೂರ್ಣವಾಗಿ ಡಿಜಿಟಲ್ ಮತ್ತು ಟಿವಿ ಮಾಧ್ಯಮದ ಕಡೆಗೆ ಮುಖ ಮಾಡಿದ್ದೇನೆ.
ಈ ಬದಲಾವಣೆ ಪರ್ವದಲ್ಲಿ ಅನೇಕರು ಅನೇಕ ತೆರನಾದ ಪ್ರಶ್ನೆಗಳನ್ನು ಕೇಳಿದ್ದಾರೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಆ ಎಲ್ಲ ಸಂಗತಿಗಳನ್ನು ಒಂದೆಡೆ ಕ್ರೋಡೀಕರಿಸಿ, ಹಲವು ವಿಚಾರಗಳಿಗೆ ಸಂಬಂಧಿಸಿದ ಅಭಿಪ್ರಾಯ / ನಿಲುವನ್ನು ಹಂಚಿಕೊಳ್ಳುವ ಪುಟ್ಟ ಯತ್ನ ನನ್ನದು. ಇದನ್ನು ನನ್ನೆಲ್ಲ ಓದುಗರು ಹಾಗೂ ವೀಕ್ಷಕರೊಂದಿಗಿನ ಮುಕ್ತ ಮಾತು ಎಂದರೆ ಚೆನ್ನ.
ಪ್ರಶ್ನೆ: ಮುದ್ರಣ ಮಾಧ್ಯಮ ಕ್ಷೇತ್ರದಲ್ಲೇ ಬಹುಕಾಲ ಇದ್ದವರು ನೀವು. ಈ ಹಿಂದೆ ವಿಜಯವಾಣಿ ಸಂಪಾದಕರಾಗಿದ್ದಿರಿ, ಇದೀಗ ವಿಜಯಕರ್ನಾಟಕ ಪತ್ರಿಕೆ ಸಂಪಾದಕ ಸ್ಥಾನ ತೊರೆದು ಡಿಜಿಟಲ್ ಮಾಧ್ಯಮ ಮತ್ತು ಟಿವಿಯತ್ತ ಬಂದಿದ್ದೀರಿ. ಈ ಮಹತ್ವದ ನಿರ್ಧಾರಕ್ಕೆ ಮುಖ್ಯ ಕಾರಣ ಏನು?
ಉತ್ತರ: ಒಟ್ಟಾರೆ ಮಾಧ್ಯಮ ಕ್ಷೇತ್ರವೇ ವೇಗವಾಗಿ ಬದಲಾಗುತ್ತಿದೆ. ಬದಲಾಗುತ್ತಿದೆ ಎಂದರೆ ತಪ್ಪಾಗಬಹುದು. ಅದಕ್ಕಿಂತ ಹೆಚ್ಚಾಗಿ Evolve ಆಗುತ್ತಿದೆ / ವಿಕಾಸವಾಗುತ್ತಿದೆ ಎಂಬುದು ಸರಿಯಾದ ಹೇಳಿಕೆ. ಸಂಘಜೀವಿಯಾದ ಮಾನವ ತನ್ನದೇ ಸ್ಥಳೀಯ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕೆಂಬುದರ ಜತೆಗೆ ಪ್ರಪಂಚದ ಬೇರೆಡೆಗಳಲ್ಲೂ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಹಿಂದೆಂದಿಗಿಂತಲೂ ಇಂದು ಹೆಚ್ಚು ಕುತೂಹಲಿಯಾಗಿದ್ದಾನೆ. ಆ ಹಂಬಲದ ಜತೆಗೆ, ಇಂದು, ಆತನಿಗೆ ಅದರ ಅನಿವಾರ್ಯತೆಯೂ ಬಂದೊದಗಿದೆ.
ಕಾಲಾನುಕ್ರಮದಲ್ಲಿ, ತಂತ್ರಜ್ಞಾನ ವಿಕಾಸಗೊಂಡಂತೆ ಮಾಹಿತಿಯನ್ನು ಪಡೆಯುವ ಅಥವಾ ಆ ಮಾಹಿತಿಯನ್ನು Consumption ಮಾಡುವ ವಿಧಾನದಲ್ಲಿ ತೀವ್ರತರವಾದ ಬದಲಾವಣೆ ಆಗುತ್ತಿದೆ. ಜನರು ತಮ್ಮ ಕೈಲಿರುವ ಮೊಬೈಲ್ ಫೋನ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಟ್ಯಾಬ್‌ಗಳ ಮೂಲಕವೇ ಇಡೀ ಜಗತ್ತನ್ನು ನೋಡಲು, ತಿಳಿಯಲು ಬಯಸುತ್ತಿದ್ದಾರೆ. ಈ ಹಿಂದೆಲ್ಲ ಓದಲು ಪುಸ್ತಕಗಳು, ಪತ್ರಿಕೆಗಳು ಇತ್ಯಾದಿ; ಆಡಿಯೊ ಕೇಳಲು ರೇಡಿಯೊ; ವಿಡಿಯೊ ವೀಕ್ಷಿಸಲು ಟಿವಿ, ಸಿಡಿಗಳ ಮೊರೆ ಹೋಗಬೇಕಿತ್ತು. ಕೇವಲ ಸಂವಹನ, ಸಂಭಾಷಣೆಯ ಮಾಧ್ಯಮವಾಗಿ ಎಂಟ್ರಿ ಪಡೆದ ಮೊಬೈಲ್ ಲೆಕ್ಕ (Compute) ಮಾಡಲೆಂದು ಬಂದ ಕಂಪ್ಯೂಟರ್‌ಗಳು ಈಗ ಆ ಮೂರೂ ಅಂಶಗಳನ್ನು ಒಳಗೊಂಡಿವೆ. ಅಂದರೆ ಅಕ್ಷರ, ಆಡಿಯೊ, ವಿಡಿಯೊಗಳನ್ನು ಒಟ್ಟಿಗೇ ಒದಗಿಸುತ್ತಿದೆ. ಈ ಕ್ಷೇತ್ರದಲ್ಲಿ ಭವಿಷ್ಯದಲ್ಲೂ ಕೂಡ ಕ್ಷಿಪ್ರಗತಿಯ ಬದಲಾವಣೆ ಆಗುವುದಿದೆ. ಈ ವಾಸ್ತವದ ತಳಹದಿಯಲ್ಲಿ ಮಾಧ್ಯಮ ಸಂಸ್ಥೆ ಕಟ್ಟುವ ಬಯಕೆಯನ್ನು ನಾವು ಹೊಂದಿದ್ದೇವೆ.
