ಫೆಬ್ರವರಿ ಮೊದಲ ವಾರದಲ್ಲಿ ʼವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ-2023ʼ ಘೋಷಣೆ ಮಾಡಿದಾಗ, ಮುಂದೆ ಒದಗಬಹುದಾದ ಸಿಹಿ ಆಘಾತದ ಅಂದಾಜು ನಮಗೆ ಇರಲೇ ಇಲ್ಲ. ಎಲ್ಲ ದೃಷ್ಟಿಯಿಂದಲೂ ಇದೊಂದು ಐತಿಹಾಸಿಕ ಕಥಾಸ್ಪರ್ಧೆಯಾಗಿದೆ. ಹಿಂದೆಂದೂ ಈ ಪ್ರಮಾಣದ ಬಹುಮಾನದ ಮೊತ್ತ ಯಾವ ಸ್ಪರ್ಧೆಯಲ್ಲೂ ಇರಲಿಲ್ಲ. ಹಾಗೂ ಟಿವಿ ಮಾಧ್ಯಮವೊಂದು ಆಯೋಜಿಸುತ್ತಿರುವ ಮೊದಲ ಸಣ್ಣಕಥಾ ಸ್ಪರ್ಧೆಯೂ ಇದಾಗಿದೆ.
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಬೇಕು, ಉತ್ತಮ ಕಥೆಗಾರರಿಗೆ ಪ್ರೋತ್ಸಾಹ ದೊರೆಯಬೇಕು, ಕನ್ನಡದ ಸಣ್ಣಕಥೆಗಳು ರಾಷ್ಟ್ರೀಯ ಮಟ್ಟದಲ್ಲೂ ಮಿಂಚಬೇಕು ಎಂಬ ಸದಾಶಯದೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯ ಬಹುಮಾನದ ಪ್ರಮಾಣವೂ ಐತಿಹಾಸಿಕ. ಮೊದಲ ಬಹುಮಾನ ಗಳಿಸಿದ ಕಥೆಗೆ 55,000 ರೂ. ಮೀಸಲಾಗಿದೆ. ಎರಡನೇ ಬಹುಮಾನ 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ಮೆಚ್ಚುಗೆ ಬಹುಮಾನಗಳಾಗಿ 5 ಕತೆಗಳಿಗೆ ತಲಾ 2,000 ರೂ.- ಹೀಗೆ ಒಟ್ಟು 1 ಲಕ್ಷ ರೂಪಾಯಿಗಳನ್ನು ಕಥೆಗಾರರಿಗೆ ನೀಡಲಾಗುತ್ತಿದೆ.
ಸಂಖ್ಯೆ ಮಾತ್ರವಲ್ಲ, ಗುಣಮಟ್ಟದ ದೃಷ್ಟಿಯಿಂದಲೂ ದಾಖಲೆ ಎನಿಸುವಂಥ ಕತೆಗಳನ್ನು ಈ ಸ್ಪರ್ಧೆಯಲ್ಲಿ ಗಮನಿಸಲಾಯಿತು. ಕತೆ ಬರೆದು ಕಳುಹಿಸಲು ಕೇವಲ ಒಂದು ತಿಂಗಳ ಅವಧಿಯಿತ್ತು. ಈ ಒಂದು ತಿಂಗಳಲ್ಲಿ ನಮಗೆ ಬಂದ ಕತೆಗಳ ಸಂಖ್ಯೆ 1180 ! ಬಹುಶಃ ಕನ್ನಡ ಸಾಹಿತ್ಯದಲ್ಲಿ ಇದೊಂದು ದಾಖಲೆ. ಕನ್ನಡದಲ್ಲಿ ಕತೆಗಾರರಿಲ್ಲ ಎಂಬ ದೂರು ನಿಜವಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಹೀಗೆ ಬಂದವುಗಳಲ್ಲಿ ಗಮನ ಸೆಳೆದ ತುಂಬಾ ಅಂಶಗಳಿವೆ.
- ಅತ್ಯುತ್ತಮವೆನಿಸುವಂಥ ಕತೆಗಳನ್ನು ಗುಡ್ಡೆ ಹಾಕಿಕೊಂಡು ಕುಳಿತಾಗ ಇವುಗಳಲ್ಲಿ ಕೇವಲ 20ನ್ನು ಆರಿಸುವುದು ಸುಲಭಸಾಧ್ಯವಲ್ಲ ಎಂಬ ಅರಿವು ಮೊದಲೆರಡು ಸುತ್ತಿನ ಆಯ್ಕೆಗಾರರಿಗೆ ಆಯಿತು. ಹೀಗಾಗಿ, ಟಾಪ್ 20ಗೆ ಬದಲಾಗಿ ಟಾಪ್ 25 ಕತೆಗಳನ್ನು ಆರಿಸಲಾಯಿತು. ಈ ಇಪ್ಪತ್ತೈದೂ ಕಥೆಗಳು ವೆಬ್ಸೈಟ್ನಲ್ಲಿ ಹಾಗೂ ಪುಸ್ತಕವಾಗಿ ಪ್ರಕಟವಾಗಲಿವೆ.