ಪ್ರಶ್ನೆ: ಹಾಗಾದರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯವೇ ಇಲ್ಲವೇ?
ಉತ್ತರ: ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇದೆ ಅಥವಾ ಇಲ್ಲ ಎಂಬ ಎರಡೂ ವಾದಗಳು ಸತ್ಯ. ಹೌದು, ಈಗಿರುವ ಫಾರ್ಮೇಟ್‌ನಲ್ಲಿ ಮುಂದುವರಿದರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇಲ್ಲ. ಫಾರ್ಮೇಟ್ ಬದಲಿಸಿಕೊಂಡರೆ ಪ್ರಿಂಟ್ ಮಾಧ್ಯಮಕ್ಕೆ ಭವಿಷ್ಯ ಇದೆ. ನಿನ್ನೆ ಮೊನ್ನೆ ನಡೆದ ಹಳೆಯ ಘಟನೆಗಳನ್ನು ವರದಿ ಮಾಡುವುದಕ್ಕಷ್ಟೇ ಪತ್ರಿಕೆಗಳನ್ನು ಪ್ರಿಂಟ್ ಮಾಡುವುದು It is a national waste in my opinion! ಇದನ್ನು ಯಾರೂ ಅನ್ಯಥಾ ಭಾವಿಸಬಾರದು.
ಪ್ರಶ್ನೆ: ಈಗಾಗಲೇ ಡಿಜಿಟಲ್ ಮಾಧ್ಯಮದಲ್ಲಿ ಸಾಕಷ್ಟು ಪ್ಲೇಯರ್‌ಗಳಿದ್ದಾರೆ. ಡಿಜಿಟಲ್ ಮಾಧ್ಯಮ ಸಂಸ್ಥೆಗಳಿವೆ. ಟಿವಿ ಚಾನೆಲ್‌ಗಳೂ ಇವೆ. ಇಷ್ಟೆಲ್ಲದರ ನಡುವೆ ಹೊಸ ಮಾಧ್ಯಮಕ್ಕೆ ಸ್ಥಳಾವಕಾಶ (Space) ಇದೆಯೇ?
ಉತ್ತರ: ನೋಡಿ, ಯಾವುದಕ್ಕೂ, ಯಾರೊಬ್ಬರಿಗೂ ಎಲ್ಲೂ ಸ್ಪೇಸ್ ರಿಸರ್ವ್ ಆಗಿರುವುದಿಲ್ಲ. ಭಾರತದಂತಹ ಜನದಟ್ಟಣೆಯ ದೇಶದಲ್ಲಂತೂ ಸ್ಪೇಸ್ ರಿಸರ್ವ್ ಆಗಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಅದನ್ನೇ ಪಾಸಿಟಿವ್ ಆಗಿ ನೋಡಿದರೆ, ಭಾರತದಂತಹ ದೇಶದಲ್ಲಿ ಅಗಾಧ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಅದೆಷ್ಟೇ ಸೇವಾಕರ್ತರು ಬಂದರೂ ಎಲ್ಲ ಕ್ಷೇತ್ರಗಳಲ್ಲಿ ಸ್ಪೇಸ್ ಸಿಕ್ಕೇ ಸಿಗುತ್ತದೆ. ಅಂದರೆ ಎಷ್ಟೇ ಹೊಸ ಹೊಸ ಸಂಸ್ಥೆಗಳು ಬಂದರೂ ಎಲ್ಲರನ್ನೂ ತಲುಪಲಾಗದಷ್ಟು ದೊಡ್ಡ, ಸಂಕೀರ್ಣ, ವೈವಿಧ್ಯಮಯ ದೇಶ ನಮ್ಮದು. ನಾವು ಹೇಗೆ ವಿಚಾರಗಳನ್ನು ಗ್ರಹಿಸುತ್ತೇವೆ ಮತ್ತು ಪ್ರಸ್ತುತಪಡಿಸುತ್ತೇವೆ ಎಂಬುದರ ಮೇಲೆ ಸ್ಪೇಸ್ ಇದೆಯೇ ಇಲ್ಲವೇ ಎಂಬುದು ನಿರ್ಧರಿತವಾಗುತ್ತದೆ. ಉದಾ: ಕನ್ನಡ ಮಾಧ್ಯಮ ಲೋಕದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಬರುವ ಮುನ್ನ ʼಮುದ್ರಣ ಮಾಧ್ಯಮದಲ್ಲಿ ಈಗಾಗಲೇ ದಿಗ್ಗಜರಿದ್ದಾರೆ ಎಲ್ಲಿ ಸ್ಪೇಸ್ ಇದೆ?ʼ ಎಂಬ ಪ್ರಶ್ನೆ ಇತ್ತು. ಅದರ ಬೆನ್ನಲ್ಲೇ ವಿಜಯವಾಣಿ ಪತ್ರಿಕೆ ಬಂದಾಗಲಂತೂ ಇದೇ ಪ್ರಶ್ನೆಯನ್ನು ಹೋದಲ್ಲಿ ಬಂದಲ್ಲಿ ಕೇಳುತ್ತಿದ್ದರು. ವಿಜಯ ಕರ್ನಾಟಕವನ್ನು ನಂಬರ್ ಒನ್ ಪತ್ರಿಕೆ ಮಾಡಲು ಆರೇಳು ವರ್ಷ ಹಿಡಿಯಿತು. ಆದರೆ ವಿಜಯವಾಣಿ ಪತ್ರಿಕೆ ಕೇವಲ 24 ತಿಂಗಳಲ್ಲಿ ನಂಬರ್ ಒನ್ ಪತ್ರಿಕೆಯಾಗಿ ದೇಶದ ಮಾಧ್ಯಮ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಹೊಸ ಪತ್ರಿಕೆ ಆಗಮನದಿಂದ ಕನ್ನಡದ ಪತ್ರಕರ್ತರಿಗೆ, ಓದುಗರಿಗೆ, ವಿತರಕರಿಗೆ, ಜಾಹೀರಾತುದಾರರಿಗೆ ದೊಡ್ಡ ಲಾಭ ಆಯಿತು. ಕನ್ನಡ ಮಾಧ್ಯಮ ಅಗಾಧವಾಗಿ ವಿಸ್ತಾರವಾಯಿತು. ಆ ವಿಷಯದಲ್ಲಿ ಡಾ. ವಿಜಯ ಸಂಕೇಶ್ವರರಿಗೆ ನನ್ನದೊಂದು ದೊಡ್ಡ ಸಲಾಮು ಸದಾ ಇರುತ್ತದೆ. ಇನ್ನೂ ಒಂದು ವಿಚಾರ ಏನೆಂದರೆ ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು ಬರುವ ಪೂರ್ವದಲ್ಲಿ ಹಾಗೂ ಆನಂತರ ಅನೇಕ ಪತ್ರಿಕೆಗಳು ಬಂದಿದ್ದವು. ಅವೆಲ್ಲವೂ ಬದುಕಲಿಲ್ಲ, ಬಾಳಲಿಲ್ಲ. ವೆರಿ ಸಿಂಪಲ್ ಆಗಿ ಹೇಳಬೇಕೆಂದರೆ ಹುಟ್ಟುವ ಪ್ರತಿ ಮಗು ನನಗೆಲ್ಲಿ ಸ್ಪೇಸ್ ಎಂದು ಕೇಳಿದ್ದರೆ ಜಗತ್ತು ಏನಾಗುತ್ತಿತ್ತು? ಹುಟ್ಟಿದ ಮಕ್ಕಳೆಲ್ಲ ಬಾಳುತ್ತಾರಾ? ಈ ವಿಷಯದಲ್ಲಿ ಡಾರ್ವಿನ್ನನ ಥಿಯರಿ ಹೆಚ್ಚು ಪ್ರಸ್ತುತ. ಫಿಟ್ ಆ್ಯಂಡ್ ಫೈನ್ ಆಗಿರಬೇಕೆನ್ನುವವರಿಗೆ ಸ್ಪೇಸ್ ಸದಾ ಇದ್ದೇ ಇರುತ್ತದೆ.
ಪ್ರಶ್ನೆ: ಹಾಗಾದರೆ ಕರ್ನಾಟಕದ ಡಿಜಿಟಲ್ ಹಾಗೂ ಟಿವಿ ಕ್ಷೇತ್ರದಲ್ಲಿ ಓದುಗರು ಮತ್ತು ವೀಕ್ಷಕರನ್ನು ಪಡೆಯಲು ದೊಡ್ಡ ಹಗ್ಗ ಜಗ್ಗಾಟ ಶುರುವಾಗುತ್ತದೆಯೇ?
ಉತ್ತರ: ಖಂಡಿತ ಇಲ್ಲ, ಇದು ಒಬ್ಬರ ಗ್ರಾಹಕರನ್ನು ಇನ್ನೊಬ್ಬರು ಸೆಳೆಯುವ ಮಾತಲ್ಲ.
ನಾವು ಸ್ಪೇಸ್ ಪಡೆದುಕೊಳ್ಳಲು ಇನ್ನೊಬ್ಬರು ಕಳೆದುಕೊಳ್ಳಬೇಕೆಂದಿಲ್ಲ. ಒಬ್ಬರ ಬೆಳೆವಣಿಗೆಗೆ ಮತ್ತು ಇನ್ನೊಬ್ಬರ ಅವನತಿಗೆ ಅದರದ್ದೇ ಆದ ಕಾರ್ಯಕಾರಣಗಳಿರುತ್ತವೆ.
ಉದಾಹರಣೆಗೆ ನಾನು ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿದ ವಿಜಯವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳ ಸಫಲತೆಯಲ್ಲಿ ಒಬ್ಬರ ಗ್ರಾಹಕರನ್ನು ಇನ್ನೊಬ್ಬರು ಕಿತ್ತುಕೊಳ್ಳುವ ಆಟ ನಡೆಯಲೇ ಇಲ್ಲ. ಬದಲಾಗಿ ಸ್ಪರ್ಧಾತ್ಮಕತೆಯಲ್ಲಿ ಎಲ್ಲರೂ ಒಂದಿಷ್ಟು ಹೊಸತನ ಮತ್ತು ಹೊಸ ಗ್ರಾಹಕರನ್ನು ಪಡೆದರು. ಆ ಎರಡೂ ಸಂದರ್ಭಗಳಲ್ಲಿ ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ ಹಿಗ್ಗಿತು. ಹೊಸ ಓದುಗರನ್ನು ಸೆಳೆಯುವ ಯತ್ನದಲ್ಲಿ ಯಶಸ್ಸು ಸಿಕ್ಕಿತು.