- ಸ್ಪರ್ಧೆಗೆ ರಾಜ್ಯದೊಳಗಿನಿಂದ ಮಾತ್ರವಲ್ಲ, ಜಗತ್ತಿನ ಹಲವು ಕಡೆಗಳಿಂದ ಕನ್ನಡ ಕಥೆಗಾರರು ಬರೆದಿದ್ದಾರೆ. ಜರ್ಮನಿ, ಅಮೆರಿಕ, ಸಿಡ್ನಿ ಮುಂತಾದ ಕಡೆಗಳಿಂದ ಬಂದ ಕತೆಗಳು ಸ್ಪರ್ಧಿಸಿವೆ.
- ಕರ್ನಾಟಕದ ಎಲ್ಲ ಕಡೆಗಳಿಂದ ಕಥೆಗಾರರು ಬರೆದಿದ್ದಾರೆ. ಉತ್ತರ ಕರ್ನಾಟಕದ ಕಲಬುರಗಿಯ ಹಳ್ಳಿಯ ಮೂಲೆಯಿಂದ ಹಿಡಿದು ಚಾಮರಾಜನಗರದ ಹಾಡಿಯವರೆಗೆ, ಬೆಂಗಳೂರಿನ ವೈಟ್ಫೀಲ್ಡ್ನಿಂದ ಕಾರವಾರದ ಕಡಲತೀರವರೆಗೆ ಇದರ ವಿಫುಲತೆ ಹಬ್ಬಿದೆ.
- ಕರ್ನಾಟಕದ ಜನಜೀವನದ ವೈವಿಧ್ಯ, ನಾನಾ ಬಗೆಯ ಜೀವನಶೈಲಿ, ಮನುಷ್ಯ ಸಂಬಂಧಗಳು, ಸಾಂಪ್ರದಾಯಿಕತೆ ಮತ್ತು ಆಧುನಿಕತೆ, ಪ್ರಗತಿ ಮತ್ತು ಪರಿಸರ, ಮನೋಲೋಕದ ನಾನಾ ಮಿಡಿತಗಳು, ಗ್ರಾಮೀಣ- ನಗರ ಪ್ರಜ್ಞೆ ಎಲ್ಲವೂ ಕಥೆಗಳಾಗಿವೆ. ಪೌರಾಣಿಕ, ಐತಿಹಾಸಿಕ ಕಥೆಗಳೂ ಇದ್ದವು. ಹೀಗಾಗಿ ಇದು ಇಡೀ ಮನುಷ್ಯಲೋಕದ ದರ್ಶನವನ್ನೇ ಮಾಡಿಸಿತು.
- ತಾಜಾತನ, ನಿರೂಪಣೆಯ ಲವಲವಿಕೆ, ವಸ್ತು- ತಂತ್ರಗಳಲ್ಲಿ ನಾವೀನ್ಯತೆ, ಪ್ರಗತಿಪರ ಮನೋಭಾವ, ಮನುಷ್ಯಸಂಬಂಧಗಳ ವಿಶ್ಲೇಷಣೆಯಲ್ಲಿ ಸೂಕ್ಷ್ಮತೆ, ಸಾಮಾಜಿಕ ಪಿಡುಗುಗಳ ಕುರಿತ ಸ್ಪಂದನ ಹೊಸಬರ ಕತೆಗಳಲ್ಲಿ ಕಂಡುಬರುತ್ತಿವೆ. ಕನ್ನಡ ಸಣ್ಣಕಥೆಗಳಿಗೆ ಉಜ್ವಲ ಭವಿಷ್ಯವಿದೆ ಎಂಬುದರಲ್ಲಿ ಸಂಶಯವಿಲ್ಲ.
- ಹೆಣ್ಣುಮಕ್ಕಳು ಹೆಚ್ಚು ನಿರ್ಭೀತಿಯಿಂದ, ಮುಕ್ತ ನಿಲುವಿನಿಂದ ಬರೆದಿದ್ದಾರೆ. ಲೈಂಗಿಕತೆಯ ಬಗ್ಗೆ, ಲೈಂಗಿಕ ಶೋಷಣೆಗಳ ಬಗ್ಗೆ ಹಲವು ಕತೆಗಳು ಬಂದಿದ್ದು, ವಸ್ತುವಿನೊಂದಿಗೆ ತಮ್ಮ ಮುಕ್ತ ಛಂದಸ್ಸಿನಿಂದಲೂ ಗಮನ ಸೆಳೆದಿವೆ. ಎಲ್ಜಿಬಿಟಿ ವಸ್ತುಗಳೂ ಕಥೆಯಾಗಿವೆ.