ಒಟ್ಟಿನಲ್ಲಿ, ಹೊಸತನ ತರಬಲ್ಲ ಮಾಧ್ಯಮಗಳು ಬಂದರೆ, ಮಾರುಕಟ್ಟೆ ತನ್ನಿಂತಾನೆ ವಿಸ್ತರಿಸುತ್ತದೆ ಎನ್ನುವುದು ಸ್ಥಾಪಿತವಾಗಿದೆ. ಇದರಿಂದ ಇಡೀ ಮಾಧ್ಯಮ ಲೋಕಕ್ಕೆ ಲಾಭವಾಗಿದೆ. ವಿಸ್ತಾರ, ಹೆಸರಿಗೆ ತಕ್ಕಂತೆ ಮಾಧ್ಯಮ ಜಗತ್ತನ್ನೂ, ಜನರ ಮನಸ್ಸನ್ನೂ ವಿಸ್ತರಿಸುವ ಪ್ರಯತ್ನ ಮಾಡಲಿದೆ. ಇದುವರೆಗೆ ಯಾರೂ ತಲುಪದ ಗಮ್ಯವನ್ನು ತಲುಪಬೇಕೆಂಬ ಹಂಬಲ ಇದೆ, ಗುರಿ ಇದೆ. ಆ ನಿಟ್ಟಿನಲ್ಲಿ ಸ್ಪಷ್ಟವಾದ ಕಾರ್ಯಸೂಚಿಯನ್ನು ಸಿದ್ಧಪಡಿಸಿಕೊಂಡು ಹೆಜ್ಜೆ ಮುಂದಿಡುತ್ತಿದ್ದೇವೆ.
ಪ್ರಶ್ನೆ: ಮಾಧ್ಯಮ ಸಂಸ್ಥೆ ಆರಂಭಕ್ಕೆ ದೊಡ್ಡ ಮಟ್ಟದ ಹೂಡಿಕೆ ಬೇಕಾಗುತ್ತದಲ್ಲವೇ? ಬರೀ ಪತ್ರಕರ್ತರಾಗಿದ್ದ ನೀವು ಮಾಧ್ಯಮ ಸಂಸ್ಥೆ ಆರಂಭಿಸುವುದರ ಹಿಂದಿನ ಹೂಡಿಕೆದಾರರು ಯಾರು? ರಾಜಕೀಯದವರೇನಾದರೂ…
ಉತ್ತರ: ಪ್ರಸಕ್ತ ಸನ್ನಿವೇಶದಲ್ಲಿ ಇದು ಎಲ್ಲರೂ ಕೇಳುವ ಮತ್ತು ಉತ್ತರಿಸಲೇಬೇಕಾದ ಮುಖ್ಯ ವಿಚಾರ. ಮಾಧ್ಯಮವೂ ಸೇರಿದಂತೆ ಯಾವುದೇ ಸಂಸ್ಥೆಯನ್ನು ಆರಂಭಿಸಲು ಈಗ ಬಂಡವಾಳ ಅಥವಾ ಹೂಡಿಕೆ ಸಮಸ್ಯೆಯೇ ಅಲ್ಲ. ಶ್ರೀಮಂತರು ಮಾತ್ರ ಸಂಸ್ಥೆ ಕಟ್ಟಬಹುದು ಎಂಬ ಹಳೆಯ ಸೂತ್ರ ಈಗ ಬದಲಾಗಿದೆ. ಕೈಯಲ್ಲಿ ಒಂದು ರೂ. ಇಲ್ಲದಿದ್ದರೂ ಪ್ರತಿಭೆ, ಐಡಿಯಾ ಮತ್ತು ಕೌಶಲ ಇದ್ದರೆ ಈಗ ಯಾರು ಬೇಕಾದರು ಹೊಸ ಸಂಸ್ಥೆಯನ್ನು ಕಟ್ಟಿ ಬೆಳೆಸಬಹುದು. ಇಂಥ ಕಡೆ ಹಣ ಹೂಡಲು ದೇಶದಿಂದ ಮಾತ್ರವಲ್ಲ, ವಿದೇಶಗಳಿಂದಲೂ ಸಾಕಷ್ಟು ಉತ್ಸಾಹಿಗಳು ಮುಂದೆ ಬರುತ್ತಾರೆ. ವೃತ್ತಿಪರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಈ ವ್ಯವಸ್ಥೆಯಲ್ಲಿನ ಮತ್ತೊಂದು ಹೆಚ್ಚುಗಾರಿಕೆ. ನಮ್ಮ ದೇಶದಲ್ಲಿ ಹಲವಾರು ಪ್ರತಿಭಾವಂತರು ಯಾವುದೇ ಸ್ವಂತ ಬಂಡವಾಳದ ಬಲ ಇಲ್ಲದೆ ಸ್ಟಾರ್ಟ್ಅಪ್ ಆರಂಭಿಸಿ ಸಾವಿರ ಕೋಟಿ ರೂ. ವಹಿವಾಟು ದಾಟಿರುವ ಸಾಧನೆ ನಮ್ಮ ಕಣ್ಣ ಮುಂದೆಯೇ ಇದೆ.
ಖಡಾಖಂಡಿತವಾಗಿ ಹೇಳಬೇಕಾದ ಸಂಗತಿಯೆಂದರೆ ನಮ್ಮ ಸಂಸ್ಥೆ ರಾಜಕೀಯದವರ ಹಣವನ್ನು ಇಲ್ಲಿಯವರೆಗೆ ಪಡೆದಿಲ್ಲ ಮತ್ತು ಮುಂದೆಯೂ ಪಡೆಯುವುದಿಲ್ಲ. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿತ ಸಂಸ್ಥೆ. ಹೀಗಾಗಿ ನಮ್ಮ ಸಂಸ್ಥೆಯ ಪ್ರಮೋಟರ್, ಡೈರೆಕ್ಟರ್ ಮಂಡಳಿ, ಹೂಡಿಕೆ, ನೆಟ್‌ವರ್ತ್ , ಆಡಿಟ್ ರಿಪೋರ್ಟ್ ಎಲ್ಲವೂ ಆಸಕ್ತರ ವೀಕ್ಷಣೆಗೆ ಲಭ್ಯವಿದೆ. ಮುಖ್ಯವಾಗಿ ನಮ್ಮ ಸಂಸ್ಥೆಯ ಎಂ.ಡಿ. ಶ್ರೀ ಎಚ್. ವಿ. ಧರ್ಮೇಶ್ ಮೊದಲ ತಲೆಮಾರಿನ ಯಶಸ್ವೀ ಉದ್ಯಮಿ. ನಮ್ಮೊಂದಿಗೆ ಸೇರಿ ಈಗ ಮಾಧ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಅವರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ರಾಜಕೀಯದ ಸಂಬಂಧ ಇಲ್ಲವೇ ಇಲ್ಲ. ನಮ್ಮ ಸಂಸ್ಥೆಯ ನಿರ್ದೇಶಕರಾದ ಶ್ರೀ ಶ್ರೀನಿವಾಸ ಹೆಬ್ಬಾರ್ ಅವರು ಟ್ರಾನ್ಸ್ಪೋರ್ಟ್ ಉದ್ಯಮದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರು. ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಗೋ ಸಂರಕ್ಷಣೆ, ಸ್ವಚ್ಛತೆ ಮೊದಲಾದ ಕ್ಷೇತ್ರಗಳಲ್ಲಿ ಕೊಡುಗೆ ಸಲ್ಲಿಸುತ್ತಿರುವವರು. ಇದೀಗ ನಾವು ಹೊಸ ಮಾಧ್ಯಮ ಸಂಸ್ಥೆ ಆರಂಭಿಸಿದ್ದೇವೆ. ಈ ಡಿಜಿಟಲ್ ಮಾಧ್ಯಮ ಕ್ಷೇತ್ರ ಅತ್ಯಂತ ಪಾರದರ್ಶಕತೆ ಬಯಸುತ್ತದೆ ಮತ್ತು ರಾಜಕೀಯ ಸತ್ಯನಿಷ್ಠುರತೆ ನಿರೀಕ್ಷಿಸುತ್ತದೆ ಎಂಬ ಅರಿವು ನಮಗಿದೆ.
ಪ್ರಶ್ನೆ: ನೀವು ಆರಂಭಿಸಿರುವ ಪತ್ರಿಕೋದ್ಯಮದ ಸ್ವರೂಪ ಹೇಗಿರುತ್ತದೆ? ನಿಮ್ಮ ವೈಚಾರಿಕ ನಿಲುವು ಯಾವುದು?
ಉತ್ತರ: ಕೆಲ ವರ್ಷಗಳಿಂದೀಚೆಗೆ ಮಾಧ್ಯಮ ಸಂಸ್ಥೆಗಳ ಸುತ್ತ ಅನುಮಾನದ ಹುತ್ತ ಆವರಿಸಿಕೊಳ್ಳುತ್ತಿರುವುದು ನಿಜ. ಕೆಲ ಮಾಧ್ಯಮ ಸಂಸ್ಥೆಗಳು ಪಕ್ಷಗಳ, ರಾಜಕಾರಣಿಗಳ ಪರ ಇದ್ದಾರೆ ಎಂಬ ಭಾವನೆ ಇದೆ. ಕೆಲ ಸಂದರ್ಭಗಳಲ್ಲಿ ಕೆಲವು ಪತ್ರಕರ್ತರೇ ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳೂ ಬಂದಿವೆ. ಆಗಲೇ ಪ್ರಸ್ತಾಪಿಸಿದಂತೆ, ನಾವು ಪ್ರಾರಂಭಿಸಿರುವ ಡಿಜಿಟಲ್ ಮಾಧ್ಯಮ ಕ್ಷೇತ್ರದ ಅತಿ ದೊಡ್ಡ ಗ್ರಾಹಕರು ಸಾಮಾಜಿಕ ಜಾಲತಾಣದ ಸಕ್ರಿಯ ಬಳಕೆದಾರರು. ಈ ಬಳಕೆದಾರರು ಜಗತ್ತಿನ ಎಲ್ಲರನ್ನೂ ಪ್ರಶ್ನಿಸಬಲ್ಲರು. ಅವರು ಮಾಧ್ಯಮ ಕ್ಷೇತ್ರವನ್ನೂ ಪ್ರಶ್ನಿಸುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪ್ರಮಾದ, ಲೋಪಗಳನ್ನು ಬಯಲಿಗೆಳೆಯುತ್ತಿದ್ದಾರೆ. ಇದನ್ನು ನಾನು ಮುಕ್ತಮನಸ್ಸಿನಿಂದ ಸ್ವಾಗತಿಸುತ್ತೇನೆ. ಅಂತಹ ನಾಗರಿಕರ ಕಣ್ಣಲ್ಲಿ ಮಾಧ್ಯಮ ಘನತೆ ಕಳೆದುಕೊಳ್ಳುವಂತಾಗಿದೆ. ಅದಕ್ಕೆ ನಾನಾ ಕಾರಣಗಳಿವೆ. ಅದರ ಗೋಜಿಗೆ ನಾನು ಹೋಗುವುದಿಲ್ಲ. ಆದರೆ ನಮ್ಮ ಮುಖ್ಯ ಗಮನ ಮಾಧ್ಯಮಕ್ಕೆ ಘನತೆ ತಂದುಕೊಡುವುದರ ಕಡೆಗೆ ಮಾತ್ರ.