- ಕೃತಕ ಬುದ್ಧಿಮತ್ತೆಯತ್ತ ಸಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಹಲವಾರು ಆಧುನಿಕ ವೈಜ್ಞಾನಿಕ ಸಂಗತಿಗಳು, ಸಂಶೋಧನೆಗಳು ಕೂಡ ಕಥೆಗಳಾಗಿ ಬಂದಿವೆ. ಅಂದರೆ ಕಥೆಗಾರರು ಮನುಷ್ಯ ಸಂಬಂಧವನ್ನೂ ಆಧುನಿಕತೆಯನ್ನೂ ಹೊಸ ನೆಲೆಯಲ್ಲಿಟ್ಟು ಪರೀಕ್ಷಿಸಲು ಮುಂದಾಗಿದ್ದಾರೆ.
- ಹೈಸ್ಕೂಲ್ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ವಯೋಮಾನದವರೂ ಬರೆದಿದ್ದಾರೆ. ಈಗಾಗಲೇ ಹಲವು ಕೃತಿಗಳನ್ನು ತಂದು, ಹಲವು ಪ್ರಶಸ್ತಿಗಳನ್ನು ಪಡೆದವರೂ ಕತೆ ಬರೆದು ಸ್ಪಂದಿಸಿದ್ದಾರೆ. ಪ್ರಸಿದ್ಧರ ಸಮಸಮಕ್ಕೆ ಹೊಸಬರು ಸ್ಪರ್ಧಿಸಿರುವುದು ಸಂತಸ ನೀಡಿದ ಸಂಗತಿ.
ಕನ್ನಡದ ಬಗ್ಗೆ ಕಾಳಜಿಯನ್ನು ಹೊಂದಿರುವ, ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಕಳಕಳಿ ಹೊಂದಿರುವ ಮೂರು ಸಂಸ್ಥೆಗಳು ಬಹುಮಾನ ಪ್ರಾಯೋಜಿಸಲು ನಮ್ಮ ಜತೆ ಕೈಜೋಡಿಸಿದರು. ಪ್ರಧಾನ ಪ್ರಾಯೋಜಕರಾಗಿ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನ, ಸಹ ಪ್ರಾಯೋಜಕರಾಗಿ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಬೆಂಗಳೂರು ಮತ್ತು ವಿ2 ಹೋಲ್ಡಿಂಗ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈ. ಲಿ ನಮ್ಮೊಂದಿಗಿದ್ದಾರೆ.
ಈ ಟಾಪ್ ಇಪ್ಪತ್ತೈದು ಕತೆಗಳಲ್ಲಿ ಆಯ್ದ ಎಂಟು ಬಹುಮಾನಿತ ಕತೆಗಳ ಘೋಷಣೆ ಹಾಗೂ ಬಹುಮಾನ ಪ್ರದಾನ ವಿಸ್ತಾರ ನ್ಯೂಸ್ ವಾಹಿನಿ ಮೇ ತಿಂಗಳಲ್ಲಿ ಆಯೋಜಿಸಲಿರುವ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ನಡೆಯಲಿದೆ.
ಟಾಪ್ 25 ಕತೆಗಾರರ ಪಟ್ಟಿ ಇಲ್ಲಿದೆ:
1. ಡಾ.ಎಚ್.ಸಿ. ಭವ್ಯಾ ನವೀನ್
2. ಪ್ರಸಾದ್ ಶೆಣೈ ಆರ್.ಕೆ.
3. ಅಂಜನಾ ಹೆಗಡೆ
4. ಭಾಗ್ಯರೇಖಾ ದೇಶಪಾಂಡೆ
5. ಸುಷ್ಮಾ ಸಿಂಧು
6. ಚಂದ್ರಶೇಖರ್ ಡಿ.ಆರ್.
7. ಸಂದೀಪ ನಾಯಕ
8. ಪೂರ್ಣಿಮಾ ಭಟ್ಟ ಸಣ್ಣಕೇರಿ
9. ಬಿ.ಎಂ ಹನೀಫ್
10. ಸದಾಶಿವ ಸೊರಟೂರು
11. ದಾದಾಪೀರ್ ಜೈಮನ್
12. ಚೈತ್ರಿಕಾ ಶ್ರೀಧರ ಹೆಗಡೆ
13. ಪೂರ್ಣಿಮಾ ಮಾಳಗಿಮನಿ
14. ಮೇ.ಡಾ. ಕುಶ್ವಂತ್ ಕೋಳಿಬೈಲು
15. ಮಂಜುನಾಥ್ ಲತಾ
16. ಸೌಮ್ಯ ಪ್ರಭು ಕಲ್ಯಾಣ್‌ಕರ್
17. ಮೌನೇಶ್ ಬಡಿಗೇರ್
18. ಸಂಪತ್ ಸಿರಿಮನೆ
19. ಶರಣಬಸವ ಕೆ. ಗುಡದಿನ್ನಿ
20. ಚೀಮನಹಳ್ಳಿ ರಮೇಶಬಾಬು
21. ಬಸವಣ್ಣೆಪ್ಪ ಕಂಬಾರ
22. ಶರತ್ ಭಟ್ ಸೇರಾಜೆ
23. ದೀಪಾ ಕೆ. (ದೀಪದ ಮಲ್ಲಿ)
24. ಮಂಜು ಚಳ್ಳೂರು
25. ದೀಪಾ ಹಿರೇಗುತ್ತಿ