ಬಾಲಗಂಗಾಧರ ತಿಲಕರು, ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್, ಡಿ. ವಿ. ಗುಂಡಪ್ಪನವರೆಲ್ಲ ಪತ್ರಕರ್ತರಾಗಿದ್ದವರು. ಆ ನಂತರವೂ ಪತ್ರಿಕೋದ್ಯಮದ ಘನತೆಯ ತೇರನ್ನು ಅನೇಕ ಮಹನೀಯರು ಮುಂದಕ್ಕೆ ಎಳೆದಿದ್ದಾರೆ. ಅವರು ಹಾಕಿದ ಮಾರ್ಗದಲ್ಲಿ ಮುಂದೆ ಸಾಗಿ ಈ ಕ್ಷೇತ್ರದ ಘನತೆ, ಗೌರವ ಹಾಗೂ ಹೊಣೆಗಾರಿಕೆಯನ್ನು ಮೆರೆಯುವುದು ನಮ್ಮ ಪರಮ ಧ್ಯೇಯ.
ಈ ಕಾರಣಕ್ಕಾಗಿ ಮೊದಲಿಗೆ ನಾವು ಯಾವುದೇ ಪಕ್ಷ ಮತ್ತು ರಾಜಕಾರಣಿಗಳ ಪರ ವಹಿಸುವುದಿಲ್ಲ. ಯಾವುದೇ ಸಮುದಾಯದ ಪಕ್ಷಪಾತಿಗಳಾಗುವುದಿಲ್ಲ. ಸತ್ಯ ಹಾಗೂ ರಾಷ್ಟ್ರಹಿತದ ಪ್ರಶ್ನೆ ಬಂದಾದ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ನಮಗೆ ದೇಶ ಮೊದಲೇ ಹೊರತು ಬೇರೇನೂ ಅಲ್ಲ. ಜನಪರ ಮತ್ತು ಜನಪ್ರಿಯತೆ ಈ ಎರಡರಲ್ಲಿ ಆಯ್ಕೆ ಪ್ರಶ್ನೆ ಬಂದಾಗ ಜನಪರವೇ ಮಿಗಿಲಾಗುತ್ತದೆ. ಮುಖ್ಯವಾಗಿ ನಾವು ಕಿರುಚಾಡುವುದಿಲ್ಲ. ನಮ್ಮ ಮಾಧ್ಯಮ ಸಂಸ್ಥೆಯ ಸುದ್ದಿಯಲ್ಲಿ ಸತ್ಯದ ಶಕ್ತಿ ಮತ್ತು ನಿಖರತೆ ಇರುತ್ತದೆ. ಸುದ್ದಿಯೇ ಮಾತನಾಡಿ, ಪತ್ರಕರ್ತ ಕಡಿಮೆ ಮಾತನಾಡುವಂತೆ ನೋಡಿಕೊಳ್ಳುತ್ತೇವೆ. ಹೀಗಾಗಿಯೇ, ನಿಖರ. ಜನಪರ. ಇವೇ ಮೌಲ್ಯಗಳನ್ನು ನಮ್ಮ ಮಾಧ್ಯಮಸಂಸ್ಥೆಯ ಧ್ಯೇಯವಾಕ್ಯವಾಗಿಯೂ ನಮ್ಮ ವಿಸ್ತಾರ ಬ್ರ್ಯಾಂಡ್‌ನ ಟ್ಯಾಗ್‌ಲೈನ್ ಆಗಿಯೂ ಇಟ್ಟುಕೊಂಡಿದ್ದೇವೆ.
ಪ್ರಶ್ನೆ: ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯ ಹಿತರಕ್ಷಣೆಯ ವಿಚಾರದಲ್ಲಿ ನಮ್ಮ ನಿಲುವೇನು?
ಉತ್ತರ: ಈ ವಿಷಯದಲ್ಲಿ ನಾವು ಅಪ್ಪಟ ಕನ್ನಡಿಗರು ಮತ್ತು ಕನ್ನಡಪರರು. ಭಾಷೆ, ನೆಲ, ಜಲ, ಸಂಸ್ಕೃತಿ ಹಿತದ ವಿಚಾರದಲ್ಲಿ ರಾಜಿಯೇ ಇಲ್ಲದ ಕಠಿಣ ನಿಲುವು ನಮ್ಮದು. ಈ ವಿಷಯದಲ್ಲಿ ನಾವೇ ಮುಂಚೂಣಿಯಲ್ಲಿ ನಿಲ್ಲುತ್ತೇವೆ. ಇನ್ನೂ ಸ್ಪಷ್ಟಪಡಿಸಬೇಕೆಂದರೆ ಕನ್ನಡ – ಕರ್ನಾಟಕದ ವಿಷಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಿಲುವೇ ನಮ್ಮ ನಿಲುವು. ಜೈ ಭಾರತ ಜನನಿಯ ತನುಜಾತೇ, ಜಯ ಹೇ ಕರ್ನಾಟಕ ಮಾತೆ. ಕರ್ನಾಟಕ ಮಾತೆ, ಆ ಮೂಲಕ ಭಾರತ ಮಾತೆ…
ಕರ್ನಾಟಕ ಇಲ್ಲದೇ ಭಾರತ ಇಲ್ಲ. ಭಾರತ ಇರದೇ ಕರ್ನಾಟಕ ಇರಲಾರದು. ರಾಜ್ಯ ಮತ್ತು ರಾಷ್ಟ್ರದ ಸಂಬಂಧ ಎಂದೆಂದಿಗೂ ಅವಿನಾಭಾವ, ಅವಿಚ್ಛಿನ್ನ. ಭಾಷೆಯ ವಿಚಾರದಲ್ಲೂ ನಮ್ಮ ನಿಲುವು ಅದೇ. ಕನ್ನಡದ ಪರ ಸದಾ ಕೈ ಎತ್ತುತ್ತೇವೆ. ಧ್ವನಿ ಎತ್ತುತ್ತೇವೆ. ಕನ್ನಡಕ್ಕಾಗಿ ಬೇರೆ ಭಾಷೆಯನ್ನು ದ್ವೇಷಿಸುವುದಿಲ್ಲ. ಭಾಷೆ ಎಂದರೆ ಕೇವಲ ಸಂವಹನ ಸಾಧನ ಅಲ್ಲ, ಅದು ಸಂಸ್ಕೃತಿಯ ವಾಹಕ. ಅದು ಸಣ್ಣದೇ ಇರಲಿ, ದೊಡ್ಡದೇ ಇರಲಿ. ಭಾರತದ ಎಲ್ಲ ಭಾಷೆಗಳೂ ಸಮಾನ ಮತ್ತು ಸರ್ವಶಕ್ತ. ನಾವು ಮೊದಲು ಕನ್ನಡಪರರು.
ಪ್ರಶ್ನೆ: ಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಿ ಬೆಳೆಸಲು ಉತ್ತಮ ತಂಡ ಬೇಕು. ನಿಮ್ಮ ಜತೆ ಅಂತಹ ತಂಡ ಇದೆಯೆ?
ಉತ್ತರ: ನಮ್ಮ ಆಲೋಚನೆಗಳು ಎಷ್ಟೇ ಉದಾತ್ತವಾಗಿದ್ದರೂ, ಕಾರ್ಯಸಾಧುವಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರಲು ಉತ್ತಮ ಮಾನವ ಸಂಪನ್ಮೂಲ, ಅಂದರೆ ಪಕ್ವಗೊಂಡ ಮೆದುಳುಗಳು ಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅತ್ಯಂತ ಸಂತೋಷದ ಸಂಗತಿ ಎಂದರೆ ನಾವು ನವ ಮಾಧ್ಯಮ ಸಂಸ್ಥೆ ಕಟ್ಟಲು ಮುಂದಾದಾಗ ಕನ್ನಡ ಪತ್ರಿಕೋದ್ಯಮದಲ್ಲಿ ಪಳಗಿದ, ಶುದ್ಧ ಮನಸ್ಸಿನ ಅತ್ಯುತ್ತಮ ಪತ್ರಕರ್ತರು ನಮ್ಮ ಜತೆಯಾದದ್ದು. ಹಿರಿಯರು, ಮಧ್ಯಮ ಅನುಭವಿಗಳು ಮತ್ತು ಯುವಕರು ಹೀಗೆ ಮೂರು ಜನರೇಶನ್ನಿಗೆ ಈ ಕಂಪನಿಯನ್ನು ಸದೃಢವಾಗಿ ಮುನ್ನಡೆಸಬಲ್ಲ ಬ್ಲೆಂಡೆಡ್ ಪತ್ರಕರ್ತರ ತಂಡ ನಮ್ಮ ಸಂಸ್ಥೆಯ ಭವಿಷ್ಯದ ಸೂಚನೆ. ಇಲ್ಲಿ ನಾವು ಡಿಜಿಟಲ್, ಪ್ರಿಂಟ್ ಹಾಗೂ ಟಿವಿ ಮಾಧ್ಯಮದಿಂದ ಆಯ್ದ ಪತ್ರಕರ್ತರ ಸಮತೋಲಿತ ತಂಡವನ್ನು ಕಟ್ಟಿದ್ದೇವೆ.
ಪ್ರಶ್ನೆ: ಎಲ್ಲ ಸುದ್ದಿ ಸಂಸ್ಥೆಗಳೂ ತಾವು ಜನಪರ, ಪಕ್ಷಪಾತ ರಹಿತ ಎಂದೇ ಕಾರ್ಯ ಆರಂಭಿಸುತ್ತವೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಯಾವ ರೀತಿ ಬೆಳವಣಿಗೆಗಳಾಗಿವೆ ಎಂಬುದನ್ನು ನಾವು ನೋಡಿದ್ದೇವೆ. ನಿಮ್ಮ ಮೇಲೆ ಹೇಗೆ ನಂಬಿಕೆ ಇಡುವುದು?
ಉತ್ತರ: ಈಗಾಗಲೇ ಹೇಳಿದಂತೆ, ಕನ್ನಡದ ಅತ್ಯುತ್ತಮ, ಅನುಭವಿ ಹಾಗೂ ಗೌರವಯುತ ಪತ್ರಕರ್ತರ ತಂಡ ನಮ್ಮ ಜತೆಗಿದೆ. ಹೀಗಾಗಿ ಉತ್ತಮ ವಿಷಯ (Content) ನಮ್ಮಿಂದ ನಿಮಗೆ ದೊರಕುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ವಿಷಯ ವಸ್ತುವನ್ನು ಈಗಿನ ಕಾಲಕ್ಕೆ, ಜನರ ಅನುಕೂಲಕ್ಕೆ ತಕ್ಕಂತೆ ಪ್ರಸ್ತುತಪಡಿಸುವಲ್ಲೂ ನಾವು ಸಫಲರಾಗುತ್ತೇವೆ ಎಂಬ ನಂಬಿಕೆ ಮತ್ತು ಸ್ಪಷ್ಟತೆ ನಮಗಿದೆ. ಇನ್ನು ವಿಶ್ವಾಸ ಗಳಿಸುವುದು ಕಾಲಕ್ಕೆ ಬಿಟ್ಟ ವಿಚಾರ. ಯಾವುದೇ ವ್ಯಕ್ತಿ, ವಿಚಾರದ ಮೇಲೆ ನಂಬಿಕೆ, ವಿಶ್ವಾಸ ಮೂಡಲು ಅದರದ್ದೇ ಆದ ಸಮಯ ಬೇಕು. ಈ ಸಮಯದಲ್ಲಿ ನಮ್ಮ ನಡವಳಿಕೆಯನ್ನು ಸಮಾಜ ಅಳೆಯುತ್ತದೆ. ನಡೆ ಹಾಗೂ ನುಡಿಯಲ್ಲಿನ ವ್ಯತ್ಯಾಸವನ್ನು ಅದೇ ಸಮಾಜ ಅಳೆದು ನೋಡುತ್ತದೆ. ನಡೆ ಹಾಗೂ ನುಡಿಯಲ್ಲಿ ವ್ಯತ್ಯಾಸ ಇಲ್ಲದೇ ಇದ್ದಲ್ಲಿ ಮಾತ್ರ ಸಮಾಜ ನಮ್ಮನ್ನು ನಂಬುತ್ತದೆ. ಆ ವಿಶ್ವಾಸ ಗಳಿಸಲು ನಾವು ಪ್ರತಿ ಕ್ಷಣವೂ ಶ್ರಮಿಸುತ್ತೇವೆ. ಇಂದು ವಿಸ್ತಾರ ಡಿಜಿಟಲ್ ಆವೃತ್ತಿಯನ್ನು ಲೋಕಾರ್ಪಣೆ ಮಾಡಿದ್ದೇವೆ. ಇಷ್ಟರಲ್ಲೇ ಟಿವಿ ಮೂಲಕವೂ ನಿಮ್ಮ ಮನೆ ಹಾಗೂ ಮನವನ್ನು ತಲುಪುತ್ತೇವೆ.
ಪ್ರಶ್ನೆ: ಈಗಿನ ʼಸೋಷಿಯಲ್ ಮೀಡಿಯಾ ಜಮಾನಾʼದಲ್ಲಿ ಸಾಂಸ್ಥಿಕ ಡಿಜಿಟಲ್ ಮೀಡಿಯಾದ ಪ್ರಸ್ತುತತೆ ಏನು?
ಉತ್ತರ: ನಾವು ಡೆಮಾಕ್ರಟಿಕ್ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನಬದ್ಧ ಮಾನ್ಯತೆ ಇದೆ. ಅದೇ ಸಂದರ್ಭದಲ್ಲಿ ಸಾಂಸ್ಥಿಕ ವ್ಯವಸ್ಥೆಗೂ ಅದೇ ಸಂವಿಧಾನ ಅವಕಾಶ ನೀಡಿದೆ. ಸಾಮಾಜಿಕ ಮಾಧ್ಯಮದ ವಿಚಾರಕ್ಕೆ ಬರುವುದಾದರೆ, ವ್ಯಕ್ತಿ ತನ್ನ ಅನಿಸಿಕೆಯನ್ನು ಇತಿಮಿತಿಯಲ್ಲಿ ವ್ಯಕ್ತಪಡಿಸಬಹುದು. ಆದರೆ ಮಾಧ್ಯಮ ಸಂಸ್ಥೆಯಲ್ಲಿ ಅನಿಸಿಕೆ ಎನ್ನುವುದು ವಿವಿಧ ಹಂತಗಳಲ್ಲಿ ಪರಿಷ್ಕರಣೆಗೆ ಒಳಪಡುತ್ತದೆ.
ಅದಕ್ಕಿಂತ ಮುಖ್ಯವಾಗಿ ಸಾಂಸ್ಥಿಕ ವ್ಯವಸ್ಥೆಯಲ್ಲಿ ಒಡಮೂಡುವ ಸುದ್ದಿ ಹೊಣೆಗಾರಿಕೆಯಿಂದ ಕೂಡಿರುತ್ತದೆ. ಅಭಿಪ್ರಾಯ-ಕೇಂದ್ರಿತ ಸಾಮಾಜಿಕ ಮಾಧ್ಯಮಗಳ ಸಂಖ್ಯೆ ಹೆಚ್ಚಾದಷ್ಟೂ ಸಾಂಸ್ಥಿಕ ಮಾದ್ಯಮಗಳ ಈ ಹೊಣೆಗಾರಿಕೆ ಪ್ರಜ್ಞೆಯೂ ಹೆಚ್ಚಾಗುತ್ತಲೇ ಹೋಗುತ್ತದೆ. ಎಲ್ಲರೂ ವಿಶ್ವಾಸಾರ್ಹ ಮಾಹಿತಿ / ಸುದ್ದಿ ಬಯಸುವ ಕಾಲಮಾನದಲ್ಲಿ, ಸಾಂಸ್ಥಿಕ ಮೀಡಿಯಾದ ಮಹತ್ವ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನ ಬೇಡ.
ವಿಶ್ವಾಸವಿರಲಿ
ವಿಸ್ತಾರ ವೆಬ್‌ಸೈಟ್ : www.vistaranews.com
ಸೋಷಿಯಲ್ ಮೀಡಿಯಾ ವಿವರಗಳು:
Face book: www.facebook.com/vistaranews
Instagram: www.instagram.com/vistaranews/
Twitter: twitter.com/VistaraNews
Koo : www.kooapp.com/profile/vistaranews